ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆಯ ಶ್ರೀಮತಿ ಭಾಗೀರಥಿ ಭಟ್ಟ ಹಾಗೂ ಕೃಷ್ಣ ಭಟ್ಟ ಇವರ ಮಗನಾಗಿ 5.03.1967 ರಂದು ರವೀಂದ್ರ ಭಟ್ಟ ಅಚವೆ ಅವರ ಜನನ. ದ್ವಿತೀಯ ಪಿಯುಸಿ ಇವರ ವಿದ್ಯಾಭ್ಯಾಸ. ಆರನೇ ತರಗತಿ ಓದುತ್ತಿರುವಾಗ ಮನೆಯಲ್ಲಿ ಯಕ್ಷಗಾನ ಭಾಗವತಿಕೆಯ ತರಬೇತಿ ನಡೆಯುತ್ತಿತ್ತು ಅದನ್ನು ದಿನವೂ ಗಮನಿಸುತ್ತಿದ್ದರು ಆ ಕಾಲದಲ್ಲಿ ಮನರಂಜನೆಯ ಮಾಧ್ಯಮ ‘ಯಕ್ಷಗಾನ’ವೊಂದೇ ಆಗಿತ್ತು ಎಲ್ಲಿ ಯಕ್ಷಗಾನ ನಡೆದರೂ ಹಾರ್ಮೋನಿಯಂ ವಾದನ ನನ್ನದಾಗಿರುತ್ತಿತ್ತು. ನಂತರ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮುಗಿದ ಮೇಲೆ ಯಕ್ಷಗಾನ ಭಾಗವತಿಕೆ ಕಲಿಯಲು ಮುಂದಾದರು ಅಚವೆಯವರು.
ಪ್ರಾಚಾರ್ಯ ಕೆ.ವಿ. ಹೆಗಡೆ ಗೋಳಗೋಡ್ ಇವರ ಯಕ್ಷಗಾನ ಗುರುಗಳು. ಗೋರ್ಪಾಡಿ ವಿಠ್ಠಲ ಪಾಟೀಲ್, ಗೋಪಾಲ ಗಾಣಿಗ ಹೆರಂಜಾಲು ಬಳಿ ಯಕ್ಷಗಾನದ ಭಾಗವತಿಕೆಯ ಬಗ್ಗೆ ಕೇಳಿ ಕಲಿತಿರುತ್ತಾರೆ ರವೀಂದ್ರ ಭಟ್ಟ ಅಚವೆ.
ನಾರಣಪ್ಪ ಉಪ್ಪೂರು, ನೆಬ್ಬೂರರು, ಕಾಳಿಂಗ ನಾವಡ, ಕೆ.ಪಿ ಹೆಗಡೆ, ಧಾರೇಶ್ವರರು, ವಿದ್ವಾನ್ ಗಣಪತಿ ಭಟ್ಟರು, ಗೋಪಾಲ ಗಾಣಿಗ, ಪದ್ಯಾಣ ಗಣಪತಿ ಭಟ್ಟರು ನೆಚ್ಚಿನ ಭಾಗವತರು ಪ್ರತಿಯೊಬ್ಬರಲ್ಲೂ ನನಗೆ ಇಷ್ಟವಾದ ವಿಷಯವನ್ನು ಆರಿಸಿಕೊಂಡು ಅನುಸರಿಸುವಲ್ಲಿ ಪ್ರಯತ್ನಿಸಿದ್ದೇನೆ.
ಶ್ರೀ ಕೃಷ್ಣ ಸಂಧಾನ, ಗದಾಯುದ್ಧ, ಲಂಕಾದಹನ ಎಲ್ಲಾ ಪೌರಾಣಿಕ ಪ್ರಸಂಗ ಇವರ ನೆಚ್ಚಿನ ಪ್ರಸಂಗಗಳು.
ಶಂಕರ ಭಾಗವತ ಯಲ್ಲಾಪುರ, ಚೆಂಡೆಯಲ್ಲಿ ರಾಮಕೃಷ್ಣ ಮಂದಾರ್ತಿ, ರಾಕೇಶ್ ಮಲ್ಯ ಹಳ್ಳಾಡಿ ನೆಚ್ಚಿನ ಚೆಂಡೆ ಮದ್ದಳೆ ವಾದಕರು.
ಮಧ್ಯಮಾವತಿ, ಕೇದಾರಗೌಳ, ಆರಭಿ, ಭೈರವಿ, ಪೂರ್ವಿ, ಚಾಂದ್, ಮೋಹನ, ಸಾವೇರಿ, ಹಿಂದೋಳ ಇತ್ಯಾದಿ ನೆಚ್ಚಿನ ರಾಗಗಳು.
ಯಕ್ಷಗಾನದ ಇಂದಿನ ಸ್ಥಿತಿಗತಿ ಚೆನ್ನಾಗಿಯೇ ಇದೆ. ಕಲಾವಿದ ಅಧ್ಯಯನ ನಿರತನಾದಾಗ ಮಾತ್ರ ಕಲೆ ಉತ್ಕರ್ಷ ಹೊಂದುತ್ತದೆ. ಅಧ್ಯಯನ ಇಲ್ಲದಿದ್ದರೆ ಕಲೆ ಪರಿಣಾಮದಲ್ಲಿ ಸೊರಗುತ್ತದೆ. ರಂಗದಲ್ಲಿ ಯಾವುದೇ ಒಂದು ಭಾಗ ವಿಸ್ತರಿಸಿದರೆ ಒಟ್ಟಂದದಲಿ ಅದು ಪರಿಣಾಮಕಾರಿಯಾಗಿರದು. ಆರಾಧನಾ ಕಲೆಯಾಗಿ ಸಂಸ್ಕೃತಿಯ ಅಂಗವಾಗಿ ಸಾಗಿಬಂದ ಯಕ್ಷಗಾನ ಕಲೆಗೆ ಎಂದೂ ಅಳಿವಿಲ್ಲ. ಹಾಗೆಯೇ ಅದನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಹೊಣೆ ನಮ್ಮೆಲ್ಲರದಾಗಿದೆ.
ಹಣ ಮತ್ತು ಲಘುವಾದ ಪ್ರಚಾರದ ಹಿಂದೆ ಯಾವತ್ತೂ ಮನಸ್ಸು ಮಾಡಿಲ್ಲ. ಸಂಕಲ್ಪ ಸೇವಾ ಸಂಸ್ಥೆ ಯಲ್ಲಾಪುರ, ಹವ್ಯಕ ಮಹಾ ಸಭಾ ಅಂಕೋಲಾ ಮುಂತಾದ ಕಡೆಯಲ್ಲಿ ಸನ್ಮಾನ ನಡೆದಿದೆ. ಯಾವುದೇ ಪ್ರಶಸ್ತಿ ಇದುವರೆಗೆ ಬಂದಿಲ್ಲ.
ಯಕ್ಷಗಾನ ಭಾಗವತಿಕೆ, ಹಿಂದೂಸ್ಥಾನಿ ಮತ್ತು ಕರ್ನಾಟಿಕ್ ಸಂಗೀತ ಆಲಿಸುವುದು, ಪುಸ್ತಕಗಳನ್ನು ಓದುವುದು. ಚಿಕ್ಕಂದಿನಿಂದಲೂ ಕಾರ್ಪೆಂಟರಿ ಕೆಲಸ ನನಗೆ ಪಂಚಪ್ರಾಣ ಎಂದು ಹೇಳುತ್ತಾರೆ ರವೀಂದ್ರ ಭಟ್ಟ ಅಚವೆ.
1ವರ್ಷ ಹೊಸನಗರ ನಾಗರಕೊಡಿಗೆ ಮೇಳ, 2ವರ್ಷ ಕಮಲಶಿಲೆ ಮೇಳ, 4ವರ್ಷ ಮಾರಿಕಾಂಬಾ ಮೇಳ ಶಿರಸಿ, 10ವರ್ಷ ಮಂದಾರ್ತಿ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ.
ರವೀಂದ್ರ ಭಟ್ಟ ಅಚವೆ ಅವರು ಸಾವಿತ್ರಿ ಭಟ್ಟ ಇವರನ್ನು 8.12.2008 ಮದುವೆಯಾಗಿ ಮಗಳು ಪೂಜಾ ಭಟ್ಟ, ಮಗ ಸುಹಾಸ ಭಟ್ಟ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.