ಉಡುಪಿ ಜಿಲ್ಲೆಯ ಕಡೆಕಾರಿನ ವಿಜಯ ಶೆಟ್ಟಿ ಹಾಗೂ ಜಯಂತಿ ಶೆಟ್ಟಿ ದಂಪತಿಯರ ಮಗಳಾಗಿ 12.12.1994 ರಂದು ಚೈತ್ರ ಅವರ ಜನನ. ಬಿಎಸ್ಸಿ ನರ್ಸಿಂಗ್, ಎಂಎಸ್ಸಿ ನರ್ಸ್ ಪ್ರಾಕ್ಟಿಶನರ್ ಕ್ರಿಟಿಕಲ್ ಕೇರ್ MAHE, ಮಣಿಪಾಲದಲ್ಲಿ ಕಲಿತು ಪ್ರಸ್ತುತ ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲದಲ್ಲಿ ನರ್ಸ್ ಪ್ರಾಕ್ಟಿಶನರ್ ಇನ್ ಕ್ರಿಟಿಕಲ್ ಕೇರ್ ನಲ್ಲಿ ವೃತ್ತಿಯನ್ನು ಮಾಡುತ್ತಿದ್ದಾರೆ.
ಯಕ್ಷಗಾನ ಗುರುಗಳು:-
ಶ್ರೀ ರಾಜೀವ್ ತೋನ್ಸೆ (ಮಟ್ಟು)
ಶ್ರೀ ಕೆ. ಜೆ. ಗಣೇಶ್.
ಯಕ್ಷಗಾನಕ್ಕೆ ಕ್ಷೇತ್ರಕ್ಕೆ ಬರಲು ಪ್ರೇರಣೆ:-
ಅಷ್ಟಮಿಯಂದು ಬರುವ ರಕ್ಕಸ ವೇಷ, ಯಕ್ಷಗಾನದ ವೇಷ ಭೂಷಣ ನೋಡಿ ಹೆದರಿ ಅಡಗಿ ಕುಳಿತುಕೊಳ್ಳುತ್ತಿದ್ದೆ. ಆದರೆ ನೃತ್ಯ, ನಾಟಕ ರಂಗದಲ್ಲಿ ಬಹು ಆಸಕ್ತಿ ಇತ್ತು. ಅದರಲ್ಲಿ ಮುಂದುವರಿಯಬೇಕು ಎಂಬ ಕನಸೂ ಇತ್ತು. ಸರಿಯಾದ ಅವಕಾಶ ಸಿಕ್ಕಿರಲಿಲ್ಲ. ನಾನು ಕಲಿಯುತ್ತಿದ್ದ ಸರಕಾರಿ ಪ್ರಾಥಮಿಕ ಶಾಲೆ ಕಡೆಕಾರ್ ನ ಹೆಣ್ಣು ಮಕ್ಕಳಿಗೆ, ಪಡುಕೆರೆಯಿಂದ ವರ್ಗಾವಣೆಯಾಗಿ ಕಡೆಕಾರಿಗೆ ಬಂದ ಗಂಗಾಧರ್ ಜಿ. ಅವರ ಸಾರಥ್ಯದಲ್ಲಿ ಗುರುಗಳಾದಂತಹ ಶ್ರೀಯುತ ರಾಜೀವ್ ತೋನ್ಸೆಯವರ ಶಿಕ್ಷಣದೊಂದಿಗೆ ದುರ್ಗಾಂಬಿಕಾ ಮಹಿಳಾ ಯಕ್ಷಗಾನ ಬಳಗ ತಂಡವನ್ನು ಕಡೆಕಾರ್ ನಲ್ಲಿ ಕಟ್ಟಿರುವಾಗ ನಾನು 7ನೇ ತರಗತಿಯಲ್ಲಿದ್ದೆ. ಅಲ್ಲಿಂದ ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿದ ನಾನು ಇಂದಿಗೂ ಯಕ್ಷಗಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನೃತ್ಯಗಾರಿಕೆ, ಮಾತುಗಾರಿಕೆ, ಹಾಗೂ ಅಭಿನಯದಿಂದ ಕೂಡಿದ ಈ ಕಲಾಕ್ಷೇತ್ರವು ನನ್ನನ್ನು ಪ್ರೇರೇಪಿಸಿತು.
ವರ್ಷಂಪ್ರತಿ ಸಂಘದ ವಾರ್ಷಿಕ ದಿನಾಚರಣೆಯಂದು ಒಂದು ಪ್ರಸಂಗದ ಪ್ರದರ್ಶನವನ್ನು ನೀಡುತ್ತಿದ್ದೆವು.
2019 ರಲ್ಲಿ ನೆಂಟರ ಮನೆಯ ಮೆಹೆಂದಿ ಕಾರ್ಯಕ್ರಮದಲ್ಲಿ ಸಣ್ಣ ನಾಟ್ಯವೈಭವದ ತುಣುಕು ಜಾಲತಾಣದಲ್ಲಿ ಹರಿದು ನನ್ನ ಯಕ್ಷಗಾನದ ಕಡೆಗೆ ಒಲವು ಹೆಚ್ಚಾಗಲು ಕಾರಣವಾಯಿತು. ತದನಂತರ ಬೇರೆ ಬೇರೆ ಮೇಳಗಳ ಯಕ್ಷಗಾನದ ತುಣುಕುಗಳನ್ನು ನೋಡಲು ಪ್ರೇರೇಪಣೆಯಾಯಿತು. ಅಲ್ಲಿಂದ ಯಕ್ಷಗಾನವೆಂಬುದು ಬಹುದೊಡ್ಡ ಸಾಗರವೆಂದು ತಿಳಿಯಿತು. ನಮ್ಮವರೇ ಆದಂತಹ ಸಮಾಜಮುಖಿ ಶ್ರೀಮತಿ ನಿರುಪಮಾ ಪ್ರಸಾದ್ ಶೆಟ್ಟಿಯವರ ಹೊಸ ತಂಡದಲ್ಲಿ ‘ಸಾಪಲ್ಲ ಮಹಿಳಾ ಯಕ್ಷಗಾನ ತಂಡ’ದಿಂದಲೂ ಕಾರ್ಯಕ್ರಮಗಳನ್ನು ನೀಡುತ್ತಿರುತ್ತೇನೆ.
ನೆಚ್ಚಿನ ಪ್ರಸಂಗಗಳು:-
ಶ್ವೇತ ಕುಮಾರ ಚರಿತ್ರೆ, ಅಭಿಮನ್ಯು ಕಾಳಗ, ಕೃಷ್ಣಾರ್ಜುನ ಕಾಳಗ, ಕಂಸ ದಿಗ್ವಿಜಯ, ಚಿತ್ರಸೇನ ಕಾಳಗ, ಪಾಂಚಜನ್ಯ, ದ್ರುಪದ ಗರ್ವಭಂಗ, ರತ್ನಾವತಿ ಕಲ್ಯಾಣ, ಶಶಿಪ್ರಭಾ ಪರಿಣಯ, ದೇವಿ ಮಹಾತ್ಮೆ, ಸೌಗಂಧಿಕಾ ಪುಷ್ಪ ಹರಣ.
ನೆಚ್ಚಿನ ವೇಷಗಳು:-
ಕೃಷ್ಣ, ಭೀಮ, ಅಭಿಮನ್ಯು, ಅರ್ಜುನ, ಮಹಿಷಾಸುರ, ಶ್ವೇತ ಕುಮಾರ, ಶಶಿಪ್ರಭೆ.
“ರಂಗಪ್ರವೇಶಕ್ಕಿಂತ ಮೊದಲು ಗುರುಗಳಿಂದ ಪ್ರಸಂಗದ ಬಗ್ಗೆ ತಿಳಿದುಕೊಂಡು ಪೂರಕ ಪುಸ್ತಕ ಅಧ್ಯಯನ ಮಾಡಿ, ಹಿರಿಯ ಕಲಾವಿದರಾದಂತಹ ಶ್ರೀಮತಿ ಭಾಗೀರಥಿ, ಶ್ರೀಮತಿ ನಾಗರತ್ನ ಹೇರ್ಳೆ ಹಾಗು ಗೆಳತಿ ಅನನ್ಯ ಇವರೊಂದಿಗೆ ಪೂರ್ವ ಸಿದ್ಧತೆ ಮಾಡಿಕೊಂಡು, ಜಾಲತಾಣದ ತುಣುಕುಗಳನ್ನು ನೋಡಿಕೊಂಡು ರಂಗ ಸಿದ್ಧತೆ ಮಾಡಿಕೊಳ್ಳುತ್ತೇನೆ” ಎಂದು ಹೇಳುತ್ತಾರೆ ಚೈತ್ರ.
ಅತಿಥಿ ಕಲಾವಿದೆಯಾಗಿ ಪೆರ್ಡೂರು ಮೇಳದ ಒಂದು ಸಾಮಾಜಿಕ ಪ್ರಸಂಗದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವೇಷ ಮಾಡಿದ ಅನುಭವ ಅತ್ಯುತ್ತಮ. ಇನ್ನಷ್ಟು ಯಕ್ಷಗಾನ ಕ್ಷೇತ್ರದಲ್ಲಿ ಕಲಿಯಬೇಕೆಂಬಂತಹ ಹುಮ್ಮನಸು ಹುಟ್ಟಿತು. ಅನೇಕ ಕಲಾವಿದರ ರಂಗ ಚುರುಕುತನವನ್ನು ಕಂಡು ಅದರಲ್ಲೂ ಕಿರಾಡಿ ಪ್ರಕಾಶ್ ಮೊಗವೀರರ ಕುಣಿತ ಹಾಗೂ ಕಾರ್ತಿಕ್ ಚಿಟ್ಟಾಣಿಯವರ ರಂಗ ಚಾತುರ್ಯತೆಯನ್ನು ಕಂಡು ಪ್ರೇರೇಪಿತಳಾದೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಜಾಲತಾಣದ ಯುಗವಾಗಿರುವುದರಿಂದ ಹೆಚ್ಚಿನ ಯುವ ಜನತೆ ಯಕ್ಷಗಾನದ ಪೂರ್ತಿ ಪ್ರಸಂಗ ಸಾರಾಂಶಕ್ಕಿಂತ ಕುಣಿತ, ನಾಟ್ಯ ವೈಭವ ಹಾಗೂ ಕೇವಲ ರೀಲ್ಸ್ ಗಳ ಮೆಚ್ಚುಗೆಗಾಗಿ ಅಷ್ಟರ ಮಟ್ಟಿಗೆ ಸೀಮಿತವಾಗುತ್ತಿದ್ದಾರೆ.
ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ:-
ಯಕ್ಷಗಾನದ ಬಗ್ಗೆ ಇನ್ನಷ್ಟು ಅರಿತು, ಸಾಧ್ಯವಾದಷ್ಟು ಒಂದು ಪ್ರಸಂಗವನ್ನು 2-3 ಬಾರಿ ಪ್ರದರ್ಶನ ನೀಡಬೇಕೆಂಬುದು ನನ್ನ ಕನಸು. ನಾನು ಯಕ್ಷಗಾನ ತರಬೇತಿ ಮಾಡುತ್ತಿದ್ದಾಗ ಒಂದು ವರ್ಷಕ್ಕೆ ಒಂದೇ ಪ್ರಸಂಗದ ಪ್ರದರ್ಶನ ನೀಡುತ್ತಿದ್ದೆವು ಹಾಗೂ ಆ ಪ್ರಸಂಗದ ಇನ್ನೊಂದು ಪ್ರದರ್ಶನ ನೀಡುತ್ತಿರಲಿಲ್ಲ. ಇದರಿಂದಾಗಿ ನಮ್ಮಲ್ಲಿನ ಒಂದು ಪ್ರಸಂಗದ ಬಗೆಗಿನ ಅರ್ಥ ಪದ್ಯದ ಕುಣಿತ ಒಮ್ಮೆಗೆ ಮಾತ್ರ ಪ್ರದರ್ಶನವಾಗುತ್ತಿತ್ತು. ಇದರಿಂದ ನಮ್ಮಲ್ಲಿ ಒಂದು ಪ್ರಸಂಗದ ಮೇಲೆ ಕಾನ್ಫಿಡೆನ್ಸ್ ಇರುತ್ತಿರಲಿಲ್ಲ ಮತ್ತು ಉದ್ಯೋಗದ ಪ್ರಕಾರ ನೋಡುವುದಾದರೆ ಉನ್ನತ ಪದವಿ ಮಾಡಲು ಬಯಸುತ್ತಿದ್ದೇನೆ. (PhD as Higher Education).
ಸನ್ಮಾನ ಪ್ರಶಸ್ತಿಗಳು:-
ತುಳುವ ಕಲಾಸಿರಿ ಪ್ರಶಸ್ತಿ 2019-2020.
ಯಕ್ಷ ರಕ್ಷಾ ಕಲಾ ಪ್ರಶಸ್ತಿ 2019.
ಚೈತನ್ಯ ಯುವ ವೃಂದ ಹೆಬ್ರಿ ಇವರಿಂದ ಸನ್ಮಾನ.
ಆಧ್ಯಾತ್ಮಿಕ ರಹಸ್ಯ ಮಾಸ ಪತ್ರಿಕೆ ಕಡಲೋತ್ಸವದಲ್ಲಿ ಸನ್ಮಾನ.
ಉಡುಪಿ ಪರ್ಯಾಯ 2020 ಸನ್ಮಾನ.
ದುರ್ಗಾಂಬಿಕಾ ಮಹಿಳಾ ಯಕ್ಷಗಾನ ತಂಡದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದೆಯಾಗಿ ವೇಷ ಮಾಡಿದ ಅನುಭವ ಹಾಗೂ ದುರ್ಗಾಂಬಿಕಾ ಮಹಿಳಾ ಚೆಂಡೆ ಬಳಗದ ಸದಸ್ಯೆ. ನೃತ್ಯಗಾರಿಕೆ, ಹುಲಿ ಕುಣಿತ, ಕ್ರಾಫ್ಟ್ ಮೇಕಿಂಗ್ ಇವರ ಹವ್ಯಾಸಗಳು.
ಚೈತ್ರ ಶೆಟ್ಟಿ ಅವರು ಚೇತನ್ ಕುಮಾರ್ ಶೆಟ್ಟಿ ಅವರನ್ನು 20.09.2021ರಂದು ಮದುವೆಯಾಗಿ ಮಗ ಶ್ಲೋಕ್ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ ತಾಯಿ ಪತಿಯ ಪ್ರೋತ್ಸಾಹ, ಗುರು-ಹಿರಿಯ ಕಲಾವಿದರ ಮಾರ್ಗದರ್ಶನ ಹಾಗೂ ಉದ್ಯೋಗ ನಿರ್ವಹಿಸುತ್ತಿರುವ ಸಂಸ್ಥೆಯಾದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇಲ್ಲಿನ ಆಡಳಿತ ಮಂಡಳಿ ಹಾಗೂ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲವು ನನ್ನನ್ನು ಈ ಕ್ಷೇತ್ರದಲ್ಲಿ ಸತತವಾಗಿ ತೊಡಗಿಸಿಕೊಳ್ಳಲು ನೆರವಾಗಿದೆ.
- ಶ್ರವಣ್ ಕಾರಂತ್ ಕೆ.,
ಶಕ್ತಿನಗರ ಮಂಗಳೂರು.