08 ಮಾರ್ಚ್ 2023, ಮಂಗಳೂರು: ಶಾಸ್ತ್ರೀಯ ಸಂಗೀತ ರಸ, ರಾಗ, ಲಯ, ಶ್ರುತಿ, ಸ್ವರ, ಭಾವ, ಆಧ್ಯಾತ್ಮದ ಮಿಳಿತಗಳ ನಿತ್ಯ ಸಂಜೀವಿನಿ, ತಾಯಿ ಸರಸ್ವತಿಯ ಅನುಗ್ರಹ, ಪ್ರಕೃತಿಯೊಂದಿಗೆ ಮನುಕುಲದ ಅವಿನಾಭಾವ ಸಂಬಂಧವೂ ಹೌದು, ಅದರಲ್ಲೂ ಭಾರತೀಯ ಸಂಸ್ಕೃತಿಯ ಮೂಲ ದ್ರವ್ಯ ಸಂಗೀತವನ್ನು ಕೇಳದ ಕಿವಿಗಳಿಲ್ಲ. ಕಲಾವಿದರ ಸಿರಿಕಂಠಗಳಿಗೆ, ನೈಪುಣ್ಯತೆಗೆ, ಬೆರಗಾಗದ ಮನಸ್ಸುಗಳಿಲ್ಲ. ಭಗವಂತನ ಸಾಕ್ಷಾತ್ಕಾರಕ್ಕೆ ಇದೂ ಒಂದು ಸಾಧನ. ಇಹಪರಗಳೊಡನೆ ನುಲಿ-ನಲಿದು ಹೊಯ್ದಾಡುವ ಮನಸುಗಳಿಗೆ, ಅದರಲ್ಲೂ ಕಲುಷಿತಗೊಂಡಿರುವ ಇಂದಿನ ಸಮಾಜದ ಪುನರ್‌ನಿರ್ಮಾಣಕ್ಕೆ ಸಂಗೀತ ದಾರಿ ದೀಪವಾಗಬಲ್ಲದು ಎಂದರೆ ಅತಿಶಯೋಕ್ತಿಯಲ್ಲ.
ಮಂಗಳೂರಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಗುರುಗಳಲ್ಲಿ ಹಿರಿಯ ಹಾಗೂ ಪ್ರೌಢ ಕಲಾವಿದೆಯಾದ. ವಿದುಷಿ ಶ್ರೀಮತಿ ಸತ್ಯವತಿ ಮುಡಂಬಡಿತ್ತಾಯ 1943 ರಲ್ಲಿ ಜನಿಸಿ, ತಮ್ಮ ಎಳವೆಯಲ್ಲಿಯೇ ಕರ್ನಾಟಕ ಶಾಸ್ತ್ರೀಯ ಸಂಗೀತದ ಬಗ್ಗೆ ಅತ್ಯಂತ ಆಸಕ್ತರಾಗಿ ಕಲಾನಿಕೇತನ, ಸಂಗೀತ ಶಾಲೆಯ ಗುರುಗಳಾದ ವಿದ್ವಾನ್ ಎನ್. ಗೋಪಾಲಕೃಷ್ಣ ಅಯ್ಯರ್ ಅವರಲ್ಲಿ ಸಂಗೀತಾಭ್ಯಾಸ ಮಾಡಿದರು, ಬಾಲ ಕಲಾವಿದರಾಗಿ ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡಿರುವ ತಾವು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಶಾಸ್ತ್ರೀಯ ಸಂಗೀತದ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಗಳಿಸಿದಿರಿ. ನಂತರ ಎಮ್.ಎ.ಬಿ.ಎಡ್ ಪದವಿಗಳನ್ನು ಪಡೆದು ಸುಮಾರು 35 ವರ್ಷಗಳ ಕಾಲ ಲೇಡಿಹಿಲ್ ವಿಕ್ಟೋರಿಯಾ ಗರ್ಲ್ಸ್ ಹೈಸ್ಕೂಲ್ ಮಂಗಳೂರಿನಲ್ಲಿ ಸಾರ್ಥಕ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ರೋಟರಿ ಕ್ಲಬ್ ಮಂಗಳೂರಿನಿಂದ ‘ಆದರ್ಶ ಶಿಕ್ಷಕಿ” ಪುರಸ್ಕಾರವನ್ನು ಪಡೆದಿದ್ದೀರಿ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಮತ್ತು ಹಲವು ಸಂಗೀತ ಸಭಾಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ತಾವು ಕರ್ನಾಟಕ ಸರಕಾರದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಹಿರಿಯ ಪರೀಕ್ಷಕರಾಗಿಯೂ ಕಾರ್ಯ ನಿರ್ವಹಿಸಿದ್ದೀರಿ. ಶ್ರೀ ನಾದ ಸರಸ್ವತಿ ಸಂಗೀತ ವಿದ್ಯಾಲಯದ ಸಂಸ್ಥಾಪಕಿ ಹಾಗೂ ನಿರ್ದೇಶಕಿಯಾಗಿರುವ ತಾವು ಅನೇಕ ಸಂಗೀತಾರ್ಥಿಗಳಿಗೆ ಸಂಗೀತವನ್ನು ಧಾರೆ ಎರೆದು, ತಮ್ಮ ಶಿಷ್ಯರನ್ನು ರಾಜ್ಯದೆಲ್ಲೆಡೆ ಮತ್ತು ನೆರೆ ರಾಜ್ಯಗಳಲ್ಲೂ ಕಾರ್ಯಕ್ರಮಗಳನ್ನು ನೀಡುವ ಮಟ್ಟಕ್ಕೆ ಬೆಳೆಸಿದ್ದೀರಿ, ಅವರಲ್ಲಿ ಅನೇಕರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪುರಸ್ಕಾರಗಳನ್ನೂ ಹಾಗೂ ವಿದ್ಯಾರ್ಥಿವೇತನವನ್ನು ಗಳಿಸುತ್ತಿರುವುದು ತಮ್ಮ ಹಿರಿಮೆಗೆ ಸಾಕ್ಷಿಯಾಗಿದೆ. ತಮ್ಮಲ್ಲಿ ಸಂಗೀತಭ್ಯಾಸ ಮಾಡಿದ ತಮ್ಮ ಮೊಮ್ಮಕ್ಕಳಾದ ಬಹುಮುಖ ಪ್ರತಿಭೆಯ ಶ್ರೀ ಕೃಷ್ಣ ಪವನ್ ಮತ್ತು ಶ್ರೀಮತಿ ಅರ್ಚನಾ ಪ್ರಿಯದರ್ಶಿನಿ ಸಮರ್ಥವಾಗಿ ತಮ್ಮ ಸಂಗೀತ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ತಮ್ಮ ವಿದ್ಯಾರ್ಥಿಗಳಿಂದ ಎಲ್ಲಾ ಐದು ಘನ ಪಂಚ ರತ್ನ ಕೃತಿಗಳನ್ನು ಹಾಡಿಸಿ ಮಂಗಳೂರಿನ ಸಂಗೀತ ರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದೀರಿ, ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಸುದೀರ್ಘ ಸೇವೆ ಸಲ್ಲಿಸಿದ್ದಕ್ಕಾಗಿ ತಮಗೆ 2010 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಅಲ್ಲದೆ ಬೆಂಗಳೂರಿನ ಶ್ರೀ ಶ್ರೀ ಚಂದ್ರಶೇಖರ ಸ್ವಾಮಿಜಿಯವರ “ಸುವರ್ಣ ಸುಧಾಕರ ರತ್ನ” ಪುರಸ್ಕಾರ, ನೂಪುರ ಸಂಗೀತ ಮತ್ತು ನೃತ್ಯ ಶಾಲೆಯ ಸನ್ಮಾನ, ಶ್ರೀ ಸರಸ್ವತಿ ವಿದ್ಯಾ ಕೇಂದ್ರ, ಮಂಗಳೂರಿನ ಅನೇಕ ಸಂಘ ಸಂಸ್ಥೆಗಳಿಂದ ಪುರಸ್ಕಾರಗಳು ತಮ್ಮನ್ನು ಅರಸಿ ಬಂದಿವೆ. ಇಂತಹ ಶ್ರೇಷ್ಟವಾದ ಸಂಗೀತದಲ್ಲಿ ಸಾಧನೆಗೈದು ನೂರಾರು ಶಿಷ್ಯರಿಗೆ ದಾರಿ ದೀಪವಾಗಿ ಭಾರತೀಯ ಸಂಗೀತ ಪರಂಪರೆಯನ್ನು ಇನ್ನೂ ಉತ್ತಮ ಮಟ್ಟಕ್ಕೆ ಕೊಂಡೊಯುತ್ತಿರುವ ಹಿರಿಯರಾದ ತಮಗೆ ನಮ್ಮ ಪ್ರೀತಿಯ ಗೌರವಯುತ ಅಭಿವಂದನೆಗಳು.
- ಕೃಷ್ಣ ಪವನ್ ಕುಮಾರ್