ಯಕ್ಷಗಾನವು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ರತ್ನವಾಗಿ ಉಳಿದಿದೆ, ಸಾಂಪ್ರದಾಯಿಕವಾಗಿ ಈ ಪ್ರದರ್ಶನ ಕಲಾ ಪ್ರಕಾರವನ್ನು ಪುರುಷ ಕಲಾವಿದರು ಮಾತ್ರ ಅಭ್ಯಾಸ ಮಾಡುತ್ತಾರೆ ಎಂದು ತಿಳಿದಿದೆ. ಆದಾಗ್ಯೂ, ಇದು ಇನ್ನು ಮುಂದೆ ಒಂದೇ ಆಗಿಲ್ಲ. ಹೆಚ್ಚಿನ ಸಂಖ್ಯೆಯ ಮಹಿಳಾ ಕಲಾವಿದರು ಅದರಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸುತ್ತಿದ್ದಾರೆ ಮತ್ತು ಅವರು ಪ್ರಾಮುಖ್ಯತೆಯನ್ನು ಕಂಡುಕೊಳ್ಳುತ್ತಿದ್ದಾರೆ ಹೀಗೆ ಯಕ್ಷಗಾನ ರಂಗದಲ್ಲಿ ತಮ್ಮದೇಯಾದ ಛಾಪು ಹಾಗೂ ಪ್ರಸಿದ್ಧಿಯನ್ನು ಪಡೆದ ಕಲಾವಿದೆ ಶ್ರೀಮತಿ ಮಯೂರಿ ಉಪಾಧ್ಯಾಯ.
05.07.1965 ರಂದು ರಘುರಾಮ ಭಟ್ ಕೆರೆ ಹಾಗೂ ಲಲಿತಾ ಭಟ್ ಕೆರೆ ಇವರ ಮಗಳಾಗಿ ಮಯೂರಿ ಉಪಾಧ್ಯಾಯರವರ ಜನನ. ಟಿ.ಸಿ.ಹೆಚ್ ಹಾಗೂ ಎಮ್.ಎ. ಸಂಸ್ಕೃತ ಇವರ ವಿದ್ಯಾಭ್ಯಾಸ. ಯಕ್ಷಗಾನವನ್ನು ಕಲಿತ ಸಂಸ್ಥೆ ಕರ್ನಾಟಕ ಕಲಾದರ್ಶಿನಿ, ಯಕ್ಷಗಾನವನ್ನು ಕಲಿಸಿದ ಗುರುಗಳು ಹಾಗೂ ಶೃತಿಯಲ್ಲಿ ಮಾತಾಡುವುದು ಹೇಗೆ ಎಂಬ ಕಲ್ಪನೆ ಮಾಡಿಕೊಟ್ಟವರು ಶ್ರೀ ಶ್ರೀಧರ ಕಾಂಚನ ಗೋಪಾಡಿ ಹಾಗೂ ಶ್ರೀ ಶಂಕರ್ ಬಾಳ್ಕುದ್ರು.
ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ :-
ಅಜ್ಜ ನಾರಾಯಣ ಭಟ್ ಕೆರೆ ಅವರು ಭಾಗವತರಾಗಿದ್ದರು, ಚಿಕ್ಕಪ್ಪ ಹಾಗೂ ಅಪ್ಪ ಮದ್ದಳೆ ವಾದಕರಾಗಿದ್ದರು. ಯಕ್ಷಗಾನದ ಹಿನ್ನೆಲೆಯಿಂದಲೇ ಬಂದ ಇವರು ಬಾಲ್ಯದಲ್ಲಿ ಅಜ್ಜಿಯ ಜೊತೆ ಹಠ ಮಾಡಿ ಯಕ್ಷಗಾನಕ್ಕೆ ಹೋಗುತ್ತಿದ್ದರು, ಯಕ್ಷಗಾನ ಕಲಿಯಬೇಕೆಂಬ ಆಸೆ ಸುಪ್ತವಾಗಿಯೇ ಇತ್ತು. ಚಿಟ್ಟಾಣಿಯವರ ಭಸ್ಮಾಸುರ ಇವರು ಮೆಚ್ಚಿದ ಪಾತ್ರಗಳಲ್ಲೊಂದು, ಮಾಡಿದರೆ ಇಂಥ ಪಾತ್ರವನ್ನೇ ಮಾಡಬೇಕು ಅನ್ನುವ ಆಸೆ, ಆದರೆ ಆಗ ಯಕ್ಷಗಾನವನ್ನು ಮಹಿಳೆಯರಿಗೆ ಕಲಿಸುವವರಿಲ್ಲವಾಗಿತ್ತು, ನಂತರ ಮದುವೆಯಾಗಿ ಬೆಂಗಳೂರಿಗೆ ಬಂದೆ. ಕಲಾದರ್ಶಿನಿ ತಂಡದ ಮಕ್ಕಳ ಯಕ್ಷಗಾನ ನೋಡಿದೆ. ನನಗಂತೂ ಯಕ್ಷಗಾನ ಕಲಿಯಬೇಕೆಂಬ ಆಸೆ ಕಮರಿಹೋಯಿತು, ಮಕ್ಕಳಿಗಾದರೂ ಕಲಿಸೋಣ ಅಂತ ಹೋದೆ. ಅಲ್ಲಿ ಮಹಿಳಾತಂಡವೂ ಇತ್ತು. (ನನಗಾಗ 38ವರ್ಷ) ಮಕ್ಕಳಿಬ್ಬರೂ ದೊಡ್ಡವ ಆದಿತ್ಯ ಬಡಗುತಿಟ್ಟು ಚಿಕ್ಕವ ಶಶಾಂಕ ತೆಂಕುತಿಟ್ಟು ಕಲಿತಿದ್ದಾರೆ. ಹೀಗೆ ಇವರ ಯಕ್ಷಪಯಣ ಕಲಾದರ್ಶಿನಿ ಸಂಸ್ಥೆಯಲ್ಲಿ ಪ್ರಾರಂಭ. ಈಗ “ಯಕ್ಷಸಿರಿ ಬೆಂಗಳೂರು (ರಿ)” ಮಹಿಳಾ ತಂಡಕ್ಕೆ ಹದಿನೈದರ ಹರೆಯ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿಯನ್ನು ಮಾಡಿಕೊಳ್ತೀರಿ :-
ಪ್ರಸಂಗದ ಕಥೆಯನ್ನು ಮೊದಲು ತಿಳಿದುಕೊಂಡು, ನಂತರ ಪಾತ್ರದ ಬಗ್ಗೆ, ಪಾತ್ರಕ್ಕೆ ಬಳಸುವ ಪದ್ಯಗಳ ಬಗ್ಗೆ, ಪ್ರಸಂಗದ ಪದ್ಯಗಳು ಕಲಾವಿದರಿಗೆ ಮನದಟ್ಟು ಮಾಡಿ, ಭಾಗವತರಲ್ಲಿ ಅಥವಾ ತಾಳಮದ್ದಳೆ ಅರ್ಥಧಾರಿಗಳಲ್ಲಿ ಆ ಪಾತ್ರದ ಬಗ್ಗೆ ಕೇಳಿ ಸಂಭಾಷಣೆಗಳನ್ನು ಸಿದ್ಧಪಡಿಸಿ, ಸಹ ಕಲಾವಿದರ ಜೊತೆಯಲ್ಲಿ ಚರ್ಚಿಸಿ, ಕೆಲವೊಂದು ಪುರಾಣದ ಪುಸ್ತಕಗಳನ್ನೂ ಸಹ ಉಪಯೋಗಿಸಿಕೊಳ್ಳುವುದುಂಟು.
ಭಸ್ಮಾಸುರ ಮೋಹಿನಿ, ದಕ್ಷಯಜ್ಞ, ಜಾಂಬವತೀ ಪರಿಣಯ, ಕೃಷ್ಣಾರ್ಜುನ, ಸುಭದ್ರಾ ಕಲ್ಯಾಣ, ರಾವಣವಧೆ, ಬ್ರಹ್ಮ ಕಪಾಲ, ಮಾಗಧವಧೆ, ಕೀಚಕವಧೆ, ಭೀಷ್ಮ ವಿಜಯ, ಭೀಷ್ಮ ಪ್ರತಿಜ್ಞೆ, ಶರಸೇತು ಬಂಧನ, ಸುದರ್ಶನ ವಿಜಯ, ನರಕಾಸುರ ವಧೆ, ರತ್ನಾವತಿ ಕಲ್ಯಾಣ, ಲವಕುಶ, (ಈ ಎಲ್ಲ ಪ್ರಸಂಗಗಳನ್ನು ನನ್ನ ಯಕ್ಷಪಯಣದಲ್ಲಿ ಪ್ರಸ್ತುತಪಡಿಸಿದ್ದೇನೆ ) ಹೀಗೆ ಬಹುತೇಕ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಭಸ್ಮಾಸುರ, ಮಾಗಧ, ಕೀಚಕ, ಕಂಸ, ಭದ್ರಸೇನ, ಸಾಲ್ವ ಹೀಗೆ ಎಲ್ಲ ಪ್ರಸಂಗಗಳಲ್ಲಿಯ ಪ್ರತಿನಾಯಕನ ಪಾತ್ರಗಳು. ತೆಂಕಿನ ಶೈಲಿಯನ್ನೇ ಮೊದಲು ಅಭ್ಯಾಸ ಮಾಡಿದ್ದರಿಂದ ತೆಂಕುತಿಟ್ಟಿನಲ್ಲೂ ದಕ್ಷಯಜ್ಞ , ಶನೀಶ್ವರ ಮಹಾತ್ಮೆ ಪ್ರಸಂಗದಲ್ಲಿ ವೇಷ ಮಾಡಿದ್ದುಂಟು ಎಂದು ಹೇಳುತ್ತಾರೆ ಉಪಾಧ್ಯಾಯರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನಕ್ಕೆ ಅಳಿವು ಎಂಬುದಿಲ್ಲ, ಅದು ಆಗ ಹೇಗಿತ್ತೋ ಇಂದೂ ಹಾಗೇ ಇದೆ ಮುಂದೂ ಹಾಗೇ ಇರುತ್ತದೆ. ಯಾವುದೋ ಒಬ್ಬ ಕಲಾವಿದ ತನ್ನ ಪಾತ್ರದ ಔಚಿತ್ಯವನ್ನರಿಯದೇ ಯಕ್ಷಗಾನದಲ್ಲಿ ದೊಂಬರಾಟ ಮಾಡಿದ ಅಂತಾದರೆ ಕೇವಲ ಅವನ ಪಾತ್ರ ಅಷ್ಟೇ ಅಲ್ಲ ಇಡೀ ಆಟ ಕಳಪೆ ಪ್ರದರ್ಶನ ಆಯ್ತು ಅಂತಾಗ್ತದೆ ಬಿಟ್ರೆ ಯಕ್ಷಗಾನಕ್ಕೆ ಏನೂ ಆಗುವುದಿಲ್ಲ. ಮೊದಲು ಯಕ್ಷಗಾನವನ್ನು ಕಲಿಸುವವರನ್ನು ಹುಡುಕಬೇಕಿತ್ತು. ಆದರೆ ಈಗ ಸರಿಯಾಗಿ ಕಲಿಸುವವರನ್ನು ಹುಡುಕಬೇಕಾಗಿದೆ. ಇತ್ತೀಚೆಗಂತೂ ಮನೆಮನೆಯಲ್ಲಿ ಗೆಜ್ಜೆಯ ಸದ್ದು ಕೇಳಿಸುತ್ತಾ ಇದೆ. ಮಕ್ಕಳು ಮಹಿಳೆಯರಿಗೆ ಯಕ್ಷಗಾನ ಕಲಿಸುವವರಿದ್ದಾರೆ. ಕಲಾ ಪ್ರಕಾರ ಯಾವುದೇ ಆಗಿರಲಿ ಕಲಾವಿದರು, ಸಂಘಟಕರು, ಪ್ರೇಕ್ಷಕರು ಅದನ್ನು ಉಳಿಸಿ ಬೆಳೆಸುವತ್ತ ಯೋಚಿಸಬೇಕಾಗಿದೆ. ವರ್ಷದಲ್ಲಿ ನಾಲ್ಕೈದು ಆಟ ಮಾಡಿ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ವರ್ಷ ಪೂರ್ತಿ ಫೋಟೋ ಹಾಕಿಕೊಳ್ಳುವಂತಾಗಬಾರದು. ಯಾವ ಪಾತ್ರಕ್ಕೆ ಎಷ್ಟು ನೃತ್ಯ ಬೇಕು, ಅರ್ಥಗಾರಿಕೆ ಹೇಗಿರಬೇಕು ಎನ್ನುವ ಬಗ್ಗೆ ಕಲಾವಿದ ಒಂದು ಚೌಕಟ್ಟನ್ನು ಹಾಕಿಕೊಳ್ಳಬೇಕು.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ:-
ಪ್ರಜ್ಞಾವಂತ ಪ್ರೇಕ್ಷಕರಿಂದ ಕಲೆಯ ಉಳಿವು ಸಾಧ್ಯ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯೋಜನೆ ಅಂತ ಏನಿಲ್ಲ. ಆದರೆ ಯಕ್ಷಗಾನದಲ್ಲಿ ಇನ್ನೂ ಬಹಳಷ್ಟು ಪಾತ್ರಗಳನ್ನು ಮಾಡಬೇಕು ಅನ್ನುವ ಯೋಚನೆ ಉಂಟು.
ಸಿರಿಕಲಾ ಮೇಳ, ಯಕ್ಷಗೆಜ್ಜೆ ಶಿರಸಿ, ಸಪ್ತಸ್ವರ ಸೇವಾಸಂಸ್ಥೆ ದಾಂಡೇಲಿ, ಲಹರಿ ಕಲಾರಂಗ ಮೂಡುಗಿಳಿಯಾರು, ಸಾಯಿಕಲಾ ಪ್ರತಿಷ್ಠಾನ ಶಿವಮೊಗ್ಗ, ಶ್ರೀಮಾತಾ ಮಹಿಳಾ ಯಕ್ಷಕಲಾ ಟ್ರಸ್ಟ್ ಶಿವಮೊಗ್ಗ, ಗಾಯತ್ರಿ ಯಕ್ಷಗಾನ ಮಂಡಳಿ ತೀರ್ಥಹಳ್ಳಿ, ಶ್ರೀ ಕಾಂಚಿಕಾಂಬಾ ಮಹಿಳಾ ಯಕ್ಷಗಾನ ಮಂಡಳಿ ಗುಡ್ಡೆಯಂಗಡಿ, ಗಾನಸೌರಭ ಯಕ್ಷಗಾನ ಶಾಲೆ ಹೀಗೆ ಅತಿಥಿ ಕಲಾವಿದೆಯಾಗಿ ಅನೇಕ ತಂಡಗಳಲ್ಲಿ ಭಾಗವಹಿಸಿದ್ದೇನೆ ಎಂದು ಹೇಳುತ್ತಾರೆ ಉಪಾಧ್ಯಾಯರು.
ಸನ್ಮಾನ ಹಾಗೂ ಪ್ರಶಸ್ತಿ:-
ಸನ್ಮಾನಗಳು:-
ಸಹ್ಯಾದ್ರಿ ಕನ್ನಡ ಸಂಘದ ಬೆಳ್ಳಿ ಹಬ್ಬ.
ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ನ ರಜತ ಸಂಭ್ರಮ.
ಗೋವಾ ಕನ್ನಡ ಸಮಾಜ.
ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಬೆಂಗಳೂರು.
ಯಕ್ಷಗೆಜ್ಜೆ ಶಿರಸಿ.
ಸಪ್ತಸ್ವರ ಸೇವಾಸಂಸ್ಥೆ ಗುಂದ.
ಡಾ. ಕೆರೆಮನೆ ಮಹಾಬಲ ಹೆಗಡೆ ಸ್ಮಾರಕ ರಂಗ ಪ್ರತಿಷ್ಠಾನ.
ದೆಹಲಿ ಕರ್ನಾಟಕ ಸಂಘ, ಕಾಶೀ ಕನ್ನಡ ಸಂಘ.
ಕಡತೋಕಾ ಮಂಜುನಾಥ ಭಾಗವತರ ಯಕ್ಷರಂಗೋತ್ಸವ ಕಾರ್ಯಕ್ರಮ.
ಗಾನಸೌರಭ ಯಕ್ಷಗಾನ ಶಾಲೆ.
ಪ್ರಶಸ್ತಿಗಳು:-
ಚಿಗುರು ಕಲ್ಚರಲ್ ಟ್ರಸ್ಟ್ ಇವರಿಂದ ಮಹಿಳಾ ಸಾಧಕ ಪ್ರಶಸ್ತಿ.
ಲಯಾಭಿನಯ ಕಲ್ಚರಲ್ ಫೌಂಡೇಶನ್ ವತಿಯಿಂದ ಉಭಯ ಯಕ್ಷ ಚತುರೆ ಪ್ರಶಸ್ತಿ.
ಕರುನಾಡ ವಿಜಯಸೇನೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಬೆಳವಾಡಿ ಮಲ್ಲಮ್ಮ ಪ್ರಶಸ್ತಿ.
ರಾಷ್ಟ್ರೀಯ ಬಸವ ಪ್ರತಿಷ್ಠಾನ ವತಿಯಿಂದ ಕಾಯಕರತ್ನ ಪ್ರಶಸ್ತಿ.
ಕರ್ನಾಟಕ ಸಂಘ ಕೊಯಮುತ್ತೂರು ವತಿಯಿಂದ ನಾಟ್ಯಮಯೂರೀ ಪ್ರಶಸ್ತಿ.
ಪೇಂಟಿಂಗ್ , ಕಸೂತಿ, ಸ್ಕ್ರೀನ್ ಪ್ರಿಂಟಿಂಗ್, ಗಾರ್ಡೆನಿಂಗ್ ಹಾಗೂ ಯಕ್ಷಗಾನ ಇದು ನನ್ನ ಪ್ರೀತಿಯ ಹವ್ಯಾಸ ಎಂದು ಹೇಳುತ್ತಾರೆ ಮಯೂರಿ ಉಪಾಧ್ಯಾಯ.
ಮಯೂರಿ ಉಪಾಧ್ಯಾಯ ಅವರು 07.05.1990ರಂದು ಗಜಾನನ ಉಪಾಧ್ಯಾಯ ಇವರನ್ನು ಮದುವೆಯಾಗಿ ಮಕ್ಕಳಾದ ಆದಿತ್ಯ, ಶಶಾಂಕ ಹಾಗೂ ಸೊಸೆ ರಾಧಿಕಾ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.