ಧಾರವಾಡ : ಧಾರವಾಡದ ಮನೋಹರ ಗ್ರಂಥ ಮಾಲೆಯ ಅಟ್ಟದಲ್ಲಿ ರಂಗಾಸಕ್ತರೊಂದಿಗೆ ದಿನಾಂಕ 01 ಆಗಸ್ಟ್ 2024ರಂದು ಸಂವಾದ ಕಾರ್ಯಕ್ರಮ ನಡೆಯಿತು.
ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖ್ಯಾತ ಚಲನಚಿತ್ರ ನಟ, ರಂಗಕರ್ಮಿ ಶ್ರೀ ಮಂಡ್ಯ ರಮೇಶ “ಯಾವುದೇ ಸಂದರ್ಭದಲ್ಲೂ ಅವಸರದ ಪ್ರತಿಕ್ರಿಯೆ ಸಂಘರ್ಷಕ್ಕೆ ಎಡೆಮಾಡುತ್ತೆ. ನಾಟಕಕಾರರಾದ ಜಡಭರತ, ಶ್ರೀರಂಗರು, ಬೇಂದ್ರೆ ಮೊದಲಾದವರು ಬರೆದ ನಾಟಕಗಳು ಬಂಡಾಯದ ಪ್ರತೀಕಗಳೇ. ‘ಕದಡಿದ ನೀರು’ ನಾಟಕದ ಹುಚ್ಚ ರಾಚ್ಯಾ ತಿಳುವಳಿಕೆಯ ಮಾತುಗಳನ್ನೇ ಹೇಳುತ್ತಾನೆ. ಎಡ ಬಲ ವಿಚಾರಧಾರೆಯ ಅತೀರೇಕಗಳೇ ನೈಜ ರಂಗಭೂಮಿಯ ಸೊಗಡನ್ನು ಕುಂದಿಸಿವೆ. ವೃತ್ತಿರಂಗಭೂಮಿಯ ವೃತ್ತಿಪರತೆ, ಹವ್ಯಾಸಿ ರಂಗಭೂಮಿಯ ವಿಚಾರಪರತೆ, ರೆಪರ್ಟರಿಯ ಶಿಸ್ತು ಇವೆಲ್ಲವೂ ನನ್ನನ್ನು ರಂಗಕರ್ಮಿಯನ್ನಾಗಿಸಿವೆ. ಪ್ರೀತಿ, ವಿಶ್ವಾಸದಿಂದ ಯುವಪೀಳಿಗೆಯನ್ನು ರಂಗಭೂಮಿಯ ಕಡೆ ಸೆಳೆಯುವ ಮೂಲಕ ನನ್ನ ನಟನ ರಂಗ ರೆಪರ್ಟರಿಯನ್ನು ಕಳೆದ 22 ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇನೆ. ಚಲನಚಿತ್ರ, ಕಿರುತೆರೆ ಮೊದಲಾದವುಗಳಲ್ಲಿ ರಂಗಭೂಮಿಯೇ ನನ್ನ ಮೊದಲ ಆದ್ಯತೆ. ಹವ್ಯಾಸಿ ರಂಗಭೂಮಿ ಸಶಕ್ತವಾಗಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂವಾದವನ್ನು ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ನಡೆಸಿಕೊಟ್ಟರು. ಡಾ. ರಮಾಕಾಂತ ಜೋಶಿ, ಪ್ರೊ. ಅರವಿಂದ ಕುಲಕರ್ಣಿ, ಡಾ. ಕೃಷ್ಣ ಕಟ್ಟಿ, ಹರ್ಷ ಡಂಬಳ, ಸಮೀರ ಜೋಶಿ, ಡಾ. ಬಿ.ಎಂ. ಶರಭೇಂದ್ರಸ್ವಾಮಿ, ಜ್ಯೋತಿ ದೀಕ್ಷಿತ, ಅಶೋಕ ಮೊಕಾಶಿ, ಲಕ್ಷ್ಮೀಕಾಂತ ಇಟ್ನಾಳ, ಗಿರೀಶ ದೊಡ್ಡಮನಿ, ಹೊಸಮನಿ, ರಮೇಶ ನಾಡಗೀರ, ಎಸ್.ಎನ್. ದೇಶಪಾಂಡೆ, ವೀರಣ್ಣ ಪತ್ತಾರ ಮೊದಲಾದ ರಂಗಮಿತ್ರರು ಸಂವಾದದಲ್ಲಿ ಪಾಲ್ಗೊಂಡಿದ್ದರು.