ಕರುನಾಡ ಕರಾವಳಿ ಅಂದ್ರೇ ನಮ್ಮೆಲ್ಲರಿಗೆ ತಟ್ಟನೇ ನೆನಪಾಗೋದು ಯಕ್ಷಗಾನ. 16/08/1991ರಂದು ನಾಗರಾಜ ಕೆ ಎನ್ ಹಾಗೂ ವಿನೋದ ಇವರ ಮಗನಾಗಿ ಭಾರ್ಗವ ಭಾಗವತ್ ಅವರ ಜನನ. ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಇವರ ವಿದ್ಯಾಭ್ಯಾಸ. ಅಪ್ಪ, ಅಣ್ಣ (ನಾಗಭೂಷಣ ಹೆಗ್ಗೋಡು ) ಮತ್ತು ಧಾರೇಶ್ವರ ಭಾಗವತರ ಕಾಳಿದಾಸ ಕ್ಯಾಸೆಟ್, ಭಾರ್ಗವ ಅವರು ಚೆಂಡೆ ಹಾಗೂ ಮದ್ದಳೆ ಕಲಿಯಲು ಪ್ರೇರಣೆ. ಅಣ್ಣ ನಾಗಭೂಷಣ ಹೆಗ್ಗೋಡು ಹಾಗೂ ಎ.ಪಿ. ಪಾಠಕ್ ಇವರ ಯಕ್ಷಗಾನ ಗುರುಗಳು.
ಉಪನ್ಯಾಸಕ ವೃತ್ತಿ ಇರುವುದರಿಂದ ಪೂರ್ಣಕಾಲಿಕ ಯಕ್ಷಗಾನ ತಿರುಗಾಟ ಇಲ್ಲ. ಅಗತ್ಯ ಇದ್ದಾಗ ಬಡಗುತಿಟ್ಟಿನ ಎಲ್ಲಾ ಮೇಳದಲ್ಲಿ ಕೆಲಸ ಮಾಡಿರುತ್ತಾರೆ. ಸಾಲಿಗ್ರಾಮ, ಪೆರ್ಡೂರು, ಜಲವಳ್ಳಿ ಟೆಂಟ್ ಮೇಳ ಒಳಗೊಂಡು ಬಯಲಾಟದ ಎಲ್ಲ ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವವಿದೆ. ಧಾರೇಶ್ವರರು ನೀಲಾವರ ಮೇಳ ಮಾಡಿದಾಗ ಅಧಿಕೃತ ಚಂಡೆ ವಾದಕರಾಗಿದ್ದರು. ಭಾಗವತನಾಗಿಯೂ ಅಲಸೆ, ಸೀತುರು, ನೀಲಾವರ, ಬೊಮ್ಮನಹಳ್ಳಿ ಮೇಳಗಳಲ್ಲಿ ಸೇವೆಯನ್ನು ಮಾಡಿರುತ್ತಾರೆ ಭಾರ್ಗವ. 15 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ.
ಪಾಠಕರು, ಕೋಟ, ಶಂಕರ ಭಾಗವತರು, ರಾಕೇಶ್ ಮಲ್ಯ, ಅಪ್ಪ ಹಾಗೂ ಅಣ್ಣ ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು.
ಹಳೆಯ ಎಲ್ಲಾ ಪ್ರಸಂಗಗಳು ನೆಚ್ಚಿನ ಪ್ರಸಂಗಗಳು. ಅದರಲ್ಲೂ ಗದಾಯುದ್ಧ ನನ್ನ ತುಂಬಾ ನೆಚ್ಚಿನ ಪ್ರಸಂಗ.
ನೀಲಾವರ ರಾಮಕೃಷ್ಣಯ್ಯ, ನಾವುಡರು, ಧಾರೇಶ್ವರ, ಕೊಳಗಿ, ವಿದ್ವಾನರು, ಹೆರಂಜಾಲು, ಜನ್ಸಾಲೆ ನೆಚ್ಚಿನ ಭಾಗವತರು.
ಯಕ್ಷಗಾನದಲ್ಲಿ ವೇಷ ಮಾಡುವ ಅಥವಾ ಭಾಗವತಿಕೆ ಮಾಡುವ ಆಸಕ್ತಿ ಇದೆಯಾ:-
ಈಗ ಭಾಗವತಿಕೆಯನ್ನೇ ಹೆಚ್ಚು ಮಾಡುತ್ತಿದ್ದೇನೆ. ಅಪರೂಪಕ್ಕೆ ವೇಷ ಮಾಡುತ್ತೇನೆ. ತಾಳಮದ್ದಳೆ ಅರ್ಥ ಹೇಳುವ ಆಸಕ್ತಿ ಹೆಚ್ಚು ಎಂದು ಭಾರ್ಗವ ಅವರು ಹೇಳುತ್ತಾರೆ.
ಯಕ್ಷಗಾನದ ಇಂದಿನ ಸ್ಥಿತಿಗತಿ:-
ತುಂಬಾ ಉತ್ತಮವಾಗಿದೆ. ಯುವಕರು ಯಕ್ಷಗಾನದ ಕಡೆಗೆ ಆಸಕ್ತಿ ತೋರುತ್ತಿರುವುದು ಆಶಾದಾಯಕ ಬೆಳವಣಿಗೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಹೊಸ ಪ್ರಸಂಗಗಳಿಗೆ ಬೆರಗಾಗಬೇಡಿ. ಹಳೆಯದರಲ್ಲೇ ಸತ್ವ ಇದೆ. ಅದನ್ನು ಗಮನಿಸಿ.
ಯಕ್ಷರಂಗದಲ್ಲಿ ಮುಂದಿನ ಯೋಜನೆ:-
ನೀನಾಸಮ್ ಮಾದರಿಯ ಕೇಂದ್ರ ಒಂದರ ಸ್ಥಾಪನೆ. ಪೂರ್ವರಂಗದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ ಶಿಕ್ಷಣ ಕೊಡುವ ಆಸಕ್ತಿ. ಹೊಸ ಪ್ರಯೋಗಗಳ ಆಸಕ್ತಿ. ನಮ್ಮದೇ ತಂಡ “ಪೂರ್ವರಂಗ” ಎಂಬ ಸಂಸ್ಥೆಯಲ್ಲಿ ಯಕ್ಷಗಾನ ಪೂರ್ವರಂಗದ ಎಲ್ಲಾ ಒಡ್ಡೋಲಗ, ಇತ್ಯಾದಿಗಳ ರಿಸರ್ಚ್ ಮಾಡಿ ಪ್ರದರ್ಶನ ನೀಡುವುದು.
ಯಕ್ಷಗಾನ ರಂಗದಲ್ಲಿ ಪ್ರಥಮ ಬಾರಿಗೆ ವರ್ಚುವಲ್ ಏಕವ್ಯಕ್ತಿ ತಾಳಮದ್ದಳೆ ಮಾಡಿದ ದಾಖಲೆ ಇವರದು.
ಸಂಸ್ಕೃತಿ ಪುರಸ್ಕಾರ, ಉಡುಪಿ ರಥಬೀದಿ ಗೆಳೆಯರ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ, ಇನ್ನೂ ಅನೇಕ ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಓದು, ನಾಟಕಗಳಿಗೆ ಸಂಗೀತ, ನೀನಾಸಮ್, ರಂಗಾಯಣ, nsd, ಸಾಣೆಹಳ್ಳಿ, ನಟನ ಸಂಸ್ಥೆಯ ನಾಟಕಗಳಿಗೆ ಸಂಗೀತ ನೀಡುವುದು ಇವರ ಹವ್ಯಾಸಗಳು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು