ಯಕ್ಷಗಾನ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಕಲೆ. ವಿಭಿನ್ನ ವೇಷಭೂಷಣ, ಲಯಬದ್ಧವಾದ ಸಂಗೀತ, ನೃತ್ಯ, ಸಂಭಾಷಣೆಗಳ ಸಮ್ಮಿಲನವಾದ ಯಕ್ಷಗಾನವನ್ನು ನೋಡುವುದು ಒಂದು ವಿಶಿಷ್ಟ ಅನುಭವ. ಇಂತಹ ಶ್ರೀಮಂತ ಕಲೆಯಲ್ಲಿ ಮಿಂಚುತ್ತಿರುವ ಕಲಾವಿದೆ ಭಾರತಿ ಸುದರ್ಶನ್.
ನವೆಂಬರ್ 11 ರಂದು ಸೊರಬ ತಾಲ್ಲೂಕಿನ ಬಿ. ದೊಡ್ಡೇರಿ ಗ್ರಾಮದಲ್ಲಿ ಶ್ರೀಯುತ ಜಿ. ನಾರಾಯಣ ರಾವ್ ಹಾಗೂ ಶ್ರೀಮತಿ ಇವರ ಮಗಳಾಗಿ ಜನಿಸಿದರು. ಬಿಕಾಂ ಇವರ ವಿದ್ಯಾಭ್ಯಾಸ. ಇವರ ಮನೆಯೇ ಒಂದು ಯಕ್ಷಗಾನದ ಕುಟುಂಬ ಅಜ್ಜ ಅಪ್ಪ ಚಿಕ್ಕಪ್ಪ ತಮ್ಮಂದಿರು ಹಾಗೂ ಅವರ ಮಕ್ಕಳು ಎಲ್ಲರೂ ಯಕ್ಷಗಾನ ಕಲಾವಿದರು. ಹಾಗಾಗಿ ರಕ್ತಗತವಾಗಿಯೇ ಈ ಕಲೆ ಹರಿದು ಬಂದಿತು. ಅವರ ತಂದೆಯವರು ತಮ್ಮ ಮನೆಯ ದೇವಸ್ಥಾನದ ಹೆಸರಿನಲ್ಲಿ ‘ಶ್ರೀ ವೇಣು ಗೋಪಾಲ ಕೃಷ್ಣ ಯಕ್ಷಗಾನ ಮಂಡಳಿ’ ಬಿ.ದೊಡ್ಡೇರಿ ಎಂಬುದಾಗಿ ಹವ್ಯಾಸಿ ಮೇಳವನ್ನು ಆರಂಭಿಸಿ ಅದರ ಯಜಮಾನರಾಗಿ ಹಾಗೂ ಮುಖ್ಯ ವೇಷಧಾರಿಯಾಗಿ ಸುಮಾರು 25 ವರ್ಷಗಳ ಕಾಲ ದುಡಿದವರು. ಆ ನಂತರ ಮೇಳ ನಡೆಸುವುದು ಕಷ್ಟವಾದಾಗ ಅದನ್ನು ನಿಲ್ಲಿಸಿದರು. ಚಿಕ್ಕವಯಸ್ಸಿನಲ್ಲಿ ಅದನ್ನು ನೋಡಿ ಪ್ರೇರಣೆಗೊಂಡು ಯಕ್ಷಗಾನ ರಂಗಕ್ಕೆ ಬಂದರು ಭಾರತಿ. ಯಕ್ಷಗಾನದ ಪ್ರಥಮ ಗುರು ತಂದೆ. ನಂತರ ಈಗ 10 ವರ್ಷಗಳಿಂದ ಯಕ್ಷಗುರುಗಳಾದ ಶ್ರೀಯುತ ಐನಬೈಲು ಪರಮೇಶ್ವರ ಹೆಗಡೆಯವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ವರ್ಷದಲ್ಲಿ ಸಾಕಷ್ಟು ಮೇಳದ ಆಟ ಹಾಗೂ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ನಡೆಯುವ ಆಟಗಳನ್ನು ನೋಡುತ್ತೇನೆ. ಅಲ್ಲಿ ಸಿಕ್ಕ ಕೆಲವು ಅಂಶಗಳು ಹಾಗೂ ಓದಿದ ಪುರಾಣ ಕಥೆಗಳು ಮತ್ತು ನನ್ನ ಗುರುಗಳು ಹೇಳಿಕೊಟ್ಟ ಕೆಲವು ಮಾತುಗಳು ಎಲ್ಲಾ ಸೇರಿಸಿ ಒಂದು ಪಾತ್ರ ಚಿತ್ರಣವನ್ನು ಕೊಡಲು ಪ್ರಯತ್ನಿಸುತ್ತೇನೆ.
ಸುಧನ್ವಾರ್ಜುನ, ಗದಾಯುದ್ಧ, ಕರ್ಣಪರ್ವ, ಸುದರ್ಶನ ವಿಜಯ ಇವರ ನೆಚ್ಚಿನ ಪ್ರಸಂಗಗಳು.
ಅರ್ಜುನ, ಕೃಷ್ಣ, ಸುಧನ್ವ, ಅಂಬೆ, ಸತ್ಯಭಾಮೆ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಇಂದು ಹೆಚ್ಚು ಹೆಚ್ಚು ಪ್ರದರ್ಶನಗೊಳ್ಳುತ್ತಿದೆ. ಹೊಸತು ಅನಿವಾರ್ಯ. ಹಳತನ್ನೂ ಬಿಡದೆ ಹೊಸತರ ಜೋಡಣೆ ಮಾಡಿದರೆ ಹೆಚ್ಚು ರಸವತ್ತಾಗಬಹುದು ಅನ್ನಿಸುತ್ತದೆ. ಕೇವಲ ಕುಣಿತದ ಬಗ್ಗೆ ಹೆಚ್ಚು ಗಮನ ಕೊಡದೆ ಮಾತುಗಾರಿಕೆಯನ್ನೂ ಬೆಳೆಸಿಕೊಳ್ಳುವುದು ಉತ್ತಮ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇವತ್ತಿನ ಪ್ರೇಕ್ಷಕ ಕೇವಲ ಒಬ್ಬ ಕಲಾವಿದನಿಗಾಗಿ ಆಟ ನೋಡದೆ ಕಲೆಯ ದೃಷ್ಟಿಯಿಂದ ಆಸ್ವಾದಿಸಬೇಕು. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಗೌರವ ಇದೆ. ಪ್ರಸಂಗ ಮುಗಿಯುವವರೆಗೂ ಕುಳಿತು ನೋಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪ್ರದರ್ಶನದಲ್ಲಿ ಕಂಡ ತಪ್ಪುಒಪ್ಪುಗಳನ್ನು ಕಲಾವಿದರಿಗೆ ತಿಳಿಸಿದಲ್ಲಿ ಮುಂದಿನ ಪ್ರದರ್ಶನಕ್ಕೆ ಸಹಾಯವಾಗಬಹುದು.
ಯಕ್ಷಗಾನದಲ್ಲಿ ಮುಂದಿನ ಯೋಜನೆ ಏನು ಸದ್ಯಕ್ಕಿಲ್ಲ. ಕಲಾವಿದೆಯಾಗಿ, ಕಲಾಭಿಮಾನಿಯಾಗಿ ಸಾಧ್ಯವಾದಷ್ಟು ಕಾಲ ಮುಂದುವರೆಯುವುದು.
ಸಾಕಷ್ಟು ಹವ್ಯಾಸಿ ಕಲಾವಿದರುಗಳ ಜೊತೆಯಲ್ಲಿ ವೇಷ ಮಾಡಿರುವ ಅನುಭವ ಭಾರತಿ ಆವರದು.
ಅಭಿಮಾನಿಗಳ ತುಂಬು ಹೃದಯದ ಹಾರೈಕೆಯೇ ನಮಗೆ ಶ್ರೀರಕ್ಷೆ.
ಓದುವುದು, ನೃತ್ಯ, ಭಜನೆ ಹಾಗೂ ಸಾಕಷ್ಟು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡ್ತೇನೆ. ಇದುವೇ ನನ್ನ ಹವ್ಯಾಸ ಎಂದು ಹೇಳುತ್ತಾರೆ ಭಾರತಿ.
ಭಾರತಿ ಅವರು 26.12.1996ರಂದು ಡಾ.ಸುದರ್ಶನ್ ಅವರನ್ನು ಮದುವೆಯಾಗಿ ಮಗ ಚಿರಂತನ್ ಜೊತೆಗೆ ಸುಖೀ ಸಂಸಾರನ್ನು ನೆಡೆಸುತ್ತಿದ್ದಾರೆ. ಇವರು ಸೇರಿದ ಮನೆಯೂ ಯಕ್ಷಗಾನದ ಕುಟುಂಬವೇ. ಪತಿ ಹಾಗೂ ಮಗ ಇಬ್ಬರಿಗೂ ಯಕ್ಷಗಾನ ಕಲೆಯಲ್ಲಿ ತುಂಬಾ ಆಸಕ್ತಿ ಹಾಗೂ ಪ್ರೋತ್ಸಾಹ ಇರುವುದರಿಂದ ನನಗೆ ಈ ಕಲೆಯಲ್ಲಿ ಮುಂದುವರೆಯಲು ತುಂಬಾ ಅನುಕೂಲವಾಗುತ್ತಿದೆ ಎಂದು ಹೇಳುತ್ತಿದ್ದಾರೆ ಭಾರತಿ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.