ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಎಕ್ಕಾರು ಕಟೀಲು ಘಟಕದ ಮೇಲ್ವಿಚಾರಣೆಯಲ್ಲಿ 2025-26ನೇ ಸಾಲಿನ “ಯಕ್ಷ ಶಿಕ್ಷಣ” ಯೋಜನೆಯ ಉಚಿತ ಯಕ್ಷಗಾನ ತರಬೇತಿ ಕಾರ್ಯಕ್ರಮವು ದಿನಾಂಕ 28 ಜೂನ್ 2025ರಂದು ಮಧ್ಯಾಹ್ನ 12-00 ಗಂಟೆಗೆ ಮಂಗಳೂರಿನ ನೆಲ್ಲಿತೀರ್ಥ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು.
ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಅತಿಥಿಗಳನ್ನು ಪ್ರಾಂಶುಪಾಲರಾದ ಸುಪ್ರೀತಾ ಕೆ. ಮೇಡಂ ಇವರು ಸ್ವಾಗತಿಸಿದರು. ನಂತರ ಯಕ್ಷಧ್ರುವ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕರಾದ ವಾಸುದೇವ ಐತಾಳ್ ಇವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಡೆದು ಬಂದ ಹಾದಿ ಹಾಗೂ ವಿದ್ಯಾರ್ಥಿಗಳಲ್ಲಿ ಯಕ್ಷಗಾನ ಯಾವ ರೀತಿಯಾಗಿ ಭಾಷಾ ಪ್ರೌಢಿಮೆ ಮತ್ತು ನಾಟ್ಯವನ್ನು ಕಲಿಸುವುದರೊಂದಿಗೆ ವಿಶಿಷ್ಟವಾದ ವ್ಯಕ್ತಿತ್ವವನ್ನು ರೂಪುಗೊಳಿಸುತ್ತದೆ ಎಂಬುದನ್ನು ತಿಳಿಸಿದರು. ಬಳಿಕ ದೀಪ ಬೆಳಗಿಸುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ಉದ್ಘಾಟನಾ ಕಾರ್ಯಕ್ರಮದ ನಂತರ ಉದ್ಘಾಟಕರಾಗಿ ಯಕ್ಷಧ್ರುವ ಫೌಂಡೇಶನ್ ಎಕ್ಕಾರು ಕಟೀಲು ಘಟಕದ ಸಂಚಾಲಕರಾದ ಸತೀಶ್ ಶೆಟ್ಟಿ ಇವರು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಸಮಾಜದಲ್ಲಿ ಮಾಡುತ್ತಿರುವ ಸಾಮಾಜಿಕ ಕಳಕಳಿಯ ಕೆಲಸ ಕಾರ್ಯಕ್ರಮಗಳ ಬಗ್ಗೆ ಮತ್ತು ಸುಮಾರು 84 ಶಾಲೆಗಳಲ್ಲಿ ಈಗಾಗಲೇ ಈ ಫೌಂಡೇಶನ್ ನಿಂದ ವಿದ್ಯಾರ್ಥಿಗಳು ಯಕ್ಷ ಶಿಕ್ಷಣವನ್ನು ಪಡೆದುಕೊಂಡು ತಾವು ಯಕ್ಷಗಾನ ಕಲೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಪ್ರಾಂಶುಪಾಲರಾದ ಸುಪ್ರೀತಾ ಕೆ. ಇವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಕಳೆದ ವರ್ಷ ನೀಡಿದ ಯಕ್ಷಗಾನ ತರಬೇತಿ ಕಾರ್ಯಕ್ರಮವು ಯಾವ ರೀತಿಯಾಗಿ ನಡೆದು ಬಂತು ಎಂಬುದರ ಬಗ್ಗೆ ತಿಳಿಸಿದರು. ಇದಾದ ಬಳಿಕ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಯಕ್ಷಶಿಕ್ಷಣ ಶಿಕ್ಷಕರಾಗಿರುವ ಜಯಕರ್ ಪಂಡಿತ್ ಇವರಿಗೆ ವೀಳ್ಯದೆಲೆ ನೀಡಿ ಯಕ್ಷ ಶಿಕ್ಷಣ ತರಗತಿಗೆ ಅನುಮೋದನೆ ನೀಡಲಾಯಿತು. ಕೊನೆಯಲ್ಲಿ ಈ ಸುಂದರ ಕಾರ್ಯಕ್ರಮಕ್ಕೆ ಧನ್ಯವಾದ ಸಮರ್ಪಣೆಯನ್ನು ಆಂಗ್ಲ ಭಾಷೆ ಸಹ ಶಿಕ್ಷಕಿಯಾಗಿರುವ ಶ್ರೀಮತಿ ಸಾವಿತ್ರಿ ಭಟ್ ರವರು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಬೋಧಕ ವೃಂದ ಮತ್ತು ಬೋಧಕೇತರ ವೃಂದ ಉಪಸ್ಥಿತರಿದ್ದರು. ಶಾಲೆಯಿಂದ ಸುಮಾರು 80 ವಿದ್ಯಾರ್ಥಿಗಳು ನಾಟ್ಯ ತರಬೇತಿಯಲ್ಲಿ ಭಾಗವಹಿಸಿದರು. ಕನ್ನಡ ಅತಿಥಿ ಶಿಕ್ಷಕರಾಗಿರುವ ಸುಪ್ರೀತ್ ಎಂ.ಎಸ್. ಕಾರ್ಯಕ್ರಮ ನಿರೂಪಿಸಿದರು.