ಇತೀಚಿನ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಲನಚಿತ್ರ ಖ್ಯಾತಿಯ ಗಗನ್ ರಾಮ್ ಪ್ರಸಕ್ತ ಸಾಲಿನ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಗೆ ಆಯ್ಕೆಯಾದ ಕರ್ನಾಟಕದ ಏಕೈಕ ರಂಗ ವಿದ್ಯಾರ್ಥಿ.
ಶಾಲಾ ದಿನಗಳಿಂದ, ಅಂದರೆ 2005 ರಿಂದ ಇಲ್ಲಿಯವರೆಗೂ ಸುಮಾರು 18 ವರ್ಷಗಳಿಂದ ರಂಗಭೂಮಿಯಲ್ಲಿ ಗಗನ್ ರಾಮ್ ತೊಡಗಿಕೊಂಡಿರುತ್ತಾರೆ. ಖ್ಯಾತ ಸಾಹಿತಿಗಳಾದ ಡಿ.ಆರ್.ನಾಗರಾಜ್ ಅವರ ಶ್ರೀಮತಿಯವರಾದ ಸಿ.ಎನ್.ಗಿರಿಜಮ್ಮ ಇವರಿಂದ ರಂಗಭೂಮಿ ಪರಿಚಯವಾಯಿತು. ಶಾಲಾ ದಿನಗಳಲ್ಲಿ ಗಗನ್ ರಾಮ್ ಮಾಡಿದ ಪ್ರಮುಖ ನಾಟಕಗಳೆಂದರೆ ‘ಮಾಮಾ ಮೋಶಿ’, ‘ಗಾಂಪರ ಗುಂಪು’, ‘ಕಣ್ಣಿಗೆ ಮಣ್ಣು’. ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಆರಂಭವಾದ ರಂಗಭೂಮಿಯ ನಂಟನ್ನು ಮುಂದುವರಿಸುತ್ತ, ಮುಂದೆ 2010 ರಿಂದ ಬೆಂಗಳೂರಿನ ಸುಮಾರು 26ಕ್ಕೂ ಹೆಚ್ಚು ಹವ್ಯಾಸಿ ಮತ್ತು ವೃತ್ತಿಪರ ತಂಡಗಳಲ್ಲಿ ಇದುವರೆಗೂ 80ಕ್ಕೂ ಹೆಚ್ಚು ನಾಟಕಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಅವುಗಳ ಒಟ್ಟು 550ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ನಟನಾಗಿ ರಂಗದ ಮೇಲೆ ಕಾಣಿಸಿಕೊಂಡಿರುತ್ತಾರೆ. ಎಂ.ಬಿ.ಎ ಸ್ನಾತಕೋತ್ತರ ಪದವೀಧರರಾಗಿರುವ ಗಗನ್ ರಾಮ್, ಕಲೆಯನ್ನೇ ವೃತ್ತಿಯಾಗಿಸಿಕೊಳ್ಳಬೇಕೆಂದು ನಿರ್ಧರಿಸಿದ ನಂತರ 2018ರಲ್ಲಿ ನೀನಾಸಂ ರಂಗ ಶಿಕ್ಷಣ ಕೇಂದ್ರದ ಪದವಿ ಪಡೆದು ತದ ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್- ಥಿಯೇಟರ್ ಪೂರ್ಣಗೊಳಿಸಿದ್ದಲ್ಲದೆ, ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯಾದ ಯು.ಜಿ.ಸಿ ನೆಟ್ ಅಲ್ಲಿ ಉತ್ತೀರ್ಣನಾಗಿರುತ್ತಾರೆ. ಇದೀಗ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಮೂರು ವರ್ಷದ ಡಿಪ್ಲೊಮಾ ಇನ್ ಡ್ರ್ಯಾಮಾಟಿಕ್ ಆರ್ಟ್ಸ್ ಕೋರ್ಸ್ಗೆ ಆಯ್ಕೆಯಾಗಿದ್ದಾರೆ. ಈ ಮೂರು ವರ್ಷದಲ್ಲಿ ವಿನ್ಯಾಸ ಮತ್ತು ನಿರ್ದೇಶನದ ಐಚ್ಛಿಕ ವಿಷಯದಲ್ಲಿ ಸುದೀರ್ಘ ಅಧ್ಯಯನ ಮುಗಿಸಿಕೊಂಡು ಕನ್ನಡ ಮತ್ತು ರಾಷ್ಟ್ರೀಯ ರಂಗಭೂಮಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕು ಹಾಗು ರಂಗಭೂಮಿಗೆ ಸಂಬಂಧಿಸಿದ ಹಾಗೆ ಸಂಶೋಧನೆ (ಪಿ.ಹೆಚ್ ಡಿ) ಮಾಡಬೇಕೆಂಬ ಮಹದಾಸೆಯೊಂದಿಗೆ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ನಟನೆಯ ಜೊತೆ ರಂಗದ ಹಿಂದಿನ ಕೆಲಸಗಳಲ್ಲಿಯೂ ಆಸಕ್ತಿಯಿಂದ ಪಾಲ್ಗೊಳ್ಳುತ್ತಲಿರುವ ಗಗನ್ ರಾಮ್ 2011ರಲ್ಲಿ ಒಂದು ಕಿರುಚಿತ್ರವನ್ನು ಹಾಗು 2015ರಲ್ಲಿ ವಿಜಯ ಕರ್ನಾಟಕ ನಾಟಕೋತ್ಸವದಲ್ಲಿ ಒಂದು ಕಿರು ನಾಟಕವನ್ನು ನಿರ್ದೇಶಿಸಿರುತ್ತಾರೆ. 2018 – 19ರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಸ್ತುತ ಪಡಿಸಿದ ‘ಗಾಂಧೀ- 150 : ಒಂದು ರಂಗಪಯಣ’ ಎಂಬ ಅಭಿಯಾನದ ಪ್ರಮುಖ ಭಾಗವಾದ ‘ಪಾಪು ಬಾಪು’ ನಾಟಕದಲ್ಲಿ ನಟ ಹಾಗು ತಂತ್ರಜ್ಞನಾಗಿ ಕೆಲಸ ಮಾಡಿದ್ದಾರೆ. ಈ ನಾಟಕವು ರಾಜ್ಯಾದ್ಯಂತ ತಿರುಗಾಟ ಮಾಡಿ 1000 ಕ್ಕೂ ಹೆಚ್ಚು ಪ್ರದರ್ಶಗಳನ್ನು ಕಂಡಿತ್ತು.
ಪ್ರಸ್ತುತ ದಾಕ್ಷಾಯಣಿ ಭಟ್ ಅವರ ದೃಶ್ಯ ರಂಗ ತಂಡದಲ್ಲಿ ಅತಿಥಿ ಕಲಾವಿದನಾಗಿ ಕೆಲಸ ಮಾಡುತ್ತಿರುವ ಗಗನ್ ರಾಮ್. ಇದುವರೆಗೂ ಅಭಿನಯಿಸಿರುವ ಪ್ರಮುಖ ನಾಟಕಗಳೆಂದರೆ ಮಾಮಾ ಮೋಶಿ, ಬೋಗಿ, ಉಂಡಾಡಿ ಗುಂಡ, ಚಮ್ಮಾರನ ಚಾಲೂಕಿ ಹೆಂಡತಿ, ಶ್ರದ್ಧಾ, ಗುಮ್ಮ ಬಂದ ಗುಮ್ಮ, ಕಾಡ್ಮನ್ಸ, ನೂರ್ ಜಹಾನ್, ಚಿರೆಬಂದೀ ವಾಡೆ, ಅಂದಿನ ರಾಮನ ಮುಂದಿನ ಕಥೆ, ಹಾನುಷ್ ಮತ್ತು ವಿದಿಶೆಯ ವಿದೂಷಕ, ಇಲ್ಲಿರುವುದು ಸುಮ್ಮನೆ, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್. ಪ್ರಮುಖ ರಂಗ ನಿರ್ದೇಶಕರಾದ ಸಿ.ಎನ್.ಗಿರಿಜಮ್ಮ, ಪಿ.ಡಿ.ಸತೀಶ್ ಚಂದ್ರ, ಭಾರ್ಗವಿ ನಾರಾಯಣ್, ಉದಯ್ ಸೋಸಲೆ, ನಾಗೇಂದ್ರ ಶಾ, ರಾಜಗುರು ಹೊಸಕೋಟಿ, ಎಸ್. ಸುರೇಂದ್ರನಾಥ್, ಬಿ.ಎಂ.ಗಿರಿರಾಜ್, ಚಿದಂಬರ ರಾವ್ ಜಂಬೆ, ಮಂಜು ಕೊಡಗು, ಅನಿರುದ್ಧ ಖುತ್ವಾಡ್, ವೆಂಕಟರಮಣ ಐತಾಳ್, ವಿದ್ಯಾನಿಧಿ ವನಾರಾಸೆ, ಎಸ್.ರಘುನಂದನ್, ಅಕ್ಷರ ಕೆ.ವಿ., ಡಾ.ಶ್ರೀಪಾದ್ ಭಟ್ ಮತ್ತು ದಾಕ್ಷಾಯಿಣಿ ಭಟ್ ರಂತಹ ರಂಗ ದಿಗ್ಗಜರೊಂದಿಗೆ ಕೆಲಸ ಮಾಡಿದ್ದಾರೆ. ಪ್ರಮುಖ ರಂಗ ತಂಡಗಳಾದ ಪ್ರ.ಕ.ಸಂ, ಗ್ರೀನ್ ರೂಮ್ ಕ್ಲಬ್, ಸಾತ್ವಿಕ, ರಂಗಪಯಣ, ರಂಗವರ್ತುಲ, ರಂಗಶಂಕರ (ರೆಪೆರ್ಟ್ರಿ), ಮನೋರಂಗ ಮತ್ತು ದೃಶ್ಯ ರಂಗ ತಂಡಗಳೊಂದಿಗೆ ಸಹ ಕೆಲಸ ಮಾಡಿದ ಅನುಭವ ಗಗನ್ ರಾಮ್ ಇವರಿಗಿದೆ.
ಕಳೆದ ವರ್ಷ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಆಯೋಜಿಸಿದ್ದ ಥಿಯೇಟರ್ ಅಪ್ರಿಸಿಯೇಷನ್ ಕೋರ್ಸ್ ಸೇರಿದಂತೆ ಇದುವರೆಗೆ ಸಾಕಷ್ಟು ರಂಗ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ರಂಗ ದಿಗ್ಗಜರಡಿಯಲ್ಲಿ, ಯಕ್ಷಗಾನ, ಕುಡಿಯಾಟಂ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ತರಬೇತಿಯನ್ನು ಪಡೆದಿದ್ದಾರೆ.
ಜುಲೈ 21 ರಂದು ಬಿಡುಗಡೆಯಾದ ಯಶಸ್ವಿ ಕನ್ನಡ ಚಲನಚಿತ್ರ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಕ್ಜೇ಼ವಿಯರ್ ಪಾತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಗಗನ್ ರಾಮ್ ವೀರನಾರಾಯಣ ಅವರ ನಿರ್ದೇಶನದ ಐವಾರಾ ಕಂಬೈನ್ಸ್ ನಿರ್ಮಿಸುತ್ತಿರುವ ‘ಟಾರ್ಚು’ ಎಂಬ ಕಲಾತ್ಮಕ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರವನ್ನು ‘ವಿಶ್ವ ಸಿನೆಮಾ’ ವಿಭಾಗದಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸುವ ಮಹತ್ವಾಕಾಂಕ್ಷೆ ಚಿತ್ರ ತಂಡಕ್ಕಿದೆ.
ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಗೆ ಕರ್ನಾಟಕದಿಂದ ಏಕೈಕ ವಿದ್ಯಾರ್ಥಿಯಾಗಿ ಆಯ್ಕೆಯಾಗಿರುವ ಗಗನ್ ರಾಮ್ ಗೆ ಅಭಿನಂದನೆಗಳು.
ತುಂಕೂರ್ ಸಂಕೇತ್ :
ತುಮಕೂರು ಮೂಲದವರಾದ ಶ್ರೀಯುತರು ಚಿತ್ರಕಲೆಯಲ್ಲಿ ಉನ್ನತ ಅಭ್ಯಾಸ ಮಾಡಿದ್ದರೂ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಡಿದ್ದಾರೆ. ತುಮಕೂರಿನ ಸ್ಥಳೀಯ ಪತ್ರಿಕೆಗಳಲ್ಲಿ ಪ್ಯಾಕೆಟ್ ಕಾರ್ಟೂನ್ ಹಾಗೂ ವಿಡಂಬನಾತ್ಮಕ ಲೇಖನಗಳನ್ನು ಬರೆಯತ್ತಿದ್ದರು. ‘ಸುದ್ದಿ ಸಂಗಾತಿ’ಯ ಮೂಲಕ ರಾಜ್ಯ ಮಟ್ಟದ ಪತ್ರಿಕೆ ಸೇರಿದರು. ಹಲವು ವರ್ಷಗಳು ಐಟಿ ಸಂಸ್ಥೆಯಲ್ಲಿ ಗ್ರಾಫಿಕ್ ಕಲಾವಿದರಾಗಿದ್ದರು. ಕನ್ನಡಪ್ರಭದಲ್ಲಿ ಚಿತ್ರಕಲಾವಿದರಾಗಿ, ಮಕ್ಕಳ ಪುರವಣಿಯ ಹಾಗೂ ಖುಷಿ ಪುಟಗಳ ನಿರ್ವಾಹಕರಾಗಿ ರಂಗಭೂಮಿಯ ಚಟುವಟಿಕೆಗಳನ್ನು ಹಾಗೂ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸಿದ್ದಾರೆ. ಪ್ರಸ್ತುತ ಐಟಿಯ ಗ್ರಾಫಿಕ್ ಕ್ಷೇತ್ರದಲ್ಲಿದ್ದಾರೆ.