ಚೆಟ್ಟಂಗಡ ರವಿ ಸುಬ್ಬಯ್ಯ ಇವರು ಶ್ರೀಮಂಗಲ ನಾಡು ವೆಸ್ಟ್ ನೆಮ್ಮಲೆ ಗ್ರಾಮದ ಸಿ.ಎ. ಸುಬ್ಬಯ್ಯ,ಬೊಳ್ಳಮ್ಮ ದಂಪತಿಯ ಪುತ್ರ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಟಿ.ಶೆಟ್ಟಿಗೇರಿ, ಪ್ರೌಢಶಾಲೆ ಹಾಗೂ ಪದವಿಪೂರ್ವ ಶಿಕ್ಷಣವನ್ನು ಶ್ರೀಮಂಗಲ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದ್ದಾರೆ. ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ಬಳಿಕ ಉತ್ತರ ಪ್ರದೇಶದ ಬಂದಲ್‌ಕಾಂಡ್ ವಿಶ್ವವಿದ್ಯಾಲಯದ ಮೂಲಕ ಪತ್ರಿಕೋದ್ಯಮ ಪದವಿಯನ್ನು ಪಡೆದವರು. 1994ರಿಂದ ಪೂರ್ಣಾವಧಿ ಪತ್ರಕರ್ತರಾಗಿ ವೃತ್ತಿ ಜೀವನ ಪ್ರಾರಂಭಿಸಿದವರು. ಕಳೆದ 15 ವರ್ಷಗಳಿಂದ ವಿಜಯ ಕರ್ನಾಟಕ ಪತ್ರಿಕೆ ವರದಿಗಾರರಾಗಿ ಶ್ರೀಮಂಗಲ ವಿಭಾಗದಲ್ಲಿ ಪತ್ರಿಕೆಯ ಬೇಡಿಕೆ ಹೆಚ್ಚಾಗುವರೆ ಕಾರಣಕರ್ತರಾಗಿದ್ದಾರೆ. ಇಪ್ಪತ್ತು ವರ್ಷಗಳಿಂದ ಮಡಿಕೇರಿ ಆಕಾಶವಾಣಿ ಕೇಂದ್ರದಲ್ಲಿ ಸಂದರ್ಶಕ,ಸುದ್ದಿ ಸಮಾಚಾರ ವಾಚಕ, ಕಲಾವಿದರಾಗಿದ್ದರು. ಈಗ್ಗೆ 5 ವರ್ಷಗಳಿಂದ ಉದ್ಘೋಷಕರಾಗಿ ದುಡಿಯುತ್ತಿದ್ದಾರೆ. ಕಾರ್ಯಕ್ರಮ ನಿರೂಪಣೆ, ಕ್ರೀಡಾ ವೀಕ್ಷಕ ವಿವರಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ಸಂಯೋಜಕರಾಗಿ ಅಪಾರವಾದ ಅನುಭವವನ್ನು ಹೊಂದಿದ್ದಾರೆ. ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ ಅಧ್ಯಕ್ಷರಾಗಿರುವ ಇವರು ಆ ಮೂಲಕ ಹಲವು ಲೇಖಕರ 90 ಕೃತಿಗಳನ್ನು ಅಚ್ಚು ಹಾಕಿಸಿ ಲೋಕಾರ್ಪಣೆ ಮಾಡಿಸಿದ್ದಾರೆ. ಸಾಹಿತ್ಯದ ಸಂಘಟನೆ ಮಾತ್ರವಲ್ಲದೇ ಸ್ವತಃ ಗಾಯಕರು, ನಾಟಕಕಾರರೂ ಆಗಿರುವ ಇವರು ಇಪ್ಪತ್ತೈದಕ್ಕೂ ಹೆಚ್ಚಿನ ಗಾಯಕರು, ಎಪ್ಪತ್ತಕ್ಕೂ ಹೆಚ್ಚಿನ ನಾಟಕ ಕಲಾವಿದರನ್ನು ಸಂಘಟಿಸಿದ್ದಾರೆ, ಮೂವತ್ತಕ್ಕೂ ಹೆಚ್ಚಿನ ಬರೆಹಗಾರರನ್ನು ಹುಟ್ಟು ಹಾಕುವ ಮೂಲಕ ಕೊಡಗಿನ ಸಾಹಿತ್ಯ ಕ್ಷೇತ್ರವು ಉಜ್ವಲಗೊಳ್ಳಲು ಕಾರಣಕರ್ತರಾಗಿದ್ದಾರೆ.
ಕೊಡವ ಭಾಷೆಯ ‘ಚೊಕ್ಕ್‌ನ ಮೂಡಿ ಚಿಕ್ಕ್‌ಚಾ?’, ‘ರಾಜಂಡ ಬಂಡಾಟ’, ‘ಕೊಣಿಯ’, ‘ಕೊದಿರ ಫಲ’, ‘ಕೊರವುಕಾರ್ತಿ ದಾರ್’, ‘ತುಳ್ಳುವ ತುಳಿ’, ‘ಎಳ್ತ್- ಕುತ್ತ್’, ‘ಪೊಂಬೊಳೆ ನೆಲ್ಲ್’, ‘ಪೊಮ್ಮಾಲೆ ಕೊಡಗ್’, ‘ಅಂಗದಾನ’ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಭಾಷೆಯಲ್ಲಿ ‘ನನ್ನ ಕವನ’, ‘ಚುಟುಕು ಚೂರು’ ಎಂಬೆರಡು ಸಾಹಿತ್ಯದ ಕೃತಿಗಳು ಮತ್ತು ‘ದಾಹ’, ‘ಸ್ತ್ರೀ’, ‘ದಾನ’, ‘ಜಾಗೃತಿ’ ಎಂಬ ನಾಲ್ಕು ಸ್ವರಚಿತ ನಾಟಕ ಕೃತಗಳು ಸೇರಿ 16 ಕೃತಿಗಳನ್ನು ರಚಿಸಿದ್ದಾರೆ. ‘ಎಚ್ಚರ’ (ನಾಟಕ), ‘ಪೊಮ್ಮಾಲೆ ಪುದುಮೆ’, ‘ಕೊದಿ ಕಾಗದ’ ಕವನ ಸಂಕಲನ ಎಂಬ ಮೂರು ಕೃತಿಗಳು ಅಚ್ಚಿನ ಮನೆಯಲ್ಲಿ ಇವೆ. ಕನ್ನಡ ಮತ್ತು ಕೊಡವ ಭಾಷೆಗಳಲ್ಲಿ ಅನೇಕ ಲೇಖನಗಳನ್ನು ಬರೆದಿದ್ದಾರೆ. ಇತ್ತೀಚೆಗೆ ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ ಇಪ್ಪತ್ತೈದನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹದಿನೆಂಟು ಕವಿಗಳ ಇಪ್ಪತೈದು ಕೃತಿಗಳನ್ನು ಒಂದೇ ಬಾರಿಗೆ ಲೋಕಾರ್ಪಣೆ ಮಾಡುವ ಮೂಲಕ ಒಂದು ಹೊಸ ದಾಖಲೆಯನ್ನು ಮಾಡಿದ್ದಾರೆ. ಜಿಲ್ಲೆಯಲ್ಲಿ ಹಲವಾರು ಕವಿಗೋಷ್ಠಿ, ಸಾಹಿತ್ಯದ ಶಿಬಿರ, ನಾಟಕ ಶಿಬಿರ, ಗಾಯನ ಗೋಷ್ಠಿ, ಹಾಸ್ಯಗೋಷ್ಠಿ, ಕೊಡವ ಮೇಳ ಇತ್ಯಾದಿಗಳ ಸಂಘಟಿಸಿದ್ದಾರೆ. ಕರ್ನಾಟಕ ಕೊಡವ ಅಕಾಡೆಮಿಯ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಹಲವಾರು ಬಹುಮಾನಗಳನ್ನು ಪಡೆದಿರುವುದಲ್ಲದೇ ಸಂಪನ್ಮೂಲ ವ್ಯಕ್ತಿಯಾಗಿ, ತೀರ್ಪುಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಗಾಯಕ, ನೃತ್ಯಪಟು, ರಂಗಭೂಮಿ ಕಲಾವಿದ, ಕಿರುತೆರೆ ಕಲಾವಿದ, ನಿರೂಪಕ, ಸಿನೆಮಾ ಕಲಾವಿದ, ನಿರ್ದೇಶಕ, ದೂರದರ್ಶನ ಮತ್ತು ಆಕಾಶವಾಣಿ ಕಲಾವಿದ, ಕವಿ, ಸಾಹಿತಿ, ಪತ್ರಕರ್ತ ಹೀಗೆ ಬಹುಮುಖ ವ್ಯಕ್ತಿತ್ವ ಹೊಂದಿರುತ್ತಾರೆ. ಸಾಕ್ಷರ ಕಾವೇರಿ ನೋಡಲ್ ಪ್ರೇರಕರ ಸಂಘದ ಜಿಲ್ಲಾಧ್ಯಕ್ಷರಾಗಿ, ಇಕೋ ಕ್ಲಬ್‌ನ ಸಂಪನ್ಮೂಲ ವ್ಯಕ್ತಿಯಾಗಿ, ವಿರಾಜಪೇಟೆ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕೊಡಗು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ, ಇನ್ನೂ ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮಂಗಲ ಹೋಬಳಿ ಘಟಕದ ಅಧ್ಯಕ್ಷರಾಗಿ, ಕೊಡವ ಎಳ್ತ್‌ಕಾರಡ ಕೂಟದ ಕಾರ್ಯದರ್ಶಿಯಾಗಿ ಇದೀಗ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರಿಗೆ ಟಿ.ಶೆಟ್ಟಿಗೇರಿಯ ರೂಟ್ಸ್ ವಿದ್ಯಾಸಂಸ್ಥೆಯ ಹತ್ತನೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಸನ್ಮಾನ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 2021ರ ಸಮ್ಮೇಳನದಲ್ಲಿ ಯಶಸ್ವಿ ಹೋಬಳಿ ಅಧ್ಯಕ್ಷ ಸ್ಥಾನಕ್ಕೆ ಸನ್ಮಾನ, 2019ರಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ 25ನೆಯ ವರ್ಷದ ಭಾಷೆ ಕಲೆ ಸಂಸ್ಕೃತಿಯ ಬೆಳವಣಿಗೆಗಾಗಿ ಸನ್ಮಾನ, ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ವತಿಯಿಂದ ಸನ್ಮಾನ, ರಂಗಾಯಣ ಮೈಸೂರು ವತಿಯಿಂದ ಮೈಸೂರು ವಿಭಾಗದ ಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆಗಾಗಿ 2018ರಲ್ಲಿ ಸನ್ಮಾನ, ನೇಷನಲ್ ಕ್ಲಾಸಿಕಲ್ ಅಕಾಡೆಮಿ ವತಿಯಿಂದ ಸನ್ಮಾನ, ಪತ್ರಕರ್ತರ ಸಂಘದ ವತಿಯಿಂದ ಹಾಗೂ ಇನ್ನಿತರ ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಸನ್ಮಾನ ಗೌರವಗಳಿಗೆ ಭಾಜನರಾಗಿದ್ದಾರೆ. ಅವಿವಾಹಿತರಾಗಿರುವ ಇವರು ತಾಯಿಯೊಂದಿಗೆ ಶ್ರೀಮಂಗಲ ಹೋಬಳಿ ನೆಮ್ಮಲೆ ಗ್ರಾಮದಲ್ಲಿ ವಾಸವಾಗಿದ್ದಾರೆ. ಇವರ ಮುಂದಿನ ಬರಹಗಳ ಜೊತೆಗೆ ಬಾಳ ಸಂಗಾತಿಯೂ ದೊರಕುವಂತಾಗಿ ಬದುಕು ಹಸನಾಗಲಿ ಎಂದು ಹಾರೈಸೋಣ.
ಶ್ರೀ ವೈಲೇಶ್ ಪಿ.ಎಸ್. ಕೊಡಗು.
8861405738
ಶ್ರೀ ವೈಲೇಶ್ ಪಿ.ಎಸ್. ಇವರು ಶಿವೈ ವೈಲೇಶ್‌ಪಿ.ಎಸ್. ಕೊಡಗು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುತ್ತಾರೆ. ಸಾಹಿತ್ಯ ರಚನೆ ಮತ್ತು ಸಂಘಟನೆ ಇವರ ಪ್ರವೃತ್ತಿಯಾಗಿದೆ. ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು, ಛಂದೋಬದ್ಧ ಕಾವ್ಯ ಸಂವರ್ಧಕ ಪರಿಷತ್ತು ಮತ್ತು ಸಾಹಿತ್ಯ ಸಂವರ್ಧಕ ಪರಿಷತ್ತು ಈ ಮೂರು ಬಳಗದ ವತಿಯಿಂದ ಅನೇಕ ಯುವ ಕವಿಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಒಳಗೊಂಡಂತೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಕೊಡಗು ಜಿಲ್ಲೆಯ ಜಾನಪದ ಪರಿಷತ್ತಿನ ವತಿಯಿಂದ ನಡೆದ 2019ರ ಮಡಿಕೇರಿ ದಸರಾ ಕಾರ್ಯಕ್ರಮದಲ್ಲಿಯೂ ಸನ್ಮಾನಿಸಲಾಗಿದೆ.
‘ಅಮ್ಮ ನಿಮಗಾಗಿ’ ಮತ್ತು ‘ಕಣ್ಮರೆಯಾದ ಹಳ್ಳಿ’ ಇವು ಕವನ ಸಂಕಲನಗಳು, “ಬೊಮ್ಮಲಿಂಗನ ಸಗ್ಗ” ಮುಕ್ತಕಗಳು, “ಮನದ ಇನಿದನಿ” ಲೇಖನ ಮಾಲೆಗಳ ಕೃತಿ ಮತ್ತು “ಕೊಡಗಿನ ಸಾಹಿತ್ಯ ತಪಸ್ವಿಗಳು” ಎಂಬ ಕೊಡಗಿನ ಸಾಹಿತಿಗಳ ಪರಿಚಯ ಮಾಲಿಕೆ ಭಾಗ-1. ಇವು ಇವರ ಪ್ರಕಟಿತ ಕೃತಿಗಳು. ಇನ್ನೂ ಹತ್ತು ಕೃತಿಗಳನ್ನು ತಯಾರಿಸಲು ಬೇಕಾದಷ್ಟು ಬರಹಗಳು ಶೇಖರವಾಗಿವೆ.
ಕೊಡಗು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಹಲವಾರು ಪ್ರತಿಷ್ಟಿತ ವೇದಿಕೆಗಳಲ್ಲಿ ನಡೆದ ಕವಿಗೋಷ್ಟಿಗಳಲ್ಲಿ ಭಾಗವಹಿಸಿ ಕವನವಾಚನಗಳನ್ನು ಮಾಡಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿರುವ ಹೆಗ್ಗಳಿಕೆ ಇವರದು.
ಇತ್ತೀಚೆಗೆ ಹಲವಾರು ಛಂದೋಬದ್ಧ ಪ್ರಕಾರಗಳಲ್ಲಿ ಕಾವ್ಯ ರಚನೆ ಮಾಡುತ್ತಿರುವ ಇವರು ಮುಕ್ತಕಗಳು, ಗಝಲ್, ನವ್ಯ ವಚನ ಸಾಹಿತ್ಯ, ನವ್ಯ ಕವಿತೆಗಳನ್ನೂ ರಚಿಸಿದ್ದಾರೆ. ಲಲಿತ ಪ್ರಬಂಧಗಳು, ವೈಚಾರಿಕ ಲೇಖನಗಳು, ಕೊಡಗಿನ ಕವಿ – ಸಾಹಿತಿಗಳ ಪರಿಚಯ, ಹಾಯ್ಕು, ಟಂಕಾ, ರುಬಾಯಿ, ಲಾವಣಿಗಳು, ಜಾನಪದ ಶೈಲಿಯ ಗೀತೆ ಇತ್ಯಾದಿ ಇವರ ರಚನೆಗಳು. ಶಕ್ತಿ ಪತ್ರಿಕೆಯಲ್ಲಿ ಅಂಕಣ ಬರಹಗಾರರಾಗಿದ್ದಾರೆ.
ಇವರು “ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ”, “ಮುಕ್ತಕ ಸಾಹಿತ್ಯ ಸಿಂಧು ಪ್ರಶಸ್ತಿ” “ಸಾಹಿತ್ಯ ರತ್ನ” ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಮತ್ತು ಇತ್ತೀಚೆಗೆ ಕೃಷ್ಣರಾಜನಗರದ ಕಪ್ಪಡಿ ಕ್ಷೇತ್ರದಲ್ಲಿ ಸನ್ಮಾನವನ್ನು ಸ್ವೀಕರಿಸಿದ್ದಾರೆ.