Subscribe to Updates

    Get the latest creative news from FooBar about art, design and business.

    What's Hot

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಿದ ‘ಶ್ರೀ ಕೃಷ್ಣ ಸಂಧಾನ’ ನಾಟಕ

    May 20, 2025

    ಸಹೋದಯ ಸಭಾಂಗಣದಲ್ಲಿ ಹಂಝ ಮಲಾರ್‌ರ ಬ್ಯಾರಿ ಪುಸ್ತಕಗಳು ಲೋಕಾರ್ಪಣೆ

    May 20, 2025

    ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಮತ್ತು ದತ್ತಿ ಪುರಸ್ಕಾರ ಪ್ರದಾನ | ಮೇ 21

    May 20, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವ್ಯಕ್ತಿ ಪರಿಚಯ | “ಪ್ರತಿಭೋನ್ನತ ಕಲಾಪಟು” ಕಿಶನ್ ರಾವ್ ನೂಜಿಪ್ಪಾಡಿ
    Article

    ವ್ಯಕ್ತಿ ಪರಿಚಯ | “ಪ್ರತಿಭೋನ್ನತ ಕಲಾಪಟು” ಕಿಶನ್ ರಾವ್ ನೂಜಿಪ್ಪಾಡಿ

    September 17, 2023No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    03.06.1994ರಂದು ನಾಗೇಶ್ ರಾವ್ ಎನ್ ಹಾಗೂ ಸರೋಜ ಎನ್ ಇವರ ಮಗನಾಗಿ ಕಿಶನ್ ರಾವ್ ನೂಜಿಪ್ಪಾಡಿ ಜನನ. MBA (HR & Marketing) ಇವರ ವಿದ್ಯಾಭ್ಯಾಸ. ಪ್ರಸ್ತುತ ಪುತ್ತೂರಿನ ಸಂಪ್ಯದ ಅಕ್ಷಯ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇವೆಯನ್ನು  ಸಲ್ಲಿಸುತ್ತಿದ್ದಾರೆ.

    ಅಂದಿನ ಕಾಲದಲ್ಲಿ ಪ್ರಸಿದ್ಧ ಕಲಾವಿದರಾದ ಅಗರಿ ಭಾಗವತರು, ಶೇಣಿ ಗೋಪಾಲಕೃಷ್ಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಬಣ್ಣದ ಮಹಾಲಿಂಗಜ್ಜ ಮೊದಲಾದವರು ಇದ್ದಂತಹ ಗಜಮೇಳವಾಗಿದ್ದ ಕೂಡ್ಲು ಮೇಳದ ಯಜಮಾನರಾಗಿದ್ದ ನನ್ನ ಅಜ್ಜ ನೂಜಿಪ್ಪಾಡಿ ಶಂಕರನಾರಾಯಣಪ್ಪಯ್ಯ ಇವರ ಸಾಧನೆ ಹಾಗೂ ಪ್ರಸಿದ್ಧಿ ನಾನು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ.

    ತಂದೆಯವರು ತಮ್ಮ ಬಾಲ್ಯದಲ್ಲಿ ಯಕ್ಷಗಾನ ಕಲಿತು ಇನ್ನೇನು ಮರುದಿನ ಯಕ್ಷಗಾನ ಪ್ರದರ್ಶನದಲ್ಲಿ ವಿಭೀಷಣನ ವೇಷ ಮಾಡಲು ಸಿದ್ಧರಿದ್ದಾಗ ಅವರ ತಂದೆ ತೀರಿಕೊಂಡು ವೇಷ ಮಾಡಲು ಸಾಧ್ಯವಾಗದೆ, ನಂತರ ತೀವ್ರ ಬಡತನದಿಂದ ಅವಕಾಶ ಮತ್ತು ಪ್ರೋತ್ಸಾಹ ವಂಚಿತರಾಗಿದ್ದರು. ತನಗೆ ಆಸಕ್ತಿ ಇದ್ದರೂ ಸರಿಯಾದ ಅವಕಾಶ ಮತ್ತು ಪ್ರೋತ್ಸಾಹ ಸಿಗದಿದ್ದಾಗ ತನ್ನ ಮಗನಿಗೆ ಯಕ್ಷಗಾನ ಕಲಿಸಿ ಅಜ್ಜ ಶಂಕರನಾರಾಯಣಪ್ಪಯ್ಯನವರು ನೂಜಿಪ್ಪಾಡಿಗೆ ತಂದುಕೊಟ್ಟ ಹಿರಿಮೆಯ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು ಎನ್ನುವ ನಿಟ್ಟಿನಲ್ಲಿ ನನ್ನ ತಂದೆಯವರು ನನಗೆ ಯಕ್ಷಗಾನ ಕಲಿಸಿ ಪ್ರೋತ್ಸಾಹ ಮಾಡಿದ್ದರಿಂದ ಯಕ್ಷಗಾನ ಕಲಿಯಲು ಪ್ರೇರಣೆಯಾಯಿತು.

    ಯಕ್ಷಗಾನದ ಗುರುಗಳು:-
    ಪ್ರಾಥಮಿಕ ಯಕ್ಷಗಾನ ಅಭ್ಯಾಸ ಪುಷ್ಪರಾಜ ಕುಕ್ಕಾಜೆ.
    ನಾಟ್ಯ ಅಭ್ಯಾಸ ಯೋಗೀಶ್ ಶರ್ಮ ಅಳದಂಗಡಿ.
    ರಂಗ ಮಾಹಿತಿ ಹಾಗೂ ವೇಷಗಾರಿಕೆಯ ತರಬೇತಿ ಸುಬ್ರಾಯ ಹೊಳ್ಳ ಕಾಸರಗೋಡು ಹಾಗೂ ಶ್ರೀವತ್ಸ ಕಟೀಲು.

    ದೇವಿ ಮಹಾತ್ಮೆ, ಲಲಿತೋಪಾಖ್ಯಾನ, ದಶಾವತಾರ, ತ್ರಿಪುರ ಮಥನ, ವಿಷಮ ಸಮರಂಗ, ಕುರುಕ್ಷೇತ್ರ, ಸುದರ್ಶನೋಪಾಖ್ಯಾನ, ತ್ರಿಜನ್ಮ ಮೋಕ್ಷ, ಭುವನ ಭಾಗ್ಯ, ಕುಮಾರ ವಿಜಯ ಇತ್ಯಾದಿ ಪೌರಾಣಿಕ ಪ್ರಸಂಗಗಳು ನೆಚ್ಚಿನ ಪ್ರಸಂಗಗಳು.
    ದೇವಿ ಮಹಾತ್ಮೆಯ ರಕ್ತಬೀಜ, ಮಹಿಷಾಸುರ, ಶ್ರೀ ದೇವಿ, ಭಾರ್ಗವ ವಿಜಯದ ಕಾರ್ತವೀರ್ಯ, ದೇವೇಂದ್ರ, ಏಕಾದಶೀ ಮಹಾತ್ಮೆಯ ಮುರಾಸುರ, ಗುರುದಕ್ಷಿಣೆ ಪ್ರಸಂಗದ ಏಕಲವ್ಯ, ಅಭಿಮನ್ಯು ಕಾಳಗದ ಅಭಿಮನ್ಯು, ಮಾರಣಾಧ್ವರದ ಇಂದ್ರಜಿತು, ವೀರಮಣಿ ಕಾಳಗದ ವೀರಮಣಿ ಹಾಗೂ ಹನುಮಂತ, ಕೃಷ್ಣಾರ್ಜುನ ಕಾಳಗದ ಅರ್ಜುನ, ಮೀನಾಕ್ಷಿ ಕಲ್ಯಾಣದ ಮೀನಾಕ್ಷಿ, ಶಶಿಪ್ರಭಾ ಪರಿಣಯದ ಶಶಿಪ್ರಭೆ, ಜಾಂಬವತಿ ಕಲ್ಯಾಣದ ಜಾಂಬವಂತ, ಪಾಂಡವಾಶ್ವಮೇಧದ ಅರ್ಜುನ ಇತ್ಯಾದಿ ಇವರ ನೆಚ್ಚಿನ ಪ್ರಸಂಗ ಹಾಗೂ ವೇಷಗಳು.

    ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಗುರುಗಳಿಂದ ಪ್ರಸಂಗ ಮತ್ತು ಪಾತ್ರದ ಮಾಹಿತಿಯನ್ನು ಪಡೆದುಕೊಂಡು ಪದ್ಯಗಳನ್ನು ಓದಿ ಅರ್ಥೈಸಿ ಅದಕ್ಕೆ ಬೇಕಾದ ಹಾಗೆ ಅರ್ಥವನ್ನು ಮಾನಸಿಕವಾಗಿ ಸಿದ್ಧಪಡಿಸಿ, ಆ ಪ್ರಸಂಗ ಹಾಗೂ ಪಾತ್ರಕ್ಕೆ ಸಂಬಂಧ ಪಟ್ಟ ಪುಸ್ತಕಗಳು, ಲೇಖನಗಳನ್ನು, ಕತೆಗಳನ್ನು ಓದಿ ಪಾತ್ರದ ಹಿನ್ನಲೆಯನ್ನು ಸಿದ್ಧಗೊಳಿಸುವುದು. ಚೌಕಿಯಲ್ಲಿ ಹಿರಿಯ ಅನುಭವಿ ಕಲಾವಿದರಿಂದ ಸಲಹೆಗಳನ್ನು ಕೇಳಿ, ಸಹ ಕಲಾವಿದರು ಹಾಗೂ ಭಾಗವತರೊಂದಿಗೆ ಚರ್ಚಿಸಿ ಕೊನೆಯ ಹಂತದ ಸಿದ್ಧತೆಯನ್ನು ಮಾಡಿ ರಂಗಕ್ಕೆ ತೆರಳುವುದು ಎಂದು ಹೇಳುತ್ತಾರೆ ಕಿಶನ್ ರಾವ್ ನೂಜಿಪ್ಪಾಡಿ.

    ಯಕ್ಷಗಾನದ ಇಂದಿನ ಸ್ಥಿತಿ ಗತಿ:-
    ಯಕ್ಷಗಾನಕ್ಕೆ ಈಗಿನ ಕಾಲದಲ್ಲಿ ತುಂಬಾ ಪ್ರೋತ್ಸಾಹವಿದೆ. ಪ್ರತಿಯೊಬ್ಬರೂ ಕೂಡ ಯಕ್ಷಗಾನದತ್ತ ತಮ್ಮ ಒಲವನ್ನು ತೋರಿಸುತ್ತಾ ಇರುವುದು ಅದರಲ್ಲೂ ಯುವಜನತೆ ಯಕ್ಷಗಾನದ ಕಡೆ ಮುಖ ಮಾಡಿ ಆಸಕ್ತಿಯಿಂದ ಯಕ್ಷಗಾನ ಕಲಿಯುತ್ತಾ ಇರುವುದು ಸಂತೋಷ. ಆದರೆ ಆಧುನಿಕತೆಯಿಂದ ಯಕ್ಷಗಾನದ ಪರಂಪರೆ ಮಾಸಿ ಹೋಗುತ್ತಿರುವುದು ವಿಷಾದನೀಯ. ಸಿನಿಮಾ ಹಾಡುಗಳಿಗೆ ಯಕ್ಷಗಾನ ಕುಣಿಯುವುದು, ಶಾಸ್ತ್ರೀಯವಲ್ಲದ ರೀತಿಯಲ್ಲಿನ ಯಕ್ಷಗಾನದ ನಾಟ್ಯ ಪ್ರದರ್ಶನಗಳು, ಹಾಗೂ ಇನ್ನಿತರ ಅವ್ಯವಸ್ಥೆಗಳನ್ನು ನೋಡುವಾಗ ಬೇಸರವಾಗುತ್ತದೆ.

    ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
    ಈಗ ಜನರು ಯಕ್ಷಗಾನವನ್ನು ಮನೋರಂಜನಾ ಮಾಧ್ಯಮವಾಗಿಯೋ ಮತ್ತೊಂದು ರೀತಿಯಲ್ಲಿ ನೋಡುತ್ತಾರೆ ಹೊರತು, ನಮ್ಮ ಸಂಸ್ಕೃತಿಯ ಒಂದು ಅಂಗವಾಗಿ ಕಲಾರಾಧನೆಯಾಗಿ ನೋಡುವುದಿಲ್ಲ. ಆದರೆ ಹಾಗಾದರೂ ಯಕ್ಷಗಾನವನ್ನು ನೋಡುತ್ತಾರಲ್ಲ ಅನ್ನುವುದು ಸಂತೋಷ.
    ಈಗಿನ ಯುವಜನತೆ ಕಾಲಮಿತಿ, ಗಾನ ವೈಭವ, ನಾಟ್ಯ ವೈಭವಕ್ಕೆ ಮನಸೋತು ಯಕ್ಷಗಾನದತ್ತ ಗಮನ ಹರಿಸುತ್ತ ಇರುವುದು ಅತೀವ ಸಂತಸ. ಈ ಒಂದು ವಿಷಯಕ್ಕಾಗಿ ಕಾಲಮಿತಿ, ಗಾನ ವೈಭವ, ನಾಟ್ಯ ವೈಭವ ಎಂಬ ಪರಿಕಲ್ಪನೆ ಹುಟ್ಟು ಹಾಕಿದವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಆದರೆ ಇದರಿಂದ ಯಕ್ಷಗಾನದ ಮೂಲ ಪರಂಪರೆ ಬಿಟ್ಟು ಹೋಗಬಾರದು ಎನ್ನುವುದು ನನ್ನ ಪ್ರಾರ್ಥನೆ.

    ಪ್ರೇಕ್ಷಕರು ಯಕ್ಷಗಾನವನ್ನು ಕಲೆ ಎಂದು ನೋಡುವುದರ ಜೊತೆಗೆ ಭಜನೆ, ಹರಿಕಥಾ ಸಂಕೀರ್ತನೆಯ ಹಾಗೆಯೇ ಯಕ್ಷಗಾನವೂ ಕೂಡ ಕಲಾ ಮಾತೆಯನ್ನು ಆರಾಧಿಸಲು ಇರುವ ಒಂದು ಭಕ್ತಿಯ ಸಾಧನ ಅನ್ನುವುದನ್ನು ತಿಳಿದುಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ.
    ಯಕ್ಷಗಾನ ಪ್ರೇಕ್ಷಕರು ವಿಮರ್ಶೆ ಮಾಡುವುದು ತಪ್ಪಲ್ಲ. ಆದರೆ ಯಕ್ಷಗಾನದ ಮೂಲ, ಅದರ ಹಿಂದಿನ ಕಷ್ಟ ನಷ್ಟಗಳನ್ನು, ಕಲಾವಿದನ ಸಾಮರ್ಥ್ಯ ಹಾಗೂ ನೋವು, ಸಂಘಟಕರ ಸಂಕಷ್ಟ ಇನ್ನಿತ್ಯಾದಿಗಳನ್ನು ಅರಿಯದೆ ತಮ್ಮದೇ ಆಲೋಚನೆ ಸರಿ ಎನ್ನುವ ಹಾಗೆ ಅತೀವ ವಿಮರ್ಶೆ ಅನಗತ್ಯ ಎನ್ನುವುದು ನನ್ನ ಅಭಿಪ್ರಾಯ. ಆಮೇಲೆ ವಿಮರ್ಶೆಯ ಹೆಸರಿನಲ್ಲಿ ಕಲಾವಿದರನ್ನು ಹೋಲಿಸುವುದು, ತುಲನೆ ಮಾಡುವುದು ಸರಿಯಲ್ಲ. ಪ್ರತಿಯೊಬ್ಬ ಕಲಾವಿದನು ತನ್ನ ಸಾಮರ್ಥ್ಯ, ಅನುಭವ, ವಿದ್ಯೆ ಇವೆಲ್ಲವುಗಳ ಆಧಾರದ ಮೇಲೆ ಪ್ರದರ್ಶನವನ್ನು ಕೊಡುತ್ತಾನೆ ಹೊರತು ಎಲ್ಲರೂ ಒಂದೇ ತರಹ ಇರುವುದಿಲ್ಲ. ಹಾಗಾಗಿ ಕಲಾವಿದನ ತುಲನೆ ಮಾಡುವುದು ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ.

    ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ :-
    ಇನ್ನೂ ಅನೇಕ ವಿದ್ಯಾರ್ಥಿಗಳಿಗೆ ಶಾಸ್ತ್ರೀಯವಾಗಿ ಯಕ್ಷಗಾನ ತರಬೇತಿ ನೀಡಿ, ಶಾಸ್ತ್ರೀಯ ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಸಾಗಿಸುವ ಯೋಜನೆ ಇದೆ.
    ಯುವ ಕಲಾವಿದರನ್ನು ತಾಳಮದ್ದಳೆ ಕ್ಷೇತ್ರಕ್ಕೆ ಎಳೆದು ತಂದು ಗಾನ ವೈಭವ, ನಾಟ್ಯ ವೈಭವದ ಹಾಗೆ ತಾಳಮದ್ದಳೆಗೂ ಅಭಿಮಾನಿಗಳನ್ನು ಸಿದ್ಧಗೊಳಿಸುವುದು ಯೋಜನೆ. ಯಕ್ಷಗಾನ ಆಸಕ್ತ ವಿದ್ಯಾರ್ಥಿಗಳಿಗೆ ಬರೆಯ ನಾಟ್ಯ ಮಾತ್ರವಲ್ಲದೆ ಯಕ್ಷಗಾನದ ಎಲ್ಲಾ ಅಂಗಗಳನ್ನು ತರಬೇತಿ ನೀಡಿ ಅವರನ್ನು ಸಮರ್ಥ ಯಕ್ಷಗಾನ ಕಲಾವಿದನನ್ನಾಗಿ ಮಾಡುವ ಯೋಜನೆ.

    ಯಕ್ಷಗಾನ ಮಾತ್ರವಲ್ಲದೆ ಅನೇಕ ಕ್ಷೇತ್ರಗಳಲ್ಲಿ  ಪ್ರತಿಭೆಯನ್ನು ಹೊಂದಿರುವುದಕ್ಕೆ ಜೆಸಿಐ ವಲಯ ೧೫ ರಿಂದ “ಸಾಧನಾಶ್ರೀ ಪ್ರಶಸ್ತಿ”.
    ಸನ್ಮಾನ ಮತ್ತು ಪ್ರಶಸ್ತಿಗಳು ನನಗೆ ಸಿಕ್ಕಿರುವುದು ತುಂಬಾ ಕಡಿಮೆ. ಯಾಕೆಂದರೆ ನಮ್ಮ ಕಾಲದಲ್ಲಿ ತಂದೆಯವರನ್ನು ಹೊರತುಪಡಿಸಿ ಯಾರೂ ಕೂಡ ನನಗೆ ಪ್ರೋತ್ಸಾಹ ಮಾಡಲಿಲ್ಲ. ಯಕ್ಷಗಾನ ವೇಷ ಮಾಡುವುದಕ್ಕೆ ಹೀಯಾಳಿಸಿದವರು ಹಾಗೂ ಟೀಕೆ ಮಾಡಿದವರೇ ಅನೇಕರು ಹೊರತು ಪ್ರೋತ್ಸಾಹ ಮಾಡಿದವರು ಯಾರೂ ಇಲ್ಲ. ಆಗಿನ ಕಾಲದಲ್ಲಿ ಈಗಿನ ಹಾಗೆ ಸನ್ಮಾನ ಪ್ರೋತ್ಸಾಹಗಳು ಇರಲಿಲ್ಲ, ಈಗೀಗ ಹೆಚ್ಚಿನವರು ಒಂದೆರಡು ವೇಷ ಮಾಡಿದ ಕೂಡಲೇ ಬಿರುದು ಸನ್ಮಾನವನ್ನು ಕೊಡುತ್ತಾರೆ. ಈಗಿನಷ್ಟು ಪ್ರೋತ್ಸಾಹ ಗುರುತಿಸುವಿಕೆ ನಮಗೆ ಇರಲಿಲ್ಲ.

    ಯಕ್ಷಗಾನ ಕ್ಷೇತ್ರದ ವಿಶೇಷ ಸಾಧನೆ:-
    ♦ “ಯಕ್ಷನೂಜಿಪ್ಪಾಡಿ ಕಲಾತಂಡ” ಎನ್ನುವ ಯಕ್ಷಗಾನ ತಂಡ ಕಟ್ಟಿ ತಾಳಮದ್ದಳೆ ಹಾಗೂ ಯಕ್ಷಗಾನ ಬಯಲಾಟಗಳನ್ನು ನೀಡಿರುವುದು.
    ♦ ಯಕ್ಷಗಾನದಲ್ಲಿ ಪ್ರಪ್ರಥಮ ಬಾರಿಗೆ “ವೇಷ ರಹಿತ ಯಕ್ಷಗಾನ” ಎನ್ನುವ ಹೊಸ ಪರಿಕಲ್ಪನೆಯನ್ನು ಹುಟ್ಟು ಹಾಕಿ ಅದಕ್ಕೆ ಬೇಕಾದ ರೂಪು ರೇಷೆಗಳನ್ನು ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಅನೇಕ ಹಿರಿಯ ಕಲಾವಿದರ ನೆರವಿನಿಂದ ಸಿದ್ಧಗೊಳಿಸಿ ಅನೇಕ ಕಡೆ ವೇಷರಹಿತ ಯಕ್ಷಗಾನ ಪ್ರದರ್ಶನವನ್ನು ಯಶಸ್ವಿಯಾಗಿ ನೀಡಿ ಜನಮನ್ನಣೆಯನ್ನು ಗಳಿಸಿರುವುದು.
    ♦ ಕೋವಿಡ್ ಸಂದರ್ಭದಲ್ಲಿ ಆನ್ ಲೈನ್ ಮುಖಾಂತರ “ವೇಷರಹಿತ ಯಕ್ಷಗಾನ” ಪ್ರದರ್ಶನ ನೀಡಿ ದೇಶ ವಿದೇಶದವರೂ ಯಕ್ಷಗಾನದ ಈ ಹೊಸ ಪರಿಕಲ್ಪನೆಯನ್ನು ಆಸ್ವಾದಿಸುವ ರೀತಿ ಮಾಡಿದ ಹಿರಿಮೆ.
    ♦ ಯಕ್ಷ ಕದಂಬ ಹವ್ಯಾಸಿ ಯಕ್ಷಗಾನ ಕಲಾತಂಡ ಜೊತೆ ಕೂಡಿ “ಮನೆ ಮನೆಯಲ್ಲಿ ಯಕ್ಷಗಾನ ತಾಳಮದ್ದಳೆ” ಅಭಿಯಾನವನ್ನು ಮಾಡಿರುವುದು.
    ♦ ಪ್ರಸಕ್ತ ಮಂಚಿಯ ಲಯನ್ಸ್ ಸೇವಾ ಮಂದಿರದಲ್ಲಿ 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ, ಅರ್ಥಗಾರಿಕೆ, ಬಣ್ಣಗಾರಿಕೆ, ರಂಗ ತಂತ್ರದ ತರಬೇತಿಯನ್ನು ನೀಡುತ್ತಿರುವುದು.
    ♦ ಮೇಲ್ಕಾರಿನ ಶಾರದಾ ಕಲಿಕಾ ಕೇಂದ್ರದಲ್ಲಿ ಯಕ್ಷಗಾನ ತರಗತಿ ನಡೆಸುತ್ತಾ ಇರುವುದು.
    ♦ ಶತಮಾನದ ಇತಿಹಾಸವಿರುವ ಪುತ್ತೂರಿನ ವಿವೇಕಾನಂದ ಕಾಲೇಜಿನ ಯಕ್ಷರಂಜಿನಿಯ ನಿರ್ದೇಶಕರಾಗಿ, ಕಾಲೇಜಿನ ಯಕ್ಷಗಾನ ವಿದ್ಯಾರ್ಥಿಗಳಿಗೆ ನಾಟ್ಯ ಅರ್ಥಗಾರಿಕೆ ರಂಗ ತರಬೇತಿಯನ್ನು ನೀಡಿ ಸಮರ್ಥ ತಂಡವನ್ನು ಕಟ್ಟಿದ ಅನುಭವ.

    ♦ಅನೇಕ ಕಡೆಗಳಲ್ಲಿ ಯಕ್ಷಗಾನ ತರಗತಿಯನ್ನು ನಡೆಸಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ರಂಗಪ್ರವೇಶ ಮಾಡಿಸಿದ ಸಾಧನೆ.

    ಬೆಳ್ತಂಗಡಿಯ ಅನೇಕ ದೇವಸ್ಥಾನಗಳಲ್ಲಿ ಬ್ರಹ್ಮವಾಹಕನಾಗಿ (ದೇವರು ಹೊರುವವನಾಗಿ) ಸೇವೆ, ಪೌರೋಹಿತ್ಯ, ಹಾಡುಗಾರಿಕೆ, ಕಿರುಚಿತ್ರದ ನಿರ್ದೇಶನ, ನಟನೆ, ಛಾಯಾಗ್ರಹಣ ಹಾಗೂ ಸಂಕಲನ, ಭಾವಗೀತೆ – ಭಕ್ತಿ ಗೀತೆಗಳ ಗಾಯನ, ಕವನ – ಲೇಖನ ಬರಹ, ಕೌಶಲ್ಯ ತರಬೇತಿಯನ್ನು ನೀಡುವುದು, ಸಭೆ ಸಮಾರಂಭಗಳಲ್ಲಿ ಭಾಷಣಕಾರನಾಗಿ, ಉಪನ್ಯಾಸಕನಾಗಿ ಭಾಗವಹಿಸುವುದು, ಇತ್ಯಾದಿ ಇವರ ಹವ್ಯಾಸಗಳು.

    ಈಗಿನ ಹನುಮಗಿರಿ ಮೇಳ ಅಂದು ಹೊಸನಗರ ಮೇಳ ಆಗಿದ್ದಾಗ ಕಲಾವಿದರು ರಜೆಯಲ್ಲಿ ಇದ್ದಾಗ ಬದಲಿ ಕಲಾವಿದನಾಗಿ ಮೇಳದಲ್ಲಿ ವೇಷ ಮಾಡಿದ ಅನುಭವ. ಹಿರಿಯ ಕಲಾವಿದರ ಕೂಡುವಿಕೆಯ ಯಕ್ಷಗಾನ ಬಯಲಾಟಗಳಲ್ಲಿ ಅನೇಕ ಹಿರಿಯ ವೇಷಧಾರಿಗಳ ಜೊತೆ ಪಾತ್ರ ನಿರ್ವಹಿಸಿದ ಅನುಭವ ಕಿಶನ್ ರಾವ್ ನೂಜಿಪ್ಪಾಡಿ ಅವರದು.

    ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

    • ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.

    Share. Facebook Twitter Pinterest LinkedIn Tumblr WhatsApp Email
    Previous Articleಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದ ‘ಮಣೆ ಮ೦ಚೊದ ಮಂತ್ರಮೂರ್ತಿ’ ನಾಟಕ ಪ್ರದರ್ಶನ
    Next Article ವಿಶೇಷ ಲೇಖನ | ಪತ್ತೇದಾರಿ ಸಾಹಿತ್ಯದ ಪಿತಾಮಹ ಎನ್. ನರಸಿಂಹಯ್ಯ
    roovari

    Add Comment Cancel Reply


    Related Posts

    ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಮತ್ತು ದತ್ತಿ ಪುರಸ್ಕಾರ ಪ್ರದಾನ | ಮೇ 21

    May 20, 2025

    ಉಡುಪಿಯ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ‘ಕಲಾಯತನ’ ಸಾಹಿತ್ಯ ಯಕ್ಷ ಸಂಭ್ರಮ

    May 20, 2025

    ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ತಾಳಮದ್ದಳೆ ಕಾರ್ಯಕ್ರಮ

    May 20, 2025

    ಸರಯೂ ಬಾಲಯಕ್ಷ ವೃಂದ ಮಕ್ಕಳ ಮೇಳದ ‘ಯಕ್ಷ ಪಕ್ಷ’ ರಜತ ಸಂಭ್ರಮ ಉದ್ಘಾಟನೆ

    May 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.