ಬೆಳ್ತಂಗಡಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಯಕ್ಷಧ್ರುವ – ಯಕ್ಷಶಿಕ್ಷಣ ಯಕ್ಷಗಾನ ಶಿಕ್ಷಣ ಅಭಿಯಾನದ ಪ್ರಯುಕ್ತ ಬೆಳ್ತಂಗಡಿಯ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿಯು ದಿನಾಂಕ 02 ಜುಲೈ 2025ರಂದು ಪ್ರಾರಂಭವಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಪಟ್ಲ ಫೌಂಡೇಶನ್ನಿನ ಟ್ರಸ್ಟಿಗಳಾದ ಭುಜಬಲಿ ಧರ್ಮಸ್ಥಳ ಇವರು ಮಾತನಾಡುತ್ತಾ “ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುವಲ್ಲಿ ಪಠ್ಯಚಟುವಟಿಕೆಗಳಿಗೆ ಪೂರಕವಾಗಿ ಯಕ್ಷಗಾನ ಕಲಿಕೆಯು ಪ್ರಯೋಜನಕಾರಿಯಾಗಿದೆ. ಯಕ್ಷಗಾನವು ಆರೋಗ್ಯ ಮತ್ತು ನೆಮ್ಮದಿಯನ್ನು ಪಡೆಯಲು ಸಹಕಾರಿಯಾಗಿದೆ. ಪಟ್ಲ ಫೌಂಡೇಶನ್ ನವರ ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷಗಾನವನ್ನು ಕಲಿಸುವ ಯೋಜನೆ ಶ್ಲಾಘನೀಯ. ಅವರ ಪರಿಶ್ರಮವನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ಇದರೊಂದಿಗೆ ಪೋಷಕರಿಗೆ, ಶಿಕ್ಷಣ ಸಂಸ್ಥೆಗೆ ಕೀರ್ತಿ ತರಬೇಕು” ಎಂದು ಹೇಳಿದರು.
ವಾಣಿ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗಣೇಶ ಗೌಡ ಅಧ್ಯಕ್ಷತೆ ವಹಿಸಿದ್ದರು. ಪಟ್ಲ ಫೌಂಡೇಶನ್ ಇದರ ಯಕ್ಷಧ್ರುವ – ಯಕ್ಷಶಿಕ್ಷಣದ ಕೇಂದ್ರೀಯ ಸಂಚಾಲಕರಾದ ವಾಸುದೇವ ಐತಾಳ್ ಪಣಂಬೂರು ಮುಖ್ಯ ಅತಿಥಿಗಳಾಗಿದ್ದು, ಯಕ್ಷಧ್ರುವ ಪಟ್ಲ ಪೌಂಡೇಶನ್ ನ ಧ್ಯೇಯೋದ್ಧೇಶಗಳನ್ನು ತಿಳಿಸುತ್ತಾ, “ವಿದ್ಯಾರ್ಥಿಗಳಲ್ಲಿ ಉತ್ತಮ ಜ್ಞಾನ, ಆಚಾರ-ವಿಚಾರ ಸಂಸ್ಕಾರಕ್ಕೆ ಪೂರಕವಾಗಿ ಯಕ್ಷಗಾನದ ಕಲಿಕೆಯು ಮಹತ್ವದ್ದಾಗಿದೆ” ಎಂದರು.
ಯಕ್ಷಗಾನ ಗುರುಗಳಾದ ದೇವಿಪ್ರಸಾದ್ ಗುರುವಾಯನಕೆರೆ ಉಪಸಿತರಿದ್ದರು. ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಷ್ಣುಪ್ರಕಾಶ್ ಎಂ. ಸ್ವಾಗತಿಸಿ, ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಲಕ್ಷ್ಮೀನಾರಾಯಣ ಕೆ. ಧನ್ಯವಾದವಿತ್ತರು. ಉಪನ್ಯಾಸಕ ಮಹಾಬಲ ಗೌಡ ಕಾರ್ಯಕ್ರಮ ನಿರೂಪಿಸಿದರು.