6.10.2007ರಂದು ವೆಂಕಟೇಶ.ಡಿ ಹಾಗೂ ಜ್ಯೋತಿ ಎಂ.ಜಿ. ಇವರ ಮಗಳಾಗಿ ಸ್ವಸ್ತಿಶ್ರೀ ಅವರ ಜನನ. ಎಸೆಸಲ್ಸಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಎಕ್ಸ್ಪರ್ಟ್ ಕಾಲೇಜ್ ನಲ್ಲಿ ಪ್ರಥಮ PUC ಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ತಾಯಿ ಮತ್ತು ತಂದೆಯ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಬಂದ ಇವರು, ಯಕ್ಷಗಾನ ಗುರು ಮಂಜುನಾಥ ಕುಲಾಲ್ ಐರೋಡಿ ಹಾಗೂ ಸೀತಾರಾಮ ಕುಮಾರ್ ಕಟೀಲ್ ಇವರ ಬಳಿ ಯಕ್ಷಗಾನವನ್ನು ಕಲಿಯುತ್ತಿದ್ದಾರೆ.
ಪಾತ್ರದ ಹಿಡಿತ, ಪಾತ್ರಕ್ಕೆ ಬೇಕಾದ ತಯಾರಿಯನ್ನು ಈಗಾಗಲೇ ಆ ಪಾತ್ರದಲ್ಲಿ ಅನುಭವ ಇರುವ ಪಾತ್ರಧಾರಿಯಿಂದ ತಿಳಿದು, ಕಲಿತು ಹಾಗೂ ಭಾಗವತರಿಂದ ಸರಿಯಾಗಿ ಅರಿತು ರಂಗದ ನಡೆಗೆ ಚ್ಯುತಿ ಬಾರದಂತೆ ಅಳವಡಿಸಿ ಯಕ್ಷಗಾನವನ್ನು ಚಾಚು ತಪ್ಪದಂತೆ ಬೆಳೆಸುವುದರೊಂದಿಗೆ ತಾನು ಬೆಳೆಯುತ್ತೇನೆ ಎಂದು ಹೇಳುತ್ತಾರೆ ಸ್ವಸ್ತಿಶ್ರೀ.
ಅಭಿಮನ್ಯು ಕಾಳಗ, ಜಾಂಬವತಿ ಕಲ್ಯಾಣ, ಮೀನಾಕ್ಷಿ ಪರಿಣಯ, ಬಬ್ರುವಾಹನ ಕಾಳಗ, ಶ್ರೀ ಕೃಷ್ಣ ಲೀಲಾಮೃತ, ಪಾಂಚಜನ್ಯ, ಪಂಚವಟಿ ನೆಚ್ಚಿನ ಪ್ರಸಂಗಗಳು.
ಮೀನಾಕ್ಷಿ, ಅಭಿಮನ್ಯು, ಷಣ್ಮುಖ, ರುಕ್ಮಾಂಗ, ಅಸಿಕೆ, ಕೃಷ್ಣ, ಬಬ್ರುವಾಹನ ಹಾಗೂ ಇನ್ನು ಅನೇಕ ಇವರ ನೆಚ್ಚಿನ ಪಾತ್ರಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಜಾಸ್ತಿ ತಿಳಿಯದು ಹಾಗೂ ಪ್ರೇಕ್ಷಕರ ಪ್ರೋತ್ಸಾಹವೇ ನನಗೆ ಆಶೀರ್ವಾದ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು:- ಯಕ್ಷಗಾನ ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವುದರಲ್ಲಿ ಎರಡು ಮಾತಿಲ್ಲ. ಹಾಗಿರುವಾಗ ಇಂತಹ ಕಲೆಯನ್ನು ಬಳಸಿಕೊಂಡವರ ಏಳಿಗೆಯಾಗುವುದರಲ್ಲಿ ಸಂಶಯವಿಲ್ಲ. ಆ ಕಾರಣಕ್ಕಾಗಿ ನಿತ್ಯ ಜೀವನದಲ್ಲಿ ಅಳವಡಿಸುವಂಥಾಗುವ ವ್ಯವಸ್ಥೆಯನ್ನು ಮಾಡಲು ಪ್ರಯತ್ನ ಮಾಡುವುದರೊಂದಿಗೆ ಯಕ್ಷಗಾನದ ಸರ್ವತೋಮುಖ ಅಭಿವೃದ್ಧಿಗಾಗಿ ಕಲಿಕೆಯೊಂದಿಗೆ ಬೆಳೆಸಿ ಕೊಳ್ಳುತ್ತೇನೆ ಎಂದು ಹೇಳುತ್ತಾರೆ ಸ್ವಸ್ತಿಶ್ರೀ.
ಮೇಳಗಳಲ್ಲಿ ತಿರುಗಾಟ ಮಾಡದಿದ್ದರೂ ಅನೇಕ ಮೇಳಗಳ ರಂಗಸ್ಥಳದಲ್ಲಿ ಪಾತ್ರ ನಿರ್ವಹಿಸಿದ್ದೇನೆ.
ಮುಖ್ಯವಾಗಿ ಪೆರ್ಡೂರು, ಸಾಲಿಗ್ರಾಮ, ಹನುಮಗಿರಿ, ಸಿಗಂದೂರು, ಗೋಳಿಗರಡಿ, ಹಿರಿಯಡ್ಕ, ಸೌಕೂರು, ಹಾಲಾಡಿ, ಬಪ್ಪನಾಡು ಹೀಗೆ ತೆಂಕು ಹಾಗೂ ಬಡಗು ಮೇಳಗಳ ರಂಗಸ್ಥಳದಲ್ಲಿ ಬೇರೆ ಬೇರೆ ಪ್ರಸಂಗ ಗಳಲ್ಲಿ ಪಾತ್ರ ವನ್ನು ಮಾಡಿರುತ್ತೇನೆ ಎಂದು ಹೇಳುತ್ತಾರೆ ಸ್ವಸ್ತಿಶ್ರೀ.
ಸನ್ಮಾನ ಹಾಗೂ ಪ್ರಶಸ್ತಿ:-
ಉತ್ತಮ ತೆಂಕು ಪುಂಡುವೇಷ ಪ್ರಶಸ್ತಿ, ಉತ್ತಮ ಸ್ತ್ರೀ ವೇಷ ಪ್ರಶಸ್ತಿ ಹಾಗೂ ಮಾತುಗಾರಿಕೆ ಮತ್ತು ನಾಟ್ಯಕ್ಕಾಗಿ ಪ್ರಶಸ್ತಿ.
ಕಲ್ಕೂರ ಪ್ರತಿಷ್ಠಾನದಿಂದ ಸತತ ನಾಲ್ಕು ಬಾರಿ ಯಕ್ಷ ಕೃಷ್ಣ ಪ್ರಶಸ್ತಿ.
ಅಲ್ಲದೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಮತ್ತು ಪ್ರಶಸ್ತಿ.
ಕೋಟೇಶ್ವರದ ಜೋಡಾಟದಲ್ಲಿ ಮದನಾಕ್ಷಿಯಾಗಿ ದಕ್ಷಿಣ ಕನ್ನಡದಿಂದ ಭಾಗವಹಿಸಿದ ಏಕೈಕ ಮಹಿಳಾ ಕಲಾವಿದೆ.
ಯಕ್ಷಗಾನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಅಧ್ಯಯನ
ಸನಾತನ ಸಂಸ್ಕೃತಿ – ಸಂಪ್ರದಾಯ, ಪುರಾಣ, ಸ್ತೋತ್ರ ಮತ್ತು ಶ್ಲೋಕಗಳ ಅಧ್ಯಯನ ಇವರ ಹವ್ಯಾಸಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.