ವಜ್ರದಂತೆ ಪ್ರತಿಭೆಯೊಂದು ಯಕ್ಷಲೋಕದಲ್ಲಿ ತನ್ನ ಛಾಪು ಮೂಡಿಸುತ್ತಾ ಹಲವಾರು ವೇದಿಕೆ ಏರಿ ಕಲಾ ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆಯುತ್ತಿರುವ ಅಪ್ರತಿಮ ಪ್ರತಿಭಾನ್ವಿತ ಕಲಾವಿದ ವಿಕೇಶ್ ರೈ ಶೇಣಿ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಚೊಕ್ಕಾಡಿ ಸಮೀಪದ ಶೇಣಿಯ ನಾರಾಯಣ ರೈ ಶೇಣಿ ಹಾಗೂ ಸರಸ್ವತಿ ಎನ್ ರೈ ಇವರ ಮಗನಾಗಿ 02.03.1991ರಂದು ವಿಕೇಶ್ ರೈ ಶೇಣಿ ಅವರ ಜನನ. ಸುಳ್ಯದ ನೆಹರು ಸ್ಮಾರಕ ಕಾಲೇಜಿನಿಂದ ಬಿಬಿಎಮ್ ಪದವಿ ಪಡೆದರು.
ಯಕ್ಷಗಾನ ಗುರುಗಳು:-
ನಾಟ್ಯ:-ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಶ್ರೀ ಕೋಡ್ಲ ಗಣಪತಿ ಭಟ್.
ಭಾಗವತಿಗೆ:- ಶ್ರೀ ವಿಶ್ವವಿನೋದ ಬನಾರಿ.
ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಯಾರು:- ಊರಿನಲ್ಲಿ ಯಕ್ಷಗಾನಕ್ಕೆ ಪೂರಕವಾದ ವಾತಾವರಣ ಇತ್ತು, ಅನೇಕ ಕಲಾವಿದರೂ ಇದ್ದರು. ಹಾಗಾಗಿ ಯಕ್ಷಗಾನದ ಆಸಕ್ತಿ ಬೆಳೆಯಿತು. ಮುಖ್ಯವಾಗಿ ಪ್ರೋತ್ಸಾಹಿಸಿದವರು ಡಾ. ಪ್ರಭಾಕರ ಶಿಶಿಲ, ಡಾ. ಚಂದ್ರಶೇಖರ ಧಾಮ್ಲೆ. ದಿ. ಶ್ರೀ ಸತ್ಯನ್ ದೇರಾಜೆ, ಶ್ರೀ ಭಕ್ತವತ್ಸಲ ಭಟ್ ನೀರಬಿದಿರೆ.
ನೆಚ್ಚಿನ ಪ್ರಸಂಗಗಳು:-
ಭೀಷ್ಮ ವಿಜಯ, ಕರ್ಣಾರ್ಜುನ, ರಾಮ ನಿರ್ಯಾಣ, ಮಹಾ ಬ್ರಾಹ್ಮಣ, ನಳ ದಮಯಂತಿ, ಹರಿಶ್ಚಂದ್ರ, ಅಭಿಮನ್ಯು ಕಾಳಗ ಇತ್ಯಾದಿ.
ನೆಚ್ಚಿನ ವೇಷಗಳು:-
ಕೃಷ್ಣ, ಕೌಂಡ್ಲಿಕ, ಶೂರಪದ್ಮ, ಸುದರ್ಶನ, ಸುಧನ್ವ, ರಕ್ತಬೀಜ, ಕಾರ್ತವೀರ್ಯ, ನರಕಾಸುರ, ಶ್ವೇತ ವರಾಹ ಇತ್ಯಾದಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಮುಖ್ಯವಾಗಿ ಪ್ರಸಂಗಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಓದಿ, ಗುರುಗಳ ಬಳಿ ಹಾಗು ಅನುಭವಿ ಕಲಾವಿದರ ಜೊತೆ ಕೇಳಿ ಪ್ರಸಂಗ, ಕಥೆ ಹಾಗೂ ಸನ್ನಿವೇಶವನ್ನು ತಿಳಿದುಕೊಳ್ಳುತ್ತೇನೆ. ಜೊತೆಗೆ ಅತಿಯಾಗಿ ತಾಳಮದ್ದಳೆಯನ್ನು ಕೇಳುವ ಅಭ್ಯಾಸ ಆಸಕ್ತಿ ಇದೆ. ಒಂದೇ ಪಾತ್ರವನ್ನು ವಿವಿಧ ಹಿರಿಯ ಕಲಾವಿದರು ನಿಭಾಯಿಸುವ ಕ್ರಮವನ್ನು, ನಿರ್ವಹಿಸುವುದನ್ನು ನೋಡಿ ಅವರಿಂದಲೂ ತಿಳಿದುಕೊಳ್ಳುತ್ತೇನೆ ಎಂದು ಹೇಳುತ್ತಾರೆ ವಿಕೇಶ್.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಹಳೆಯ ಪರಂಪರೆ, ಕ್ರಮ ಸ್ವಲ್ಪ ಮರೆಯಾಗುತ್ತಿದೆ ಎನ್ನುವ ವಿಷಾದ ಇದ್ದರೂ, ಇಂದಿನ ಪರಿಸ್ಥಿತಿಗೆ ತಕ್ಕಂತೆ ಯಕ್ಷಗಾನವೂ ಬಹಳಷ್ಟು ಬದಲಾವಣೆಗಳನ್ನು ಕಂಡಿದೆ. ಯಕ್ಷಗಾನದ ಸೀಮೆಯ ವ್ಯಾಪ್ತಿ ಬಹಳ ದೊಡ್ಡದಾಗಿದೆ. ದೇಶ ವಿದೇಶಗಳಲ್ಲಿಯೂ ವಿಜೃಂಭಿಸುತ್ತಿದೆ. ಅನೇಕರು ಆಕರ್ಷಿತರಾಗುತ್ತಿದ್ದಾರೆ. ಯಕ್ಷಗಾನ ಕಲೆ ಕಲಾವಿದ ಎಂದು ಮೊದಲು ಸ್ವಲ್ಪ ತಿರಸ್ಕರಿವವರೂ ಈಗ ಪುರಸ್ಕರಿಸುವ ಮಟ್ಟಕ್ಕೆ ಕಲೆ ಮತ್ತು ಕಲಾವಿದರೂ ಬೆಳೆದಿದ್ದಾರೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಹಿಂದೆ ಯಕ್ಷಗಾನದ ಪ್ರೇಕ್ಷಕ ಎಂಬ ಒಂದೇ ಹೆಸರು ಇತ್ತು. ಈಗ ಕೆಲವು ಮಂದಿ ಭಾಗವತಿಕೆಯನ್ನಷ್ಟೇ ಆಸ್ವಾದಿಸುವುದಕ್ಕೆ ಬರುತ್ತಾರೆ, ಕೆಲವು ಚೆಂಡೆ ಮದ್ದಳೆಯ ಕಲಾವಿದರ ಅಭಿಮಾನಿಗಳು, ಕೆಲವರಿಗೆ ಹಾಸ್ಯ ಪಾತ್ರಗಳು ಮಾತ್ರವೇ ಆಸಕ್ತಿ, ಕೆಲವರಿಗೆ ಬಣ್ಣದ ವೇಷ , ಕೆಲವರಿಗೆ ಸ್ತ್ರೀ ವೇಷ, ಪುಂಡು ವೇಷ ಹೀಗೆ ಆಯಾ ವಿಭಾಗದ ಅಭಿಮಾನಿಗಳು ಇದ್ದಾರೆ. ಹೊಸ ಪ್ರಯೋಗ, ಹೊಸ ಕ್ರಮ ಯಕ್ಷಗಾನಕ್ಕೆ ಒಳ್ಳೆಯದೇ. ಅದು ಆರೋಗ್ಯಕರವಾಗಿದ್ದರೆ ಪ್ರೇಕ್ಷಕ ಸ್ವೀಕರಿಸುತ್ತಾನೆ, ಉಳಿಸಿ ಬೆಳೆಸುತ್ತಾನೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಉದ್ಯೋಗ ನಿಮಿತ್ತ ಪುಣೆಯಲ್ಲಿ ನೆಲೆಸಿರುವ ನಾನು, ಪುಣೆಯ ಹಿರಿಯ ಕವಿ, ಸಾಹಿತಿ ಶ್ರೀಯುತ ಪಾಂಗಾಳ ವಿಶ್ವನಾಥ ಶೆಟ್ಟಿಯವರು ಅಧ್ಯಕ್ಷರಾಗಿರುವ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯಲ್ಲಿ ಕಳೆದ 6 ವರ್ಷಗಳಿಂದ ಪುಣೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿಯನ್ನು ಕೇವಲ ತುಳು ಕನ್ನಡಿಗರಿಗಷ್ಟೇ ಅಲ್ಲದೆ, ಅನ್ಯ ರಾಜ್ಯದ ಕೆಲವು ಮಕ್ಕಳಿಗೂ ನೀಡುತ್ತಿದ್ದೇನೆ. ಹಿಂದಿಯಲ್ಲೂ ಮಕ್ಕಳ ಯಕ್ಷಗಾನ ಪ್ರದರ್ಶನಗಳನ್ನೂ ನಡೆಸಿ, ನಾನು ಅದಕ್ಕೆ ಭಾಗವತಿಕೆಯನ್ನು ಮಾಡಿದ್ದೇನೆ. ಅನೇಕ ಸಂಘ ಸಂಸ್ಥೆಗಳ ಜೊತೆ ಸೇರಿಕೊಂಡು ಪರವೂರಿನಲ್ಲಿಯೂ ಯಕ್ಷಗಾನದ ಕಂಪನ್ನು ಪಸರಿಸುವ ಕೆಲಸವನ್ನು ನಮ್ಮವರ ಜೊತೆ ಸೇರಿಕೊಂಡು ಮಾಡುತ್ತಿದ್ದೇವೆ. ಊರಿನ ಗಣ್ಯ ಕಲಾವಿದರನ್ನು ಪರವೂರಿಗೆ ಕರೆಸಿ ಅನೇಕ ಪ್ರದರ್ಶನ, ತಾಳಮದ್ದಳೆಗಳನ್ನು ಸಂಯೋಜಿಸುತ್ತಿದ್ದೇವೆ. ಉದ್ಯೋಗದ ಜೊತೆ ಯಕ್ಷಗಾನಕ್ಕೆ ಸಮಯ ಹೊಂದಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಆದರೂ ಇನ್ನಷ್ಟು ಕಲಿಸಬೇಕು, ನಾನೂ ಕಲಿಯಬೇಕು, ಅಧ್ಯಯನ ಮಾಡಬೇಕು ಎನ್ನುವ ಆಸಕ್ತಿ ಇದೆ.
ಸನ್ಮಾನ ಹಾಗೂ ಪ್ರಶಸ್ತಿ:-
ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಪುಣೆ, ಕನ್ನಡ ಸಂಘ ಪುಣೆ, ಕನ್ನಡ ಮರಾಠಿ ಸ್ನೇಹ ವರ್ಧನ ಕೇಂದ್ರ ಪುಣೆ, ಬಂಟರ ಸಂಘ ಪುಣೆ ಇನ್ನಿತರ ಸಂಘ ಸಂಸ್ಥೆಗಳಿಂದ ಸನ್ಮಾನ ಹಾಗೂ ಗೌರವಗಳು ದೊರಕಿರುತ್ತದೆ.
2010ರಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಯಕ್ಷಗಾನ ಸ್ಪರ್ಧೆಯಲ್ಲಿ ‘ಉತ್ತಮ ಬಣ್ಣದ ವೇಷ’ ಪ್ರಶಸ್ತಿ ದೊರಕಿದೆ.
ಹವ್ಯಾಸಿ ಕಲಾವಿದನಾಗಿದ್ದರೂ ತೆಂಕುತಿಟ್ಟಿನ ಯಕ್ಷ ದಿಗ್ಗಜರಾದ ಬಲಿಪ, ಕುರಿಯ, ತೆಂಕಬೈಲು, ಅಮ್ಮಣ್ಣಾಯ, ಪುತ್ತಿಗೆ, ಪದ್ಯಾಣ, ಪಟ್ಲ, ಹೊಸಮೂಲೆ, ಪುಣಿಂಚಿತ್ತಾಯ, ಕನ್ನಡಿಕಟ್ಟೆ, ಕಕ್ಕೆಪದವು ಅದೇ ರೀತಿ ಗೋವಿಂದ ಭಟ್, ಸಂಪಾಜೆ ಶೀನಪ್ಪ ರೈ, ಶ್ರೀಧರ ಭಂಡಾರಿ, ವಾಸುದೇವ ಸಾಮಗ, ಉಜಿರೆ ಅಶೋಕ್ ಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಉಬರಡ್ಕ ಉಮೇಶ್ ಶೆಟ್ಟಿ ಮುಂತಾದ ಅನೇಕ ಹಿರಿಯ ಹಾಗು ಪ್ರಸಿದ್ಧ ಕಲಾವಿದರ ಜೊತೆ ವೇಷಧಾರಿಯಾಗಿ, ತಾಳಮದ್ದಳೆಯಲ್ಲಿ ಅರ್ಥಧಾರಿಯಾಗಿ ರಂಗವನ್ನು ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ ಎಂದು ಹೇಳುತ್ತಾರೆ ವಿಕೇಶ್.
ಅತಿಥಿ ಕಲಾವಿದನಾಗಿ ಎಡನೀರು, ಮಲ್ಲ, ಕೊಲ್ಲಂಗಾನ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ ವಿಕೇಶ್ ಅವರದು.
ನಾಟಕ, ಹಾಡುಗಾರಿಕೆ, ಈಜು, ಚಾರಣ, ಪ್ರವಾಸ, ಬೈಕಿಂಗ್. ಕಥೆ, ಕವನ ಲೇಖನ ಬರೆಯುವುದು ಇತ್ಯಾದಿ ಇವರ ಹವ್ಯಾಸಗಳು.
ತಂದೆ, ತಾಯಿ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ವಿಕೇಶ್ ರೈ ಶೇಣಿ.
- ಶ್ರವಣ್ ಕಾರಂತ್ ಕೆ., ಮಂಗಳೂರು.