1 ಏಪ್ರಿಲ್ 2023, ಉಡುಪಿ: ಭಾವನ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸಿದ “ಜನಪದ ದೇಶಿಯ ಸರಣಿ ಕಲಾ ಕಾರ್ಯಗಾರ”ವು ದಿನಾಂಕ 31-03-2023ರಂದು ವೆಂಟನಾ ಫೌಂಡೇಶನ್ ನ ಟ್ರಸ್ಟಿಗಳಾದ ರವೀಂದ್ರ ಕೆ. ಇವರಿಂದ ಉದ್ಘಾಟನೆಗೊಂಡಿತು.
ದೇಶಿಯ ಕಲೆ ಮತ್ತು ಜ್ಞಾನವನ್ನು ಮುಂದಿನ ಪೀಳಿಗೆಗೆ ಹಂಚುವ ಈ ತೆರೆನಾದ ಕಾರ್ಯದಲ್ಲಿ ನಮ್ಮ ಸಂಸ್ಥೆ ಯಾವತ್ತೂ ಸಹಕಾರವನ್ನು ನೀಡುತ್ತದೆ ಎಂಬುದಾಗಿ ಅಭಿಪ್ರಾಯ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಮತ್ತು ಸೈನ್ಸ್ ನ ಮುಖ್ಯಸ್ಥರಾದ ಪ್ರೊ. ವರದೇಶ ಹಿರೇಗಂಗೆಯವರು ಕಲಾಪ್ರಕಾರಗಳು ಜೀವನದ ಮೌಲ್ಯಕ್ಕೆ ಎಷ್ಟು ಉಪಯುಕ್ತ ಎನ್ನುವುದನ್ನು ಹೇಳುತ್ತಾ ಭಾವನಾ ಫೌಂಡೇಶನ್ ನ ಕಲಾತ್ಮಕ ಚಟುವಟಿಕೆಗಳನ್ನು ಶ್ಲಾಘಿಸಿದರು.
ಇಂಟೆಕ್ ಮಂಗಳೂರು ವಿಭಾಗದ ಸಂಯೋಜಕರಾದ ಸುಭಾಷ್ ಚಂದ್ರ ಬಸು ಒರಿಸ್ಸಾದಿಂದ ಆಗಮಿಸಿದ ಪಟಚಿತ್ರ ಕಲಾವಿದೆ ಗೀತಾಂಜಲಿ ದಾಸ್, ಭಾವನಾ ಫೌಂಡೇಶನ್ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು. ಈ ಸರಣಿ ಕಾರ್ಯಾಗಾರದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.
ಪಾರಂಪರಿಕ ಚಿತ್ರ ಕ್ರಮದ ವಿವರಣೆಗಳನ್ನು ಒಳಗೊಂಡ ಪಟಚಿತ್ರದ ಕಾರ್ಯಗಾರವು ಮುಂದಿನ ಎರಡು ದಿನಗಳ ಕಾಲ ನಡೆಯಲಿದ್ದು ಭಾನುವಾರದಂದು ತಾಳೆಯೋಲೆಯ ಮೇಲೆ ನಡೆಯುವ ಪಟಚಿತ್ರವನ್ನು ಉಡುಪಿಯ ಬಡಗುಪೇಟೆಯಲ್ಲಿ ಅಭ್ಯಾಸ ಮಾಡಲಾಗುತ್ತದೆ.