01.02.2000ರಂದು ಸದಾನಂದ ರೈ ಹಾಗೂ ಚಂದ್ರಕಲಾ ರೈ ಇವರ ಮಗಳಾಗಿ ಪ್ರತಿಷ್ಠ ಎಸ್ ರೈ ಅವರ ಜನನ. Msc in Big Data Analytics ಇವರ ವಿದ್ಯಾಭ್ಯಾಸ. ಪೂರ್ಣಿಮಾ ಯತೀಶ್ ರೈ ಇವರ ಯಕ್ಷಗಾನ ಗುರುಗಳು.
ಅಮ್ಮನಿಗೆ ಯಕ್ಷಗಾನ ಅಂದ್ರೆ ಬಹಳ ಇಷ್ಟ, ಹಾಗಾಗಿ ನನ್ನನ್ನು ಹಾಗೂ ತಮ್ಮನನ್ನು ಪೂರ್ಣಿಮಾ ಯತೀಶ್ ರೈ ಅವರ ಹತ್ತಿರ ಯಕ್ಷಗಾನ ಕಲಿಯಲು ಸೇರಿಸಿದರು. ನಾನು ತುಂಬಾ ಚಿಕ್ಕ ಇದ್ದೆ ಹಾಗೂ ಯಕ್ಷಗಾನ ನೋಡಿ ಮಾತ್ರ ಗೊತ್ತಿತ್ತು, ಹಾಗಾಗಿ ನಾನು ಯಕ್ಷಗಾನ ರಂಗಕ್ಕೆ ಬರಲು ಮೂಲ ಪ್ರೇರಣೆ ಹೆತ್ತವರು ಎಂದು ಹೇಳುತ್ತಾರೆ ರೈಯವರು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ನನಗೆ ಒಂದು ದೊಡ್ಡ ಸಮಸ್ಯೆ ಅಂದ್ರೆ ಕನ್ನಡ. ನಾನು ಕಲಿತ ಶಾಲೆಯಲ್ಲಿ ಕನ್ನಡ ಇರಲಿಲ್ಲ, ಹಾಗೆಯೇ ನಮ್ಮ ಮನೆಯಲ್ಲಿ ನಾವು ತುಳು ಮಾತನಾಡುವುದು. ಹಾಗಾಗಿ ರಂಗಕ್ಕೆ ಹೋಗುವಾಗ ತಕ್ಷಣ ಸಂಭಾಷಣೆ ಹೇಳಲು ಕಷ್ಟ, ಅದಕ್ಕೆ ನಾನು ಅರ್ಥವನ್ನು ಕಂಠ ಪಾಠ ಮಾಡಬೇಕಾಗುತ್ತದೆ, ಪ್ರಸಂಗದ ಬಗ್ಗೆ ಪೂರ್ಣಿಮಾ ಯತೀಶ್ ರೈ ಹಾಗೂ ಅಮ್ಮ ಪ್ರಸಂಗದ ಅರ್ಥ ಹೇಳಿ ಕೊಡುತ್ತಾರೆ.
ದೇವಿ ಮಹಾತ್ಮೆ, ದಕ್ಷಾಧ್ವರ, ಗಿರಿಜಾ ಕಲ್ಯಾಣ, ಶಶಿಪ್ರಭ ಪರಿಣಯ, ಮೂರಾಸುರ ವಧೆ ಇವರ ನೆಚ್ಚಿನ ಪ್ರಸಂಗಗಳು.
ಪೂರ್ಣಿಮಾ ಯತೀಶ್ ರೈ ಅವರ ತಂಡದಲ್ಲಿ ಹಾಸ್ಯ, ಸ್ತೀ ವೇಷ ಹಾಗೂ ಇನ್ನೂ ಅನೇಕ ರೀತಿಯ ವೇಷ ಮಾಡಲು ಅವಕಾಶ ಸಿಕ್ಕಿದೆ. ಪುಂಡು ವೇಷ ತುಂಬಾ ಇಷ್ಟದ ವೇಷ ಎಂದು ಹೇಳುತ್ತಾರೆ ರೈಯವರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ತುಂಬಾ ಉತ್ತಮ ಸ್ಥಿತಿಯಲ್ಲಿ ಇದೆ. ಮಹಿಳಾ ಕಲಾವಿದರು ಅನೇಕ ಜನ ಯಕ್ಷಗಾನ ರಂಗಕ್ಕೆ ಬರುತ್ತಿದ್ದಾರೆ. ಯಕ್ಷಗಾನದ ತುಂಬಾ ಅವಕಾಶ, ಸ್ಪರ್ಧೆಗಳು, ತರಗತಿಗಳು ನಡೆಯುತ್ತಿದೆ. ಈಗ ತುಂಬಾ ಮಕ್ಕಳು ಯಕ್ಷಗಾನ ಕಲಿಯುತ್ತ ಇದ್ದಾರೆ ಹಾಗೂ ಯಕ್ಷಗಾನ ತುಂಬಾ ಬೆಳೆಯುತ್ತಾ ಇದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಈಗ ಯಕ್ಷಗಾನಕ್ಕೆ ಪ್ರೇಕ್ಷಕರು ಜಾಸ್ತಿ ಆಗಿದ್ದಾರೆ. ಯುವ ಕಲಾವಿದರಿಗೆ ಪ್ರೇಕ್ಷಕರು ತುಂಬಾ ಪ್ರೋತ್ಸಾಹ ನೀಡುತ್ತಿದ್ದಾರೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ನಮ್ಮ ಯಕ್ಷ ಮಣಿ ಕಲಾ ತಂಡಕ್ಕೆ ನಮ್ಮ ಊರಿನಲ್ಲಿ ಮಾತ್ರ ಅವಕಾಶ ಸಿಗುತ್ತ ಇದೆ. ನಮ್ಮ ತಂಡದ ಕಾರ್ಯಕ್ರಮ ನಮ್ಮ ಊರಿನಲ್ಲಿ ಅಲ್ಲದೆ ಬೇರೆ ಊರಿನಲ್ಲೂ ಪ್ರದರ್ಶನ ನೀಡಿ, ನಮ್ಮ ತಂಡವನ್ನು ಬೆಳಸಬೇಕು ಎಂಬ ಯೋಜನೆ ಇದೆ ಎಂದು ಹೇಳುತ್ತಾರೆ ಪ್ರತಿಷ್ಠ.
ತಮಿಳುನಾಡಿನ ಚೆನ್ನೈಯಲ್ಲಿ ನಡೆದ Alagu Fest ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ Amity Utsav ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.
ಛತ್ತೀಸಗಢದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ South Asian Universities Youth Festival (Soufest) ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಕಾಲೇಜ್ ನಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಉತ್ತಮ ಹಾಸ್ಯ ವೇಷ, ವೈಯಕ್ತಿಕ ಬಹುಮಾನ ಹಾಗೂ ಇನ್ನೂ ಅನೇಕ ಬಹುಮಾನ ದೊರೆತಿರುತ್ತದೆ.
ಭರತನಾಟ್ಯ, ಸಾಮಾಜಿಕ, ಪೌರಾಣಿಕ ನಾಟಕದಲ್ಲಿ ಅಭಿನಯ ಮಾಡಿದ್ದೇನೆ ಹಾಗೂ ಬಿಡುವಿನ ಸಮಯದಲ್ಲಿ ನಾಟಕ, ಯಕ್ಷಗಾನದ ಬಗ್ಗೆ ಅಧ್ಯಯನ ಮಾಡುತ್ತೇನೆ. ಪೂರ್ಣಿಮಾ ಯತೀಶ್ ರೈ ಅವರ ತಂಡದಲ್ಲಿ ಮುಂಬೈ, ಚೆನ್ನೈ, ದೆಹಲಿ ಹಾಗೂ ಅನೇಕ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದೇನೆ ಎಂದು ಹೇಳುತ್ತಾರೆ ರೈಯವರು.
ಪೂರ್ಣಿಮಾ ಯತೀಶ್ ರೈ ಅವರ ಮಹಾ ಗಣಪತಿ ಮಕ್ಕಳ ಮೇಳ ಹಾಗೂ ಮಹಿಳಾ ಮೇಳದಲ್ಲಿ ತಿರುಗಾಟ ಮಾಡಿದ್ದೇನೆ ಹಾಗೂ 5 ವರ್ಷದ ಹಿಂದೆ ನಮ್ಮ ಮನೆಯಲ್ಲಿ ಪೂರ್ಣಿಮಾ ಯತೀಶ್ ರೈ ಅವರನ್ನು ಕರೆಸಿ ಯಕ್ಷಗಾನ ತರಗತಿಯನ್ನು ಶುರು ಮಾಡಿ ತಂಡಕ್ಕೆ ಯಕ್ಷ ಮಣಿ ಕಲಾ ತಂಡ ಚೆಲೈರು ಎಂದು ಹೆಸರು ಇಟ್ಟು 50-60 ಮಕ್ಕಳು ಕಲಿಯುತ್ತ ಇದ್ದಾರೆ, ಈಗಾಗಲೇ ಹಲವು ಪ್ರದರ್ಶನವನ್ನು ನೀಡಿರುತ್ತೇವೆ ಎಂದು ಹೇಳುತ್ತಾರೆ ರೈಯವರು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು