Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪರಿಚಯ ಲೇಖನ | ‘ಪ್ರಖರ ಪ್ರತಿಭೆಯ ಯಕ್ಷಸಿರಿ’ ಡಾ.ಶಿವಕುಮಾರ ಅಳಗೋಡು
    Article

    ಪರಿಚಯ ಲೇಖನ | ‘ಪ್ರಖರ ಪ್ರತಿಭೆಯ ಯಕ್ಷಸಿರಿ’ ಡಾ.ಶಿವಕುಮಾರ ಅಳಗೋಡು

    May 25, 2024No Comments7 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಅಳಗೋಡು ನಿವಾಸಿ ಶ್ರೀಯುತ ಅನಂತಮೂರ್ತಿ ಬಿ.ಟಿ ಹಾಗೂ ಶ್ರೀಮತಿ ಗೀತಾ ಅವರ ಮಗನಾಗಿ 1.05.1995 ರಂದು ಡಾ.ಶಿವಕುಮಾರ ಅಳಗೋಡು ಅವರ ಜನನ. ಕನ್ನಡ ಸಾಹಿತ್ಯದಲ್ಲಿ ದ್ವಿತೀಯ ರ್ಯಾಂಕಿನೊಂದಿಗೆ ಸ್ನಾತಕೋತ್ತರ ಪದವಿ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ಯಕ್ಷಗಾನ ಪೂರ್ವರಂಗ ಅಧ್ಯಯನ’ ವಿಷಯಕ್ಕೆ ಪಿ.ಎಚ್ಡಿ ಪದವಿ ಇವರ ವಿದ್ಯಾಭ್ಯಾಸ. ಡಾ.ಶಿವಕುಮಾರ  ಅಳಗೋಡು ಅವರು ಹವ್ಯಾಸಿ ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥಧಾರಿ, ಛಂದೋಬದ್ದ ಯಕ್ಷ ಕವಿ, ಲೇಖಕರಾಗಿ ಗುರುತಿಸಿಕೊಂಡಿರುವ ಇವರು ಪ್ರಸ್ತುತ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪದವಿ ವಿಭಾಗದ ಕನ್ನಡ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
    ಡಿ.ಎಸ್. ಸುಬ್ರಹ್ಮಣ್ಯ ಮೂರ್ತಿ, ನಿಟ್ಟೂರು ಇವರು ಯಕ್ಷಗಾನದ ಪ್ರಾಥಮಿಕ ಗುರು. ಬಳಿಕ ಮಂಜುನಾಥ ಕುಲಾಲ್ ಐರೋಡಿ, ಪ್ರಸಾದ್ ಕುಮಾರ್ ಮೊಗೆಬೆಟ್ಟು, ಕೃಷ್ಣಮೂರ್ತಿ ಭಟ್ ಬಗ್ವಾಡಿ ಅವರ ಬಳಿ ಯಕ್ಷಗಾನವನ್ನು ಅಭ್ಯಾಸ ಮಾಡಿರುತ್ತಾರೆ ಹಾಗೂ ಶಿಮಂತೂರು ನಾರಾಯಣ ಶೆಟ್ಟಿ ಅವರ ಪಟ್ಟದ ಶಿಷ್ಯರಾದ ಗಣೇಶ್ ಕೊಲೆಕಾಡಿ, ಡಿ.ಎಸ್ ಶ್ರೀಧರ್ ಇವರು ಛಂದಸ್ಸಿನ ಗುರುಗಳು.

    ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಅಭಿನಯಿಸಿದ ಕಂಸವಧೆ ಪ್ರಸಂಗದ ಟೇಪ್ ರೆಕಾರ್ಡರ್ ಕ್ಯಾಸೆಟ್ ಹಾಕಿಕೊಂಡು ಮನೆಯಲ್ಲಿ ಕುಣಿಯುತ್ತಿದ್ದೆ, ಅವರ ಕಂಸನ ಪಾತ್ರದ ಧ್ವನಿಯೇ ನನ್ನನ್ನು ಯಕ್ಷಗಾನದತ್ತ ಬಹುವಾಗಿ ಆಕರ್ಷಿಸಿತು, ನಾವಡರ ಪದ್ಯಗಳ ಧ್ವನಿಸುರುಳಿ ಕಲ್ಪನಾಲೋಕಕ್ಕೆ ಕೊಂಡೊಯ್ಯುತ್ತಿತ್ತು. ಬಳಿಕ ಅಜ್ಜ (ತಾಯಿಯ ತಂದೆ) ಯಕ್ಷಗಾನ ನೋಡಲು ಹೋಗುವಾಗ ಬಾಲ್ಯದಲ್ಲಿ ನಾನೂ ಹಠಮಾಡಿಕೊಂಡು ಹೋಗಿ ನೋಡುತ್ತಿದ್ದೆ. ಆಮೇಲೆ ನನ್ನ ಯಕ್ಷಗಾನದ ಹುಚ್ಚನ್ನು ಕಂಡು ಸೋದರತ್ತೆ ಪಾರ್ವತಿ ಸುಬ್ರಹ್ಮಣ್ಯ ಮೂರ್ತಿಯವರಲ್ಲಿ ಪ್ರಾಥಮಿಕ ಹೆಜ್ಜೆ ಕಲಿಕೆಗೆ ವ್ಯವಸ್ಥೆ ಮಾಡಿದರು. ಮೊದಲಸಲ ಗಣೇಶ ಚತುರ್ಥಿಗೆ (ಆರನೇ ತರಗತಿಯಲ್ಲಿರುವಾಗ) ಪ್ರಾಥಮಿಕ ಶಾಲೆಯಲ್ಲಿ ಕಾಳಿಂಗ ನಾವಡರ ನೀಲಗಗನದೊಳು ಕ್ಯಾಸೆಟ್ ಪದ್ಯಕ್ಕೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ್ದು…
    ಆಮೇಲೆ 2006 ರಲ್ಲಿ ನಮ್ಮ ಗುರುಗಳು ನಿಟ್ಟೂರಿನ ರಾಮೇಶ್ವರ ದೇವಳದಲ್ಲಿ ನನ್ನಂತೆಯೇ ಆಸಕ್ತ ಹುಡುಗರನ್ನು ಸೇರಿಸಿಕೊಂಡು ರಾಮೇಶ್ವರ ಮಕ್ಕಳ ಮೇಳ ಸಂಘಟಿಸಿದರು. ಅದೇ ವರ್ಷದ ಶಾಲಾ ವಾರ್ಷಿಕೋತ್ಸವಂದು ಸುಧನ್ವಾರ್ಜುನ ಪ್ರಸಂಗ ಮಾಡಿಸಿದರು. ಆಮೇಲೆ ಸುಮಾರು 10 ವರ್ಷ ಮಕ್ಕಳ ಮೇಳದಲ್ಲಿ ಕಂಸವಧೆಯ ಕಂಸ, ಜಾಂಬವತಿಯ ಜಾಂಬವಂತ, ಗುರುದಕ್ಷಿಣೆಯ ದ್ರುಪದ, ಮೈಂದ-ದ್ವಿವಿಧದ ಬಲರಾಮ ಮೊದಲಾದ ಪ್ರಮುಖ ಪಾತ್ರಗಳ ನಿರ್ವಹಣೆ- ನಾಡಿನ ಹಲವು ಕಡೆಗಳಲ್ಲಿ. ಆಮೇಲೆ ನಮ್ಮ ಗುರುಗಳ ಅಣ್ಣನಾದ ಹಿರಿಯ ಪ್ರಸಂಗಕವಿ ಶ್ರೀಧರ ಡಿ.ಎಸ್ ಅವರು ಮಕ್ಕಳ ಮೇಳಕ್ಕಾಗಿಯೇ ರಚಿಸಿದ ಕುಜೃಂಭ ಕಂದರ ಪ್ರಸಂಗದಲ್ಲಿ ಕುಜೃಂಭಾಸುರ ಹಾಗೂ ವೈಶಾಲಿನೀ ಪರಿಣಯ ಪ್ರಸಂಗದ ದೃಢಕೇಶನ ಪಾತ್ರ ಮೆಚ್ಚುಗೆಗೆ ಪಾತ್ರವಾಯ್ತು. ಶ್ರೀಧರರ ಪ್ರಸಂಗಗಳು ನನ್ನೊಳಗಿನ ಪ್ರಸಂಗ ರಚನೆಯ ಆಸಕ್ತಿಯನ್ನು ಹೆಚ್ಚಿಸಿತು. ಹೀಗೆ ಡಾ.ಶಿವಕುಮಾರ  ಅಳಗೋಡು ಅವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು.

    ರಂಗಕ್ಕೆ ಹೋಗುವ ಮೊದಲು ಪೂರ್ಣವಾಗಿ ಪ್ರಸಂಗ ಸಾಹಿತ್ಯವನ್ನು ಅಧ್ಯಯನ ಮಾಡುವೆ. ಆಮೇಲೆ ಆ ಪ್ರಸಂಗಕ್ಕೆ ಸಂಬಂಧಿಸಿದ ಪೌರಾಣಿಕ ವಿಷಯದ ಪರಾಮರ್ಶನ ಗ್ರಂಥ, ಕೃತಿ, ಪುರಾಣನಾಮ ಚೂಡಾಮಣಿ, ಮೂಡಂಬೈಲು ಶಾಸ್ತ್ರಿಗಳ ಭಾಗವತ, ರಾಮಾಯಣ, ಮಹಾಭಾರತ, ಭಾಗವತಕ್ಕೆ ಸಂಬಂಧಿಸಿದ ಕೃತಿ ಪರಾಮರ್ಶೆ. ಆಮೇಲೆ ಹಿರಿಯ ಕಲಾವಿದರು ಅಭಿನಯಿಸಿದ ಒಂದೆರಡು ಪ್ರಸಂಗವನ್ನು ಯೂಟ್ಯೂಬಿನಲ್ಲಿ ನೋಡಿ ಪ್ರಸಂಗದ ನಡೆಯನ್ನು ಅರಿತುಕೊಳ್ಳುವೆ. ರಂಗಪ್ರವೇಶಕ್ಕೆ ಮುನ್ನ ಆದಿನದ ಭಾಗವತರಲ್ಲಿ ಬಳಸುವ ಪದ್ಯ, ಸನ್ನಿವೇಶದ ಬಗ್ಗೆ ತಿಳಿದುಕೊಳ್ಳುವೆ. ಎದುರು ವೇಷದ ಕಲಾವಿದರ ಜೊತೆ ಮಾತುಕತೆ ಇಷ್ಟು ಮಾಡಿದ ಮೇಲೆ ರಂಗಪ್ರವೇಶ ಮಾಡುತ್ತೇನೆ ಎಂದು ಹೇಳುತ್ತಾರೆ ಡಾ.ಶಿವಕುಮಾರ ಅಳಗೋಡು.

    ಎಲ್ಲಾ ಪೌರಾಣಿಕ ಪ್ರಸಂಗಗಳೂ ಇವರ ಇಷ್ಟದ ಪ್ರಸಂಗ.
    ಕಂಸವಧೆಯ ಕಂಸ, ಜಾಂಬವತಿಯ ಜಾಂಬವಂತ, ಯಕ್ಷಲೋಕ ವಿಜಯದ ಪ್ರದೀಪ, ಲವಕುಶದ ಲವ, ಪಾರಿಜಾತದ ಕೃಷ್ಣ, ಅಭಿಮನ್ಯು, ಸುಧನ್ವಾರ್ಜುನದ ಅರ್ಜುನ, ಸುಧನ್ವ, ರಾವಣ ವಧೆಯ ರಾಮ, ಇಂದ್ರಜಿತು, ವೃಷಸೇನ ಹೀಗೆ ಹಲವು ಇವರ ನೆಚ್ಚಿನ ವೇಷಗಳು.

    ಡಾ.ಶಿವಕುಮಾರ ಅಳಗೋಡು ಅವರು ಬರೆದ ಪ್ರಸಂಗಗಳು:-
    ೧. ಯುಗ್ಮ ತಾರೆ (ಪ್ರದರ್ಶನಗೊಂಡಿದೆ ಆದರೆ ಅಪ್ರಕಟಿತ)
    ೨. ಮಹೀಂದ್ರ ಮಹಾಭಿಷ.
    ೩. ದೇವಸೇನಾ ಪರಿಣಯ (ಬೆಂಗಳೂರಿನ ಯಕ್ಷಸಿಂಚನ ಟ್ರಸ್ಟ್ ನಡೆಸಿದ ರಾಜ್ಯಮಟ್ಟದ ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ವಿಜೇತ ಕೃತಿ)
    ೪. ದಂಡಕ ದಮನ.
    ೫. ಬಾಣದ್ ಸೇತ್ವೆ (ಹವ್ಯಕ ಕನ್ನಡ ಭಾಷೆಯಲ್ಲಿ ಛಂದೋಬದ್ಧವಾಗಿ ರಚಿಸಿದ ಪ್ರಸಂಗ. ಹಟ್ಟಿಯಂಗಡಿ ರಾಮಭಟ್ಟರ ಶರಸೇತು ಬಂಧ ಪ್ರಸಂಗದ ಹವ್ಯಕ ರೂಪ).
    ೬. ಯವಕ್ರೀತ ವೃತ್ತಾಂತ (ಬೆಂಗಳೂರಿನ ಯಕ್ಷಸಿಂಚನ ಟ್ರಸ್ಟ್ ನಡೆಸಿದ ರಾಜ್ಯಮಟ್ಟದ ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿ ವಿಜೇತ ಕೃತಿ. ಅಪ್ರಕಟಿತ).
    ೭. ಶ್ರೀಕೃಷ್ಣ ಕಾರುಣ್ಯ  (ಇದು ಅಪ್ರಕಟಿತ).
    ♦️ ಪ್ರಥಮ ವರ್ಷದ ಪದವಿ (ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ) ವಿದ್ಯಾರ್ಥಿಯಾಗಿರುವಾಗಲೇ ‘ಯುಗ್ಮ ತಾರೆ’ ಎನ್ನುವ ಸಾಮಾಜಿಕ ಪ್ರಸಂಗ ರಚಿಸಿ ನಿಟ್ಟೂರಿನ ಪರಿಸರದಲ್ಲಿ ಮಕ್ಕಳ ಮೇಳದಿಂದ ಯಶಸ್ವಿ ಪ್ರಯೋಗ.
    ♦️ ದ್ವಿತೀಯ ಪದವಿಯಲ್ಲಿ ಮಹೀಂದ್ರ ಮಹಾಭಿಷ ಎನ್ನುವ ಛಂದೋಬದ್ಧ ಪೌರಾಣಿಕ ಪ್ರಸಂಗ ರಚನೆ ಹಲವು ಪ್ರದರ್ಶನ.
    ♦️ ತೃತೀಯ ಪದವಿಯಲ್ಲಿ ಪದ್ಮಶ್ರೀ ಚಿಟ್ಟಾಣಿಯವರ ಮೇಳದಿಂದ ಆ ಪ್ರಸಂಗದ ಸಿಡಿ ಮಾಡಿಸಿ ಅನಾವರಣ.

    ಇವರು ಬರೆದ ಎಲ್ಲಾ ಪ್ರಸಂಗಗಳೂ ಛಂದೋಬದ್ಧವಾದ ಪದ್ಯಗಳಿಂದ ಕೂಡಿವೆ, ಪ್ರಸಂಗಗಳಲ್ಲಿ ಒಟ್ಟು 80 ಬಗೆಯ ಛಂದಸ್ಸುಗಳನ್ನು ಬಳಸಲಾಗಿದೆ.
    ಪಾರ್ತಿಸುಬ್ಬ ಬಳಸಿದ 25 ಸಾಲುಗಳ ಗೌಳಿಪಂತು ಏಕ ಛಂದಸ್ಸಿನಲ್ಲಿಯೂ ಸೊಗಸಾಗಿ ಪದ್ಯ ರಚಿಸಲಾಗಿದೆ.
    ಇವರು ಯಕ್ಷಗಾನ ಪ್ರಸಂಗವನ್ನು ರಚನೆ ಮಾಡುವುದರ ಜೊತೆಗೆ ಸಾಹಿತ್ಯದ ಬೇರೆ ಬೇರೆ ಪ್ರಕಾರದಲ್ಲಿ ಹಲವು ಕೃತಿಯನ್ನು ರಚನೆಯನ್ನು ಮಾಡಿರುತ್ತಾರೆ.
    ಮೊದಲ ಸಣ್ಣ ಕಥಾ ಸಂಕಲನ “ಸ್ನೇಹ ಲೋಕ” 2013ರಲ್ಲಿ ಪ್ರಕಟವಾಗಿತ್ತು.
    ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಕೊನೆಯ ದಿನಗಳನ್ನು ತುಂಬಾ ಹತ್ತಿರದಿಂದ ನೋಡಿದವರು ಅವರ ಜೀವನದ ಕೊನೆಯ ಐದು ವೇಷವನ್ನು ನಿರ್ವಹಣೆ ಮಾಡಿದ್ದು ಬಂಗಾರಮಕ್ಕಿ ಕ್ಷೇತ್ರದಲ್ಲಿ. ಅದರಲ್ಲಿ ಇವರು ಬರೆದ ಮಹೀಂದ್ರ ಮಹಾಭಿಷ ಪ್ರಸಂಗದ ಬ್ರಹ್ಮನ ಪಾತ್ರವನ್ನು ಮೂರನೇ ದಿನ ಅವರು ನಿರ್ವಹಿಸಿದ್ದರು. ಅದು ಅದ ಮೇಲೆ ಅವರು ಎರಡೇ ದಿನ ಅವರು ವೇಷ ಮಾಡಿದು ಕೊನೆಗೆ ಮಣಿಪಾಲದ ಆಸ್ಪತ್ರೆ ಸೇರಿದರು ಆಮೇಲೆ ಅವರ ಅಂತ್ಯಕ್ರಿಯೆವರೆಗಿನ “ಚಿಟ್ಟಾಣಿ ಅವರ ಕೊನೆಯ ದಿನಗಳು” ಎಂಬ ಕೃತಿ 2018 ರಲ್ಲಿ ಬಿಡುಗಡೆಯಾಯಿತು. ಈ ಕೃತಿಯ ವಿಶೇಷತೆ ಏನು ಎಂದರೆ ಬಿಡುಗಡೆಯಾಗುವ ಮುನ್ನವೇ 500 ಪ್ರತಿಗಳು ಮಾರಾಟವಾಗಿದೆ. ಬಿಡುಗಡೆಯಾದ ಮೇಲೆ 300 ಪ್ರತಿಯನ್ನು ಕರ್ನಾಟಕ ಸರಕಾರ  ಕೊಂಡುಕೊಂಡು ಬೇರೆ ಬೇರೆ ಗ್ರಂಥಾಲಯಗಳಿಗೆ ಕಳಿಸಿದೆ.

    “ಲೌಕಿಕದ ಬೆಳಗು” ಇದು ಪಂಪನ ವಿಕ್ರಮಾರ್ಜುನ ವಿಜಯಕ್ಕೆ ಸಂಬಂಧಪಟ್ಟ ಒಂದು ಪುಸ್ತಕ. ಇದರ 300 ಪ್ರತಿಯನ್ನು ಕರ್ನಾಟಕ ಸರಕಾರ  ತೆಗೆದುಕೊಂಡು ಬೇರೆ ಬೇರೆ ಗ್ರಂಥಾಲಯಗಳಿಗೆ ಕಳಿಸಿದೆ.

    “ಮುನ್ನುಡಿ” ಎಂಬ ಲಲಿತಾ ಪ್ರಬಂಧದ ಒಂದು ಸಂಕಲನ ಪುಸ್ತಕದ 300 ಪ್ರತಿಯನ್ನೂ ಕರ್ನಾಟಕ ಸರಕಾರ  ಕೊಂಡುಕೊಂಡು ಬೇರೆ ಬೇರೆ ಗ್ರಂಥಾಲಯಗಳಿಗೆ ಕಳಿಸಿದೆ.

    ಮುನ್ನುಡಿ ಒಟ್ಟು 1000 ಪ್ರತಿಗಳು ಮಾರಾಟವಾಗಿವೆ. ಒಟ್ಟು ಸೇರಿಸಿ ಈವರೆಗೆ ಒಟ್ಟು 9 ಪುಸ್ತಕಗಳು ಪ್ರಕಟಗೊಂಡಿರುತ್ತದೆ. ಹಾಗೂ ನಾಡಿನ ಅನೇಕ ಮಾಧ್ಯಮದಲ್ಲಿ 15ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿರುತ್ತದೆ.

    ಮಹೀಂದ್ರ ಮಹಾಭಿಷ ಪ್ರಸಂಗದಲ್ಲಿ ಗಂಗೆಯ ನಾಟ್ಯಕ್ಕೆ ಬಳಸಿದ “ಪುರಹರ ಶಶಿಧರ” ಪದ್ಯ ಕಾವ್ಯಶ್ರೀಯವರ ಕಂಠದಲ್ಲಿ ಬೇರೆ ಬೇರೆ ವಾಹಿನಿಗಳಲ್ಲಿ ಸುಮಾರು ಐವತ್ತು ಲಕ್ಷಕ್ಕಿಂತ ಅಧಿಕ views ಕಂಡಿದೆ. ಮಹೀಂದ್ರ ಮಹಾಭಿಷ ಚಿಟ್ಟಾಣಿಯವರ ಮೇಳದಿಂದ ಎರಡು ಬಾರಿ, ಧಾರೇಶ್ವರ ಭಾಗವತರ ತಂಡದಿಂದ ಒಂದು ಸಲ ಉಡುಪಿ ರಾಜಾಂಗಣದಲ್ಲಿ , ಹಾಗೂ ಅನೇಕ ಸಂಘಗಳ ಆಟದಲ್ಲಿ ಬಳಸಿಕೊಂಡಿದ್ದಾರೆ.

    ಡಾ. ಶಿವಕುಮಾರ  ಅಳಗೋಡು ಅವರು ಬರೆದ ದೇವಸೇನಾ ಪರಿಣಯ ಪ್ರಸಂಗವೂ ಎರಡು ಪ್ರದರ್ಶನ ಕಂಡಿದೆ.
    ದಂಡಕ ದಮನ ಪ್ರಸಂಗ ಯಕ್ಷಗಾನ ಹಾಗೂ ತಾಳಮದ್ದಳೆಯಾಗಿ ಪ್ರಸಿದ್ಧ ಪ್ರಸಂಗ, ರಾಘವೇಂದ್ರ ಆಚಾರ್ ಜನ್ಸಾಲೆಯವರ ಸಾರಥ್ಯದಲ್ಲಿ ಕೊಂಡದಕುಳಿ, ತೋಟಿ, ಚಪ್ಪರಮನೆಯವರ ಅಭಿನಯದಲ್ಲಿ ಪ್ರದರ್ಶನ, ಧಾರೇಶ್ವರರ ಯಕ್ಷಬಳಗದಲ್ಲಿ ಜಲವಳ್ಳಿ ವಿದ್ಯಾಧರ, ನೀಲ್ಕೋಡು, ಅಶೋಕ್ ಭಟ್, ಚಂದ್ರಕಾಂತ ಮೂಡುಬೆಳ್ಳೆಯವರ ಭಾಗವಹಿಸುವಿಕೆಯಲ್ಲಿ ಪ್ರದರ್ಶನ ಹಾಗೂ ಹತ್ತಾರು ಕಡೆಗಳಲ್ಲಿ ತಾಳಮದ್ದಳೆ ಪ್ರಸಂಗವಾಗಿಯೂ ಬಳಕೆ, ಬಾಣದ್ ಸೇತ್ವೆ 8 ಬಾರಿ ತಾಳಮದ್ದಳೆಯಾಗಿ ಪ್ರದರ್ಶನ.

    ಪದ್ಯ ಬರೆಯುವ ಬಗ್ಗೆ ನಿಮ್ಮ ನಿಲುವು ಏನು:-
    ಪದ್ಯ ಬರೆಯಬೇಕಿದ್ದರೆ ಬರೆಯುವವರಿಗೆ ಛಂದಸ್ಸು ಚೆನ್ನಾಗಿ ಗೊತ್ತಿರಬೇಕು. ಯಕ್ಷಗಾನದಲಿ ಸುಮಾರು‌ 150 ಕ್ಕೂ ಹೆಚ್ಚು ಛಂದಸ್ಸುಗಳಿವೆ. ಅಷ್ಟನ್ನೂ ತಿಳಿಯುವುದು ಅಸಾಧ್ಯವಾದರೂ ಪ್ರಸಂಗ ರಚನೆಗೆ ಬೇಕಾಗುವ ಪ್ರಧಾನ ಛಂದಸ್ಸು ಅಥವಾ ಮಟ್ಟುಗಳನ್ನು ಅರಿತಿರಬೇಕು. ಈಗ ಹೆಚ್ಚಿನವರು ಕೇವಲ ಕಥೆ ಬರೆದುಕೊಟ್ಟು ತಾವೇ ಪ್ರಸಂಗಕರ್ತರೆಂದು ಹೇಳಿಕೊಳ್ಳುತ್ತಾರೆ. ಕಥೆ ಬರೆದವರು ಕಥಾಕರ್ತ ಅಷ್ಟೆ. ಮಾತ್ರಾಗಣ, ಅಂಶಗಣಗಳ ಪರಿಚಯ ಚೆನ್ನಾಗಿ ಇರಬೇಕು. ಹಳಗನ್ನಡ, ನಡುಗನ್ನಡ ಭಾಷೆಯನ್ನು ಔಚಿತ್ಯಪೂರ್ಣವಾಗಿ ಬಳಸುವುದು ಗೊತ್ತಿರಬೇಕು. ಪಾತ್ರಗಳ ಮರ್ಮ, ರಂಗದ ನಡೆ, ಸನ್ನಿವೇಶಕ್ಕೆ ಅನುಗುಣವಾಗಿ ಮಟ್ಟುಗಳ ಪದ್ಯ ರಚಿಸಬೇಕು. ಪ್ರಾಸಾಕ್ಷರ ಸುಲಲಿತವಾಗಿ ಬರಬೇಕು. ಅದು ಕರ್ಕಶವಾಗಿ, ಅಸಂಬದ್ಧವಾಗಿ ಇರಬಾರದು… ಪೂರ್ವಕವಿಗಳ ಪ್ರಸಂಗವನ್ನು ಪರಿಶೀಲಿಸಿದ ಜ್ಞಾನವಿರಬೇಕು. ಕಥೆಯನ್ನು ಸುಂದರವಾಗಿ ಪದ್ಯ ಸಾಹಿತ್ಯದ ಮೂಲಕ ಹೇಳುವಾಗ ಅಲ್ಲಿ ವಿಷಯ, ವಸ್ತು ಮುಖ್ಯವಾಗಿದ್ದು ಸಂಭಾಷಣೆಗೂ, ಅಭಿನಯಕ್ಕೂ ಹೊಂದುವ ಹಾಗಿರಬೇಕು.

    ಹೊಸ ಪ್ರಸಂಗಗಳ ಬಗ್ಗೆ ಆಕ್ಷೇಪಗಳಿವೆ, ಅದರ ಬಗ್ಗೆ ನಿಮ್ಮ ಅಭಿಪ್ರಾಯ:-
    ಹೊಸ ಪ್ರಸಂಗಗಳು ಈಗಾಗಲೇ ಯಕ್ಷಗಾನದಲ್ಲಿ  ಹಲವು ದಶಕಗಳಿಂದ ಯಕ್ಷಗಾನ ರಂಗದಲ್ಲಿ ಕಾಣಿಸಿಕೊಳ್ಳುತ್ತಿವೆ.  ಐತಿಹಾಸಿಕ, ಸಾಮಾಜಿಕ ಚಂದಮಾಮ ಆಧಾರಿತ ಕಥೆಯನ್ನು ಹಲವು ಜನ ರಂಗದಲ್ಲಿ ತಂದಿದ್ದಾರೆ. ಈವರೆಗಿನ ಪ್ರಸಂಗಕರ್ತರೂ ಪ್ರಸಂಗವನ್ನು ಛಂದೋ ಬದ್ಧವಾಗಿ ಪೌರಾಣಿಕ ಚೌಕಟಿಕೆಗೆ ತಂದಿರುವುದು ಗಮನಾರ್ಹವಾಗಿ ಕಾಣಿಸುತ್ತದೆ. ಆದರೆ ಇತ್ತೀಚಿನ ದಿನದಲ್ಲಿ ಸಿನಿಮಾ ಕಥೆಯನ್ನು ಯಥಾವತ್ತಾಗಿ ರಂಗದಲ್ಲಿ ತಂದು ಪ್ರಯೋಗ ಮಾಡುವ ಸ್ಥಿತಿಯಾಗಿದೆ. ಪ್ರೇಕ್ಷಕರನ್ನು ರಂಜಿಸಬೇಕು ಎಂದು ಯಾವುದು ಯಾವುದು ಅಸಂಬದ್ಧವನ್ನು ತುರುಕುತ್ತಿದ್ದಾರೆ. ಕಥೆಯನ್ನು ಬರೆದು ಕೊಟ್ಟವರು ಅದು ಯಾವುದು ಕಡೆಯಿಂದ ತಂದಿರಬಹುದು ಅಥವಾ ಎಡಿಟಿಂಗ್ ಮಾಡಿರಲಿ, ಆ ವ್ಯಕ್ತಿಯೇ ತಾವು ಪ್ರಸಂಗಕರ್ತರು ಎಂದು ಹೇಳಿ ಪೋಸ್ಟರ್ ನಲ್ಲಿ ಹಾಕಿಸಿಕೊಳ್ಳುವುದು ಬಂದಿದೆ. ನಿಜವಾಗಿ ಪದ್ಯವನ್ನು ಬರೆದವರು ಮಾತ್ರ ಪ್ರಸಂಗಕರ್ತರು ಎಂದು ಕರೆಸಿಕೊಳ್ಳುತ್ತಾರೆ. ಕಥೆಯನ್ನು ಕೊಟ್ಟವರು ಕಥಾಕರ್ತ ಎಂದು ಹೇಳಬಹುದು. ಅದು ಬಿಟ್ಟು ಕಥೆಯನ್ನು ಕೊಟ್ಟವರು ಪ್ರಸಂಗಕರ್ತರು ಎಂದು ಕರೆಯುವುದು ಸರಿಯಲ್ಲ ಎಂದು ಇವರ ಅಭಿಪ್ರಾಯ.
    ಎಲ್ಲಾ ಪೌರಾಣಿಕ ಪ್ರಸಂಗಗಳು ರಂಗದ ಮೇಲೆ ಪ್ರಸ್ತುತ ಬಳಕೆಯಾಗುತ್ತಿಲ್ಲ. ಸಾಮಾಜಿಕ ಪ್ರಸಂಗಗಳನ್ನು ಕೂಡ ಒಂದು ಮೇಳದ ಒಂದು ವರ್ಷದ ತಿರುಗಾಟಕ್ಕೆ ಎಂದು ಬರೆದು ಕೊಡುತ್ತಾರೆ‌. ಅವುಗಳಲ್ಲಿ ಕೆಲವು ಪ್ರಸಂಗಗಳು ಒಬ್ಬರಿಂದ ಕಥೆ, ಮತ್ತೊಬ್ಬರಿಂದ ಪದ್ಯ ರಚಿಸಿಕೊಂಡು ರೂಪುಗೊಂಡಿರುತ್ತವೆ‌ ಯಾರ ಕೆಲವು ಸಂದರ್ಭಗಳಲ್ಲಿ ಪ್ರಸಂಗಗಳ ಪದ್ಯಗಳು ಛಂದಸ್ಸಿನಲ್ಲಿ ಇರುವುದಿಲ್ಲ. ಆಗ ಪದ್ಯವನ್ನು ಭಾಗವತರು ಬಹಳ ಕಷ್ಟ ಪಟ್ಟು ಹಾಡುವುದೂ, ಹೊಂದಾಣಿಕೆ ಮಾಡಿಕೊಂಡು ಹಾಡುವುದೂ ಮಾಡಬೇಕಾಗುತ್ತದೆ. ಕಲಾವಿದರು ಅನಿವಾರ್ಯ ಕಾರಣದಿಂದ ಕುಣಿಯಬೇಕು ಎಂದು ಕುಣಿಯುತ್ತಾರೆ. ಕೆಲವು ಪ್ರಸಂಗಗಳಲ್ಲಿ ಯಾವ ಸತ್ವವು ನೀತಿಯು ಇರುವುದಿಲ್ಲ. ಒಳ್ಳೆಯ ರೀತಿಯಲ್ಲಿ ಛಂದೋಬದ್ಧವಾಗಿ ಬರೆಯುವ ಸಾಮಾಜಿಕ ಪ್ರಸಂಗಕರ್ತರೂ ಇದ್ದಾರೆ. ಆದರೆ ಹೆಚ್ಚಿನ ಪ್ರಸಂಗಕರ್ತರು ಅದನ್ನು ಅನುಸರಿಸದೆ ಇರುವುದು ವಿಷಾದನೀಯ. ಕೇವಲ ಒಂದು ಮೇಳದ ಒಂದು ವರ್ಷದ ತಿರುಗಾಟಕ್ಕೆ ಆ ಪ್ರಸಂಗವನ್ನು ಬಳಸುತ್ತಾರೆ. ಸಾಮಾಜಿಕ ಪ್ರಸಂಗಗಳಿಗೆ ಅಯಸ್ಸು ಎಷ್ಟು ಕೇಳಿದರೆ, ಒಂದು ತಿರುಗಾಟ ಮಾತ್ರ ಎಂದು ಅಗಿದೆ. ಕೆಲವು ಪ್ರಸಂಗಗಳು ಆ ನಂತರವೂ ಬಳಕೆಯಾಗಿದೆ. ಯಾಕೆ ಬಳಕೆಯಾಗಿದೆ ಅಂದರೆ ಆ ಪ್ರಸಂಗದ ಹಿರಿತನ ಅಷ್ಟು ಇದ್ದರೆ ಮಾತ್ರ ಇಲ್ಲದಿದ್ದರೆ ಆ ಮೇಳದ ಆ ವರ್ಷದ ತಿರುಗಾಟ ಮುಗಿದ ಮೇಲೆ ಆ ಪ್ರಸಂಗಗಳು ಪ್ರದರ್ಶನ ಕಾಣುವುದಿಲ್ಲ. ಆದರೆ ಪೌರಾಣಿಕ ಪ್ರಸಂಗಗಳು ಸಾಧಾರಣ 250 ರಿಂದ 300 ವರ್ಷಗಳ ಹಿಂದೆ ರಚನೆ ಮಾಡಿದ ಪ್ರಸಂಗಗಳು. ಇವತ್ತಿಗೂ ರಂಗದ ಮೇಲೆ ಸಾವಿರಾರು ಪ್ರದರ್ಶನವನ್ನು ಕಂಡಿವೆ.

    ತಾಳಮದ್ದಳೆ ಕ್ಷೇತ್ರದಲ್ಲಿ ಆಸಕ್ತಿ ಇದೆಯಾ? ಆ ಬಗ್ಗೆ ಮುಂದಿನ ಯೋಜನೆಗಳೇನು:-
    ತಾಳಮದ್ದಳೆ ಕ್ಷೇತ್ರದಲ್ಲಿ ವಿಶೇಷವಾದ ಆಸಕ್ತಿ ಇದೆ. ತಿಂಗಳಿಗೆ ಸಾಮಾನ್ಯ 5- 6 ತಾಳಮದ್ದಳೆಗಳಲ್ಲಿ ಭಾವಹಿಸುತ್ತೇನೆ. ತಾಳಮದ್ದಳೆ ಕ್ಷೇತ್ರದಲ್ಲಿ ಅನೇಕ ಪೌರಾಣಿಕ ಪಾತ್ರವನ್ನು ನಿರ್ವಹಿಸಿದ್ದೇನೆ. ತಾಳಮದ್ದಳೆ ಕ್ಷೇತ್ರದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕು ಹಾಗೂ ಪ್ರಸಿದ್ಧ ತಾಳಮದ್ದಳೆ ಅರ್ಥಧಾರಿಗಳ ಜೊತೆಗೆ ವೇದಿಕೆಯನ್ನು ಹಂಚಿಕೊಳ್ಳಬೇಕು ಎಂದು ಬಯಕೆ ಇದೆ.

    ಯಕ್ಷಗಾನದ ಇಂದಿನ ಸ್ಥಿತಿ ಗತಿ:-
    ಹಿಂದೆ ಯಕ್ಷಗಾನ ತುಂಬಾ ಬಡತನದಿಂದ ಕೂಡಿದ ಕಲಾವಿದರ ಕಲೆಯಾಗಿತು. ವೇಷಭೂಷಣ, ಕುಣಿತ ಆ ಮಟ್ಟದ ಉತ್ತುಂಗದ ಸ್ಥಿತಿ ಕಂಡಿರಲಿಲ್ಲಿ ವೇಷಭೂಷಣಕ್ಕೆ ಮನೆಯಲ್ಲಿ ಇದ್ದ ಬಟ್ಟೆಯನ್ನೇ ಬಳಸುತ್ತಿದ್ದರು. ಆದರೆ ಇಂದು ಯಕ್ಷಗಾನ ಎಲ್ಲಾ ರೀತಿಯಲ್ಲಿ ಶ್ರೀಮಂತ ಕಲೆಯಾಗಿದೆ. ಕಲಾವಿದರಿಗೆ ಸಂಭಾವನೆ, ಆಹಾರ, ರಂಗಸಜ್ಜಿಕೆ ಚೆನ್ನಾಗಿದೆ. ಆದರೆ ಯಕ್ಷಗಾನದ ಗುಣಮಟ್ಟ ಕಡಿಮೆಯಾಗುತ್ತಿದೆ. ಯಕ್ಷಗಾನ ನಮ್ಮ ದೇಶದಲ್ಲಿ ಅಲ್ಲದೇ ವಿದೇಶದಲ್ಲಿಯೂ ಪ್ರದರ್ಶನ ಕಾಣುತ್ತಿದೆ.

    ಯಕ್ಷಗಾನ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
    ಯಕ್ಷಗಾನಕ್ಕೆ ಇಂದು ಪ್ರೇಕ್ಷಕರು ಬರ್ತಾ ಇಲ್ಲ ಎಂಬ ದೊಡ್ಡ ಕೂಗು ಕೇಳಿಸುತ್ತಿದೆ. ಎಲ್ಲಾ ಮೇಳದಲ್ಲಿ. ಪ್ರೇಕ್ಷಕರು ಯಾಕೆ ಬರುತ್ತಿಲ್ಲ ಎಂದು ಹಿರಿಯರನ್ನು ಕೇಳಿದಾಗ  ಯಕ್ಷಗಾನದಲ್ಲಿ ಏನು ಇದೆ ಬಾರಿ ಕುಣಿಯುತ್ತಾರೆ, ಸಿನಿಮಾ ಕಥೆಯನ್ನು ಮಾಡುತ್ತಾರೆ ಸಾಹಿತ್ಯದಲ್ಲಿ ಬೆಲೆ ಇಲ್ಲ, ಕಲಾವಿದರಲ್ಲಿ ಸತ್ವ ಇಲ್ಲ ಹಾಗಾಗಿ ನಾವು ನೋಡುವುದು ಏನು ಇದೆ. ಪ್ರೇಕ್ಷಕರು ಬೇಡಿಕೆ ಇಡುತ್ತಾರೆ. ನಾವು ಏನನ್ನು ಮಾಡಲಿಕೆ ಹೋಗುತ್ತೇವೆ ಎಂದರೆ ಅದು ಸರಿ ಅಲ್ಲ ಹಾಗಾಗಿ ಪ್ರೇಕ್ಷಕರು ಕೂಡ ಕಲಾವಿದರನ್ನು ಆರಾಧಿಸದೆ ಕಲೆಯನ್ನು ಆರಾಧಿಸಬೇಕು.

    ಸಿಗಂದೂರು, ಗೋಳಿಗರಡಿ, ಶನೀಶ್ವರ ಮೇಳ, ಚಿಟ್ಟಾಣಿಯವರ ನೇತೃತ್ವದ ಬಂಗಾರಮಕ್ಕಿ ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಕಾರಣಗಿರಿ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ ಡಾ.ಶಿವಕುಮಾರ ಅಳಗೋಡು.

    ಸನ್ಮಾನ ಹಾಗೂ ಪ್ರಶಸ್ತಿಗಳು.
    ♦️ 2017ರಲ್ಲಿ ಸಾಹಿತ್ಯ ಸಾಧನೆ ಗುರುತಿಸಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಜ್ಯೋತಿ ಪುರಸ್ಕಾರ.
    ♦️ 2019ರಲ್ಲಿ ಬೆಂಗಳೂರಿನ ಯಕ್ಷಸಿಂಚನ ಟ್ರಸ್ಟ್ ದಶಮಾನೋತ್ಸವದಲ್ಲಿ ರಾಜ್ಯಮಟ್ಟದ ಪ್ರಸಂಗ ರಚನಾ ಸ್ಪರ್ಧೆಯ ಪ್ರಥಮ ಪ್ರಶಸ್ತಿ.
    ♦️ 2021ರಲ್ಲಿ ಯಕ್ಷಸಿಂಚನ ಟ್ರಸ್ಟ್ ಸಂಸ್ಥೆಯಿಂದ ರಾಜ್ಯಮಟ್ಟದ ಪ್ರಸಂಗ ರಚನಾ ಸ್ಪರ್ಧೆಯ ದ್ವಿತೀಯ ಬಹುಮಾನ ಗಳಿಸಿದ ನೆನಪಿನ ಪ್ರಶಸ್ತಿ.
    ♦️ ಬೆಂಗಳೂರಿನ ಹವ್ಯಕ ಸಭಾದಿಂದ ಪ್ರಶಸ್ತಿ. ಹಾಗೂ ಅನೇಕ ಸಂಘ ಸಂಸ್ಥೆಗಳಿಂದ ಗೌರವ ಸಂಮಾನ ಡಾ.ಶಿವಕುಮಾರ ಅಳಗೋಡು ಅವರಿಗೆ ಸಿಕ್ಕಿರುತ್ತದೆ.

    ತಂದೆ, ತಾಯಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಡಾ.ಶಿವಕುಮಾರ ಅಳಗೋಡು.

    ಇವರಿಗೆ ಇವರು ನಂಬಿರುವ ಬಂಗಾರಮಕ್ಕಿಯ ವೀರಾಂಜನೇಯ ಸ್ವಾಮಿ,  ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ. ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

    • ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.

    Share. Facebook Twitter Pinterest LinkedIn Tumblr WhatsApp Email
    Previous Article‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ಕೃತಿಗಳ ಆಯ್ಕೆ
    Next Article ಪುತ್ತೂರಿನಲ್ಲಿ ‘ಶಾಂತೇಶ್ವರನ ವಚನಗಳು’ ಕೃತಿ ಲೋಕಾರ್ಪಣೆ ಹಾಗೂ ಕವಿಗೋಷ್ಠಿ | ಮೇ 27
    roovari

    Add Comment Cancel Reply


    Related Posts

    ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ತಾಳಮದ್ದಳೆ

    May 7, 2025

    ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಪಾರ್ತಿಸುಬ್ಬ ವಿರಚಿತ ‘ಪಂಚವಟಿ’ ಯಕ್ಷಗಾನ ತಾಳಮದ್ದಳೆ

    May 7, 2025

    ಕನ್ನರ್ಪಾಡಿಯಲ್ಲಿ ನೂತನ ‘ಶ್ರೀ ಜಯದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾಮಂಡಳಿ’ ಉದ್ಘಾಟನೆ

    May 6, 2025

    ಪರಿಚಯ ಲೇಖನ | ‘ಬೆಳೆಯುವ ಯಕ್ಷಸಿರಿ’ ಸಚಿನ್ ಶೆಟ್ಟಿ ನಾಗರಕೊಡಿಗೆ

    May 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.