ಮಂಗಳೂರು: ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ & ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಅಧ್ಯಾಯವು 2023ರ ಏಪ್ರಿಲ್ 18 ಮಂಗಳವಾರದಂದು ವಿಶ್ವ ಪರಂಪರೆ ದಿನವನ್ನು ಆಚರಿಸುವ ಅಂಗವಾಗಿ ನಗರದ ಹಳೆ ಬಂದರು ಪ್ರದೇಶದ ಮೂಲಕ ‘ಹೆರಿಟೇಜ್ ವಾಕ್’ ಅನ್ನು ಆಯೋಜಿಸಿತು. ಕಲಾವಿದರು, ವಾಸ್ತುಶಿಲ್ಪಿಗಳು, ಬ್ಯಾಂಕ್ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಆಸಕ್ತರು ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿದರು.
ಬೆಳಗ್ಗೆ 7:10ಕ್ಕೆ ಗುರುಪುರ ನದಿ ದಂಡೆಯಲ್ಲಿರುವ ಹಳೆ ಬಂದರಿನಿಂದ ಆರಂಭವಾದ ಪಾದಯಾತ್ರೆಗೆ ಪ್ರಾಸ್ತಾವಿಕವಾಗಿ ಇಂಟಾಕ್ ಮಂಗಳೂರು ಅಧ್ಯಾಯದ ಸಂಚಾಲಕ ಸುಭಾಸ್ ಚಂದ್ರ ಬಸು ಪಾರಂಪರಿಕ ನಡಿಗೆಯ ಮಹತ್ವವನ್ನು ಪರಿಚಯಿಸಿದರು. 1983ರಿಂದ ವಿಶ್ವ ಪರಂಪರೆ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಸಂರಕ್ಷಣಾ ವಾಸ್ತುಶಿಲ್ಪಿ ಕ್ಯಾರೊಲಿನ್ ಡಿಸೋಜಾ ಅವರು ರೋಮನ್ ಅವಧಿಯ ಆರಂಭಿಕ ಉಲ್ಲೇಖದಿಂದ ನಂತರದ ಬ್ರಿಟಿಷ್ ಆಳ್ವಿಕೆಯ ಹಂತದವರೆಗೆ ಬಂದರಿನ ಐತಿಹಾಸಿಕ ವಿಕಾಸವನ್ನು ವಿವರಿಸಿದರು.
‘ಕಸ್ಟಮ್ ಹೌಸ್’ ಮೊದಲು ಭೇಟಿ ನೀಡಿದ ಸ್ಥಳ. ಕಸ್ಟಮ್ಸ್ ಅಧೀಕ್ಷಕರಾದ ರಾಮ್ ಅವತಾರ್ ಮೀನಾ ಅವರು 2019ರಲ್ಲಿ ನವೀಕರಣಗೊಂಡ 140ವರ್ಷಗಳ ಹಳೆಯ ಕಟ್ಟಡಕ್ಕೆ ಸಂದರ್ಶಕರನ್ನು ಸ್ವಾಗತಿಸಿದರು. ನಂತರ ನಡಿಗೆಯು ವ್ಯಾಪಾರ ಪ್ರದೇಶ ಮತ್ತು ವ್ಯಾಪಾರಿಗಳ ಸರಕು ಶೇಖರಣಾ ಕಟ್ಟಡಗಳ (ಗೋಡೌನ್‌ಗಳ) ಮೂಲಕ ಸಾಗಿತು. ಭವ್ಯವಾದ ವಾಸ್ತುಶಿಲ್ಪ ಮತ್ತು ಸೊಗಸಾದ ಮರಗೆಲಸದೊಂದಿಗೆ ಕಟ್ಟಲಾದ ಎರಡು ಐತಿಹಾಸಿಕ ಮಸೀದಿಗಳಾದ ಕಚ್ಚಿ ಮೆಮೋನ್ ಮಸೀದಿ ಮತ್ತು ಜೀನತ್ ಬಕ್ಷ್ ಜುಮಾ ಮಸೀದಿಗಳಿಗೆ ಭೇಟಿ ನೀಡಲಾಯಿತು. 9-15ರ ಸುಮಾರಿಗೆ ಸ್ಥಳೀಯ ವ್ಯಾಪಾರಿ ವರ್ಗದವರು ಆರಾಧಿಸುವ ಜೈನ ಬಸದಿಯಲ್ಲಿ ನಡಿಗೆ ಮುಕ್ತಾಯವಾಯಿತು.
ವಿವರಗಳಿಗಾಗಿ, ಸಂಪರ್ಕಿಸಿ:
ಸುಭಾಸ್ ಚಂದ್ರ ಬಸು, ಇಂಟಾಕ್ ಸಂಚಾಲಕರು: 8762368048
ರಾಜೇಂದ್ರ ಕೇದಿಗೆ: 9480014812