ಧಾರವಾಡ : ಅಭಿನಯ ಭಾರತಿ (ರಿ.) ಇದರ ವತಿಯಿಂದ ‘ವಜ್ರ ಸಿರಿ ರಂಗೋತ್ಸವ 2024’ ಕಾರ್ಯಕ್ರಮವು ಧಾರವಾಡ ಕರ್ನಾಟಕ ಕಾಲೇಜಿನ ಆವರಣದ ಸೃಜನಾ ರಂಗಮಂದಿರದಲ್ಲಿ ದಿನಾಂಕ 31 ಆಗಸ್ಟ್ 2024ರಂದು ಪ್ರಾರಂಭವಾಯಿತು.
ವಜ್ರ ಸಿರಿ ರಂಗೋತ್ಸವದ ಪ್ರಥಮ ದಿನದ ಚಾಲನೆಯನ್ನು ಡಾ. ಅಜಿತ ಪ್ರಸಾದ ಇವರು ನೆರವೇರಿಸುತ್ತ “ದಿ. ಡಾ. ನಾ. ವಜ್ರಕುಮಾರ ಇವರು ಧರ್ಮಧಿಕಾರಿ ಡಿ. ಡಾ. ವೀರೇಂದ್ರ ಹೆಗ್ಗಡೆಯವರ ಅನುಗ್ರಹದಿಂದ ಅಳಿವಿನಂಚಿನ್ನಲ್ಲಿದ್ದ ಜೆ.ಎಸ್.ಎಸ್. ಸಂಸ್ಥೆಗಳನ್ನು ಉಳಿಸಿದ ರೀತಿ, 49 ವರ್ಷ ಕಾಲ ಸತತವಾಗಿ ಬೆಳೆಸಿದ ರೀತಿ ಮತ್ತು ಸಾಂಸ್ಕೃತಿಕ, ಶೈಕ್ಷಣಿಕ ವಾತಾವರಣಕ್ಕೆ ಪೂರಕವಾಗಿ ಅಭಿವೃದ್ಧಿಗೊಳಿಸಿದ ರೀತಿಯನ್ನು ಮರೆಯಲಾಗದು. ಈ ದಿಕ್ಕಿನಲ್ಲಿ ಅಭಿನಯ ಭಾರತಿ ಇಂದು ಮಾಡುತ್ತಿರುವ ‘ವಜ್ರ ಸಿರಿ ರಂಗೋತ್ಸವ’ ಶ್ಲಾಘನೀಯ” ಎಂದು ಹೇಳಿದರು.
ಶ್ರೀಮತಿ ಸುಮನಾ ವಜ್ರಕುಮಾರ ಇವರು ದಿ. ನ. ವಜ್ರಕುಮಾರ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ಅವರ ಜತೆ ಡಾ. ಅಜಿತ್ ಪ್ರಸಾದ, ಬ್ರಹ್ಮ ಪ್ರಕಾಶ್, ಮಹಾವೀರ್ ಉಪಾಧ್ಯ, ಸೂರಜ್ ಜೈನ ಮಲ್ಲಿಕಾರ್ಜುನಪ್ಪ, ಶ್ರೀಮತಿ ಕಟಗಿ ಅರವಿಂದ ಕುಲಕರ್ಣಿ ಪುಷ್ಪಾರ್ಪಣೆ ಮಾಡಿದರು. ಆರಂಭದಲ್ಲಿ ಅರವಿಂದ ಕುಲಕರ್ಣಿ ಅವರು ತಮ್ಮ ಮತ್ತು ಅಭಿನಯ ಭಾರತಿ ಮತ್ತು ದಿ. ವಜ್ರಕುಮಾರ ಜತೆ ಬೆಳೆದು ಬಂದ ಸಂಸ್ಕೃತಿ ಸಂಬಂಧಗಳ ಬಗ್ಗೆ ನೆನಪುಗಳನ್ನು ಎಳೆ ಎಳೆಯಾಗಿ ಬಿಚ್ಚಿ ಹೇಳುತ್ತ ಈ ವಜ್ರಸಿರಿ ನಾಟಕೋತ್ಸವ ಪ್ರತಿ ವರ್ಷ ನಿರಂತರವಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು. ಶ್ರೀಮತಿ ವಿಷಯಾ ಜೇವೂರ ಕಾರ್ಯಕ್ರಮ ನಿರೂಪಿಸಿ, ಕೊನೆಗೆ ಆಭಾರ ಮನ್ನಣೆ ಮಾಡಿದರು. ಸಭಾ ಕಾರ್ಯಕ್ರಮದ ಬಳಿಕ ಅಭಿನಯ ಭಾರತಿಯ ಹಾಸ್ಯ ರಸ ಪ್ರಧಾನ ನಾಟಕ ‘ನಾ ತುಕಾರಮ ಅಲ್ಲಾ’ ಒಂದು ಆಧುನಿಕ ಶಿಸ್ತು ಬದ್ಧ ಕ್ಲಾಸಿಕಲ್ ಕಾಮಿಡಿ ಆಗಿ ಶ್ರೀಪತಿ ಮಂಜನಬೈಲು ನಿರ್ದೇಶನದಲ್ಲಿ ಹೊರಹೊಮ್ಮಿತು. ಯುವಜನಾಂಗ ಮೆಚ್ಚಿದ ವೃದ್ಧರ ನಾಟಕ ನಗೆ ಬುಗ್ಗೆಗಳು ಎಲ್ಲರನ್ನೂ ರಂಜಿಸಿತು.