27.04.1970ರಂದು ನಾಗೇಶ್ ಹಾಗೂ ಪುಷ್ಪ ಇವರ ಮಗನಾಗಿ ದಯಾನಂದ ಕೋಡಿಕಲ್ ಅವರ ಜನನ. II PUC, ITI ಇವರ ವಿದ್ಯಾಭ್ಯಾಸ. ಮನೆಯ ಹತ್ತಿರ ಇರುವ ಚಾಮುಂಡೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ಒಂದು ವಾರದ ಕೂಟ ನಡೆಯುತ್ತಿತ್ತು, ಅಲ್ಲಿ ಯಾವಾಗಲೂ ಹೋಗಿ ಯಕ್ಷಗಾನ ನೋಡಿ ಯಕ್ಷಗಾನದ ಮೇಲೆ ಆಸಕ್ತಿ ಹುಟ್ಟಿತು. ಹೀಗೆ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು.
ಯಕ್ಷಗಾನ ಗುರುಗಳು:-
ಭಾಗವತಿಕೆಯಲ್ಲಿ ಪ್ರಾರಂಭದಲ್ಲಿ ಕೃಷ್ಣಪ್ಪ ಕರ್ಕೇರ, ಮತ್ತೆ ಮಾಂಬಾಡಿ ಸುಬ್ರಹ್ಮಣ್ಯ ಭಟ್.
ಮದ್ದಳೆ:- ಕುದುರೆಕೂಡ್ಲು ರಾಮ ಭಟ್.
ಚೆಂಡೆಯನ್ನು ನೋಡಿಯೇ ಕಲಿತದ್ದು.
ಹಿಂಧೋಳ, ಕಾನಡ, ಶಿವರಂಜಿನಿ, ಅಮೃತವರ್ಷಿಣಿ, ಮೋಹನ, ಅಭೇರಿ ನೆಚ್ಚಿನ ರಾಗಗಳು.
ಪಂಚವಟಿ, ಕೃಷ್ಣಾರ್ಜುನ, ಗುರುದಕ್ಷಿಣೆ, ಗದಾಯುದ್ಧ, ಕೋಟಿ ಚೆನ್ನಯ ಹಾಗೂ ಹೆಚ್ಚಿನ ಎಲ್ಲಾ ಪೌರಾಣಿಕ ಪ್ರಸಂಗ ಇವರ ನೆಚ್ಚಿನ ಪ್ರಸಂಗಗಳು.
ಪುತ್ತಿಗೆ ರಘುರಾಮ ಹೊಳ್ಳ ನೆಚ್ಚಿನ ಭಾಗವತರು. ಪೆರುವಾಯಿ ಕೃಷ್ಣ ಭಟ್, ದೇಲಂತಮಜಲು, ಪ್ರಭಾಕರ ಗೋರೆ ಹಾಗೂ ಈಗಿನ ಎಲ್ಲಾ ಯುವ ಮದ್ದಲೆಗಾರರು ನೆಚ್ಚಿನ ಹಿಮ್ಮೇಳವಾದಕರು.
ಅಮೃತ ತೀರ್ಥ, ಜ್ವಾಲಾಮುಖಿ, ಸ್ವರ್ಣ ತುಲಾಭಾರ, ಸರ್ಪ ಸಂಬಂಧ, ಮಾಯೊದ ಸಿರಿಗಂಧ, ಮಹಿಮೆದಪ್ಪೆ ಮಹಮ್ಮಾಯಿ, ಮಾಯೊದಪ್ಪೆ ಮಂತ್ರದೇವತೆ, ಕಟ್ಟೆದ ಗುರ್ಕಾರೆ, ಮಹಿಮೆದ ಮಾಣಿಕ್ಯ, ಮಂತ್ರ ಮಾಂಗಲ್ಯ, ಮಾಯೊದಜ್ಜ ಇತ್ಯಾದಿ ಪ್ರಸಂಗಗಳಿಗೆ ಪದ್ಯ ರಚನೆಯನ್ನು ಮಾಡಿರುತ್ತಾರೆ. ಅದರಲ್ಲಿ ಅಮೃತತೀರ್ಥ, ಜ್ವಾಲಾಮಾಲಿನಿ ಮಂಗಳೂರು ಪುರಭವನದಲ್ಲಿ ಪ್ರದರ್ಶನಗೊಂಡಿವೆ ಹಾಗೂ ಮಾಯೊದಜ್ಜ ಪ್ರಸಂಗ ಮೂರು ವರ್ಷದಿಂದ ಹಿರಿಯಡ್ಕ ಮೇಳದಲ್ಲಿ ಪ್ರದರ್ಶನವಾಗುತ್ತಾ ಇದೆ.
ಯಕ್ಷಗಾನದ ಇಂದಿನ ಸ್ಥಿತಿಗತಿ:-
ಈಗ ಜೆಟ್ ಯುಗ ಎಂದು ಹೇಳಿದರೂ ತಪ್ಪಲ್ಲ. ಈಗ ಬೆಳಗ್ಗೆ ತನಕ ಆಟ ನೋಡುವ ತಾಳ್ಮೆ ಯಾರಿಗೂ ಇಲ್ಲ. ಬೆಳಗಿನ ತನಕದ ಯಕ್ಷಗಾನದಲ್ಲಿ ಕಲಾವಿದರಿಗೆ ಬೆಳೆಯಲು ಅವಕಾಶ ಇದೆ. ಯಾಕೆಂದರೆ ಕಥೆಗೆ ಬೇಕಾದ ಎಲ್ಲ ಪದ್ಯಗಳನ್ನು ತೆಗೆದುಕೊಂಡು ನಾಟ್ಯಕ್ಕೆ ಅವಕಾಶ ಇರುವ ಪಾತ್ರಗಳನ್ನು ಚೆನ್ನಾಗಿ ಕುಣಿಸಿ, ಅರ್ಥಕ್ಕೆ ಬೇಕಾದಷ್ಟು ಅವಕಾಶ ಇತ್ತು. ಆದರೆ ಕಾಲಮಿತಿಯಲ್ಲಿ ಎಲ್ಲವೂ ತರಾತುರಿಯಲ್ಲಿ ಮಾಡಬೇಕಾಗುತ್ತದೆ. ಆದರೂ ಕಾಲಮಿತಿಗೆ ಪ್ರೇಕ್ಷಕರ ಸ್ಪಂದನ ಒಳ್ಳೆಯ ರೀತಿಯಲ್ಲಿ ಸಿಗುತ್ತಾ ಇದೆ. ಇನ್ನೊಂದು ಹೇಳಲೇಬೇಕಾದ ವಿಷಯವೆಂದರೆ ಪಟ್ಲ ಭಾಗವತರು ಯಕ್ಷ ರಂಗಕ್ಕೆ ಬಂದ ಮೇಲೆ ಯುವಕರು ಯಕ್ಷಗಾನಕ್ಕೆ ಹೆಚ್ಚು ಹೆಚ್ಚು ಆಕರ್ಷಿತರಾಗಿದ್ದಾರೆ. ವಿದ್ಯಾರ್ಥಿಗಳು ಜಾಸ್ತಿಯಾಗಿದ್ದಾರೆ. ನಮ್ಮ ಪ್ರಾರಂಭದ ದಿನಗಳಲ್ಲಿ ಭಾಗವತರು ಬೆರಳೆಣಿಕೆಯಷ್ಟು ಇದ್ದರು. ಈಗ ಯುವ ಭಾಗವತರು ತುಂಬಾ ಮಂದಿ ತಯಾರಾಗಿದ್ದಾರೆ. ಬೇಸರದ ಸಂಗತಿ ಎಂದರೆ ಕೇವಲ ಕೆಲವರು ಪೂರ್ಣವಾಗಿ ಕಲಿಯದೆ ಅರ್ಧದಲ್ಲಿಯೇ ವೇದಿಕೆಗೆ ಬರುತ್ತಾರೆ. ಕಲಿಯಲು ತುಂಬಾ ಇದೆಯಾದರೂ ಪ್ರದರ್ಶನಕ್ಕೆ ಬೇಕಾದಷ್ಟು ವಿದ್ಯೆಯಾದರೂ ಬೇಕಲ್ಲ.
ಯಕ್ಷಗಾನದಲ್ಲಿ ಮುಂದಿನ ಯೋಜನೆಗಳು:
ನನ್ನಲ್ಲಿರುವ ಸ್ವಲ್ಪ ವಿದ್ಯೆಯನ್ನು ಆದಷ್ಟು ವಿದ್ಯಾರ್ಥಿಗಳಿಗೆ ಕಲಿಸಿ ಶಿಷ್ಯ ವೃಂದವನ್ನು ಬೆಳೆಸಬೇಕೆಂಬ ಇಚ್ಛೆ.
ಸನ್ಮಾನ ಹಾಗೂ ಪ್ರಶಸ್ತಿಗಳು:-
ಕೋಡಿಕಲ್ ನಾರಾಯಣ ಗುರು ಧರ್ಮ ಪಾಲನಾ ಸಂಘದ ವತಿಯಿಂದ ಬ್ರಹ್ಮಶ್ರೀ ಸಾಧನಾ ಪ್ರಶಸ್ತಿ.
ತುಳು ಸಾಹಿತ್ಯ ಅಕಾಡೆಮಿ ತುಳು ಯಕ್ಷ ಜಾತ್ರೆ ಅಂಗವಾಗಿ ಯಕ್ಷ ಬಿರ್ಸೆ.
ಅಂಬಿಕಾ ಅನ್ನಪೂರ್ಣೇಶ್ವರಿ ಸೇವಾ ಸಮಿತಿ ವತಿಯಿಂದ ಭಾಗವತ ರತ್ನ.
ಶ್ರೀ ರಾಮ ಕಾರುಣ್ಯ ಕಲಾ ಸಂಘ ಕನ್ಯಾಡಿ ಧರ್ಮಸ್ಥಳ.
ಸುವರ್ಣ ಪ್ರತಿಷ್ಠಾನ ಸನ್ಮಾನ, ಮದ್ದಳೆಗಾರ ಸುದಾಸ್ ಕಾವೂರು ಅವರ 25ನೇ ಯಕ್ಷ ರಜತ ಕಾರ್ಯಕ್ರಮದ ಅಂಗವಾಗಿ ಸನ್ಮಾನ, ಯಕ್ಷ ಕೂಟ ಕದ್ರಿ ಇವರ ದಶಮಾನೋತ್ಸವದ ಸನ್ಮಾನ, ಗೆಳೆಯರ ಬಳಗ ಕೋಡಿಕಲ್, ನಾಗಬ್ರಹ್ಮ ತರುಣ ವೃಂದ ಕೋಡಿಕಲ್, ಶಿಶಿಲೇಶ್ವರ ಯಕ್ಷ ಕಲಾ ಸನ್ಮಾನ ಹಾಗೂ ಇನ್ನೂ ಹತ್ತು ಹಲವಾರು ಸನ್ಮಾನಗಳು.
ಬೆಂಗಳೂರು, ಚೆನ್ನೈ, ಮೈಸೂರು, ಮುಂಬೈ ಮತ್ತು ಕಳೆದ ಫೆಬ್ರವರಿಯಲ್ಲಿ ಬೆಹರಿನ್ ನಲ್ಲಿ ಕೋಟಿ ಚೆನ್ನಯ ಯಕ್ಷಗಾನ ಪ್ರದರ್ಶನವನ್ನು ನೀಡಿದ್ದಾರೆ.
ಬಜಪೆ ವಿಜಯ ವಿಠಲ ಭಜನಾ ಮಂದಿರದಲ್ಲಿ ಮೊದಲು ಯಕ್ಷಗಾನ ಭಾಗವತಿಕೆ ತರಗತಿಯನ್ನು ಪ್ರಾರಂಭಿಸಿ, ನಂತರದ ದಿನಗಳಲ್ಲಿ ಕೋಡಿಕಲ್ ನಾಗಬ್ರಹ್ಮ ಯಕ್ಷಕಲಾ ಕೇಂದ್ರ, ಮಂಗಳಾದೇವಿ ದೇವಸ್ಥಾನ, ಕೈಕಂಬ ತಕಧಿಮಿತದಲ್ಲಿ ಯಕ್ಷಗಾನ ಭಾಗವತಿಕೆಯನ್ನು ಹೇಳಿಕೊಡುತ್ತಿದ್ದಾರೆ.
ಪ್ರಾರಂಭದಲ್ಲಿ ಕಾಟಿಪಳ್ಳ ಮೇಳ, ನಂತರ ತಲಕಳ, ಸಸಿಹಿತ್ಲು, ಸುಂಕದಕಟ್ಟೆ, ಬೆಂಕಿನಾಥೇಶ್ವರ, ಬಪ್ಪನಾಡು, ಕುಂಟಾರು, ಮಂಗಳಾದೇವಿ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಹಿರಿಯಡ್ಕ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಒಟ್ಟು 30 ವರ್ಷಗಳಿಂದ ತಿರುಗಾಟ ಮಾಡುತ್ತಿದ್ದಾರೆ.
ಹವ್ಯಾಸಗಳು:
ಸಣ್ಣ ಪ್ರಾಯದಲ್ಲಿ ಕ್ರಿಕೆಟ್ ಆಡುತ್ತಿದ್ದೆ. ಈಗ ಪ್ರಸಂಗ ಪುಸ್ತಕ ಓದುವುದು, ಅಪರೂಪದ ಪ್ರಸಂಗಗಳ ಪ್ರದರ್ಶನ ನಡೆದರೆ ನೋಡುವುದು ಹಾಗೂ ಹಲವಾರು ಪ್ರಸಂಗಗಳಿಗೆ ಪದ್ಯ ರಚನೆ ಮಾಡಿದ್ದೇನೆ (ಛಂದಸ್ಸಿನ ಅಧ್ಯಯನ ಮಾಡಲಿಲ್ಲ).
ಸಾಂಸಾರಿಕವಾಗಿಯೂ ತೃಪ್ತರು. 26-01-1996ರಲ್ಲಿ ವಿವಾಹ. ಬಾಳಸಂಗಾತಿ ನಮಿತಾ. ದಯಾನಂದ ಕೋಡಿಕಲ್ ದಂಪತಿಗಳಿಗೆ ಇಬ್ಬರು ಮಕ್ಕಳು. ದೀಪ್ತಿ (M.Pharma ಮುಗಿಸಿ ಈಗ ಬೆಂಗಳೂರಿನಲ್ಲಿ ಉದ್ಯೋಗ) ಹಾಗೂ ಆದಿತ್ಯ (B.SC II year) ಇವರೊಂದಿಗೆ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.