ಆಸಕ್ತಿ ಕ್ಷೇತ್ರ, ಕಲಿಯುವ ಮನಸ್ಸು ಇದ್ದರೆ ಯಶಸ್ಸು ಖಂಡಿತಾ ಖಚಿತ ಎಂಬುದಕ್ಕೆ ಸಾಕ್ಷಿ ಶೈಲೇಶ್ ತೀರ್ಥಹಳ್ಳಿ. ಕಾಲಿಗೆ ಗೆಜ್ಜೆ ಕಟ್ಟಿ ಭಾಗವತರ ಹಾಡಿಗೆ ಹೆಜ್ಜೆ ಹಾಕುತ್ತಿದ್ದ ಶೈಲೇಶ್ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಯಕ್ಷಗಾನ ಕ್ಷೇತ್ರದಲ್ಲಿ ಯಶಸ್ವಿ ಕಲಾವಿದರಾಗುತ್ತಿದ್ದಾರೆ.
28.10.1995ರಂದು ತೀರ್ಥಹಳ್ಳಿ ತಾಲ್ಲೂಕು ದೇವಂಗಿ ಗ್ರಾಮದ ಜೆಡ್ಡುಗದ್ದೆಯ ಚಂದ್ರಶೇಖರ ಹಾಗೂ ನಾಗರತ್ನ ದಂಪತಿಗಳ ಮಗನಾಗಿ ಶೈಲೇಶ್ ಜನನ. ಎಮ್ ಎ ಜರ್ನಲಿಸಂ ಇವರ ವಿದ್ಯಾಭ್ಯಾಸ.
ಗುರು ಬನ್ನಂಜೆ ಸಂಜೀವ ಸುವರ್ಣ, ಪ್ರಸಾದ್ ಮೊಗೆಬೆಟ್ಟು, ಮಂಜುನಾಥ ಕುಲಾಲ್, ಸತೀಶ್ ಕೆದ್ಲಾಯ ಇವರ ಯಕ್ಷಗಾನ ಗುರುಗಳು. ಕೃಷ್ಣಮೂರ್ತಿ ಭಟ್ ಬಗ್ವಾಡಿ ಚಂಡೆ – ಮದ್ದಳೆ ಗುರುಗಳು.
ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣ ಹಾಗೂ ಕೇಂದ್ರದ ಹಲವು ಗುರುಗಳಲ್ಲಿ ಯಕ್ಷಗಾನ ಹೆಜ್ಜೆ ಮತ್ತು ಹಿಮ್ಮೇಳ ಅಭ್ಯಾಸ ಮಾಡಿರುತ್ತಾರೆ. ಉಡುಪಿ ಯಕ್ಷಗಾನ ಕೇಂದ್ರದಲ್ಲಿ 8 ವರ್ಷ ಗುರುಗಳಾಗಿ ಮತ್ತು ಯಕ್ಷರಂಗದ ಕಲಾವಿದರಾಗಿ ಸೇವೆ ಸಲ್ಲಿಸಿದ್ದು, ಹಲವಾರು ಯಕ್ಷಗಾನ ಮತ್ತು ಯಕ್ಷಗಾನ ಬ್ಯಾಲೆಗಲ್ಲಿ ಭಾಗವಹಿಸಿದ್ದಾರೆ. ಗುರುಗಳಾಗಿ 35ಕ್ಕೂ ಹೆಚ್ಚು ಯಕ್ಷಗಾನಗಳನ್ನು ಪ್ರಸಂಗಗಳನ್ನು ನಿರ್ದೇಶನ ಮಾಡಿರುತ್ತಾರಲ್ಲದೇ ಸಣ್ಣ ವಯಸ್ಸಿನಲ್ಲಿಯೇ 5 ವರ್ಷದಿಂದ 70 ವರ್ಷದ ಸಾವಿರಾರು ವಿಧ್ಯಾರ್ಥಿಗಳಿಗೆ ಗುರುವಾಗಿದ್ದಾರೆ.
ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ದೆಹಲಿ, ಎನ್ ಎಸ್ ಡಿ ಬೆಂಗಳೂರು ಹಾಗೂ ಎನ್ ಎಸ್ ಡಿ ವಾರಣಾಸಿ. ನೀನಾಸಂ ಹೆಗ್ಗೋಡು, ರಂಗಾಯಣ ಶಿವಮೊಗ್ಗ, ಸಾಣೇಹಳ್ಳಿ ರಂಗಶಾಲೆ ಚಿತ್ರದುರ್ಗ, ಕೇರಳದ ಡಾನ್ ಬಾಸ್ಕೊ, ಕಿನ್ನರ ಮೇಳ ಹೆಗ್ಗೊಡು, ಸಮುರಾಯ್ ಥಿಯೇಟರ್ ಪುರಪ್ಪೆಮನೆ ಗುಜರಾತ್, ಲಕ್ನೋದಲ್ಲಿ ಯಕ್ಷಗಾನ ಶಿಬಿರ ಹಾಗೂ ಉಡುಪಿಯ ಹಲವಾರು ಸಂಘ ಸಂಸ್ಥೆಗಳಿಗೆ ಮುಂತಾದ ರಂಗಶಾಲೆಗಳಿಗೆ ಹಾಗೂ ಹಲವು ಯಕ್ಷಗಾನ ಮತ್ತು ರಂಗಭೂಮಿ ಕಾರ್ಯಗಾರಗಳಿಗೆ ಗುರುವಾಗಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
ಅಭಿಮನ್ಯು ಕಾಳಗ, ಜಾಂಬವತಿ ಕಲ್ಯಾಣ, ವಾಲಿ ವಧೆ ನೆಚ್ಚಿನ ಪ್ರಸಂಗಗಳು.
ಅಭಿಮನ್ಯು, ಕೃಷ್ಣ, ವಾಲಿ, ಮಾಯಾ ಶೂರ್ಪನಖ, ಘೋರ ಶೂರ್ಪನಖ ನೆಚ್ಚಿನ ವೇಷಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗೋಚಿತವಾದ ಅರ್ಥಗಾರಿಕೆ, ಆ ಪಾತ್ರ ಅನುಗುಣವಾಗಿ ಬಳಸಬೇಕಾದ ಮತ್ತು ಬಾರದ ಹೆಜ್ಜೆಗಾರಿಕೆ, ಅಭಿನಯಕ್ಕೆ ಬೇಕಾದ ಹಾಗೆ ಭಾಗವತರಲ್ಲಿ ಚರ್ಚೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಹಿಂದಿನ ಕಲಾವಿದರು ಯಕ್ಷಗಾನಕ್ಕೆ ಅದೆಷ್ಟೊ ಸಾಧ್ಯತೆಗಳನ್ನು ಕೊಟ್ಟು ಯಕ್ಷಗಾನವನ್ನು ಹಾಗೆ ಉಳಿಯುವಂತೆ ಮಾಡಿದ್ದರು. ಆದರೆ ನಮ್ಮ ಯುವ ಜನತೆ ಸರಿಯಾದ ರೀತಿಯಲ್ಲಿ ಯಕ್ಷಗಾನವನ್ನು ಗುರುಮುಖೇನ ಅಭ್ಯಾಸ ಮಾಡದೇ, ಯಕ್ಷಗಾನದಲ್ಲಿರುವ ಅದೆಷ್ಟೋ ಸಾಧ್ಯತೆಗಳು ಬಿಟ್ಟು ಬರೇ immetete ಮಾಡುತ್ತ, ಹೆಸರು ಮಾಡುವುದಕ್ಕಾಗಿ ಅನಗತ್ಯಗಳನ್ನು ರಂಗಕ್ಕೆ ತಂದು ಯಕ್ಷಗಾನದ ಮೌಲ್ಯವನ್ನು ಕಡಿಮೆ ಮಾಡುತ್ತಿದ್ದಾರೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಹಿಮ್ಮೇಳ ಮುಮ್ಮೆಳದವರು ತೆಂಕು ಬಡಗು ಮಿಶ್ರ ಮಾಡಿ ಕುಣಿಯುವುದನ್ನು, ಕೋಲ, ಅಣಿ ವೇಷಗಳನ್ನು ಅನಗತ್ಯ ರಂಗಕ್ಕೆ ತರುವುದನ್ನು ಖಂಡಿಸಬೇಕು. ಅದನ್ನು ಪ್ರೋತ್ಸಾಹಿಸಬಾರದು.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಈಗಾಗಲೇ ಒಂದು ವರ್ಷದಿಂದ ತೀರ್ಥಹಳ್ಳಿಯಲ್ಲಿ ಯಕ್ಷಭೂಮಿ ಯಕ್ಷಗಾನ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿ ಯಕ್ಷಗಾನ ಬೋಧನೆಯನ್ನು ಮಾಡುತ್ತಿದ್ದೇನೆ. ಯಕ್ಷಗಾನದ ಸಾಂಪ್ರದಾಯಕ ಸೊಗಡನ್ನು ಇಟ್ಟುಕೊಂಡೇ ಹೊಸ ಸಾಧ್ಯತೆಗಳನ್ನು ರಂಗಕ್ಕೆ ತರಬೇಕು.
ದೆಹಲಿ, ಚೆನೈ, ಭೋಪಾಲ್, ಮಣಿಪುರ, ಕೇರಳ, ಮುಂಬೈ, ಕುರುಕ್ಷೇತ್ರ, ಪುಣೆ, ಬೆಂಗಳೂರು ಮತ್ತು ವಿಶೇಷವಾಗಿ ಫ್ರಾನ್ಸ್ ದೇಶದ ಪ್ಯಾರಿಸ್ ನಲ್ಲಿಯೂ ತರಗತಿ ಹಾಗೂ ಪ್ರದರ್ಶನಗಳನ್ನು ನೀಡಿರುತ್ತಾರೆ. ರಂಗಭೂಮಿ ಕ್ಷೇತ್ರದಲ್ಲಿ ಖ್ಯಾತ ರಂಗ ನಿರ್ದೇಶಕ ಸಿ. ಆರ್ ಜಂಬೆ ಮತ್ತು ಗುಜರಾತಿನ ರಂಗ ನಿರ್ದೇಶಕ ಪ್ರಮೋದ್ ಚೌಹಾಣ್ ಅವರಂತ ರಂಗಕರ್ಮಿಗಳ ನಾಟಕಗಳಿಗೆ ನೃತ್ಯ ಸಂಯೋಜನೆ ಮತ್ತು ತಾಳವಾದ್ಯ ವಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ತೀರ್ಥಹಳ್ಳಿಯ ನಟಮಿತ್ರರು ತಂಡದ ಜೊತೆಗಿದ್ದು ನಾಟಕ, ಕಾರ್ಯಗಾರಗಳಲ್ಲಿ ಭಾಗವಹಿಸಿದ ಅನುಭವ. ಪ್ರಸ್ತುತ ತೀರ್ಥಹಳ್ಳಿಯಲ್ಲಿ “ಯಕ್ಷಭೂಮಿ ಯಕ್ಷಗಾನ ಅಧ್ಯಯನ ಕೇಂದ್ರ” ಎಂಬ ಸಂಸ್ಥೆಯನ್ನು ಕಟ್ಟಿ ತರಬೇತಿ ಮತ್ತು ಪ್ರದರ್ಶನಗಳನ್ನು ಮಾಡಿಸುತ್ತಿದ್ದಾರೆ.
ಆಳ್ವಾಸ್ ಯಕ್ಷಗಾನ ಸ್ಪರ್ಧೆಯಲ್ಲಿ ಎರಡು ವರ್ಷ ಉತ್ತಮ ಪುಂಡುವೇಷ ಮತ್ತು ಉತ್ತಮ ಸ್ತ್ರೀ ವೇಷ ಪ್ರಶಸ್ತಿ. ತೀರ್ಥಹಳ್ಳಿ ತಾಲ್ಲೂಕಿನ ಕನ್ನಡ ರಾಜ್ಯೋತ್ಸವ ಸಂದರ್ಭ ಸನ್ಮಾನ, ರಾಜ್ಯ ಮರಾಠಿ ಒಕ್ಕೂಟ ಸನ್ಮಾನ.
ಬೇರೆ ಬೇರೆ ಹತ್ತು ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಗುರುವಂದನೆಗಳು.
ಇನ್ನೂ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಯಕ್ಷಗಾನ ಆಧಾರಿತ ಕನ್ನಡ ಸಿನಿಮಾ ಒಂದರಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಾರೆ.
ಬಿಡುವಿನ ಸಮಯದಲ್ಲಿ ಹಾಲಾಡಿ ಮೇಳ, ಗುತ್ಯಮ್ಮ ಮೇಳ, ಸೀತೂರು ಮೇಳಗಳಲ್ಲಿ ಹಿಮ್ಮೇಳ ಮುಮ್ಮೇಳದಲ್ಲಿ ಭಾಗವಹಿಸಿರುತ್ತಾರೆ.
ಓದುವಿಕೆ, ವೆಸ್ಟರ್ನ್ ಡ್ರಮ್ಸ್, ಕೋರಿಯಾಗ್ರಫಿ ಇವರ ಹವ್ಯಾಸಗಳು.
ಬಾಲ್ಯದಲ್ಲಿ ಹೊಳಿ ಕುಣಿತ, ಅಪ್ಪ ಹಾಗೂ ಅಮ್ಮನ ಪ್ರೋತ್ಸಾಹ ಮತ್ತು ಪ್ರೇರಣೆ, ಗುರುಗಳ ಮಾರ್ಗದರ್ಶನ ಹಾಗೂ ಆಶೀರ್ವಾದದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಶೈಲೇಶ್.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.