ಮಡಿಕೇರಿ : ಪತ್ರಕರ್ತ ಪ್ರಶಾಂತ್ ಟಿ. ಆರ್ ವಿರಚಿತ ‘ಬಾಳ ಹಾದಿಯಲಿ ಬೆಳ್ಳಿ ಚುಕ್ಕಿ’ ಕಾದಂಬರಿಗೆ ಈ ಸಾಲಿನ ಇಂಡಿಯನ್ ಐಕಾನ್ ಸಂದಿದೆ. ಒರಿಯಂಟಲ್ ಫೌಂಡೇಶನ್ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಇಂಡಿಯನ್ ಐಕಾನ್ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಅಂತೆಯೇ ಈ ಬಾರಿಯೂ ಪ್ರಶಸ್ತಿ ಪ್ರಕಟಸಿದ್ದು ಸಾಹಿತ್ಯ ಕ್ಷೇತ್ರದಿಂದ ಪ್ರಶಾಂತ್ ಟಿ.ಆರ್. ವಿರಚಿತ ‘ಬಾಳ ಹಾದಿಯಲಿ ಬೆಳ್ಳಿ ಚುಕ್ಕಿ’ ಕಾದಂಬರಿಗೆ ಪ್ರಶಸ್ತಿ ಲಭಿಸಿದೆ.
ಬಡತನದಲ್ಲಿ ಅರಳಿದ ಕ್ರೀಡಾ ಪ್ರತಿಭೆಯ ಕುರಿತ ಕಥಾವಸ್ತು ಈ ಕಾದಂಬರಿಯಲ್ಲಿ ಅಡಕವಾಗಿದೆ. ವಿಶೇಷ ಎಂದರೆ ಈ ಕಾದಂಬರಿಯನ್ನು ಮೆಚ್ಚಿದ ಖ್ಯಾತ ನಟ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಅನಿರುದ್ಧ ಜಟ್ಕರ್ ಬೆನ್ನುಡಿ ಬರೆದಿದ್ದಾರೆ. ಬಾಲಿವುಡ್ ನಟ ಹಾಗೂ ಕ್ರಿಕೆಟಿಗೆ ಭಾಸ್ಕರ್ ಮುನ್ನುಡಿ ಬರೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅವರ ಸಹಯೋಗದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ದಿನಾಂಕ 15 ಜೂನ್ 2025ರಂದು ಬೆಂಗಳೂರಿನ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನೆರವೇರಲಿದ್ದು, ಅಂದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿಯೂ ಫಲಕ ಹಾಗೂ ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ಪ್ರಶಾಂತ್ ಅವರು ವಿಶ್ವವಾಣಿ ಪತ್ರಿಕೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇವರು ರಚಿಸಿದ್ದ ‘ಹೊನ್ನಮ್ಮನ ಕನಸು’ ಕಾದಂಬರಿಗೆ ರಾಜ್ಯಮಟ್ಟದ ಪ್ರಶಸ್ತಿ ಸಂದಿತ್ತು. ಈಗ ‘ಬಾಳ ಹಾದಿಯಲಿ ಬೆಳ್ಳಿ ಚುಕ್ಕಿ’ ಕಾದಂಬರಿ ಇಂಡಿಯನ್ ಐಕಾನ್ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ.