ಅಜ್ಜನಿಂದ ತಾಯಿ ಯಕ್ಷಗಾನದ ಪ್ರೇರೇಪಣೆಗೊಂಡು.. ತಾಯಿಯಿಂದ ಮಗಳಿಗೆ ಯಕ್ಷಗಾನದ ಆಸಕ್ತಿ ಹುಟ್ಟಿಕೊಂಡು ಪ್ರಸ್ತುತ ಯಕ್ಷ ರಂಗದಲ್ಲಿ ಛಾಪು ಮೂಡಿಸುತ್ತಿರುವ ಕಲಾವಿದೆ ಶ್ರೀರಕ್ಷಾ ಬಿ.
ಕಾಸರಗೋಡಿನ ಶ್ರೀಮತಿ ಲತಾ ವಿಜಯಬಾನು ದಂಪತಿಯ ಕಿರಿಯ ಪುತ್ರಿಯಾಗಿ ಮೇ 2ರಂದು ಶ್ರೀರಕ್ಷಾ ಬಿ. ಅವರ ಜನನ. ಪ್ರಸ್ತುತ ಫಾದರ್ ಮುಲ್ಲರ್ ಹೊಮಿಯೋಪತಿ ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರಿನಲ್ಲಿ 3ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ.
ತಾಯಿಯ ತಂದೆ ವಿಶ್ವನಾಥ ಅವರು ಹವ್ಯಾಸಿ ಯಕ್ಷ ಕಲಾವಿದರು. ಇದರಿಂದ ತಾಯಿಗೂ ತಾಯಿಯಿಂದ ಮಗಳಿಗೂ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು.
ಯಕ್ಷಗಾನ ಗುರುಗಳು:-
ಶ್ರೀ ದಿವಾಣ ಶಿವಶಂಕರ ಭಟ್
ಶ್ರೀ ಧರ್ಮೇಂದ್ರ ಆಚಾರ್ಯ ಬಾಯಾರ್
ನೆಚ್ಚಿನ ಪ್ರಸಂಗಗಳು:-
ಶ್ರೀ ದೇವಿ ಮಹಾತ್ಮೆ, ಶ್ರೀ ಕೃಷ್ಣ ಲೀಲೆ, ದಕ್ಷಾಧ್ವರ.
ನೆಚ್ಚಿನ ವೇಷಗಳು:-
ಶ್ರೀ ದೇವಿ, ಶ್ರೀ ಕೃಷ್ಣ, ದಾಕ್ಷಾಯಿಣಿ, ಸುದರ್ಶನ, ವಿಷ್ಣು.
“ಭಾಗವತರಲ್ಲಿ ಹಾಗೂ ಹಿರಿಯ ಕಲಾವಿದರಲ್ಲಿ ಅಭಿಪ್ರಾಯ ಕೇಳಿ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ” ಎಂದು ಹೇಳುತ್ತಾರೆ ಶ್ರೀರಕ್ಷಾ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಂದಿನ ದಿನಗಳಲ್ಲಿ ಯುವ ಪೀಳಿಗೆಯೂ ಕೂಡ ಯಕ್ಷಗಾನದಲ್ಲಿ ಆಸಕ್ತಿಯನ್ನು ಹೊಂದಿದ್ದು, ಹಲವಾರು ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಬದಲಾವಣೆ ಅನಿವಾರ್ಯವೆಂಬಂತೆ ನವೀನ ಕಾಲಘಟ್ಟಕ್ಕನುಗುಣವಾಗಿ ಕೆಲವು ಬದಲಾವಣೆಗಳು ಬಂದಿದ್ದರೂ ಯಕ್ಷ ರಂಗದ ಆ ಹಿರಿಮೆಯನ್ನೂ ಗರಿಮೆಯನ್ನೂ ಮನದಲ್ಲಿಟ್ಟುಕೊಂಡು ಯಕ್ಷ ಪರಂಪರೆಗೆ ಧಕ್ಕೆ ಬಾರದಂತೆ ಅನುಸರಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವಂತಾಗಲಿ.
ಯಕ್ಷ ಶಿಕ್ಷಕಿ ಆಗಬೇಕು ಹಾಗೂ ಯಕ್ಷಗಾನ ರಂಗದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂಬುದು ಇವರ ಮುಂದಿನ ಯೋಜನೆ.
‘ಕೂಡ್ಲು ಶ್ರೀ ಗೋಪಾಲಕೃಷ್ಣ ಮಕ್ಕಳ ಮೇಳ’ದಲ್ಲಿ 4 ವರ್ಷ, ‘ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ’ಯಲ್ಲಿ 11 ವರ್ಷದ ಸೇವೆಯನ್ನು ಶ್ರೀರಕ್ಷಾ ಮಾಡುತ್ತಿದ್ದಾರೆ .
ಸನ್ಮಾನ ಹಾಗೂ ಪ್ರಶಸ್ತಿ:-
‘ಧರ್ಮ ಸಿಂಧು ಪ್ರತಿಷ್ಠಾನ’ ದೇಲಂಪಾಡಿ ಕಾಸರಗೋಡು ಇವರಿಂದ ಯಕ್ಷ ರಂಗದ ಮಿಂಚಿನ ಪ್ರತಿಭೆ.
‘ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ’ ಅಡೂರು ಇವರಿಂದ ಸನ್ಮಾನ.
ವಿವಿಧ ಸಂಘ ಸಂಸ್ಥೆಗಳಿಂದ ಅಭಿನಂದನೆ ಹಾಗೂ ಸ್ಮರಣಿಕೆಗಳ ಸ್ವೀಕಾರ. 500ಕ್ಕೂ ಹೆಚ್ಚಿನ ವೇದಿಕೆಯಲ್ಲಿ ಗೆಜ್ಜೆ ಕಟ್ಟಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುತ್ತಾರೆ.
ಭರತನಾಟ್ಯ ಜೂನಿಯರ್ ಪರೀಕ್ಷೆ ಉತ್ತೀರ್ಣ, ಸೀನಿಯರ್ ಪರೀಕ್ಷೆ ತಯಾರಿ. ಕಥಾ ಕವಿತೆ ರಚನೆ, ಚಿತ್ರ ರಚನೆ ಇವರ ಹವ್ಯಾಸಗಳು.
ಶ್ರೀರಕ್ಷಾ ಬಿ. ಅವರು ಮೇ 5ರಂದು ಪ್ರಶಾಂತ್ ಚಂದ್ರಮಾನ್ ಕುಂಡಂಗುಳಿ ಇವರನ್ನು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ತಂದೆ ತಾಯಿ ಪತಿಯ ಪ್ರೋತ್ಸಾಹ, ಗುರು-ಹಿರಿಯ ಕಲಾವಿದರ ಮಾರ್ಗದರ್ಶನ ಸಹಕಾರ ಹಾಗೂ ಪ್ರೋತ್ಸಾಹವು ಅವರನ್ನು ಈ ಕ್ಷೇತ್ರದಲ್ಲಿ ಸತತವಾಗಿ ತೊಡಗಿಸಿಕೊಳ್ಳಲು ನೆರವಾಗಿದೆ.
- ಶ್ರವಣ್ ಕಾರಂತ್ ಕೆ.,
ಶಕ್ತಿನಗರ ಮಂಗಳೂರು.