ಬಂಟ್ವಾಳ : ಬಂಟ್ವಾಳ ಜೋಡುಮಾರ್ಗದ ನಿವೃತ್ತ ಶಿಕ್ಷಕ ರಾಜಮಣಿಯವರ ನಿವಾಸದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವತಿಯಿಂದ ‘ರಾಷ್ಟ್ರ – ರಾಷ್ಡ್ರೀಯತೆ – ಸಾಹಿತ್ಯ’ ಎಂಬ ವಿಚಾರದಲ್ಲಿ ವಿಚಾರ ಸಂಕಿರಣವು ದಿನಾಂಕ 18-04-2024 ರಂದು ನಡೆಯಿತು.
ಬಂಟ್ವಾಳ ಸಮಿತಿಯ ಅಧ್ಯಕ್ಷ ಮಂಗಳೂರಿನ ಶಸ್ತ್ರ ಚಿಕಿತ್ಸಕ ಮತ್ತು ಕಣಚೂರು ಆಯುರ್ವೇದ ಕಾಲೇಜಿನ ಮುಖ್ಯ ವೈದ್ಯಕೀಯ ಅಧೀಕ್ಷಕ ಸಲಹೆಗಾರ ಡಾ. ಸುರೇಶ ನೆಗಳಗುಳಿಯವರ ಸಾರಥ್ಯದಲ್ಲಿ ನಡೆದ ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ರಾಜಮಣಿಯವರು ವಹಿಸಿದ್ದರು.
ಶ್ರೀಮತಿ ಭಾರತಿಯವರ ಪ್ರಾರ್ಥನೆಯೊಡನೆ ಪ್ರಾರಂಭವಾದ ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಪಿಂಗಾರ ಸಾಹಿತ್ಯ ಬಳಗದ ಮುಖ್ಯಸ್ಥ ಹಾಗೂ ಅ.ಭಾ.ಸಾ.ಪ ಸದಸ್ಯ ರೇಮಂಡ್ ಡಿಕೂನಾ ತಾಕೊಡೆ ನೆರವೇರಿಸಿದರು. ಪ್ರಧಾನ ಉಪನ್ಯಾಸಕ ಜೋಡುಮಾರ್ಗದ ಶ್ರೀ ಮಹಾಬಲೇಶ್ವರ ಹೆಗಡೆಯವರು ಸವಿವರವಾಗಿ ರಾಷ್ಡ್ರ ಹಾಗೂ ರಾಷ್ಡ್ರೀಯತೆಯು ಸಾಹಿತ್ಯದೊಡನೆ ಹಾಸು ಹೊಕ್ಕಾಗಿರುವ ವಿಚಾರವನ್ನು ಹಲವು ಉದಾಹರಣೆ ಸಹಿತ ವಿಷದ ಪಡಿಸಿದರು. ಅವರು ಮುಂದುವರಿದು “ಡಿ.ವಿ.ಗುಂಡಪ್ಪನವರ ಸಾಹಿತ್ಯದಲ್ಲಿ ಬಂದ ನಾಲ್ಕನೆಯದಾದ ದೇಶ ಋಣವೂ ಸಹ ಅರ್ಥಗರ್ಭಿತ ವಾಗಿದೆ.” ಎಂದರು.
ಬಳಿಕ ಪ್ರಸ್ತಾವನಾ ಭಾಷಣದಲ್ಲಿ ಡಾ.ಸುರೇಶ ನೆಗಳಗುಳಿಯವರು ಅ.ಭಾ.ಸಾ.ಪ.ಇದರ ಧ್ಯೇಯೋದ್ದೇಶಗಳನ್ನು ತಿಳಿಸಿ “ಸಾಹಿತ್ಯದ ಮೂಲಕ ರಾಷ್ಟ್ರೀಯತೆ ಹಾಗೂ ಸಂಸ್ಕಾರಗಳನ್ನು ಪಕ್ವಗೊಳಿಸುವ ಉದ್ದೇಶದಿಂದ ಅಲ್ಲಲ್ಲಿ ಹಿರಿಯ ಸಾಹಿತಿಗಳ ಸಹಿತ ಕಾರ್ಯಕ್ರಮವನ್ನು ಸಂಯೋಜನೆ ಮಾಡುತ್ತಿದ್ದು ಇದು ರಾಜಕೀಯೇತರ ಕೈಂಕರ್ಯವಾಗಿದೆ.” ಎಂದರು.
ಬಳಿಕ ನಡೆದ ಸಂವಾದ ಕಾರ್ಯಕ್ರಮದ ಸೂತ್ರಧಾರರಾಗಿ ಹಿರಿಯ ಪತ್ರಕರ್ತ ಶ್ರೀ ಜಯಾನಂದ ಪೆರಾಜೆಯವರು ರಾಷ್ಟ್ರ ಹಾಗೂ ರಾಷ್ಟ್ರೀಯತೆಯ ಕುರಿತಾದ ಹಲವು ಜಿಜ್ಞಾಸೆಗಳನ್ನು ಮಂಡಿಸಿ ಹಿರಿಯ ಸಾಹಿತಿಗಳ ಸಂವಾದಕ್ಕೆ ಅನುವು ಮಾಡಿಕೊಟ್ಟರು. ಪರಮೇಶ್ವರ ಹೆಗಡೆಯವರು ದೇಶ ಹಾಗೂ ರಾಷ್ಟ್ರ ಪದಗಳ ವ್ಯತ್ಯಾಸವನ್ನು ಮಾರ್ಮಿಕವಾಗಿ ವಿಶ್ಲೇಷಣೆ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಶಿಕ್ಷಣಾಧಿಕಾರಿಗಳಾದ ಅನಾರ್ ಕೃಷ್ಣ ಶರ್ಮಾರವರು ‘ಮನೆಯಲ್ಲಿಯೇ ಎಡ ಬಲಗಳಿರುವುದು ಅಸ್ವಾಭಾವಿಕವಲ್ಲ. ಆದರೆ ಮೂರನೇಯ ವ್ಯಕ್ತಿ ಪ್ರವೇಶವಾದಾಗ ಅವರು ಸಮಬಲರಾಗುವಂತಿದ್ದಾಗ ರಾಷ್ಟ್ರವು ಸದೃಢವಾಗಲು ಸಾಧ್ಯ.” ಎಂದರು
ಹಿಂದಿ ಭಾಷೆಯ ಹೇರಿಕೆಯ ಬಗ್ಗೆ ಮಾಡಿದ ಸಂವಾದದಲ್ಲಿ ಮಾತನಾಡಿದ ನಿವೃತ್ತ ಹಿಂದಿ ಶಿಕ್ಷಕ ಸುಬ್ರಾಯ “ಹಿಂದಿ ಅದೊಂದು ಸಂಪರ್ಕ ಭಾಷೆ ಹಾಗೂ ಪ್ರತಿಶತ ಐವತ್ತು ದೇಶವಾಸಿಗಳ ಭಾಷೆಯಾಗಿದ್ದು ನಮ್ಮ ರಾಷ್ಟ್ರದಲ್ಲಿ ತ್ರಿಭಾಷಾ ಸೂತ್ರ ಅನಿವಾರ್ಯ.” ಎಂದರು.
ಅಧ್ಯಕ್ಷ ಭಾಷಣ ಮಾಡಿದ ರಾಜಮಣಿಯವರು “ಮತಗಳು ಪ್ರತ್ಯೇಕವಾದರೂ ರಾಷ್ಟ್ರೀಯತೆ ಬದಲಾಗದು, ಯಾವನೇ ವ್ಯಕ್ತಿಯೂ ಒಂದು ತಿಂಗಳಿಗಿಂತ ಹೆಚ್ಚು ಮನೆಯೊಳಗೇ ಇರಲಾರ ಎಂಬ ಗಾಂಧೀನುಡಿಯನ್ನು ನೆನಪಿಸುತ್ತಾ ತುರ್ತು ಪರಿಸ್ಥಿತಿಯಂತಹ ಕಾಲದಲ್ಲೂ ಜನರಲ್ಲಿ ರಾಷ್ಟ್ರೀಯತೆ ಮನೆ ಮಾಡಿದ್ದು ಇದಕ್ಕೆ ನಿದರ್ಶನ.” ಎಂದರು.
ಕೊನೆಗೆ ಭಾರತಿಯವರ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಯಶಸ್ವೀ ಮುಕ್ತಾಯ ಕಂಡಿತು.