Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪರಿಚಯ ಲೇಖನ | ‘ಯಕ್ಷ ಪೂರ್ಣಿಮಾ’ ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ
    Article

    ಪರಿಚಯ ಲೇಖನ | ‘ಯಕ್ಷ ಪೂರ್ಣಿಮಾ’ ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ

    June 7, 2024No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಯಕ್ಷಗಾನ ಎಂದರೆ ಪುರುಷ ಪ್ರಧಾನವಾದದ್ದು. ರಂಗದಲ್ಲಿ ಪುರುಷರೇ ಮಹಿಳೆಯರಾಗುತ್ತಿದ್ದರು. ಇಲ್ಲಿ ಎಲ್ಲವೂ ಪುರುಷಮಯ ಎಂಬ ಕಾಲ ಬದಲಾಗಿದೆ. ಪುರುಷ ಪ್ರಧಾನವಾದ ಯಕ್ಷಗಾನ ಕ್ಷೇತ್ರದಲ್ಲಿ ಇರುವ ತಾಳಮದ್ದಳೆಯಲ್ಲೂ ಮಹಿಳೆಯರು ಲಗ್ಗೆ ಇಟ್ಟಿದ್ದಾರೆ. ಮೇಲಾಗಿ ಮಹಿಳೆಯರೇ ಸೇರಿ ಯಕ್ಷಗಾನ ತಾಳಮದ್ದಳೆ ಸಂಘಟಿಸಿ, ಪುರುಷರಿಗೆ ಸವಾಲೊಡ್ಡುತ್ತಿದ್ದಾರೆ. ಸ್ತ್ರೀ ಸಹಜ ಬೆಡಗು, ಬಿನ್ನಾಣವಷ್ಟೇ ಅಲ್ಲ; ಭಯಾನಕ, ಭೀಭತ್ಸ, ಶೃಂಗಾರ, ಕರುಣೆ, ವೀರ ಹೀಗೆ ಎಲ್ಲಾ ತರಹದ ಪುರುಷ ಪಾತ್ರವನ್ನು ಮಾಡಿ ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಸೈ ಎನಿಸಿಕೊಳ್ಳುತ್ತಿದ್ದಾರೆ ಮಹಿಳೆಯರು. ಹೀಗೆ ಯಕ್ಷಗಾನ ರಂಗದಲ್ಲಿ “ಯಕ್ಷ ಮಂಜುಳಾ” ಕದ್ರಿ ಎಂಬ ಒಂದು ತಂಡ ಕಟ್ಟಿ ಯಕ್ಷಗಾನ ರಂಗದಲ್ಲಿ ಹಾಗೂ ಹಲವಾರು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವವರು ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ.

    ಕೊಡಗಿನ ಕಾವೇರಿಯ ಪದತಲದಲ್ಲಿರುವ ಭಾಗಮಂಡಲದ ದಿ.ನಾರಾಯಣ ಸರಳಾಯ ಮತ್ತು ಭವಾನಿ ಸರಳಾಯ ಇವರ ಮಗಳಾಗಿ 16.02.1959ರಂದು ಜನಿಸಿದ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ವಾಣಿಜ್ಯ ಪದವೀಧರೆ (B.Com). ಕಾಲೇಜು ದಿನಗಳಲ್ಲಿ ಡಾ.ಚಂದ್ರಶೇಖರ ದಾಮ್ಲೆ, ಸುಳ್ಯ ಇವರ ಬಳಿ ಅಭ್ಯಾಸ ಮಾಡಿ, ಈಗ 13 ವರ್ಷಗಳಿಂದ ಯಕ್ಷಗಾನ ತಾಳಮದ್ದಳೆಯ ಗುರುಗಳಾಗಿ ಶ್ರೀ ರವಿ ಅಲೆವೂರಾಯ ವರ್ಕಾಡಿ ನಿರ್ದೇಶನದಲ್ಲಿ ಯಕ್ಷ ಮಂಜುಳಾ ಬಳಗವನ್ನು ಮುನ್ನಡೆಸುತ್ತಿದ್ದಾರೆ.

    ಪುರಾಣ, ಧರ್ಮ, ಸಂಸ್ಕೃತಿಯನ್ನು  ಒಗ್ಗೂಡಿಸಿಕೊಂಡು ಆರಾಧನಾ ಕಲೆಯಾಗಿರುವ ಯಕ್ಷಗಾನ ಮತ್ತು ತಾಳಮದ್ದಲೆ ಮೇಲಿನ ಅಭಿಮಾನ ಮತ್ತು ಪ್ರೀತಿ ಹಾಗೂ ಖ್ಯಾತ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ, ವಿಮರ್ಶಕರಾದ ಡಾ.ಪ್ರಭಾಕರ ಜೋಶಿಯವರ ಸಲಹೆ, ಸೂಚನೆ, ಮಧುಸೂದನ ಅಲೆವೂರಾಯ ಮತ್ತು ಲೀಲಾವತಿ ಬೈಪಾಡಿತ್ತಾಯರ ಪ್ರೇರಣೆ ಮತ್ತು ಪ್ರೋತ್ಸಾಹದಿಂದ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಎಂದು ಹೇಳುತ್ತಾರೆ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ.

    ದಕ್ಷಯಜ್ಞ, ಗದಾಯುದ್ಧ, ಯಕ್ಷಮಣಿ (ತುಳು) ನೆಚ್ಚಿನ ಪ್ರಸಂಗಗಳು.
    ತಾಳಮದ್ದಳೆಯ ಅರ್ಥಧಾರಿಯಾಗಿ:-
    ದಕ್ಷಯಜ್ಞದಲ್ಲಿ – ದಾಕ್ಷಾಯಿಣಿ,  ಶ್ರೀ ದೇವಿ ಕೌಶಿಕೆ – ರಕ್ತಬೀಜ, ಗುರುದಕ್ಷಿಣೆ, ರುಕ್ಮಿಣಿ ಸ್ವಯಂವರ, ನರಕಾಸುರ ಮೋಕ್ಷ – ಕೃಷ್ಣ, ಗದಾಯುದ್ಧ – ಕೌರವ, ರತಿ ಕಲ್ಯಾಣ – ಕೌಂಡ್ಲಿಕ, ಸುದರ್ಶನ ಗರ್ವಭಂಗ – ವಿಷ್ಣು, ಚೂಡಾಮಣಿ, ಗರುಡ ಗರ್ವಭಂಗ, ವೀರಮಣಿ ಕಾಳಗ – ಹನುಮಂತ, ಯಕ್ಷಮಣಿ – ಗುಣಸುಂದರಿ, ಗಣೇಶ ಮಹಿಮೆ – ಗೌರಿ,  ರಾಮವನಗಮನ – ಕೈಕೆ, ಶಶಿಪ್ರಭಾ ಪರಿಣಯ – ಭ್ರಮರಕುಂತಳೆ, ಸುಧನ್ವಾರ್ಜುನ – ಸುಧನ್ವ… ಪೂರ್ಣಿಮಾ ಅವರ ನೆಚ್ಚಿನ  ಪಾತ್ರಗಳು.

    ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
    ಯಕ್ಷ ಮಂಜುಳಾ ಕದ್ರಿ, ಮಂಗಳೂರು ಮಹಿಳಾ ತಾಳಮದ್ದಳೆ ಬಳಗದ ಸಂಚಾಲಕಿಯಾದ್ದರಿಂದ ರಂಗಕ್ಕೆ ಹೋಗುವ ಮೊದಲು ಗುರುತರವಾದ ಹೊಣೆಗಾರಿಕೆ ಇದ್ದೇ ಇರುತ್ತದೆ. ಸ್ಥಳ ಮತ್ತು ಸಂದರ್ಭಕ್ಕೆ ಸರಿಯಾಗಿ ಪ್ರಸಂಗದ ಆಯ್ಕೆ, ಅಲ್ಲದೇ ಕಾಲಮಿತಿಯೊಳಗೆ ಕಥಾವಸ್ತುವನ್ನು ಸುಂದರವಾಗಿ, ಅರ್ಥಗರ್ಭಿತವಾಗಿ ಪ್ರೇಕ್ಷಕರ ಮನ ಮುಟ್ಟುವಂತೆ ಅಚ್ಚುಕಟ್ಟಾಗಿ ಪ್ರಸ್ತುತಪಡಿಸಬೇಕಾಗುತ್ತದೆ. ಹಾಗಾಗಿ ಪಾತ್ರಗಳು ಮತ್ತು ಪದ್ಯಗಳ ಆಯ್ಕೆ ಕಾರ್ಯಕ್ರಮದ ವೈಭವಕ್ಕೆ ಮತ್ತು ಯಶಸ್ಸಿಗೆ ಕಾರಣವಾಗುತ್ತದೆ. ಚಿಕ್ಕದಾಗಿ – ಚೊಕ್ಕವಾಗಿ ಮಾತಿನ ಮುತ್ತುಗಳನ್ನು ಪೋಣಿಸಿ ಸ್ವರಭಾರವನ್ನು ಗಮನದಲ್ಲಿಟ್ಟುಕೊಂಡು ಕಥೆ ಸ್ವಾರಸ್ಯಕರವಾಗಿ ಮೂಡಿ ಬರುವಂತೆ ಸಂವಾದ ಮಾಡುವ ಚತುರತೆ ನಮ್ಮದಾಗಬೇಕಾಗುತ್ತದೆ.

    ಯಕ್ಷಗಾನದ ಇಂದಿನ ಸ್ಥಿತಿಗತಿ:-
    ಯಕ್ಷಗಾನದ ಇಂದಿನ ಸ್ಥಿತಿ ಗತಿ ಉತ್ತಮವಾಗಿ ಇದೆ. ಯಕ್ಷಗಾನ ಕಾರ್ಯಕ್ರಮಗಳು ಯಕ್ಷಗಾನ ತರಗತಿಗಳ ಸಂಖ್ಯೆ, ಕಲಿಸುವವರ ಸಂಖ್ಯೆ, ಕಲಿಯುವವರು, ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮುಮ್ಮೇಳದಲ್ಲಿ ಕೆಲವರು ವೇಷಧಾರಿಯಾಗಿ ಪ್ರಸಿದ್ಧಿಯಾದರೆ, ತಾಳಮದ್ದಳೆಗಳಲ್ಲಿ ಅರ್ಥಧಾರಿಗಳಾಗಿ  ಪ್ರಸಿದ್ಧಿಯಾಗಿ ವಿಶಿಷ್ಟ ಕಲಾವಿದರಾಗಿ ಬೆಳಗುತ್ತಿದ್ದಾರೆ. ಯಕ್ಷಗಾನ ಹಾಗೂ ತಾಳಮದ್ದಳೆ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಮಹಿಳಾ ತಂಡಗಳಂತೂ ರಾಜ್ಯದಲ್ಲಿ 200ಕ್ಕೂ ಮಿಗಿಲಿರಬಹುದು. ಮಹಿಳಾ ಭಾಗವತರು ಮತ್ತು ಹಿಮ್ಮೇಳ ಕಲಾವಿದರ ಸಂಖ್ಯೆಯೂ ಬೆಳೆಯುತ್ತಿರುವುದು ಕಲಾಕ್ಷೇತ್ರದ ಉದ್ದೀಪನದ ಸಂಕೇತ. ಭಾಗವತರು ಪ್ರಸಂಗಕ್ಕೆ ಮಾತ್ರ ಸೀಮಿತವಾಗದೆ ಯಕ್ಷಗಾನ “ಗಾನ ವೈಭವ”ಗಳಲ್ಲಿಯೂ ಮಿಂಚುತ್ತಿದ್ದಾರೆ. ಹಾಗಾಗಿ ಈ ಕಲೆಯ ವಿವಿಧ ಮಜಲುಗಳನ್ನು ನಾವು ಆಸ್ವಾದಿಸುವಂತಾಗಿದೆ. ಇತ್ತೀಚಿನ ಕಾಲಮಿತಿ ಯಕ್ಷಗಾನ ಬಯಲಾಟ ಕಾರ್ಯಕ್ರಮ, ಪ್ರಚಲಿತವಾಗಿರುವುದರಿಂದ ಕಲಾವಿದರು ಮತ್ತು ಪ್ರೇಕ್ಷಕರು ಅದಕ್ಕನುವಾಗಿ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.

    ಹೆಣ್ಣು ಸಂಸಾರದ ಕಣ್ಣಾಗಿರುವಾಗ ಓರ್ವ ಕಲಾವಿದೆಯಾಗಿ ಬೆಳೆಯಲು ಹೆಣ್ಣಿನ ಶಕ್ತಿ ಮಾತ್ರ ಸಾಲದು. ಮಹಿಳೆಯರ ದಿಟ್ಟ ಹೆಜ್ಜಗೆ ಪುರುಷರು ಗಟ್ಟಿ ನೆಲವಾದರೆ ಮಾತ್ರ ಕಲಾ ಪಯಣ ಸುಗಮ ಸಾಧ್ಯ. ಇದಕ್ಕೆ ಯಕ್ಷಗಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನು ಜಯಿಸಿದ ಲೀಲಾವತಿ ಬೈಪಾಡಿತ್ತಾಯ ಹಾಗೂ ಹರಿನಾರಾಯಣ ಬೈಪಾಡಿತ್ತಾಯ ದಂಪತಿಗಳೇ ಸಾಕ್ಷಿ. ಯಕ್ಷಗಾನ ಒಂದು ಪರಿಪೂರ್ಣ ಶ್ರೀಮಂತ ಕಲೆಯಾಗಿ ವಿಜೃಂಭಿಸುತ್ತಿರುವಾಗ ಗಂಡುಕಲೆಯೆಂದು ಗುರುತಿಸಿಕೊಂಡರೂ ಮಹಿಳೆಯರು ಪುರುಷರೊಂದಿಗೆ  ಯಾವುದೇ ಸ್ಪರ್ಧಾತ್ಮಕ ಮನೋಭಾವವಿರದೆ, ಭೇದ ಭಾವವಿಲ್ಲದೆ ವಾಸ್ತವದ ಕಲ್ಪನೆಯನ್ನಿಟ್ಟುಕೊಂಡು ಪ್ರವೃತ್ತಿಯಾಗಿರಿಸಿಕೊಂಡರೆ ಅಭಿನಂದನಾರ್ಹವೇ ಸರಿ.

    ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
    ಪ್ರೇಕ್ಷಕರನ್ನು ಪ್ರಭಾವಿಸುತ್ತಾ ಅವರನ್ನು ಚಿಂತಕರನ್ನಾಗಿ ಮಾಡಬಲ್ಲ ರಂಗಕಲೆ ಯಕ್ಷಗಾನ. ಯಕ್ಷಗಾನ ಸಾಹಿತ್ಯವು ಓದು ಬರಹ ಇಲ್ಲದ ಸಾಮಾನ್ಯ ಜನರನ್ನು ತಲುಪಿ ಬದುಕನ್ನು ಅರ್ಥಮಾಡಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಯಕ್ಷಗಾನ ಪರಿಪೂರ್ಣ ಆರಾಧನಾ ಕಲೆ. ದೇವಸ್ಥಾನಗಳ ಉತ್ಸವ, ಬ್ರಹ್ಮಕಲಶೋತ್ಸವ ಸಂದರ್ಭಗಳಲ್ಲಿ ಪ್ರೇಕ್ಷಕರು ತಾವಾಗಿಯೇ ಬಂದು ಆಸ್ವಾದಿಸುತ್ತಾರೆ. ಕಲಾವಿದರು ಹಾಗೂ ಪ್ರೇಕ್ಷಕರ ಮುಖಾಮುಖಿ ಸಂವಹನವೇ ಯಕ್ಷಗಾನದಂತಹ ಕಲೆಗಳ ಪ್ರಮುಖ ಲಕ್ಷಣ. ಆದರೆ ಇತ್ತೀಚೆಗೆ ಪ್ರೇಕ್ಷಕರ ಸಾಲಿನಲ್ಲಿ ಎರಡು ಬಗೆ ಇದೆ. ಒಂದು ಪ್ರತ್ಯಕ್ಷ ವೀಕ್ಷಕರಾದರೆ ಮತ್ತೊಂದು ಯೂಟ್ಯೂಬ್ ವೀಕ್ಷಕರು. ಯಕ್ಷಗಾನ ಹಾಗೂ ತಾಳಮದ್ದಳೆಗಳ ಹೊಸ ಅಧ್ಯಾಯವೇ ಪ್ರಾರಂಭವಾಗಿದೆ. ಇತ್ತೀಚೆಗೆ ಬಂದ ಕ್ಲಬ್ ಹೌಸ್ ಆ್ಯಪ್ (Club House app) ಕೂಡ ತಾಳಮದ್ದಳೆಗೆ ಬಳಕೆಯಾಗುತ್ತಿದೆ.

    ಯಕ್ಷ ಮಂಜುಳಾ ಬಳಗ ಹೇಗೆ ಸ್ಥಾಪನೆ ಆಯಿತು:-
    ಬಾಲ್ಯದಿಂದಲ್ಲೇ ಕೊಡಗಿನಲ್ಲಿ ಅಪರೂಪದ ಯಕ್ಷಗಾನವನ್ನು ನೋಡುವುದೆಂದರೆ ಬಲು ಆಸಕ್ತಿ. ಓದುವುದಕ್ಕಿಂತ ಹೆಚ್ಚಾಗಿ ಪುರಾಣ ಜ್ಞಾನವನ್ನು ವೃದ್ಧಿಸಿ ಪ್ರಭಾವ ಬೀರಿ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂಥಹ ಕಲೆ ಯಕ್ಷಗಾನ. ಹಾಗಾಗಿ ಊರಿಗೆ ಬಂದ ಮೇಳಗಳ ಯಕ್ಷಗಾನಗಳನ್ನು ತಪ್ಪದೇ ನೋಡುತ್ತಿದ್ದೆ. ಕಾಲೇಜು ದಿನಗಳಲ್ಲಿ ಯಕ್ಷಗಾನವನ್ನು ಮಾಡಿದ್ದೆ, ಮದುವೆಯಾಗಿ ಮಂಗಳೂರಿಗೆ ಬಂದ ಮೇಲೆ ಮಕ್ಕಳೆಲ್ಲಾ ಪ್ರಬುದ್ಧರಾದಾಗ ಕನ್ನಡ ಸಾಹಿತ್ಯ, ಭಾಷಣಗಳಲ್ಲಿ ಆಸಕ್ತಿಯಿದ್ದುದರಿಂದ ಮಹನೀಯರಂತೆ ನಾವು ಮಹಿಳೆಯರೂ ಯಾಕೆ ತಾಳಮದ್ದಳೆ ಮಾಡಬಾರದು ಎಂಬ ಪ್ರಶ್ನೆ ಮೂಡಿತು. ಹಾಗಾಗಿ ಯಕ್ಷಗಾನ ಕ್ಷೇತ್ರದ ದಿಗ್ಗಜ ಕಲಾವಿದರು, ಆತ್ಮೀಯರಾದ ಡಾ. ಪ್ರಭಾಕರ ಜೋಶಿ ಮತ್ತು ಸುಚೇತಾ ಜೋಶಿಯವರಲ್ಲಿ ಮನದ ಇಂಗಿತವನ್ನು ತಿಳಿಸಿದಾಗ ಅವರು ಸಂತೋಷದಿಂದ ಪ್ರೇರೇಪಣೆ, ಸಲಹೆ ನೀಡಿದರು. ಸಮಾನ ಮನಸ್ಕರಾದ ಸುಚೇತಾ ಜೋಶಿ, ಸುಮನಾ ಘಾಟೆ, ಪೂರ್ಣಿಮಾ ಶಾಸ್ತ್ರಿ, ಲೀಲಾ ಭಟ್, ಹೆಚ್.ಟಿ.ರೂಪಾ ರಾಧಾಕೃಷ್ಣ ಹೀಗೆ 6 ಮಹಿಳೆಯರ ಒಂದು ಬಳಗವಾಯಿತು. ಪ್ರಭಾಕರ ಜೋಶಿಯವರೇ ಕದ್ರಿ ಮಂಜುನಾಥನ ಪದತಲದಲ್ಲಿ ರೂಪುಗೊಂಡ ಈ ಬಳಗಕ್ಕೆ “ಯಕ್ಷ ಮಂಜುಳಾ” ಎಂಬ ನಾಮಕರಣ ಮಾಡಿ ಇದು ಒಂದು ಸತ್ಸಂಗವಾಗಿ ಬೆಳೆಯಿತು. ಪ್ರಸಿದ್ಧ ಮಹಿಳಾ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು ಬಳಗದ ಭಾಗವತರಾದರು. ಕದ್ರಿ ಮಂಜುನಾಥ ದೇವಸ್ಥಾನದ ಅಭಿಷೇಕ ಮಂದಿರದಲ್ಲಿ ಉದ್ಘಾಟನೆ, ಪ್ರಥಮ ಪ್ರಯೋಗವು ಯಶಸ್ವಿಯಾಗಿ ನೆರವೇರಿತು. ಆದರೆ ಈ ಮಹಿಳಾ ಕಲಾ ಕಾರ್ಯಕ್ರಮವನ್ನು ಸಮಾಜ ಹೇಗೆ ಸ್ವೀಕರಿಸುತ್ತದೆ ಎಂಬ ಸಂದೇಹವೂ ಇತ್ತು. ಆದರೆ ಕಲಾಭಿಮಾನಿಗಳು ಸಮಾಜ ಬಾಂಧವರ ಉತ್ತಮವಾದ ಸ್ಪಂದನೆ, ಪ್ರೋತ್ಸಾಹ ಇದು ನಮ್ಮ ಬಳಗದ ಸೌಭಾಗ್ಯವೇ ಸರಿ. ಹೀಗೆ ಬಳಗದ ಸದಸ್ಯರ ಸಂಖ್ಯೆಯು ಬೆಳೆಯುತ್ತಾ ಹೋಯಿತು. ಇಂದು ಶ್ರೀಮತಿ ಅಮೃತಾ ಕೌಶಿಕ್ ರಾವ್ ಭಾಗವತಿಕೆಯಲ್ಲಿ ಅರುಣಾ ಸೋಮಶೇಖರ್ , ಶೈಲಜಾ ಶ್ರೀಕಾಂತ್, ಅನುಪಮಾ ಪ್ರಭಾಕರ ಅಡಿಗ, ಮೊದಲಾದ ಸದಸ್ಯೆಯರನ್ನೊಳಗೊಂಡ ಯಕ್ಷ ಮಂಜುಳಾ – ಮಂಗಳೂರು ಆಕಾಶವಾಣಿಯ ಬಿ. ಗ್ರೇಡ್ ಕಲಾವಿದರಾಗಿ ರೂಪುಗೊಂಡಿದ್ದಾರೆ. “ಯಕ್ಷಮಣಿ” ಎಂಬ ತುಳು ಪ್ರಸಂಗ ದೂರದರ್ಶನದಲ್ಲಿ 3 ಕಂತುಗಳಲ್ಲಿ ಪ್ರಸಾರವಾಗಿದೆ. ಇವರ ಪತಿ ಪ್ರಭಾಕರ ಪೇಜಾವರ ಯಕ್ಷ ಮಂಜುಳಾ ಬಳಗದ ಗೌರವ ಸಲಹೆಗಾರರಾಗಿ ಅದ್ಧೂರಿಯಿಂದಲೆ ಮೂರು ದಿನ ದಶಮ ಸಂಭ್ರಮವನ್ನು ಕದ್ರಿಯಲ್ಲಿ ಆಚರಿಸಿದ್ದಾರೆ. ಹೀಗೆ ನೂರಾರು ಕಾರ್ಯಕ್ರಮಗಳನ್ನು ನೀಡುತ್ತಾ ಇಂದಿನವರೆಗೂ ಬೆಳೆದು ಬಂದ ರೀತಿ ಅತ್ಯಂತ ಸಂತೋಷ ಸಂತೃಪ್ತಿ ತಂದಿದೆ.

    ಸನ್ಮಾನ ಮತ್ತು ಪ್ರಶಸ್ತಿಗಳು:-
    ♦ ಸಮತಾ (ರಿ) ಮಂಗಳೂರು ಮಹಿಳಾ ಬಳಗದಿಂದ ಸನ್ಮಾನ (2013-14).
    ♦ ಸರಯೂ ಬಾಲ ಯಕ್ಷ ವೃಂದ, ಮಕ್ಕಳ ಮೇಳ ಇವರಿಂದ ಶ್ರೀ ರವಿ ಅಲೆವೂರಾಯರ 50ನೇ ಸಂಭ್ರಮ ಸರಣಿಯಲ್ಲಿ ಪುರಭವನದಲ್ಲಿ.
    ♦ ಯಕ್ಷಧ್ರುವ ಪುರಸ್ಕಾರ 2023. (ಯಕ್ಷ ಧ್ರುವ ಪಟ್ಲ ಫೌಂಡೇಶನ್ (ರಿ) ಕೇಂದ್ರ ಮಹಿಳಾ ಘಟಕ ಮಂಗಳೂರು).
    ♦ ಮಹಿಳಾ ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿಯ ಸಾಧನೆಗಾಗಿ ಸಮತಾ (ರಿ) ಮಹಿಳಾ ಬಳಗದಿಂದ ಸನ್ಮಾನ (2023).
    ಹಲವಾರು ದೇವಸ್ಥಾನಗಳ ಜಾತ್ರೋತ್ಸವಗಳಲ್ಲಿ, ಬ್ರಹ್ಮಕಲಶೋತ್ಸವಗಳಲ್ಲಿ, ನಾಗಮಂಡಲೋತ್ಸವಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಸಮ್ಮೇಳನಗಳಲ್ಲಿ, ಮನೆಯಂಗಳದ ಶುಭ ಕಾರ್ಯಕ್ರಮಗಳಲ್ಲಿ, ಮಠಗಳಲ್ಲಿ, ಸುತ್ತಮುತ್ತಲಿನ ಸ್ಥಳಗಳಲ್ಲದೆ ಉಡುಪಿ, ಕುಂದಾಪುರ, ಮಡಿಕೇರಿ, ಮೈಸೂರು, ಬೆಂಗಳೂರಿನಲ್ಲಿಯೂ ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ಅಭಿನಂದಿಸಿ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಲೋಕಮಾನ್ಯರಾಗಿ ಹರಿಪಾದಗೈದ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಮತ್ತು  ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಯಕ್ಷ ಮಂಜುಳಾ ಬಳಗವನ್ನು ಮುಕ್ತ ಕಂಠಿದಿಂದ ಅಭಿನಂದಿಸಿ ಹರಸಿದ್ದಾರೆ.

    ಕವನ ರಚನೆ, ಭಾಷಣ, ಕಾರ್ಯಕ್ರಮ ನಿರೂಪಣೆ, ಯಕ್ಷಗಾನ ತಾಳಮದ್ದಳೆ, ಸಂಗೀತ ಆಲಿಸುವುದು, ಮಹಿಳಾ ಸಂಘಟನೆ ಇತ್ಯಾದಿ ಇವರ ಹವ್ಯಾಸಗಳು. ಇವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರಲ್ಲಿ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಇವರ ಅಧ್ಯಕ್ಷೀಯ ಅವಧಿಯಲ್ಲಿ 5 ವರ್ಷ ಜಿಲ್ಲಾ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

    ಯಕ್ಷಗಾನ ರಂಗದಲ್ಲಿ ಇನ್ನಷ್ಟು ಮಹಿಳೆಯರಲ್ಲಿ ತಾಳಮದ್ದಳೆಯಲ್ಲಿ ಆಸಕ್ತಿಯನ್ನು ಪ್ರೇರೇಪಣೆ ಮಾಡಿ ಕಲಾವಿದರನ್ನಾಗಿಸಬೇಕೆಂಬ ಆಸೆ ಹಾಗೂ ಮುಂದಿನ ಯೋಜನೆ.

    ಪೂರ್ಣಿಮಾ ಅವರು “ಪೇಜಾವರ ಟ್ರೇಡರ್ಸ್” ಎಂಬ ವಿತರಣಾ ಸಂಸ್ಥೆಯ ಮಾಲಕರಾದ ಪ್ರಭಾಕರ ರಾವ್ ಪೇಜಾವರ ಇವರನ್ನು 17.೦5.1981ರಂದು ಮದುವೆಯಾಗಿ ಕದ್ರಿಯಲ್ಲಿ ನೆಲೆಸಿದ್ದಾರೆ. ಇಬ್ಬರು ಮಕ್ಕಳು – ಶ್ರುತಿ ಸುಬ್ರಮಣ್ಯ ರಾವ್ ಮತ್ತು ರತಿ ಮದನ್ ಕುಮಾರ್ . ಎಲ್ಲರೂ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮೊಮ್ಮಕ್ಕಳು – ಸಾನ್ವಿ ರಾವ್ ಮತ್ತು ಮೇಧಾ ರಾವ್. ಸಾಹಿತ್ಯ, ಸಂಗೀತ, ಕಲೆ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಸುಖೀ ಸಂಸಾರ ಇವರದ್ದು.

    • ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.

    Share. Facebook Twitter Pinterest LinkedIn Tumblr WhatsApp Email
    Previous Articleಡಾ. ಬಿ.ವಿ. ಶಿರೂರು ಇವರಿಗೆ 2024ನೇ ಸಾಲಿನ ‘ಸೇಡಿಯಾಪು ಪ್ರಶಸ್ತಿ’
    Next Article ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿದ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಜನ್ಮ ದಿನಾಚರಣೆ
    roovari

    Add Comment Cancel Reply


    Related Posts

    ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ತಾಳಮದ್ದಳೆ

    May 7, 2025

    ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಪಾರ್ತಿಸುಬ್ಬ ವಿರಚಿತ ‘ಪಂಚವಟಿ’ ಯಕ್ಷಗಾನ ತಾಳಮದ್ದಳೆ

    May 7, 2025

    ಕನ್ನರ್ಪಾಡಿಯಲ್ಲಿ ನೂತನ ‘ಶ್ರೀ ಜಯದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾಮಂಡಳಿ’ ಉದ್ಘಾಟನೆ

    May 6, 2025

    ಪರಿಚಯ ಲೇಖನ | ‘ಬೆಳೆಯುವ ಯಕ್ಷಸಿರಿ’ ಸಚಿನ್ ಶೆಟ್ಟಿ ನಾಗರಕೊಡಿಗೆ

    May 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.