ಜರ್ಮನಿ : ಜರ್ಮನಿಯು ಏಕೀಕರಣವಾದ ದಿನದಂದು ಮ್ಯೂನಿಕ್ ನಗರದ ಒಂದು ರಂಗ ಮಂದಿರದಲ್ಲಿ ದಿನಾಂಕ 3 ಅಕ್ಟೋಬರ್ 2024ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಯುರೋಪ್ ಘಟಕ ಉದ್ಘಾಟನೆಗೊಂಡಿತು.
ಮುಖ್ಯ ಅತಿಥಿಗಳಾಗಿ ಭಾರತೀಯ ರಾಯಭಾರ ಕಚೇರಿಯಲ್ಲಿ ಸಾಂಸ್ಕೃತಿಕ ಅಧಿಕಾರಿಗಳಾಗಿರುವ ರಾಜೀವ್ ಚಿತ್ಕಾರ, ಮ್ಯೂನಿಕ್ ನಗರದ ಎಲ್.ಎಂ.ಯೂ. ವಿಶ್ವವಿದ್ಯಾಲಯ ಇಂಡಾಲಜಿ ವಿಭಾಗದ ಪ್ರಸಿದ್ಧ ನಿವೃತ್ತ ಪ್ರಾಧ್ಯಾಪಕ ಡಾ. ರಾಬರ್ಟ್ ಜೈಡನ್ಬೊಸ್ ಹಾಗೂ ಸನಾತನ ಅಕಾಡಮಿಯ ಅನೂಷಾ ಶಾಸ್ತ್ರಿ, ಸಿರಿಗನ್ನಡ ಕೂಟ ಮ್ಯೂನಿಕ್ ಅಧ್ಯಕ್ಷ ಶ್ರೀಧರ ಲಕ್ಷ್ಮಾಪುರ ಹಾಗೂ ಫ್ರಾಂಕ್ಫರ್ಟ್ ರೈನ್ ಮೈನ್ ಕನ್ನಡ ಸಂಘದ ಅಧ್ಯಕ್ಷ ವೇದಮೂರ್ತಿ ಇವರುಗಳು ಆಗಮಿಸಿದ್ದರು. ಮುಖ್ಯ ಅತಿಥಿಗಳು ದೀಪ ಹಚ್ಚಿ ಸಾಂಕೇತಿಕವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಘಟಕದ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜೀವ್ ಚಿತ್ಕಾರರು “ಯಕ್ಷಗಾನ ಈ ಮೊದಲು ನೋಡಿರಲಿಲ್ಲ. ಇದು ನಮ್ಮ ಭಾರತದ ಅದ್ಭುತ ಕಲೆ ಎಂಬುದು ನಮಗೆ ಹೆಮ್ಮೆ. ಇಂತಹ ಪ್ರಾಚೀನ ಕಲೆಯನ್ನು ಪಾರಂಪರಿಕವಾಗಿ ಪ್ರಪಂಚಕ್ಕೆ ಪರಿಚಯಿಸುವಲ್ಲಿ ಈ ಯಕ್ಷಧ್ರುವ ಸಂಸ್ಥೆಯು ಯಶಸ್ವಿಯಾಗಲಿ” ಎಂದು ಆಶಿಸಿದರು.
ಡಾ. ಜೈಡನ್ಬೊಸ್ ಅವರು ಅಚ್ಚ ಕನ್ನಡದಲ್ಲಿ ಮಾತನಾಡಿ ಇಪ್ಪತ್ತು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿನ ಒಂದು ಸಣ್ಣಹಳ್ಳಿಯಲ್ಲಿ ಯಕ್ಷಗಾನ ಬಯಲಾಟ ನೋಡಿದ ನೆನಪು ಮಾಡಿಕೊಂಡು “ತಾಯ್ನಾಡಿನಿಂದ ದೂರ ಬಂದಿರುವ ನೀವೆಲ್ಲ ಈ ಯಕ್ಷಗಾನವನ್ನು ಇಲ್ಲಿ ಸಹ ಪರಿಚಯ ಮಾಡುವ ಪ್ರಯತ್ನ ನನಗೆ ಬಹಳ ಸಂತಸ ತಂದಿದೆ. ನಿಮ್ಮ ಪ್ರಯತ್ನ ಸಫಲವಾಗಲಿ” ಎಂದು ಆಶೀರ್ವದಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಯುರೋಪ್ ಘಟಕದ ಅಧ್ಯಕ್ಷ ನರೇಂದ್ರ ಶೆಣೈರವರು ಮಾತನಾಡಿ “ತಮ್ಮ ಹಲವು ವರ್ಷಗಳ ಮಹಾದಾಶಯ ಇಂದು ಕಾರ್ಯಗತ ಆಯ್ತು. ಮುಂದಿನ ದಿನಗಳಲ್ಲಿ ಯಕ್ಷಗಾನ ಗುರು ಅಜಿತ್ ಪ್ರಭುರವರ ಸಾರಥ್ಯದಲ್ಲಿ ಯುರೋಪ್‌ನಾದ್ಯಂತ ಯಕ್ಷಗಾನ ಪ್ರದರ್ಶನ ಹಾಗೂ ಮುಖ್ಯವಾಗಿ ನಮ್ಮ ಮುಂದಿನ ಪೀಳಿಗೆಗೆ ಈ ಕಲೆಯನ್ನು ಧಾರೆ ಎರೆಯುವ ಕೆಲಸ ಮಾಡಲಿದ್ದೇವೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬಹಳ ವಿಭಿನ್ನವಾಗಿ ಚೌಕಿ ಪೂಜೆಯನ್ನು ರಂಗದ ಮೇಲೆ ನಡೆಸಿಕೊಟ್ಟು, ಬಾಲ ಗೋಪಾಲ, ಪೀಠಿಕೆ ಸ್ತ್ರೀವೇಷ, ತೆರೆ ಒಡ್ಡೋಲಗ, ಪ್ರಯಾಣ ಕುಣಿತ, ಅಭಿಮನ್ಯು ಸುಭದ್ರೆ ಸಂವಾದ ಈ ಎಲ್ಲಾ ವಿಭಾಗಗಳನ್ನು ವಿದ್ಯಾರ್ಥಿಗಳೊಂದಿಗೆ ಸಂಪ್ರದಾಯಿಕವಾಗಿ ಪ್ರದರ್ಶಿಸಿ ಪರಿಚಯ ಮಾಡಿಕೊಟ್ಟರು. ತದನಂತರ ಯಕ್ಷಗಾನ ವಿದ್ಯಾರ್ಥಿಗಳಿಂದ ಕೋಟ ಶಿವರಾಮ ಕಾರಂತರು ಪರಿಚಯಿಸಿದ ಯಕ್ಷಗಾನ ಬ್ಯಾಲೆ ರೂಪದಲ್ಲಿ ಪ್ರದರ್ಶನಗೊಂಡ ಚಿಕ್ಕ ಮಕ್ಕಳ ‘ಮಾಯಾಮೃಗ’ (ಸೀತಾಪಹರಣ) ಯಕ್ಷಗಾನ ರೂಪಕ ಪ್ರೇಕ್ಷಕರನ್ನ ಮಂತ್ರಮುಗ್ಧಗೊಳಿಸಿತು.