ಸಾಧಿಸುವ ಛಲ ಇದ್ದರೆ ಅಸಾಧ್ಯವಾದದನ್ನು ಸಾಧಿಸಬಹುದು. ಯಾವುದೇ ಕಲಾ ಸಾಧನೆ ಮಾಡಲು ಛಲ ಇದ್ದರೆ ಅಲ್ಲಿ ವಯೋಮಿತಿಯು ತಡೆಯಾಗುವುದಿಲ್ಲ. ಕಠಿಣ ಪರಿಶ್ರಮ ಹಾಗೂ ಅಭ್ಯಾಸದಿಂದ ಯಾವುದು ಕೂಡ ಅಸಾಧ್ಯವಲ್ಲ. ಹೀಗೆ ಯಕ್ಷಗಾನದಲ್ಲಿ ತೊಡಗಿಸಿಕೊಂಡು ಕಿರಿಯ ವಯಸ್ಸಿನಲ್ಲಿ ಸಾಧನೆಯ ಶಿಖರ ಏರಿದ ಯುವ ಕಲಾವಿದೆ ಇವರು ಕಡಬ ತಾಲೂಕಿನ ಆಲಂಕಾರಿನ ಯೋಗೀಶ್ ಆಚಾರ್ಯ ಹಾಗೂ ಶ್ಯಾಮಲ ದಂಪತಿಗಳ ಸುಪುತ್ರಿಯಾಗಿ 05.10.2004 ರಂದು ಶ್ರೇಯಾ.ಎ ಅವರ ಜನನ. ಪುತ್ತೂರಿನ ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ದ್ವಿತೀಯ ಬಿ.ಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಶ್ರೇಯಾ.ಎ ಇವರ ಯಕ್ಷಗಾನದ ಗುರುಗಳು:-
ನಾಟ್ಯದ ಗುರುಗಳು:-
ಲಕ್ಷ್ಮಣ ಆಚಾರ್ಯ ಎಡಮಂಗಲ.
ಚಂದ್ರಶೇಖರ್ ಸುಳ್ಯಪದವು.
ಭಾಗವತಿಕೆಯ ಗುರುಗಳು:-
ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ.
ಗೋವಿಂದ ನಾಯಕ್ ಪಾಲೆಚ್ಚಾರ್.
ಹರೀಶ್ ಭಟ್ ಬೊಳಂತಿಮೊಗರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಮಾತಿನಂತೆ ಇವರು ಪ್ರಾಥಮಿಕ ಹಂತದಿಂದಲೂ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಯಕ್ಷಗಾನ, ಭರತನಾಟ್ಯ, ಸಂಗೀತ, ಯೋಗ, ಭಜನೆ, ಚಿತ್ರಕಲೆ, ಭಾಷಣ ಹೀಗೆ ತನ್ನನ್ನು ತಾನು ತೊಡಗಿಸಿಕೊಂಡು ಹಲವಾರು ಕಡೆ ಗುರುತಿಸಿಕೊಂಡರು. ಶಿಕ್ಷಣ ಇಲಾಖೆಯು ನಡೆಸುವ ಪ್ರತಿಭಾ ಕಾರಂಜಿಯ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಎರಡು ಬಾರಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಹಾಗೂ ಯಕ್ಷಗಾನ ಸ್ಪರ್ಧೆಯಲ್ಲಿ ಎರಡು ಬಾರಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದರು. ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು, ಅಭಿನಯ ಗೀತೆಯಲ್ಲಿ ಎರಡು ಬಾರಿ ಪ್ರಥಮ, ಮೂರು ಬಾರಿ ದ್ವಿತೀಯ ಬಹುಮಾನ ಪಡೆದು, ಯಕ್ಷಗಾನ ಸ್ಪರ್ಧೆಯಲ್ಲಿ ಎರಡು ಬಾರಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ಯಕ್ಷಗಾನದಲ್ಲಿ 5 ಬಾರಿ ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸಿದ ಏಕೈಕ ಪ್ರತಿಭೆ ಶ್ರೇಯಾ.ಎ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಗುರುಗಳಿಂದ ಮಾರ್ಗದರ್ಶನ ಪಡೆದುಕೊಂಡು ತಯಾರಿ ಮಾಡಿಕೊಂಡು ಹೋಗುತ್ತೇನೆ ಎಂದು ಹೇಳುತ್ತಾರೆ ಶ್ರೇಯಾ.
ದೇವಿ ಮಹಾತ್ಮೆ, ಸುದಶ೯ನ ವಿಜಯ, ಸುಧನ್ವಾಜ೯ನ ಕಾಳಗ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು. ದೇವಿ, ಕೃಷ್ಣ, ಬಬ್ರುವಾಹನ, ಸುದಶ೯ನ, ಸುಧನ್ವ, ಚಂಡ ಮುಂಡ ಇತ್ಯಾದಿ ನೆಚ್ಚಿನ ವೇಷಗಳು.
ಭೈರವಿ, ಹಿಂಧೋಳ, ಅಭೇರಿ, ಬೃಂದಾವನ ಸಾರಂಗ, ಶಿವರಂಜಿನಿ, ಕಾನಡ, ಚಾರುಕೇಶಿ, ವಾಸಂತಿ ನೆಚ್ಚಿನ ರಾಗಗಳು.
ಬಲಿಪ ನಾರಾಯಣ ಅಜ್ಜ, ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ದಿವಾಕರ್ ಆಚಾರ್ಯ ಪೊಳಲಿ, ರವಿಚಂದ್ರ ಕನ್ನಡಿಕಟ್ಟೆ ನೆಚ್ಚಿನ ಭಾಗವತರು.
ಪದ್ಯಾಣ ಶಂಕರನಾರಾಯಣ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಚಂದ್ರಶೇಖರ್ ಆಚಾರ್ಯ ಗುರುವಾಯನಕೆರೆ ನೆಚ್ಚಿನ ಚೆಂಡೆ ಮದ್ದಳೆ ವಾದಕರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ತನ್ನ ವೈಶಿಷ್ಟ್ಯತೆಯಿಂದಲೆ ಇಂದಿಗೂ ಜನ ಜನಿತವಾಗಿದೆ. ಕಲೆ ಎನ್ನುವುದು ಆರಾಧನಾ ಸ್ಥಾನದಲ್ಲಿ ನಿಂತಿದೆ, ಕಾಲ ಕಾಲಕ್ಕೆ ಬೇಕಾದ ಕಾಯಕಲ್ಪ ಹಿರಿಯರಿಂದ ಪಡೆದು ಇಂದೂ ಫಲ ನೀಡುವ ಕಲ್ಪವೃಕ್ಷವಾಗುತ್ತದೆ. ಕಾಲಚೋದಿತ ಒರೆ ಕೊರೆಗಳು ಇದ್ದರೂ ಯಕ್ಷಗಾನ ಎಂದಿಗೂ ಕಲಾವಿದರ ಕಾಮಧೇನು.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಕಲೆ ಉಳಿಯಬೇಕಾದರೆ ಕಲಾಪ್ರಕಾರದ ಅಸ್ಮಿತೆಯ ಜೊತೆಗೆ ಪ್ರೋತ್ಸಾಹಕರ ಪ್ರೇಕ್ಷಕರ ಕಾಣ್ಕೆ ಮುಖ್ಯ.
ಇಂದಿಗೂ ಯಕ್ಷಗಾನ ನಿಂತಿರುವುದು ರಂಗಸ್ಥಳದಲ್ಲಿ ಅದು ಕಲೆಯ, ಕಲಾವಿದರ, ಪ್ರೇಕ್ಷಕರ ಮನಸ್ಸಿನ ರಂಗಸ್ಥಳದಲ್ಲಿ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು:-
ಕಲಿಕೆ ಬದುಕಿನ ಉಸಿರಿನಂತೆ ಎಂದೂ ನಿಲ್ಲಿಸಲಾಗದ ಪ್ರವೃತ್ತಿ. ಯಕ್ಷಗಾನ ಮಾರ್ಗೀಯವಾದ ಸತ್ವದ ಅಸ್ಮಿತೆಯ ಜೊತೆಗೆ ನಾವು ನಡೆಯಬೇಕು.
ಯಕ್ಷಗಾನ ಅದು ಹರಿಯುವ ಭಾಗೀರತಿ… ನಾವು ಅದರ ಜೊತೆ ಅದಕ್ಕೆ ಧಕ್ಕೆ ಆಗದ ಹಾಗೆ ನಡೆದರೆ ಅದೇ ನಾವು ಕಲೆಗೆ ಕೊಡುವ ಗೌರವ.
ಸನ್ಮಾನ ಹಾಗೂ ಪ್ರಶಸ್ತಿ:-
ಪ್ರತಿಭದೀಪ ಪ್ರಶಸ್ತಿ.
ಕಲಾಶ್ರೀ ಪ್ರಶಸ್ತಿ.
ಕನಾ೯ಟಕ ಮಕ್ಕಳ ರಾಜ್ಯೋತ್ಸವ ಪ್ರಶಸ್ತಿ.
ಕನಾ೯ಟಕ ಪ್ರತಿಭಾ ರತ್ನ ಪ್ರಶಸ್ತಿ.
ಭರತನಾಟ್ಯ, ಸಂಗೀತ, ಚಿತ್ರ ಬಿಡಿಸುವುದು, ಲೇಖನ, ಭಾಷಣ ಇತ್ಯಾದಿ ಇವರ ಹವ್ಯಾಸಗಳು.
ಅಪ್ಪ ಹಾಗೂ ಅಮ್ಮನ ಪ್ರೋತ್ಸಾಹ ಹಾಗೂ ಪ್ರೇರಣೆಯಿಂದ, ತಮ್ಮ ಯಶಸ್.ಎ ಆಲಂಕಾರು ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ ಹಾಗೂ ಆಶೀರ್ವಾದದಿಂದ ಯಕ್ಷಗಾನ ರಂಗದಲ್ಲಿ ಇಂದು ಯಕ್ಷಗಾನ ರಂಗದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಶ್ರೇಯಾ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.