31.08.1968 ರಂದು ಗುರುರಾಜ ಆಚಾರ್ಯ ಹಾಗೂ ಇಂದಿರಾ ಇವರ 3 ಗಂಡು ಮಕ್ಕಳಲ್ಲಿ ನಡುವಿನವರಾಗಿ ಹರಿಹರದಲ್ಲಿ ಎಚ್ ವಿನಯ ಆಚಾರ್ಯ ಹೊಸಬೆಟ್ಟು ಅವರ ಜನನ. ಪಿಯುಸಿವರೆಗೆ ವಿದ್ಯಾಭ್ಯಾಸ. ಮಳೆಗಾಲದಲ್ಲಿ ಹರಿಹರ, ದಾವಣಗೆರೆ ಮುಂತಾದೆಡೆ ತಂದೆಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಯಕ್ಷಗಾನಗಳನ್ನು ನೋಡುತ್ತಾ ಪುರಾಣದ ಬಗ್ಗೆ ಆಸಕ್ತಿ ಬೆಳೆಯಿತು. ಮುಂಡಾಜೆ ಸದಾಶಿವ ಶೆಟ್ಟಿಯವರು ಹೇಳುವಂತೆ 6 ತಿಂಗಳ ಮಗುವಾಗಿರುವಾಗವೇ ಅವರು ವಾಸುದೇವನಾಗಿ ಬುಟ್ಟಿಯಲ್ಲಿಟ್ಟುಕೊಂಡಿದ್ದರು. 1991ರಲ್ಲಿ ಊರಿಗೆ ಬಂದ ನಂತರ ಯಕ್ಷಗಾನದ ಆಸಕ್ತಿ ಹೆಚ್ಚಿತು. ಸಮಾನ ಮನಸ್ಕರು ಸೇರಿ ನಟಗಿರಿ ಯಕ್ಷಗಾನ ಮಂಡಳಿ ಎಂಬ ತಂಡ ಕಟ್ಟಿದ್ದು. ಎಂ ಶಂಕರನಾರಾಯಣ ಮೈರ್ಪಾಡಿ, ಗಿರೀಶ ನಾವಡರು ಇವರ ಯಕ್ಷಗಾನದ ಗುರುಗಳು. ಸುತ್ತಮುತ್ತಲೆಲ್ಲಾ ದೇವಸ್ಥಾನಗಳ ಜಾತ್ರೆ ಹಬ್ಬ ಮೊದಲಾದೆಡೆ ಸುಮಾರು ನೂರಕ್ಕೂ ಹೆಚ್ಚು ಯಕ್ಷಗಾನ ಮಾಡಿದರುವ ಅನುಭವ ವಿನಯ ಆಚಾರ್ಯ.
ತಾಳಮದ್ದಳೆಯಲ್ಲಿ ಆಸಕ್ತಿ ಮೂಡಿ ಪ್ರತಿ ವರ್ಷ ಅಕ್ಟೋಬರ್ 1 ರಂದು ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಇಡೀ ರಾತ್ರಿಯ ತಾಳಮದ್ದಳೆಗಳ ಸಂಘಟನೆ 1997ರಿಂದ ಎಲ್ಲಾ ತಾಳಮದ್ದಳೆಗಳು ಯಶಸ್ವಿಯಾಗುವುದರೊಂದಿಗೆ ತಾಳಮದ್ದಳೆಗಳಲ್ಲಿ ಪ್ರಸಿದ್ಧರೊಂದಿಗೆ ಅರ್ಥ ಹೇಳುವ ಅವಕಾಶ.
ಶೇಣಿ, ಸಾಮಗರು, ಕುಂಬ್ಳೆ, ಗೋವಿಂದ ಭಟ್, ಸುಣ್ಣಂಬಳ, ಜಬ್ಬಾರ್, ಉಜಿರೆ, ಕಲ್ಚಾರ್, ರಂಗ ಭಟ್ ಮೊದಲಾದವರೊಂದಿಗೆ ತಾಳಮದ್ದಳೆಗಳಲ್ಲಿ ಭಾಗವಹಿಸುವಿದ ಅನುಭವ ಆಚಾರ್ಯ ಅವರದು.
ನವಗಿರಿ ಯಕ್ಷಗಾನ ಮಂಡಳಿ ಹೆಸರಿನಲ್ಲಿ ಅಲ್ಲಲ್ಲಿ ತಾಳಮದ್ದಳೆ ಸಂಘಟನೆ. ಸುರತ್ಕಲ್ ನ ಮಾರಿಗುಡಿಯಲ್ಲಿ ಪ್ರತಿ ತಿಂಗಳ ಮೊದಲ ಶುಕ್ರವಾರ ನಡೆಯುತ್ತಿರುವ ತಾಳಮದ್ದಳೆಗಳ
(ದಿ. ರಮಾನಾಥ ರಾವ್ ರವರ ನೇತೃತ್ವದಲ್ಲಿ ಪ್ರಾರಂಭವಾದದ್ದು) ನೇತೃತ್ವ. ತಾಳಮದ್ದಳೆಗಳ ಸಂಘಟನೆಯಲ್ಲಿ ಜಿಲ್ಲೆಯಲ್ಲಿ ಪ್ರಸಿದ್ಧವಾಗಿರುವ ಯಕ್ಷ ಲಹರಿ ಸಂಸ್ಥೆಯಲ್ಲಿ ನಡೆಸುತ್ತಿರುವ ತಾಳಮದ್ದಳೆಗಳ ಸಂಯೋಜನೆಯಲ್ಲಿ ತೊಡಗಿಸಿಕೊಳ್ಳುವಿಕೆ. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ, ಮಹಾಮ್ಮಾಯಿ ಯಕ್ಷಗಾನ ಮಂಡಳಿ ಸುರತ್ಕಲ್ ಇದರ ನವರಾತ್ರಿಯ ಸಂದರ್ಭದ ಯಕ್ಷಗಾನಗಳ ಸಂಘಟನೆ ಮತ್ತು ಪಾಲ್ಗೊಳ್ಳುವಿಕೆ. ಹವ್ಯಾಸಿ ವೇಷಧಾರಿಯಾಗಿ ಜಿಲ್ಲೆಯ ಹಲವೆಡೆ ಅಗತ್ಯ ಬಿದ್ದ ಸಂದರ್ಭದಲ್ಲೆಲ್ಲ ಭಾಗವಹಿಸಿದ್ದು. ಜೊತೆಯಲ್ಲಿ ಗಾನವೈಭವದ ನಿರೂಪಕನಾಗಿ, ಭಾಷಣಕಾರನಾಗಿ, ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸುವಿಕೆ. ಗಣೇಶಪುರದ ಯಕ್ಷಗಾನ ಮಂಡಳಿ, ಕದಳಿ ಕಲಾ ಕೇಂದ್ರದ ಯಕ್ಷಗಾನ ಮಂಡಳಿಗಳಲ್ಲೂ ಭಾಗವಹಿಸುವಿಕೆ. ಬಳ್ಳಾರಿ , ಹಂಪಿ ಮೊದಲಾದೆಡೆ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಹಿಮ್ಮೇಳ ವಾದಕರಾದ ಪದ್ಮನಾಭ ಉಪಧ್ಯಾಯರಿಂದ ಆಸಕ್ತ ಮಕ್ಕಳಿಗೆ ಮನೆಯಲ್ಲಿಯೇ ಹಿಮ್ಮೇಳ ತರಗತಿ ನಡೆದಿತ್ತು.
ಯಕ್ಷಗಾನದಲ್ಲಿ ಹೆಣ್ಣು ಬಣ್ಣ ಮತ್ತು ಸ್ತ್ರೀ ಪಾತ್ರಗಳನ್ನುಳಿದು ಉಳಿದೆಲ್ಲಾ ಪಾತ್ರಗಳ ನಿರ್ವಹಣೆ. ರಕ್ತಬೀಜ, ವಾಲಿ, ಇಂದ್ರಜಿತು, ಕರ್ಣ, ಕಾರ್ತವಿರ್ಯ ಇತ್ಯಾದಿ ಪಾತ್ರಗಳು ನಿರ್ವಹಿಸಿದ್ದಾರೆ. ನಾಲ್ಕು ವರ್ಷ ಮುಂಬೈಯಲ್ಲಿ ನಡೆದ ತಾಳಮದ್ದಳೆ ಸಪ್ತಾಹಗಳಲ್ಲಿ ಸುಣ್ಣಂಬಳ, ಜಬ್ಬಾರ್, ಕನ್ನಡಿಕಟ್ಟೆಯವರೊಂದಿಗೆ ಭಾಗವಹಿಸುವಿಕೆ.
ಪ್ರಸ್ತುತ ಯಕ್ಷಗಾನ ರಂಗವನ್ನು ಗಮನಿಸಿದರೆ ಹೆಚ್ಚು ಕಾಲ ಮುಂದುವರಿಯುವ ಲಕ್ಷಣಗಳಿಲ್ಲ. ಹಿಂದಿನ ಕಾಲದ ಕಲಾವಿದರು ಹೊಟ್ಟೆಪಾಡಿಗಾಗಿ ಯಕ್ಷರಂಗ ಪ್ರವೇಶಿಸಿದರೂ ಅವರಿಗೆ ಅದರಲ್ಲಿ ಶ್ರದ್ಧೆ ನಿಷ್ಠೆ ಇತ್ತು. ಸಿಕ್ಕಿದ್ದರಲ್ಲಿ ತೃಪ್ತ ಜೀವನ ನಡೆಸಿ ಹೆಸರುಗಳಿಸಿದರು. ಅವರು ಯಕ್ಷಗಾನ ರಂಗಕ್ಕೆ ಫಲಾಪೇಕ್ಷೆ ಇಲ್ಲದೆ ನಡೆಸಿದ ಸೇವೆಯ ಫಲವನ್ನು ಈಗಿನ ಕಲಾವಿದರೂ ಎರಡೂ ಕೈಗಳಿಂದ ಬಾಚಿ ಉಣ್ಣುತ್ತಾರಾದರೂ ತೃಪ್ತರಲ್ಲ. ಒಂದಿಬ್ಬರನ್ನು ಬಿಟ್ಟರೆ ಯಕ್ಷಗಾನದಿಂದ ಪಡೆಯುವುದು ಮಾತ್ರ ಅದಕ್ಕಾಗಿ ಅವರು ಕೊಡುಗೆಗಳೇನನ್ನೂ ಕೊಟ್ಟಿಲ್ಲ. 25ರಿಂದ 30 ವರ್ಷ ಪ್ರಾಯದ ಒಬ್ಬ ಸಮರ್ಥ ಪುಂಡು ವೇಷಧಾರಿ, ಕಿರೀಟ ವೇಷಧಾರಿ, ಬಣ್ಣದ ವೇಷಧಾರಿ, ಸ್ತ್ರೀ ವೇಷಧಾರಿ ರಂಗದಲ್ಲಿ ಇಲ್ಲ. ಹೇಳುವುದು ಮಾತ್ರ ಎಲ್ಲರೂ ವೇಷಧಾರಿಗಳು. ಹವ್ಯಾಸಿಗಳು ಅಲ್ಲಲ್ಲಿ ಸಹಕರಿಸದಿದ್ದರೆ ಮುಂದೆ ಮೇಳಗಳು ನಡೆಸುವುದು ಕಷ್ಟವಾಗಬಹುದು.
ಸುರತ್ಕಲ್ ನ ಮೇಲಿನ ಮಾರಿಗುಡಿಯಲ್ಲಿ ‘ಸಪ್ತ ಕೌರವ’, ಮೋಕ್ಷ ಸಂಗ್ರಾಮ, ಪಾರ್ಥ ಏವ ಧನುರ್ಧರ, ಎಂಬ ಹೆಸರಿನ ಸಪ್ತಾಹಗಳ ಆಯೋಜನೆಯಲ್ಲಿ ಪ್ರಸಿದ್ಧ ಕಲಾವಿದರು, ಹವ್ಯಾಸಿಗಳು ಮತ್ತು ಮಹಿಳಾ ಕಲಾವಿದರನ್ನು ಸೇರಿಸಿ ಯಶಸ್ವಿಗೊಳಿಸಿದ್ದು. ಶೇಣಿ ರಂಗ ಜಂಗಮ, ಸಂಯಮ ಮತ್ತು ವಿಶ್ವ ಭಾರತಿ ಮುಡಿಪು ಮೊದಲಾದ ತಂಡಗಳಲ್ಲಿ ನಿರಂತರ ತಾಳಮದ್ದಳೆಗಳಲ್ಲಿ ಭಾಗವಹಿಸಿದ್ದಾರೆ.
ಇದೇ ಅಕ್ಟೋಬರ್ 1 ರಿಂದ 7 ರವರೆಗೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಶೋಕ್ ಭಟ್ಟರ ನೇತೃತ್ವದಲ್ಲಿ ಕುರಿಯ ಪ್ರತಿಷ್ಠಾನದ ಒಂದು ವಾರದ ತಾಳಮದ್ದಳೆ ಸಂಘಟನೆ ಮಾಡಿದ್ದಾರೆ.
ಸ್ಥಾನಮಾನಗಳು, ಸನ್ಮಾನಗಳ ಬಗ್ಗೆ ವಿಶೇಷ ಆಸಕ್ತಿ ಇಲ್ಲದಿದ್ದರೂ ಹಲವಾರು ಸಂಘಟನೆಗಳು ಗುರುತಿಸಿ ಸನ್ಮಾನಿಸಿವೆ.
ಮಗಳು ಅಶ್ವಿನಿ ಆಚಾರ್ ಹರಿಕಥೆ, ಯಕ್ಷಗಾನ ವೇಷಧಾರಿಯಾಗಿ, ತಾಳಮದ್ದಳೆ ಅರ್ಥಧಾರಿಯಾಗಿ ರೂಪುಗೊಳ್ಳುವಲ್ಲಿ ಪ್ರಯತ್ನ.
ಎಚ್ ವಿನಯ ಆಚಾರ್ಯ ಹೊಸಬೆಟ್ಟು ಅವರು 06.03.1994 ರಂದು ಸುಮಾ ಆಚಾರ್ಯ ಅವರನ್ನು ಮದುವೆಯಾಗಿ ಮಗಳು ಅಶ್ವಿನಿ ಆಚಾರ್, ಅಳಿಯ ಶ್ರೀವತ್ಸ ಕೆ.ರ್ ಇವರೊಂದಿಗೆ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು