ಮೈಸೂರು : ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇವರು ಮೈಸೂರಿನ ರಾಮಕೃಷ್ಣ ಇನ್ಸ್ಟಿಟ್ಯೂಟ್ ಫರ್ ಮೋರಲ್ ಅಂಡ್ ಸ್ಪಿರಿಚುವಲ್ ಎಜ್ಯುಕೇಶನ್ (ರಿಮ್ಸೆ) ಇದರ ಸಹಯೋಗದಲ್ಲಿ ದಿನಾಂಕ 28 ಜೂನ್ 2025ರಂದು ಕಲಾವಿದರು, ಶಿಲ್ಪಿಗಳು ಹಾಗೂ ಕುಶಲಕರ್ಮಿಗಳಿಗಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಒಂದು ದಿನದ ಪ್ರೇರಣಾ ಕಲಾ ಕಾರ್ಯಾಗಾರ ನಡೆಯಿತು.
ಈ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ತಮ್ಮ ದಿಕ್ಸೂಚಿ ಉಪನ್ಯಾಸ ನೀಡಿದ ಶಿಲ್ಪಿ ಡಾ. ಅರುಣ್ ಯೋಗಿರಾಜ್ “ಶಾಸ್ತ್ರ, ಪರಂಪರೆ, ತಪಸ್ಸು ಇವನ್ನು ಅಳವಡಿಸಿಕೊಂಡು ಮಾಡಿದ ಕಲಾಕೃತಿಗಳು ಮಾತ್ರ ಶಾಶ್ವತವಾಗಿ ಸಹೃದಯರನ್ನು ಸೆಳೆಯಲು ಸಾಧ್ಯ. ಇದಕ್ಕೆ ಉದಾಹರಣೆ ಬೇಲೂರು, ಹಳೆಬೀಡು ಮುಂತಾದ ವಿಶ್ವಪ್ರಸಿದ್ಧ ಕಲಾತಾಣಗಳು ಇಂದಿಗೂ ಕೋಟ್ಯಂತರ ಕಲಾರಸಿಕರನ್ನು ತನ್ನೆಡೆಗೆ ಸೆಳೆಯುತ್ತಿವೆ. ಇಂದು ಕಲಾವಿದರು ಎ.ಐ. ತಂತ್ರಜ್ಞಾನ, ಗ್ರಾಫಿಕ್ ಡಿಸೈನಿಂಗ್ ನಂತಹ ತಂತ್ರಜ್ಞಾನದ ಬಳಕೆಯಿಂದ ಅಸ್ತಿತ್ವದ ಸವಾಲನ್ನು ಎದುರಿಸುತ್ತಿದ್ದರೂ, ಇಂತಹ ಆಧುನಿಕ ತಂತ್ರಜ್ಞಾನಕ್ಕೆ ನಿಲುಕದ ಕಲಾ ನೈಪುಣ್ಯತೆಯನ್ನು ಸಾಧಿಸಿ ತೋರಿದಲ್ಲಿ ಮಾತ್ರ ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಸಾಧ್ಯ. ಕಲಾಕಾರರು ಪರಂಪರೆ ಸಾಂಪ್ರದಾಯಿಕತೆಯ ಜೊತೆಗೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಸಂಘಟಿತ ವಲಯದಿಂದ ಸಂಘಟಿತ ವಲಯಕ್ಕೆ ಸೇರ್ಪಡೆಗೊಂಡು, ಸರ್ಕಾರದ ಸವಲತ್ತುಗಳನ್ನೂ ಸಮರ್ಥವಾಗಿ ಬಳಸಿಕೊಂಡು ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸಲು ಸಾಧ್ಯ. ಶಿಸ್ತು, ಸಂಯಮ, ಯೋಗ, ಧ್ಯಾನ, ನಿರಂತರ ಅಧ್ಯಯನ ಶೀಲತೆ ಪರಸ್ಪರ ಸಹಬಾಳ್ವೆ, ಮತ್ತೊಬ್ಬರನ್ನು ಬೆಳೆಸುವ ಗುಣ ಇವೆಲ್ಲವನ್ನೂ ಅಳವಡಿಸಿಕೊಂಡಲ್ಲಿ ಮಾತ್ರ ಕಲಾವಿದ ಬೆಳೆಯಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಮೈಸೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಮುಕ್ತಿದಾನಂದಜೀ ಕಾರ್ಯಾಗಾರವನ್ನು ಉದ್ಘಾಟಿಸಿ, “ಕಲೆಗೂ ಅಧ್ಯಾತ್ಮಕ್ಕೂ ನೇರ ಸಂಬಂಧವಿದ್ದು, ಪರಮಾತ್ಮನೊಂದಿಗೆ ಆಂತರ್ಯದ ಸಂಬಂಧವನ್ನು ಬೆಳೆಸಲು ಕಲೆಯು ಅತ್ಯುತ್ತಮ ಸಾಧನವಾಗಿದೆ” ಎಂದರು. ವಿಶ್ವಕರ್ಮ ಕಲಾ ಪರಿಷತ್ತಿನ ಅಧ್ಯಕ್ಷ ಡಾ. ಎಸ್.ಪಿ. ಗುರುದಾಸ್ ಪ್ರಸ್ತಾವನೆ ಗೈದರು. ಉಪಾಧ್ಯಕ್ಷೆ ರತ್ನಾವತಿ ಜೆ. ಬೈಕಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಎ.ಜಿ. ಸದಾಶಿವ ಧನ್ಯವಾದ ಸಮರ್ಪಿಸಿದರು. ‘ಕಲೆಯಲ್ಲಿ ಶಾಸ್ತ್ರಜ್ಞಾನ, ಪರಂಪರೆ ಹಾಗೂ ಸಂಪ್ರದಾಯಿಕತೆಯ ಮಹತ್ವ’ ಎಂಬ ವಿಷಯದಲ್ಲಿ ನಡೆದ ಗೋಷ್ಠಿಯಲ್ಲಿ ಮಾತನಾಡಿದ ವಿಶ್ವಕರ್ಮ ಕಲಾ ಪರಿಷತ್ತಿನ ಗೌರವಾಧ್ಯಕ್ಷರಾದ ಪಿ.ಎನ್. ಆಚಾರ್ಯ “ಸತತ ಅಧ್ಯಯನ ಹಾಗೂ ಪರಿಶ್ರಮದಿಂದ ಮಾತ್ರ ಕಲಾಕೃತಿಗಳು ಕಲಾರಸಿಕರನ್ನು ಸೆಳೆಯಲು ಸಾಧ್ಯ” ಎಂದರು. ಈ ಗೋಷ್ಠಿಗೆ ಡಾ. ಎಸ್.ಪಿ. ಗುರುದಾಸ್ ಸಮನ್ವಯಕಾರರಾಗಿದ್ದರು.
‘ಕಲೆ, ತಂತ್ರಜ್ಞಾನ ಹಾಗೂ ಉದ್ಯಮಶೀಲತೆ’ ಎನ್ನುವ ವಿಷಯದಲ್ಲಿ ನಡೆದ ಗೋಷ್ಠಿಯಲ್ಲಿ, ಶಿಲ್ಪಿ ಡಾ. ಅರುಣ್ ಯೋಗಿರಾಜ್, ನಿಟ್ಟೆಯ ಅಟಲ್ ಇನ್ಕ್ಯುಬೇಶನ್ ಸೆಂಟರ್ ನ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಎ.ಪಿ. ಆಚಾರ್, ಕೋಟೇಶ್ವರದ ರಥಶಿಲ್ಪಿ ರಾಜಗೋಪಾಲ ಆಚಾರ್ಯ, ವಾಸ್ತುಶಿಲ್ಪ ತಂತ್ರಜ್ಞೆ ಕು. ಅಂಬಿಕಾ ರಾಜಗೋಪಾಲ ಆಚಾರ್ಯ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಎಸ್.ಕೆ.ಎಫ್. ಎಲಿಕ್ಸರ್ ಇಂಡಿಯಾ ಪ್ರೈ. ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ಪ್ರಜ್ವಲ್ ಆಚಾರ್ಯ ಸಮನ್ವಯಕಾರರಾಗಿದ್ದರು. ರಿಮ್ಸೆಯ ಸಂಚಾಲಕರಾದ ಪರಮಪೂಜ್ಯ ಸ್ವಾಮಿ ಮಹಾಮೇಧಾನಂದಜೀ ಸಮಾರೋಪ ನುಡಿಗಳನ್ನಾಡಿದರು.
ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಭಾಗವಹಿಸಿದವರ ಪ್ರಮಾಣ ಪತ್ರ ವಾಚಿಸಿದರು. ಸಂಘಟನಾ ಕಾರ್ಯದರ್ಶಿ ಯಜ್ಞೇಶ್ವರ ಕೃಷ್ಣಾಪುರ ಸ್ವಾಗತಿಸಿದರು. ಕಲಾ ಪರಿಷತ್ತಿನ ಗೌರವ ಸಲಹೆಗಾರರಾದ ಸುಂದರ ಆಚಾರ್ಯ ಬೆಳುವಾಯಿ, ದಿನೇಶ್ ಟಿ. ಶಕ್ತಿನಗರ, ಜೊತೆ ಕಾರ್ಯದರ್ಶಿಗಳಾದ ತಾರಾನಾಥ ಆಚಾರ್ಯ, ಸುಧಾಮ ಆಚಾರ್ಯ, ಸಹಕೋಶಾಧಿಕಾರಿ ನಾಗರಾಜ್ ಕೆ.ಎಸ್. ಅರ್ಚನಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಲಾ ಪರಿಷತ್ತಿನ ಎಳೆಯರಿಂದ ಭಕ್ತಿ ಸಂಗೀತ, ಹಿರಿಯ ಕಲಾವಿದರಿಂದ ಕಾವ್ಯ ಕುಂಚ ಹಾಗೂ ಕಲಾಕೃತಿಗಳ ಪ್ರದರ್ಶನ ಜರಗಿದವು. ರಾಜ್ಯದಾದ್ಯಂತ ಆಗಮಿಸಿದ ತೊಂಭತ್ತ ಮೂರು ಕಲಾವಿದರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.