ಯಕ್ಷಗಾನ ಅರ್ಥಧಾರಿಗಳು, ಆಮ್ನಾಯಃ ಭಾರತೀಯ ದಿನದರ್ಶಿಕೆ ಗಾಳಿಮನೆ ಗನ್ಧವಹಸದನಮ್ ನ ಸ್ಥಾಪಕರು ಪ್ರವರ್ತಕರು, ಸಂಸ್ಕೃತ ಪ್ರಾಧ್ಯಾಪಕರು, ಕಾಲಗಣನ ತಜ್ಞರು, ವೈದಿಕರು, ಶಿಕ್ಷಣ ತಜ್ಞರು, ಧಾರ್ಮಿಕ ಚಿಂತಕರು, ಲೇಖಕರು ಮತ್ತು ಪ್ರವಚನಕಾರರು ಡಾ.ವಿನಾಯಕ ಭಟ್ಟ ಗಾಳಿಮನೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುಟ್ಠಳ್ಳಿ ಗ್ರಾಮದ ಗಾಳಿಮನೆಯ ವಿದ್ವಾನ್ ಚಂದ್ರಶೇಖರ ಭಟ್ಟ ಹಾಗೂ ಶ್ರೀಮತಿ ಸವಿತಾ ಭಟ್ಟ ಇವರ ಮಗನಾಗಿ ವೈಶಾಖ ಶುದ್ಧ ನವಮೀ ಕರ್ಕರಾಶಿ, ಆಶ್ಲೇಷಾ ನಕ್ಷತ್ರದಲ್ಲಿ (23.04.1980) ವಿನಾಯಕ ಭಟ್ಟ ಗಾಳಿಮನೆ ಜನನ.
MA Sanskrit, ಭಗವದ್ಗೀತೆಯಲ್ಲಿ Ph.D., ಕನ್ನಡಭಾಷೆಯಲ್ಲಿ B.Ed., ಸಂಸ್ಕೃತದಲ್ಲಿ ತರ್ಕಶಾಸ್ತ್ರದಲ್ಲಿ ವಿದ್ವತ್ , ಹಿಂದಿಯಲ್ಲಿ ರಾಜಭಾಷಾ ವಿದ್ವಾನ್ ಹೀಗೆ ಕನ್ನಡ ಸಂಸ್ಕೃತ ಹಿಂದಿ ಹೀಗೆ ಮೂರೂ ಭಾಷೆಗಳಲ್ಲಿ ವಿಶೇಷ ಉನ್ನತ ಅಧ್ಯಯನ.. ಇದು ಇವರ ವಿದ್ಯಾಭ್ಯಾಸ.
ಇವರ ಕಾರ್ಯಕ್ಷೇತ್ರ ವ್ಯಾಪ್ತಿ ವಿಭಿನ್ನ ವಿಸ್ತೃತ. ಅದರ ಮೇಲೊಂದು ಪಕ್ಷಿನೋಟ
- ಯಕ್ಷಗಾನ ಅರ್ಥಧಾರಿಗಳು, ಸಂಸ್ಕೃತ ಪ್ರಾಧ್ಯಾಪಕರು, ಕಾಲಗಣನ ತಜ್ಞರು, ಪಾರಂಪರಿಕ ಪುರೋಹಿತರು ಮತ್ತು ವೈದಿಕರು, ಶಿಕ್ಷಣ ತಜ್ಞರು, ಧಾರ್ಮಿಕ ಚಿಂತಕರು, ಲೇಖಕರು ಮತ್ತು ಪ್ರವಚನಕಾರರು.
- ಆಮ್ನಾಯಃ – ವೇದ – ಸಂಸ್ಕೃತ – ಶಾಲಾ, ಗಂಧವಹಸದನಮ್ (ಗಾಳಿಮನೆ).ಯ ಸಂಸ್ಥಾಪಕರು
- ಆಮ್ನಾಯಃ – ಭಾರತೀಯ ದಿನದರ್ಶಿಕೆ, ಗಂಧವಹಸದನಮ್ (ಗಾಳಿಮನೆ)ಇದರ .ಸಂಸ್ಥಾಪಕರು.
ಮೂರು ವರ್ಷಗಳಿಂದ ವಾರ್ಷಿಕ ಪಂಚಾಂಗ ಬಿಡುಗಡೆ. ದೇಶದ ಸರ್ವಪ್ರಥಮ ಪ್ರಯತ್ನವಾಗಿ
ವಿಭಿನ್ನ ವಿಶಿಷ್ಟ ದಿನದರ್ಶಿಕೆ ಎಂಬ ಹೆಗ್ಗಳಿಕೆಗೆ ಪಾತ್ರ.. - ತ್ರಿಭಾಷಾ – ನಿತ್ಯ ಪಂಚಾಂಗ – ಕನ್ನಡ – ಸಂಸ್ಕೃತ – ಹಿಂದಿ ಭಾಷೆಗಳಲ್ಲಿ ಪ್ರತಿ ನಿತ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ.
ಕೆನರಾ ಕಾಲೇಜಿನ ನಿವೃತ್ತ ಪ್ರಾಂಶಪಾಲರಾದ ಡಾ.ಜಿ.ಎನ್. ಭಟ್ಟರ ಮಾರ್ಗದರ್ಶನದಲ್ಲಿ “ಭಗವದ್ಗೀತೆ ಮತ್ತು ಮನೋ ನಿರ್ವಹಣೆ ಮತ್ತು ನಿರ್ವಹಣ ವಿಜ್ಞಾನ ಒಂದು ವಿಮರ್ಶಾತ್ಮಕ ಅಧ್ಯಯನ” ಎಂಬ ವಿಷಯದಲ್ಲಿ ಸಂಶೋಧನೆ 2019 ಏಪ್ರಿಲ್ ನಲ್ಲಿ ಮಂಗಳೂರು ವಿ.ವಿ ಯಿಂದ P.HD ಪದವಿ.
ಕಳೆದ 16 ವರ್ಷಗಳಿಂದ ಉಪನ್ಯಾಸಕ ವೃತ್ತಿಯನ್ನು ಮಾಡುತ್ತಿರುವ ಇವರು ಪ್ರಸ್ತುತ ಆಳ್ವಾಸ್ ಕಾಲೇಜ್ ನಲ್ಲಿ ಸಂಸ್ಕೃತ ಪ್ರಾಧ್ಯಾಪಕನಾಗಿ ವೃತ್ತಿ ನಿರ್ವಹಣೆ ಹಾಗೂ ಆಳ್ವಾಸ್ ಪ್ರಜ್ಞಾ – ಸಂಸ್ಕೃತ ಅಧ್ಯಯನ ಕೇಂದ್ರ – ಸಂಯೋಜಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಇವರ ಯಕ್ಷಗಾನ ಗುರುಗಳು:-
ತಂದೆ ವಿದ್ವಾನ್ ಚಂದ್ರಶೇಖರ ಭಟ್ಟ ಗಾಳಿಮನೆ, ಯಕ್ಷಗಾನದ ಮೊದಲ ಗುರುಗಳು. ಜೊತೆಯಲ್ಲಿ ಎಲ್ಲ ಹಿರಿಯ ಯಕ್ಷಗಾನ ಕಲಾವಿದರನ್ನು ಗುರುಸ್ಥಾನದಲ್ಲಿ ನಮಿಸುತ್ತೇನೆ ಎಂಬ ಗುರುತ್ವಭಾವ ಅವರದ್ದು.
ವಿಶೇಷವಾಗಿ – ಶ್ರೀಯುತ ಸುಬ್ರಹ್ಮಣ್ಯ ಮುದ್ರಾಡಿಯವರಲ್ಲಿ ಬಡಗುತಿಟ್ಟಿನ ಪ್ರಾಥಮಿಕ ಹೆಜ್ಜೆ ಅಭ್ಯಾಸ, ಆದರೆ ದುರಾದೃಷ್ಟವಶಾತ್ ಕಲಿಕೆ ಪೂರ್ಣವಾಗಿಲ್ಲ. ಬೆರಳೆಣಿಕೆ ವೇಷ ಮಾಡುತ್ತಾ ಆಗಾಗ ವೇಷಧರಿಸಿದ್ದು ಇದೆ.
ಅರ್ಥಗಾರಿಕೆಗೆ ವಿದ್ವಾನ್ ಚಂದ್ರಶೇಖರ ಭಟ್ಟ ಗಾಳಿಮನೆ (ನನ್ನ ಅಪ್ಪಯ್ಯನೆ) ಮೊದಲ ಸ್ಫೂರ್ತಿ, ಅವರು ತಾಳಮದ್ದಳೆಯ ಹಿರಿಯ ಅರ್ಥಧಾರಿಗಳು.
ನನ್ನ ಬಾಲ್ಯದಲ್ಲಿ, ಅವರು ಅರ್ಥಧಾರಿಗಳಾಗಿ ಭಾಗವಹಿಸುತ್ತಿದ್ದ ಅನೇಕ ಕೂಟಗಳಿಗೆ ಹಾಗೂ ಕೆರೆಮನೆ ಮೇಳವೆ ಮೊದಲಾದ ಮೇಳಗಳ ಆಟಗಳಿಗೆ ನನ್ನನ್ನು ಕರೆದೊಯ್ಯುತ್ತಿದ್ದರು, ಇದು ನನ್ನ ಮೇಲೆ ಬೀರಿದ ಪರಿಣಾಮ ಅಗಾಧ. ಅಪ್ಪಯ್ಯನಿಗೆ ಪ್ರೀತಿಪಾತ್ರ ಅರ್ಥಧಾರಿಗಳಾಗಿರುವವರು ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರು. ಇವರ ಅರ್ಥಗಾರಿಕೆಯನ್ನು ಕೇಳಲೆಂದೇ ಟೇಪ್ ರೆಕಾರ್ಡರ್ ನ್ನು ಖರೀದಿಸಿದ್ದರು. ಅದರಲ್ಲಿ ಬಹಳಷ್ಟು ಕ್ಯಾಸೆಟ್ ಗಳನ್ನು ಕೇಳುತ್ತ ವಿನಾಯಕ ಭಟ್ಟರು ಬೆಳೆದರು. ಇವರ ಮೇಲೆ ಶೇಣಿಯವರ ಅರ್ಥಗಾರಿಕೆಯ ಪರಿಣಾಮ ತುಂಬಾ ಇದೆ, ಜೊತೆಗೆ ಶಂಭು ಹೆಗಡೆಯವರು ಮತ್ತು ಮಹಾಬಲ ಹೆಗಡೆಯವರ ಪಾತ್ರ ಚಿಂತನೆಯಿಂದ ಪ್ರಭಾವಿತರು. ವರ್ತಮಾನದಲ್ಲಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟರು, ಗುರುಗಳಾಗಿ ತಿದ್ದಿ ತೀಡುತ್ತಿದ್ದಾರೆ, ಜೊತೆಗೆ ರಾಧಾಕೃಷ್ಣ ಕಲ್ಚಾರ್ ರ ಮಾರ್ಗದರ್ಶನ ಸದಾ ಸ್ಮರಣೀಯ. ವೇದಿಕೆಯಲ್ಲಿ ಹಾಗೂ ವೇದಿಕೆಯ ಆಚೆ ಬಹಳಷ್ಟು ಅರ್ಥಗಾರಿಕೆಯ ವಿಚಾರಗಳನ್ನು ಮುಕ್ತವಾಗಿ ತಿದ್ದಿ ತೀಡಿದ್ದಾರೆ.
ಮೈಸೂರು ಸಂಸ್ಕೃತ ಅಧ್ಯಯನ ದ ಸಂದರ್ಭವೇ ಯಕ್ಷಗಾನ ಅರ್ಥಧಾರಿಯಾಗುವಲ್ಲಿ ಮಹತ್ತಮ ಪಾತ್ರ ವಹಿಸಿತ್ತು.
ವಿ.ನಾರಾಯಣ ದೇಸಾಯಿ ಮೈಸೂರು ಗುರುವಾಗಿ ಇವರ ಪೌರಾಣಿಕ ಪಾತ್ರ ಚಿಂತನೆಯನ್ನು ಗಾಢವಾಗಿ ಒಳಹೊಕ್ಕು ತಿದ್ದಿರುವ ಮಹನೀಯರು. ಜನಪ್ರೀತಿಯ ಕಲಾವಿದರಾದ ವಿ.ಗಣಪತಿ ಭಟ್ಟ ಸಂಕದಗುಂಡಿ, ವಿ.ನಾಗರಾಜ ಭಟ್ಟ ಹಿರೇಕೈ, ಮೈಸೂರು ಇವರುಗಳ ಜೊತೆಯ ಒಡನಾಟ ದೀರ್ಘಕಾಲಿಕವಾದುದು.
ಮೊದಲ ಅರ್ಥಗಾರಿಕೆಯಲ್ಲಿ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಮಾಡಿದವರು ಈ ಮೂವರೇ ಆಗಿದ್ದಾರೆ. ಆದ್ದರಿಂದ ಮೂವರೂ ಕೂಡ ಅರ್ಥಗಾರಿಕೆಯ ಗುರುವರ್ಗವೂ ಆಗಿದೆ. ಇಷ್ಟೇ ಮುಖ್ಯವಾಗಿ ಇದು ಪ್ರವರ್ಧಮಾನಕ್ಕೆ ಬರಲು ಕಾರಣವಾದುದು ಗಾಳೀಜಡ್ಡಿ ಹಾಗೂ ಹಾರ್ಸಿಕಟ್ಟ ಪರಿಸರದ ಯಕ್ಷಗಾನ ಸಂಘಟಕರು.ಈ ಮಹನೀಯರುಗಳ ನಿರಂತರ ತಿದ್ದುವಿಕೆ ಎಂದೂ ಮರೆಯಲಾಗದ ಕಲಿಕೆಯಾಗಿದೆ. ಇಂದಿಗೂ ಅವರೆಲ್ಲರ ಶುಭಾಶೀರ್ವಾದ ಇದೆ ಎನ್ನುವುದು ಸಂತೋಷದ ಹೆಮ್ಮೆಯ ವಿಷಯವಾಗಿದೆ..
ಹೊಸ ತಲೆಮಾರನ್ನು ಪ್ರೋತ್ಸಾಹಿಸುವ ನೆಲೆಯಲ್ಲಿ ಕಮಲಾಕರ ಹೆಗಡೆ ಹುಕ್ಲಮಕ್ಕಿ, ಅನಂತ ಶಾನಭಾಗ, ಶ್ರೀಕಾಂತ್ ಶಾನಭಾಗ್ ಹಾರ್ಸಿಕಟ್ಟಾ, ಶಶಿಧರ ಹೆಗಡೆ ಹುಕ್ಲಮಕ್ಕಿ, ರವೀಂದ್ರ ಹೆಗಡೆ ಹಾಗೂ ಅಶೋಕ ಹೆಗಡೆ ಹಿರೇಕೈ, ಬಾಲಚಂದ್ರ ಹೆಗಡೆ ಜಾನಕೈ, ಹಾಗೂ ದಶಮೀ ಕೂಟದ ಸಕಲ ಸದಸ್ಯರು ಗಾಳಿಜಡ್ದಿ , ಊರ ಪರವೂರ ಅನೇಕ ಯಕ್ಷಗಾನ ಅಭಿಮಾನಿಗಳ ಕೊಡುಗೆ ಸ್ಮರಣೀಯ. ಮರೆಯಲಾರದ ಕೊಡುಗೆ. ಮೊದಲ ಹಂತದ ಕಲಿಕೆ ಹಾಗೂ ವಿಶ್ವಾಸ ಮೂಡಿಸಿದ ನಮ್ಮೂರಿನ ಈ ಸಂಘಟಕಮಿತ್ರರ ಹಿರಿಯರ ಪ್ರೇರಣೆ ಎಂದೂ ಮರೆಯಲಾರದ ಮತ್ತು ಮರೆಯಬಾರದ ಪ್ರೇರಣ ಶಕ್ತಿಯಾಗಿದೆ. ವಿಶ್ವಾಸ ವೃದ್ಧಿಗೆ ಕಾರಣರಾದ ಊರಿನ ಯಕ್ಷಸಂಘಟಕರ ಕೊಡುಗೆ ಅನನ್ಯ.
ಮೂಡಬಿದಿರೆ ಪರಿಸರ ಎರಡನೇ ಹಂತದ ಪ್ರೋತ್ಸಾಹಕ ಕೇಂದ್ರ.
ಹೌದು, ಔದ್ಯೋಗಿಕ ಜೀವನಕ್ಕೆ ಕಾಲಿಟ್ಟ ತರುವಾಯ ೨೦೦೭ರಲ್ಲಿ ಮೂಡಬಿದಿರೆಗೆ ಪಾದಾರ್ಪಣೆ . ಸ್ವಸ್ತಿಶ್ರೀ ಭಾರತಭೂಷಣ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜೈನ ಮಠ ಮೂಡುಬಿದಿರೆ, ಯಕ್ಷದೇವಮಿತ್ರ ಕಲಾ ಮಂಡಳಿ, ಯಕ್ಷಸಂಗಮ, ಯಕ್ಷೋಪಾಸನಮ್ – ಮೂಡುಬಿದಿರೆಯ ಸಕಲ ಸದಸ್ಯರು,ಪುತ್ತೂರಿನ ಯಕ್ಷಸಂಘಟಕರು, ಆಂಜನೇಯ ಯಕ್ಷಕಲಾ ಸಂಘ ಪುತ್ತೂರು, ವೇದ ವಾಹಿನೀ ಸಭಾ, ಕಾಳಿಕಾಂಬಾ ಯಕ್ಷ ಬಳಗ, ಯಕ್ಷಚೈತನ್ಯಗಳ ಪ್ರೋತ್ಸಾಹ, ದೇವಾನಂದ ಭಟ್ಟ ಬೆಳುವಾಯಿ, ಸದಾಶಿವ ರಾವ್ ನೆಲ್ಲಿಮಾರ್, ಶಾಂತರಾಮ ಕುಡ್ವರ ಉತ್ತೇಜನ ಸ್ಮರಣೀಯ.
ಸಹೋದ್ಯೋಗಿ ಬಂಧು ಶ್ರೀ.ರಜನೀಶ ಹೊಳ್ಳರ ಮಾರ್ಗದರ್ಶನ ಸ್ಮರಣೀಯ.
ಇನ್ನೂ ಅನೇಕ ಸಂಘಟಕಮಿತ್ರರ ಸ್ನೇಹಿತವರ್ಗದ ಪ್ರೋತ್ಸಾಹಕ್ಕೆ ಸದಾ ಶಿರಬಾಗುವೆ ಎಂದು ವಿನಾಯಕ ಭಟ್ಟ ಗಾಳಿಮನೆ ಅವರು ಹೇಳುತ್ತಾರೆ.
ಪ್ರಾಥಮಿಕ ಪ್ರೇರಣೆ:- ವಿ.ನಾಗರಾಜ ಭಟ್ಟ ಹಿರೇಕೈ, ಮೈಸೂರು, ವಿ.ನಾರಾಯಣ ದೇಸಾಯಿ ಮೈಸೂರು, ವಿ. ಗಣಪತಿ ಭಟ್ಟ ಸಂಕದಗುಂಡಿ.
ನೆಚ್ಚಿನ ಪ್ರಸಂಗಗಳು:-
ಸುಧನ್ವಾರ್ಜುನ, ಭೀಷ್ಮಾರ್ಜುನ, ಭೀಷ್ಮವಿಜಯ, ಗೀತಾನುಸಂಧಾನ, ಕೃಷ್ಣ ಸಂಧಾನ , ಕರ್ಣಾರ್ಜುನ, ಸೀತಾ ಕಲ್ಯಾಣ, ಭರತಾಗಮನ, ವಾಲಿಮೋಕ್ಷ, ಇಂದ್ರಜಿತು, ಅತಿಕಾಯ, ರಾವಣವಧೆ, ರಾಮ ನಿರ್ಯಾಣ, ಮಾ ನಿಷಾದ, ದೇವೀ ಮಹಾತ್ಮೆ, ಆದಿ ಶಂಕರಾಚಾರ್ಯ, ಕಾಳಿದಾಸ, ಭೃಗುಶಾಪ, ಸೌಭರಿ ಚರಿತಮ್ ಇತ್ಯಾದಿ.
ವಿನಾಯಕ ಭಟ್ಟರ ಜೊತೆಗಿನ ಸಂದರ್ಶನ –
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ಸಮಯಾನುಕೂಲ ನೋಡಿಕೊಂಡು ಎರಡು ಹಂತದ ಸಿದ್ಧತೆ –
೧. ಮೂಲ ಪ್ರಸಂಗ ಹಾಗೂ ಆಯ್ದ ಪದ್ಯಗಳ ಅಧ್ಯಯನ.
೨. ಮೂಲಗ್ರಂಥದ ಅಧ್ಯಯನ ವಾಲ್ಮೀಕಿ ರಾಮಾಯಣ, ವ್ಯಾಸ ಮಹಾಭಾರತ, ಭಾಗವತ, ಇತ್ಯಾದಿ.
ಸಂಸ್ಕೃತ ಪಠ್ಯ/ಗ್ರಂಥ ಅಧ್ಯಯನ, ವೇದ – ಉಪನಿಷತ್, ಶಾಸ್ತ್ರ- ಸುಭಾಷಿತ – ಲೌಕಿಕನ್ಯಾಯಗಳು ಇತ್ಯಾದಿ ಅಂಶಗಳ ಆಧಾರದಲ್ಲಿ ಆಯಾ ಪಾತ್ರೋಚಿತ ಅಂಶಗಳನ್ನು ಆಧರಿಸಿ ಪಾತ್ರ ನಿರ್ವಹಣೆ ಮಾಡಬೇಕೆಂಬ ಚಿಂತನೆ ಹಾಗೂ ಪ್ರಯತ್ನ.
ಪೂರಕವಾಗಿ ಇಂದಿನ ಹಾಗೂ ಹಿಂದಿನ ತಾಳಮದ್ದಳೆ, ಆಟಗಳ ಧ್ವನಿಮುದ್ರಣ ಮತ್ತು ವಿಡಿಯೋ ವೀಕ್ಷಣೆ ಸಹಕಾರಿಯಾಗಿದೆ. ಸಹಕಲಾವಿದರುಗಳ ಜೊತೆ ಚರ್ಚೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿಯ ಕುರಿತು ತಮ್ಮ ಅಭಿಪ್ರಾಯ:-
ಕಾಲಮಿತಿ ಹೆಚ್ಚಾಗಿದೆ. ಇದು ಈ ಕಾಲದ ಅಗತ್ಯತೆ ಇರಬಹುದು. ಯಕ್ಷಗಾನ ಬಯಲಾಟ ಹಾಗೂ ಟೆಂಟ್ ಮೇಳಗಳ ಸ್ವರೂಪದಲ್ಲಿ ಕಾಲಿಕ ಬದಲಾವಣೆ ಕಾಣುತ್ತದೆ. ಆರ್ಥಿಕ ಸದೃಢತೆ ಹೆಚ್ಚಾದಲ್ಲಿ ಯಕ್ಷಗಾನ ವೃತ್ತಿಪರರ ಸಂಖ್ಯೆ ಹೆಚ್ಚಾದೀತು. ವೃತ್ತಿ ಹಾಗೂ ಪ್ರವೃತ್ತಿ ಎರಡಕ್ಕೂ ಒಗ್ಗುವ ಅಪರೂಪದ ಕಲಾಸ್ವರೂಪ ಯಕ್ಷಗಾನ ಮಾತ್ರ. ಚಿಕ್ಕವನಾಗಿದ್ದಾಗ ಹೇಗಿತ್ತೊ ಇಂದು ಅದಕ್ಕಿಂತ ವಿಶೇಷ ಬದಲಾವಣೆ ಅನುಭವಕ್ಕೆ ಬಂದಿಲ್ಲ. ಕಲೆ ಆಸ್ವಾದಕನಿಗೆ ಸಂತೋಷ ನೀಡಿದರೆ ಅದು ಸಾರ್ಥಕ ಎಂಬ ಭಾವ ನನ್ನದು. ಶಾಸ್ತ್ರೀಯತೆ ಅಥವಾ ಜಾನಪದ ಇತ್ಯಾದಿಗಳೆಲ್ಲ ಬೌದ್ಧಿಕ ಜಗತ್ತಿಗೆ ಬೇಕಾದುದೆ ವಿನಾಃ ಕಲೆಯ ಆಸ್ವಾದಕನಿಗಲ್ಲ. ಆಸ್ವದಕನಿಗೆ ಆಸ್ವಾದ್ಯವಾದ ರಸ-ಭಾವ-ಅಭಿನಯಗಳು ಆತನನ್ನು ಆತನಿಂದ ಮರೆಯಾಗುವಂತೆ ಕ್ಷಣಕಾಲವಾದರೂ ಮಾಡಿದರೆ ಅದು ಸಾರ್ಥಕ. ಯಕ್ಷಗಾನ ಕ್ಷೇತ್ರ ಉತ್ತಮವಾಗಿ ಸಾಗಿದೆ. ಹಳೆ ಬೇರು-ಹೊಸ ಚಿಗುರು ಎಂದಿನಂತೆ ಈ ಕಾಲದಲ್ಲೂ ಇದೆ ಎಂಬುದು ಉತ್ತಮ ಅಂಶ. ತಾಳಮದ್ದಳೆಯಲ್ಲಿ ಕಾವ್ಯಾನುಸಂಧಾನ, ತಾರ್ಕಿಕ ಸಾಧ್ಯತೆಗಳ ಸಮಾಗಮ ಹಾಗೂ ದೇಶ-ಕಾಲಗಳಿಗನುಗುಣವಾಗಿ ಪ್ರಸಂಗ ಸನ್ನಿವೇಶ ನಿರ್ಮಾಣ ಅಪೇಕ್ಷಿತ.
ಯಕ್ಷಗಾನದ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಕಲೆ ಎನ್ನುವುದು ಮನಸ್ಸಿನ ಮೇಲೆ ನೇರ ಪರಿಣಾಮ ಮಾಡುವ ಶಕ್ತಿಯನ್ನು ಹೊಂದಿದೆ. ಈ ನೆಲೆಯಲ್ಲಿ ಪ್ರೇಕ್ಷಕರನ್ನು ಗಮನಿಸುವಾಗ ಇಂದು ಪ್ರೇಕ್ಷಕರು ಮತ್ತು ಅಭಿಮಾನಿ ವರ್ಗ ಎಂಬ ವಿಧಗಳು ಕಾಣುತ್ತಿದೆ. ಅಭಿಮಾನಿವರ್ಗಗಳ ಬಲ ಹೆಚ್ಚಿದೆ. ಕಲೆಯ ಶಕ್ತಿ ಇದು. ಇಂತಹ ಅಭಿಮಾನಿವರ್ಗವೇ ಸದಾ ಕಲೆ – ಕಲಾವಿದರುಗಳನ್ನು ಕಾಪಾಡುವ ಶಕ್ತಿ. ಆದ್ದರಿಂದ ಪ್ರೇಕ್ಷಕರುಗಳಿಗೆ ಎಲ್ಲ ಕಲೆಗಳಲ್ಲಿ ವಿಶೇಷ ಮಹತ್ವವಿದೆ. ಕಲಾವಿದನ ಶ್ರಮ ಕೂಡ ಪ್ರೇಕ್ಷಕರನ್ನು ಲೋಕಾಂತರಕ್ಕೆ ಕೊಂಡೊಯ್ಯುವುದೆ ಆಗಿದ್ದು ಹೀಗೆ ಪಾರಸ್ಪರಿಕವಾಗಿ ಸಂತೋಷ-ಆನಂದ ಹೊಂದಲು ಸಾಧ್ಯವಿದೆ.
ಇಂದು ಧ್ವನಿಮುದ್ರಕರು, ಚಿತ್ರಗ್ರಾಹಕರು, ಲೈವ್ ಆಟ ಕೂಟಗಳನ್ನು ಬಿತ್ತರಿಸುವವರು, ಇವನ್ನೆಲ್ಲ ಜತನದಿಂದ ಕಾಪಿಡುವವರು ಹೀಗೆ ಇವರೆಲ್ಲ ಒಂದರ್ಥದಲ್ಲಿ ಯಕ್ಷಗಾನ ಪ್ರೇಕ್ಷಕರು ವೀಕ್ಷಕರು ಎಂಬುದು ನನ್ನ ಭಾವನೆ. ಇವರಿಂದ ಯಕ್ಷಗಾನ ಅನೇಕ ಆನುಕೂಲ್ಯಗಳನ್ನು ಹೊಂದಿ ಮುಂದೆ ಸಾಗಿವೆ.
ಖಳ ಪಾತ್ರ ವಿಜೃಂಭಣೆ ಚೋದ್ಯ ಎನಿಸುತ್ತದೆ.
ಯಕ್ಷಗಾನ ಕ್ಷೇತ್ರದಲ್ಲಿ ನಾಯಕ ಪ್ರತಿನಾಯಕ ಖಳನಾಯಕ ಎಂಬ ಈ ಮೂರರ ವ್ಯತ್ಯಾಸ ಹಾಗೂ ಸ್ವರೂಪ ಚಿಂತನೆ ಅಪೇಕ್ಷಿತ.
ಪ್ರಸಂಗ ಗಳ ಅಶಯ ಚಿಂತನೆಯ ಕ್ರಮವೂ ಚಿಂತನೀಯವಾಗಿದೆ.
ರಾಮ ಕೃಷ್ಣಾದಿ ಪಾತ್ರಗಳ ವಿಜೃಂಭಣೆ ಆಗಲಿ, ರಾವಣ ಕೌರವಾದಿ ಪಾತ್ರ ಪ್ರತಿನಾಯಕ ಖಳನಾಯಕ ರೂಪದಲ್ಲೆ ನಿರೂಪಿತವಾಗಬೇಕೆಂಬುದು ಇವರ ಬಹುಮುಖ್ಯ ಯಕ್ಷಗಾನ ಪಾತ್ರ ಸ್ವರೂಪದ ಚಿಂತನೆಯಾಗಿದೆ..
ಯಕ್ಷಗಾನದ ಮುಂದಿನ ಯೋಜನೆ:-
ಪೌರಾಣಿಕ ಕಥಾಪ್ರಪಂಚದ ಮೂಲಗ್ರಂಥಳಾದ ರಾಮಾಯಣ ಮಹಾಭಾರತ ಭಾಗವತಾದಿ ಕಾವ್ಯಗಳನ್ನು ಆಯಾ ಮೂಲ ಕವಿಗಳ ಆಶಯಕ್ಕೆ ಅನುಗುಣವಾಗಿ ಪ್ರಸಂಗ ರಚನೆ ಮಾಡಿಸುವ ಚಿಂತನೆ.
ಯಕ್ಷಗಾನ ಪ್ರಸಂಗಗಳ ಶೋಧನೆ – ಸಂಶೋಧನೆಗಳು
ಅರ್ಥಗಾರಿಕೆಯಲ್ಲಿ ಹೆಚ್ಚಿನ ಕೃಷಿ.
ಯಕ್ಷಗಾನ – ಕೊರಿಯೊಗ್ರಫಿ, ವೇಷ-ಭೂಷಣಗಳು, ತೆರೆ, ಪರದೆ ಇತ್ಯಾದಿಗಳ ಅಧ್ಯಯನ.
ಯಕ್ಷಗಾನ – ದಾಖಲೀಕರಣ . ಆಡಿಯೊ ವಿಡಿಯೊ ಪುಸ್ತಕಾದಿ. ಯಕ್ಷಗಾನಕ್ಕೆ ನೀನಾಸಂ ನಂತಹ ವ್ಯವಸ್ಥೆಯ ಪ್ರಯೌಗಿಕ ಸಾಧ್ಯತೆಗಳು ಇತ್ಯಾದಿ.
ಸಾಧನೆ ಪ್ರಶಸ್ತಿಗಳು:-
- ವಿದ್ಯಾರ್ಥಿ ಜೀವನದ ದೆಸೆಯಲ್ಲೇ (1996 – 1999) ಶ್ರೀಮಾತಾ ಸಂಸ್ಕೃತ ಕಾಲೇಜು ಉಮ್ಮಚಗಿ ಇದರ ನಿವೃತ್ತ ಪ್ರಾಂಶುಪಾಲರಾಗಿದ್ದ ವಿದುಷೀ ಶ್ರೀಮತಿ ಶರಾವತಿ ಗಜಾನನ ಭಟ್ಟರ ಉಪದೇಶದೊಂದಿಗೆ ಸಂಪೂರ್ಣ ಭಗವದ್ಗೀತೆ ಅರ್ಥಸಹಿತ ಕಂಠಪಾಠ.
- 2007 ಏಪ್ರಿಲ್ ನಲ್ಲಿ ಸಂಪೂರ್ಣ ಭಗವದ್ಗೀತೆಯನ್ನು ಕಂಠಪಾಠ ಮಾಡಿ ” ಶ್ರೀ ಶೃಂಗೇರಿ ಶಂಕರ ಮಠದ ಗುರುಪೀಠದ” ಮುಂದೆ ಪ್ರಸ್ತುತಪಡಿಸಿದ್ದಕ್ಕಾಗಿ ” ಶ್ರೀ ಜಗದ್ಗುರು ಶೃಂಗೇರಿ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳಿಂದ ಆಶೀರ್ವಾದ ಪುರಸ್ಕಾರ.
- ಅಧ್ಯಯನ ನಿರತರಾಗಿದ್ದಾಗಲೆ ಪ್ರಾಜ್ಞರ ಮುಂದೆ ಸಂಪೂರ್ಣ ಕಂಠಪಾಠವನ್ನು ಅರ್ಥಸಹಿತ ವಿಶ್ಲೇಷಿಸಿ ವಿವರಿಸಿದ್ದಕ್ಕಾಗಿ 100 ವರ್ಷಕ್ಕೂ ಮಿಗಿಲಾದ ಇತಿಹಾಸವಿರುವ “ವೇದ ಶಾಸ್ತ್ರ ಪೋಷಿಣಿ ಸಭಾ, ಮೈಸೂರು” ಇವರಿಂದ ವಿಶೇಷ ಗೌರವ ಪ್ರಧಾನ.
- ತರ್ಕ – ವೇದಾಂತ – ಸಾಂಖ್ಯ – ಯೋಗ ಈ ದರ್ಶನಗಳಲ್ಲಿ, ಅಲಂಕಾರ ಶಾಸ್ತ್ರದಲ್ಲಿ ರಾಜ್ಯಸ್ತರದ ಸ್ಪರ್ಧೆಗಳಲ್ಲಿ ಬಹುಮಾನ ಪ್ರಾಪ್ತಿಯೂ ಸೇರಿದಂತೆ ಇತರ 50ಕ್ಕೂ ಮಿಗಿಲಾದ ಬಹುಮಾನ.
ವಿಶೇಷ ಆಸಕ್ತಿ ಮತ್ತು ಪ್ರವೃತ್ತಿ:-
- ಯಕ್ಷಗಾನ ದಾಖಲೀಕರಣ
- ತಂದೆಯವರ ತಾಳಮದ್ದಳೆ ಸಪ್ತಾಹ ದಾಖಲೀಕರಣ.
- ಭಾರತೀಯ ಪಂಚಾಂಗ ಆಧಾರಿತ ದಿನದರ್ಶಿಕೆ ನಿರ್ಮಾಣ.
- ಪ್ರತಿದಿನ ತ್ರಿಭಾಷಾ – ನಿತ್ಯ ಪಂಚಾಂಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿತ. ಸುಮಾರು ೫ ಸಾವಿರ ಜನರಿಗೆ ಪ್ರೇಷಣ.
- ಭಗವದ್ಗೀತೆ – ನಿರಂತರ ಸಂಶೋಧನ – ಅನುಸಂಧಾನ.
- ರಾಷ್ಟ್ರೀಯ- ಅಂತಾರಾಷ್ಟ್ರೀಯ ಸಂಶೋಧನ ಗೋಷ್ಟಿಗಳಲ್ಲಿ ಭಾಗಗ್ರಹಣ.
- ಧಾರ್ಮಿಕ ಪ್ರವಚನ ಮತ್ತು ದೈನಿಕ ಲೇಖನಗಳು.
- ಯುಟ್ಯೂಬ್ – ಚಾನಲ್ ಮುಖೇನ ಭಾರತೀಯ ಕಲೆ – ಸಂಸ್ಕೃತಿ ಪ್ರಸಾರ ಪ್ರಯತ್ನ.
- ಭಗವದ್ಗೀತಾ ರಾಮಾಯಣ ಮಹಾಭಾರತ ಪ್ರವಚನ.
- ಗೀತಾ ಅವಧಾನ ಚಿಂತನೆ ಪ್ರಗತಿಯಲ್ಲಿದೆ.
ಡಾ.ವಿನಾಯಕ ಭಟ್ಟ ಗಾಳಿಮನೆ ಅವರು ಪ್ರಿಯಾ.ಎಚ್.ಎಸ್ (MSC PHYSICS) (ಭೌತಶಾಸ್ತ್ರ ಉಪನ್ಯಾಸಕರು) ಅವರನ್ನು ಮದುವೆಯಾಗಿ ಮಗಳು ಸನ್ನಿಧಿ ವಿ.ಜಿ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ತಾಯಿ ತಂದೆಯವರ ಮಡದಿ ಮಗಳ ಹಾಗೂ ಅಕ್ಕ ಬಾವನವರ ಪ್ರೋತ್ಸಾಹ ಸದಾ ಸ್ಮರಣೀಯ ಎಂಬುದು ಭಟ್ಟರ ಅಭಿಪ್ರಾಯ..
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.