ಕಡಬ ತಾಲೂಕು ಕಾಣಿಯೂರು ಗ್ರಾಮದ ಕಟ್ಟತ್ತಾರು ಎಂಬಲ್ಲಿ ವೇದಾವತಿ ಮತ್ತು ಲಕ್ಷ್ಮಣ ಗೌಡ ದಂಪತಿಗಳ ಏಕಮಾತ್ರ ಪುತ್ರನಾಗಿ 16.04.1999ರಲ್ಲಿ ಚರಣ್ ಗೌಡ ಕಾಣಿಯೂರು ಅವರ ಜನನ. ಚಿಕ್ಕ ವಯಸ್ಸಿನಿಂದಲೇ ಇದ್ದ ಯಕ್ಷಗಾನದ ಆಸಕ್ತಿ ಗಮನಿಸಿ, ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿ ಒಬ್ಬ ಕಲಾವಿದ ಆಗುವಂತೆ ಮಾಡಿದ್ದೇ ಇವರ ತಾಯಿ. ರೇಡಿಯೋದಲ್ಲಿ ಬರುತ್ತಿದ್ದ ತಾಳಮದ್ದಳೆಯನ್ನು ಕೇಳಿಯೇ ಇವರಿಗೆ ಯಕ್ಷಗಾನ ಆಸಕ್ತಿ ಬೆಳೆದುದು. ಎಳವೆಯಲ್ಲೇ 7ನೇ ತರಗತಿಯಲ್ಲಿ ಇರುವಾಗಲೇ ಹವ್ಯಾಸಿ ಕಲಾವಿದ ನಿರಂಜನ್ ಆಚಾರ್ಯರಿಂದ ನಾಟ್ಯ ಕಲಿತು ಶಾಲೆಯಲ್ಲಿ ಯಕ್ಷಗಾನ ವೇಷಗಳನ್ನು ಮಾಡಿದ್ದರು. 2015ರಲ್ಲಿ ಕಾಣಿಯೂರಿನಲ್ಲಿ ಬೆಳಾಲು ಲಕ್ಷ್ಮಣ ಗೌಡರಲ್ಲಿ ಹೆಚ್ಚಿನ ನಾಟ್ಯಾಭ್ಯಾಸ. ಇದರ ಜೊತೆಗೆ ನಾಟಕ, ಭಾಗವತಿಕೆಯ ಪೂರ್ವರಂಗದ ಸಂಗೀತ, ಚಿತ್ರಕಲೆಯನ್ನು ಕಲಾವಿದರಾದ ಸುಭಾಷ್ ಪಂಜರವರಲ್ಲಿ ಅಭ್ಯಾಸ ಮಾಡಿ ಬಡತನದ ಸವಾಲನ್ನು ಮೆಟ್ಟಿ ನಿಂತು ದ್ವಿತೀಯ ಪಿಯುಸಿ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರೈಸಿದರು. 2017 – 18ರ ಸಾಲಿನ ತಿರುಗಾಟದಲ್ಲಿ ಶ್ರೀ ಧರ್ಮಸ್ಥಳ ಮೇಳವನ್ನು ಸೇರಿ ಪ್ರಸ್ತುತ 7ನೇ ವರ್ಷದ ತಿರುಗಾಟವನ್ನು ಮಾಡುತ್ತಿದ್ದಾರೆ.
ಹಿರಿಯವರ ಜೊತೆ ಕೇಳಿ ತಿಳಿದುಕೊಳ್ಳುತ್ತೇನೆ. ನಮ್ಮ ವೇಷ ಅಲ್ಲದೇ ನಮ್ಮ ಮುಂದೆ ಇರುವ ವೇಷದ ಬಗ್ಗೆ ಮಾಹಿತಿಯನ್ನು ಪಡೆದು ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಚರಣ್ ಗೌಡ ಕಾಣಿಯೂರು.
ಪೌರಾಣಿಕದ ಎಲ್ಲಾ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಅದರಲ್ಲೂ ದೇವಿ ಮಹಾತ್ಮೆ, ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಇವರ ನೆಚ್ಚಿನ ಪ್ರಸಂಗಗಳು.
ಧೂಮ್ರಾಕ್ಷ, ಅಗ್ರಪೂಜೆಯ ಶಿಶುಪಾಲಾದಿಗಳು, ವಿಭೀಷಣ, ಬ್ರಹ್ಮ, ವಿಷ್ಣು, ಕೃಷ್ಣ, ಕ್ಷೇತ್ರ ಮಹಾತ್ಮೆಯ ನೇತ್ರಾವತಿ, ಧರ್ಮದೇವತೆಗಳು ಇವರ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಶ್ರದ್ಧೆಯಿಂದ ಕಲಾಸೇವೆ ಮಾಡುವ ಕಲಾವಿದರಿಗೆ ಗೌರವದ ಬದುಕು ಯಕ್ಷಗಾನದಿಂದ ಸಿಗುತ್ತದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಅಭಿಮಾನ ಆಗಲಿ, ವಿಮರ್ಶೆ ಆಗಲಿ ಅತಿರೇಕ ಆಗಬಾರದು. ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಕಲಾವಿದರಷ್ಟೇ ಜವಬ್ದಾರಿ ಪ್ರೇಕಕರಿಗೂ ಇದೆ.
ರಂಗದಲ್ಲಿ ಎಲ್ಲಾ ರೀತಿಯ ವೇಷಗಳನ್ನು ಕಲಿತು ಸಮರ್ಥವಾಗಿ ರಂಗದಲ್ಲಿ ಮಾಡಬೇಕು. ಇದುವೇ ಮುಂದಿನ ಯೋಜನೆ ಎಂದು ಹೇಳುತ್ತಾರೆ ಚರಣ್ ಗೌಡ ಕಾಣಿಯೂರು.
ಸನ್ಮಾನ ಹಾಗೂ ಪ್ರಶಸ್ತಿಗಳು:-
2019ರಲ್ಲಿ ಶುಭವರ್ಣ ಯಕ್ಷ ಸಂಪದ ಮರಕಡ ಮಂಗಳೂರು ಇವರಿಂದ ಪ್ರತಿಭಾ ಪುರಸ್ಕಾರ.
2022ರಲ್ಲಿ ಶ್ರೀಲಕ್ಷ್ಮಿ ನರಸಿಂಹ ಯುವಕ ಮಂಡಲ ರಿ ಕಾಣಿಯೂರು ಇವರ ರಜತ ಮಹೋತ್ಸವದ ಸಂದರ್ಭ ಹುಟ್ಟೂರು ಸನ್ಮಾನ.
2024 ಮೇ 2ರಂದು ಇವರ ನಾಟಕ, ಭಾಗವತಿಗೆಯ ಪೂರ್ವರಂಗದ ಸಂಗೀತ, ಚಿತ್ರಕಲೆಯ ಗುರುಗಳಾದ ಶ್ರೀಯುತ ಸುಭಾಷ್ ಪಂಜ ಇವರಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದ್ದಾರೆ.
ಎಲ್ಲಾ ತರಹದ ಪುಸ್ತಕ ಓದುವುದು ಅದರಲ್ಲೂ ಕಾದಂಬರಿ ಪುಸ್ತಕ ಓದುವುದು ಇವರ ಹವ್ಯಾಸಗಳು.
ತಂದೆ, ತಾಯಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಚರಣ್ ಗೌಡ ಕಾಣಿಯೂರು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.