ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಲೆ ಮತ್ತು ಸಾಹಿತ್ಯ ಪ್ರಬಲವಾದ ಸಾಧನವಾಗಿತ್ತು. ಅಮಾಯಕ ಜನ ಮನದ ಭಾವನೆಗಳಿಗೆ ಸ್ಪಂದನೆಯನ್ನು ನೀಡುತ್ತಾ ಸ್ವತಂತ್ರ ಭಾರತದ ಕಲ್ಪನೆಗಳನ್ನು ಹುಟ್ಟುಹಾಕುವಲ್ಲಿ ಕಲೆ ಮತ್ತು ಸಾಹಿತ್ಯ ಪ್ರಧಾನ ಪಾತ್ರ ವಹಿಸಿತ್ತು. ಭಾರತೀಯ ನೋವಿನ ಚಿತ್ರಣ, ಬ್ರಿಟಿಷ್ ರ ಕ್ರೂರತೆಯ ಕಲ್ಪನೆ, ಸಾಂಸ್ಕೃತಿಕ ಅಧಃಪತನ, ಧಾರ್ಮಿಕತೆಯ ಕ್ಷೀಣಿಸುವಿಕೆ .. .. ಹೀಗೆ ಹಲವು ಸೋಲುಗಳನ್ನು ಜನರಿಗೆ ಪರಿಚಯಿಸುವ ಪ್ರಭಾವಿ ಮಾಧ್ಯಮವಾಗಿ ಕಲೆ ಮತ್ತು ಸಾಹಿತ್ಯ ಕಾರ್ಯ ನಿರ್ವಹಿಸುತ್ತು.
ಸಂವೇದನಾಶೀಲತೆಯನ್ನು ಹುಟ್ಟುಹಾಕುವ ಮೂಲಕ ರಾಷ್ಟ್ರೀಯ ಭಾವನೆಗಳನ್ನು ಹೆಚ್ಚಿಸಿ, ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಶ್ರಮಿಸಿದ ಕಲಾವಿದರು, ಲೇಖಕರು ಹಲವರು. ತಮ್ಮ ಕವನ, ಲೇಖನ, ನಾಟಕ, ಚಿತ್ರಕಲೆ, ಹಾಡು, ನೃತ್ಯ, ಜಾನಪದ ಕಲೆಗಳ ಮೂಲಕ ದೇಶಭಕ್ತಿಯ ಭಾವನೆಗಳನ್ನು ಉದ್ದೀಪಿಸಿದ ಮಹಾನ್ ಕಲಾವಿದರು ಸಾಹಿತಿಗಳು ನಿತ್ಯ ಸ್ಮರಣೀಯರು.
ಸರೋಜಿನಿ ನಾಯ್ಡು : (13-02-1879 – 02-03-1949) ‘ತೊಟ್ಟಿಲು ತೂಗುವ ಕೈ ಜಗವನ್ನೇ ಆಳಬಲ್ಲುದು’ ಎಂಬುದನ್ನು ತಮ್ಮ ಜೀವನಕ್ರಮದ ಮೂಲಕ ಜಗತ್ತಿಗೆ ತೋರಿಕೊಟ್ಟ ಮಹಾನ್ ಮಹಿಳಾ ಚೇತನ, ‘ಭಾರತದ ಕೋಗಿಲೆ’ ಸರೋಜಿನಿ ನಾಯ್ಡು. ಅಘೋರೆನಾಥ ಚಟ್ಟೋಪಾಧ್ಯಾಯ ಹಾಗೂ ವರದಾ ಸುಂದರಿದೇವಿಯವರ ಪುತ್ರಿಯಾಗಿ ಜನಿಸಿದ ಸರೋಜಿನಿ ನಾಯ್ಡು ಬಹುಭಾಷಾ ಪಾರಂಗತೆ, ಬುದ್ಧಿವಂತೆ, ವಿದ್ಯಾವಂತೆ, ಕವಯತ್ರಿ, ಧೈರ್ಯವಂತೆ ಹಾಗೂ ಕ್ರಾಂತಿಕಾರಿ ನಾಯಕತ್ವ ಗುಣವುಳ್ಳ ಧೀಮಂತ ಮಹಿಳೆ. ತಮ್ಮ ಕೌಟುಂಬಿಕ ಹಿನ್ನೆಲೆಯಿಂದ ಬಂದ ದೇಶಪ್ರೇಮವನ್ನು ತಮ್ಮಲ್ಲೂ ಅಳವಡಿಸಿಕೊಂಡ ಸರೋಜಿನಿ ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿಯೇ ಮದ್ರಾಸ್ ವಿಶ್ವವಿದ್ಯಾನಿಲಯದ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಪಾಸಾಗಿ ರಾಷ್ಟ್ರಮಟ್ಟದಲ್ಲಿ ಕೀರ್ತಿಯನ್ನು ಪಡೆದರು. ಆಂಗ್ಲ ಭಾಷೆಯಲ್ಲಿ ಕವಿತೆಗಳನ್ನು ಬರೆಯುತ್ತಿದ್ದ ಇವರಿಗೆ ವಿದೇಶದಲ್ಲಿ ಕಲಿಯಲು ವಿದ್ಯಾರ್ಥಿ ವೇತನ ದೊರೆಯಿತು. ತಮ್ಮ ಅಪರಿಮಿತ ಆಸಕ್ತಿ ಹಾಗೂ ಉತ್ಸಾಹದ ಮೂಲಕ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿದ ಸರೋಜಿನಿ ನಾಯ್ಡು ಹಲವು ಮಹಾನ್ ಚಿಂತಕರನ್ನು ಭೇಟಿ ಮಾಡುತ್ತಾ ತಮ್ಮ ಜೀವನಾನುಭವಗಳನ್ನು ಹೆಚ್ಚಿಸಿಕೊಂಡರು.
ಭಾರತದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷದ ಹೋರಾಟವನ್ನು ಕಂಡು ಅದರಿಂದ ಆಕರ್ಷಿತರಾಗಿ ರಾಷ್ಟ್ರೀಯ ಚಳುವಳಿಯ ಭಾಗವಾದದ್ದು ಮಾತ್ರವಲ್ಲದೆ ಮಹಾತ್ಮ ಗಾಂಧಿ ಹಾಗೂ ಅವರ ಸ್ವರಾಜ್ ಕಲ್ಪನೆಯ ಅನುಯಾಯಿಯಾದರು. ಅತ್ಯುತ್ತಮ ವಾಗ್ಮಿಯಾದ ಸರೋಜಿನಿ ನಾಯ್ಡು ತಮ್ಮ ಕ್ರಾಂತಿಕಾರಿ ಮಾತುಗಳ ಮೂಲಕ ‘ಭಾರತೀಯ ಸ್ವಾತಂತ್ರ್ಯ’ ಮತ್ತು ‘ಮಹಿಳಾ ಹಕ್ಕುಗಳ’ ಬಗ್ಗೆ ಜನರಿಗೆ ತಿಳಿ ಹೇಳಿದರು. ಮಹಿಳಾ ಶಿಕ್ಷಣವನ್ನು ಉತ್ತೇಜಿಸಿದರು. 1906ರಲ್ಲಿ ಕಲ್ಕತ್ತಾದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮತ್ತು ಇಂಡಿಯನ್ ಸೋಶಿಯಲ್ ಕಾನ್ಫರೆನ್ಸ್ ನ್ನು ಉದ್ದೇಶಿಸಿ ಮಾತನಾಡಿದರು. ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು, ಸಿ.ಪಿ. ರಾಮಸ್ವಾಮಿ ಅಯ್ಯರ್ ಮುಂತಾದ ಪ್ರಭಾವಿ ರಾಜಕೀಯ ಮುಖಂಡರ ನಿರಂತರ ಸಂಪರ್ಕದಲ್ಲಿದ್ದ ಸರೋಜಿನಿ ನಾಯ್ಡು ಬಿಹಾರದ ಚಂಪಾರಣ್ ಇಂಡಿಗೋ ಕಾರ್ಮಿಕರ ಹಕ್ಕುಗಳಿಗಾಗಿ ಬ್ರಿಟಿಷರೊಂದಿಗೆ ಹೋರಾಡಿದರು. 1917ರಲ್ಲಿ ಅನ್ನಿ ಬೆಸೆಂಟ್ ಮತ್ತು ಇತರ ಪ್ರಮುಖ ನಾಯಕರೊಂದಿಗೆ ಮಹಿಳಾ ಭಾರತ ಸಂಘವನ್ನು ಸ್ಥಾಪಿಸಲು ಸಹಾಯ ಮಾಡಿದರು. ಖಿಲಾಫತ್ ಸಮಸ್ಯೆ, ಸಬರಮತಿ ಒಪ್ಪಂದ, ಸತ್ಯಾಗ್ರಹ ಪ್ರತಿಜ್ಞೆ. . . ಇನ್ನಿತರ ಗಾಂಧೀಜಿಯವರ ಪ್ರಚಾರಗಳನ್ನು ಸಕ್ರಿಯವಾಗಿ ಬೆಂಬಲಿಸಿದರು. 1931ರಲ್ಲಿ ಲಂಡನ್ ಗೆ ತೆರಳಿ ದುಂಡು ಮೇಜಿನ ಮಾತುಕತೆಯಲ್ಲಿ ಭಾಗವಹಿಸಿದರು. ತಮ್ಮ ಸೃಜನಶೀಲ ವ್ಯಕ್ತಿತ್ವ, ಕ್ರಾಂತಿಕಾರಿ ಚಿಂತನೆ ಮತ್ತು ಪ್ರಭಾವಯುತ ಬರವಣಿಗೆಗಳ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಸರೋಜಿನಿ ನಾಯ್ಡು ರಾಷ್ಟ್ರೀಯ ಭಾರತದ ಕಾಂಗ್ರೆಸ್ ನ ಮೊದಲನೆಯ ಮಹಿಳಾ ಅಧ್ಯಕ್ಷರಾಗಿದ್ದರು. ಉತ್ತರ ಪ್ರದೇಶದ ಮೊದಲನೆಯ ಮಹಿಳಾ ರಾಜ್ಯ ಪಾಲರಾಗಿದ್ದರು.
- ಲೇಖಕಿ ಮಾಧುರಿ ಶ್ರೀರಾಮ್
ಮಾಧುರಿ ಶ್ರೀರಾಮ್ ಇವರು ಶ್ರೀ ಜನಾರ್ದನ ಹಂದೆ ಮತ್ತು ಶ್ರೀಮತಿ ಮಾಲತಿ ಹಂದೆ ಇವರು ಸುಪುತ್ರಿ. ಶ್ರೀಯುತ ಶ್ರೀರಾಮ್ಇವರ ಧರ್ಮಪತ್ನಿ. ಬಿ.ಎಡ್.ನಲ್ಲಿ ಎರಡನೆಯ ರ್ಯಾಂ ಕ್ ಮತ್ತು ಎಂ.ಎ. ಎಜುಕೇಶನ್ ನಲ್ಲಿ 7ನೆಯ ರ್ಯಾಂ ಕ್ ಪಡೆದ ಧೀಮಂತೆ. ಪ್ರಬುದ್ಧ ಶಿಕ್ಷಕಿ, ಉಪನ್ಯಾಸಕಿ, ಅಸಂಖ್ಯಾತ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಮತ್ತು ಆಪ್ತಸಮಾಲೋಚಕಿಯಾಗಿ ಯಶಸ್ವೀ ಕಾರ್ಯ ನಿರ್ವಹಿಸುತ್ತಿರುವ ಆದರ್ಶ ಶಿಕ್ಷಕಿ. ಮಾನವ ಸಂಪನ್ಮೂಲ ತರಬೇತಿಗೆ ಸಂಪನ್ಮೂಲ ವ್ಯಕ್ತಿಯಾದ ಇವರು ಆಕಾಶವಾಣಿ ಕಲಾವಿದೆಯೂ ಹೌದು. ಕಥೆ, ಕವನ, ಲೇಖನಗಳ ಬರಹದೊಂದಿಗೆ ಕಾರ್ಯಕ್ರಮ ನಿರೂಪಣೆ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಚೆನ್ನಾಗಿ ನಡೆಸಿ ಕೊಡುವವರು. ಯಕ್ಷಗಾನ, ಭರತನಾಟ್ಯ, ಸಂಗೀತ, ನಾಟಕ, ಚಿತ್ರಕಲೆ ಇತ್ಯಾದಿ ಲಲಿತಕಲೆಗಳಲ್ಲಿ ಆಸಕ್ತಿ ಹೊಂದಿದ್ದು, ಹಲವಾರು ಪ್ರತಿಷ್ಟಿತ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ ದುಡಿಯುತ್ತಿರುವ ಇವರು ಇತರರಿಗೂ ಮಾದರಿ.