ಮೂವತ್ತು ವರ್ಷಗಳ ಹಿಂದಿನ ಮಾತು. ಬೀದಿಯಲ್ಲಿ ಯಾವುದೋ ಮೆರವಣಿಗೆ. ಡುಂ ಟಕ ಡುಂ ಟಕ ಲಯಬದ್ಧ ತಮಟೆಯ ಸದ್ದು… ವಾದ್ಯಗಳ ನಾದಸ್ವರ, ನನ್ನ 3 ವರ್ಷದ ಮಗ ಎದ್ದನೋ ಬಿದ್ದನೋ ಎನ್ನುವಂತೆ ರಸ್ತೆಗೆ ಓಡಿದ. ನಾನೂ ಅವನ ಹಿಂದೆ ಓಟ. ಗುಂಪು ಜನಜಾತ್ರೆ. ಯಾವುದೋ ಉತ್ಸವ ಇರಬೇಕು. ಪಟಾಲಮ್ಮನೋ, ಮಾರಮ್ಮನೋ, ಚೌಡಮ್ಮನೋ… ಅಲಂಕೃತ ಮೂರ್ತಿ ಪಲ್ಲಕ್ಕಿಯ ಮೇಲೆ. ಮೆರವಣಿಗೆಯ ಮುಂದೆ ಕುದುರೆ, ಕೀಲುಗೊಂಬೆಗಳ ಮೇಲೆ ರಾಜಾ- ರಾಣಿಯರ ಸವಾರಿ ಕುಣಿತ. ನನ್ನ ಮಗ ಆವೇಶಿತನಾಗಿ ಆ ಗುಂಪಿನಲ್ಲಿ ತೂರಿ ತಾಳಬದ್ದವಾಗಿ ಹೆಜ್ಜೆ ಹಾಕಿ ಕುಣಿಯುತ್ತಿದ್ದ. ನೃತ್ಯದ ಸೆಳೆತ ಅವನನ್ನು ಆವರಿಸಿತ್ತು. ಎಂಥವರಿಗೂ ಖುಷಿಯಾದಾಗ ಉಲ್ಲಾಸದಿಂದ ‘ಥಕ ಥೈ’ ಎಂದು ಕುಣಿದು ಬಿಡುತ್ತಾರಂತೆ. ಬಹುಶಃ ನೃತ್ಯ ಆವರಿಸುವ ಹೊತ್ತು- ಗೊತ್ತು, ಸಮಯ- ಸಂದರ್ಭ ಯಾವುದೂ ಗೊತ್ತಾಗಲ್ಲ, ಒಟ್ಟಿನಲ್ಲಿ ಖುಷಿಯ ಅಭಿವ್ಯಕ್ತಿ ‘ಕುಣಿತ’ ಅರ್ಥಾತ್ ಈ ‘ನೃತ್ಯ’. ಇದು ಕೆಲವರಿಗೆ ಹುಚ್ಚು ಹಿಡಿಸಿಬಿಡುತ್ತೆ. ಕುಣಿತ ಎನ್ನುವುದಕ್ಕಿಂತ ‘ನಾಟ್ಯ’ ಎನ್ನುವುದು ಹೆಚ್ಚು ಶಿಷ್ಟ ಭರತಮುನಿ ಸಾವಿರಾರು ವರ್ಷಗಳ ಹಿಂದೆ ನೃತ್ಯ ಪ್ರಕಾರಕ್ಕೆ ಶಾಸ್ತ್ರದ ಚೌಕಟ್ಟು ಹಾಕಿ. ಅದರ ರೀತಿ ನೀತಿಗಳಿಗೆ ಪಾರಿಭಾಷಿಕ ಆಂಗಿಕ- ಹಸ್ತಮುದ್ರೆ, ಅಡವು- ಅಭಿನಯಗಳ ಸ್ವರೂಪ, ನಿಯಮಗಳ ಜೋಡಣೆಯನ್ನು ಬಿಗಿಯಾಗಿ ರೂಪಿಸಿದ್ದಕ್ಕೆ ಸಾಕ್ಷಿ ಅವನು ರಚಿಸಿದ ‘ನಾಟ್ಯ ಶಾಸ್ತ್ರ’ ಗ್ರಂಥ. ಇಂದಿಗೂ ಹಲವು ರೂಪಾಂತರಗಳ ಪ್ರಭೇದಗಳಲ್ಲಿ ಬೇರು ಬಿಟ್ಟಿರುವ ದೈವಿಕ ಆಯಾಮದ ಭರತನ ‘ನಾಟ್ಯ ಶಾಸ್ತ್ರ’ ಗಂಥವೇ ಎಲ್ಲ ನೃತ್ಯ ಪ್ರಕಾರಗಳಿಗೂ ಮೂಲ ಎನ್ನಲಾಗುತ್ತಿದೆ.
ದೇಗುಲಗಳಲ್ಲಿನ ‘ನೃತ್ಯ ಸೇವೆ’ ಪದ್ಧತಿಯಿಂದ ಹಿಡಿದು, ಆಸ್ಥಾನಗಳಲ್ಲಿ ರಾಜ ನರ್ತಕಿಯರ ನರ್ತನಗಳು ಹಾಗೂ ಇಂದಿನ ದಿನಮಾನಗಳಲ್ಲಿ ಶಾಸ್ರೋಕ್ತವಾಗಿ ನೃತ್ಯ ಕಲಿತ ಕಲಾವಿದರು ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡುವ ಪರಿಪಾಠದಿಂದ ಮೊದಲ್ಗೊಂಡು ಮೊದಲ ಹೆಜ್ಜೆಯ ನಾಟ್ಯ ಸಮರ್ಪಣೆ ‘ರಂಗಪ್ರವೇಶ’ದವರೆಗೂ ಇದರ ವ್ಯಾಪ್ತಿ. ನೃತ್ಯಕ್ಕೆ ತನ್ನದೇ ಆದ ಅಸ್ಮಿತೆ ಇದೆ.
ಅದಮ್ಯ ನಾಟ್ಯ ಪ್ರೀತಿಯ ಬಗ್ಗೆ ಅನೇಕ ಕಥೆಗಳನ್ನು ಕೇಳಿದ್ದೇನೆ. ಒಡಿಶಾದ ಪ್ರತಿಭಾವಂತ ಹುಡುಗನೊಬ್ಬ ಸಿಕ್ಕ ಸಿಕ್ಕ ಕಡೆ ಕುಣಿಯುತ್ತಿದ್ದವನು ಶಾಸ್ರೋಕ್ತವಾಗಿ ನೃತ್ಯ ಕಲಿಯಲೇಬೇಕೆಂದಾಗ ಅವನ ಹೆತ್ತವರು ಖಡಾಖಂಡಿತವಾಗಿ ಅವನಾಸೆಯನ್ನು ಕತ್ತರಿಸಿ ಹಾಕಿದರಂತೆ. ಕಡೆಗೆ ಎಂಟರ ಬಾಲಕ ನೇಣುಕುಣಿಕೆಯನ್ನು ಕುತ್ತಿಗೆಗೆ ಬಿಗಿದುಕೊಂಡಾಗ, ಹೌಹಾರಿದ ಹೆತ್ತವರು, ಅವನ ನಿಜ ಅಭೀಷ್ಠೆಯನ್ನು ಮನಗಂಡು ಕೂಡಲೇ ಅವನನ್ನು ನೃತ್ಯಗುರುಗಳಿಗೆ ಒಪ್ಪಿಸಿದರಂತೆ. ಆತನಿಂದು ಪ್ರಸಿದ್ಧ ಒಡಿಸ್ಸಿ ನೃತ್ಯ ಕಲಾವಿದ.
ಇನ್ನೊಬ್ಬ ಬಡ ಹುಡುಗ ಮನೆಯವರ ಬೆಂಬಲವಿಲ್ಲದಿದ್ದರೂ ‘ನೃತ್ಯಕ್ಕಾಗಿ ಜೀವ ಬಿಟ್ಟೇನು’ ಎಂದು ಸಂಕಲ್ಪ ಮಾಡಿ ಬೆಳಗಿನ ನಾಲ್ಕರ ಜಾವಕ್ಕೇ ಮನೆಬಿಟ್ಟು ಪ್ರತಿದಿನ ಇಪ್ಪತ್ತು ಕಿ.ಮೀ.ಗಟ್ಟಲೆ ಬರಿಗಾಲಲ್ಲೇ ನಡೆದು ಬಂದು, ಸಿಟಿಯ ಬಡಾವಣೆಯಲ್ಲಿದ್ದ ಡ್ಯಾನ್ಸ್ ಟೀಚರ್ ಮನೆ ತಲುಪಿ, ಅವರ ಮನೆಚಾಕರಿ ಮಾಡಿ ನೃತ್ಯ ಕಲಿತ ಉದಾಹರಣೆಗಳಿವೆ. ಕೆಲಕಾಲ ಮಗಳಿಗೆ ನೃತ್ಯ ಕಲಿಸಿ, ರಂಗಪ್ರವೇಶದ ಹಂತ ಬಂದಾಗ ಮನೆಯವರು ಖರ್ಚಿಗೆ ಹೆದರಿ ಒಲ್ಲೆನೆಂದಾಗ ಆ ಹುಡುಗಿ, ತಾನು ಕಲಿತ ಅಲ್ಪಸ್ವಲ್ಪ ನೃತ್ಯವಿದ್ಯೆಯನ್ನು ಪುಟ್ಟಮಕ್ಕಳಿಗೆ ಕಲಿಸಿ, ಹಣ ಕೂಡಿಹಾಕಿ ಮುಂದೆಂದೋ ತನ್ನ ‘ರಂಗಪ್ರವೇಶ’ದ ಸಂಕಲ್ಪ ನೆರವೇರಿಸಿಕೊಂಡ ಸ್ಫೂರ್ತಿದಾಯಕ ಕಥೆಗಳೂ ಇವೆ.
ಪ್ರಖ್ಯಾತ ನಟಿ ಸುಧಾ ಚಂದ್ರನ್ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡರೂ ಛಲ ಬಿಡದೆ ತನ್ನ ಕಲಾಪ್ರೀತಿಯಿಂದ ಅದೆಷ್ಟು ಪ್ರದರ್ಶನಗಳನ್ನು ಕೊಡಲಿಲ್ಲ? 90 ದಾಟಿದ ಇಳಿವಯಸ್ಸಿನಲ್ಲಿ ಖ್ಯಾತ ಅಭಿನೇತ್ರಿ- ಕಲಾವಿದೆ ವೈಜಯಂತಿಮಾಲ ಇಂದಿಗೂ ನೃತ್ಯ ಬಿಟ್ಟುಕೊಟ್ಟಿಲ್ಲ ಎಂದರೆ ಇದಕ್ಕಿಂತ ನಾಟ್ಯಶಕ್ತಿಗೆ ಇರುವ ದೃಷ್ಟಾಂತಗಳು ಬೇಕೇ? ಭರತನಾಟ್ಯ ಕ್ಷೇತ್ರದಲ್ಲಿ ನವಕ್ರಾಂತಿ-ಹೊಸ ಆಯಾಮಗಳಿಗೆ ಪರ್ಯಾಯವಾಗಿರುವ ಡಾ. ಪದ್ಮಾ ಸುಬ್ರಹ್ಮಣ್ಯಮ್ ಸಾಧನೆಗಳು ಚರಿತ್ರೆಯಲ್ಲಿ ದಾಖಲಾಗುವುದಿಲ್ಲವೇ? ಹೀಗೆ ವಿವಿಧ ನಾಟ್ಯಶೈಲಿಗಳಲ್ಲಿ ಜಗತ್ ಪ್ರಸಿದ್ದರಾಗಿರುವ ಅದೆಷ್ಟು ಜನ ನಮ್ಮ ನಾಡಿನ ನೃತ್ಯಕಲಾವಿದರು ಇಡೀ ವಿಶ್ವದ ಗಮನ ಸೆಳೆದಿಲ್ಲಾ?.
ಹೌದು- ನೃತ್ಯ ಒಂದು ಬೆರಗಿನಲೋಕ- ಮೆರುಗಿನ ಜಗತ್ತು. ಸೂಜಿಗಲ್ಲಿನಂತೆ ಸೆಳೆವ ಗಂಧರ್ವಲೋಕ. ಎಷ್ಟು ಜನ ಕಲಾವಿದರಿಗಿಲ್ಲ ತಾವೊಬ್ಬ ನಾಟ್ಯಾಗಸದ ತಾರೆಯಾಗಬೇಕೆಂಬ ಕನಸು!? ಕಲಾರಸಿಕರೆದುರು ನರ್ತಿಸಿದಾಗ, ಧನ್ಯತೆಯ ಸಂಭ್ರಮ-ಬೀಗು. ಕರತಾಡನದ ಮೆಚ್ಚುಗೆ- ಅನಿರ್ವಚನೀಯ ಅನುಭೂತಿ. ದೈವೀಕಸೆಲೆಯ ಸಾಕ್ಷಾತ್ಕಾರ ಕಲಾಕೋವಿದರ ಜೀವನ ಗಮ್ಯ!
ಸಹಸ್ರಾರು ಸಂಖ್ಯೆಯಲ್ಲಿರುವ ಪರಿಪಕ್ವ- ನುರಿತ ಖ್ಯಾತ ನೃತ್ಯಗುರು- ಕಲಾವಿದರಿಂದ ಹಿಡಿದು, ಸಾಮಾನ್ಯ ಮಟ್ಟದ ನರ್ತಕರು- ಚಿಗುರು- ಎಳಸು ಪ್ರತಿಭೆಗಳವರೆಗೆ ಎಲ್ಲರೂ ತಮ್ಮ ಪಾಡಿಗೆ ತಾವು ನೃತ್ಯ ಕಾಯಕದಲ್ಲಿ ತೊಡಗಿದ್ದಾರೆ. ನೃತ್ಯವೇ ಅವರ ಉಸಿರಾಗಿದೆಯೆಂದರೂ ಅತಿಶಯೋಕ್ತಿಯಲ್ಲ, ಹಲವೊಮ್ಮೆ ಇದು ನೃತ್ಯೋದ್ಯಮವೂ ಅನಿಸಬಹುದು. ಪ್ರಸ್ತುತ ಯಾಂತ್ರಿಕ ಬದುಕಿನ ಓಟದ ಸ್ಪರ್ಧಾ ಜೀವನದಲ್ಲಿ ‘ನೃತ್ಯ’ ನೆಮ್ಮದಿಯ ಒಂದು ತಂಗುದಾಣ- ಉಲ್ಲಾಸ- ಸಂತಸ ಚಿಮ್ಮಿಸುವ ಊಟೆ. ಬೆಂಗಳೂರಿನಂಥ ಮಹಾನಗರದಲ್ಲಿ ಪ್ರತಿದಿನವೂ ಒಂದಲ್ಲ ಒಂದೆಡೆ ನೃತ್ಯ ಚಟುವಟಿಕೆಗಳು, ಸಾರ್ಥಕತೆ – ಹೆಮ್ಮೆಯ ನಿತ್ಯನೋಟ. ಇಲ್ಲಿ ನಿತ್ಯವೂ ‘ಅಂತಾರಾಷ್ಟ್ರೀಯ ನೃತ್ಯ ದಿನ’ವೇ. ।
ವೈ. ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.