ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಚನಿಯಪ್ಪ ಹಾಗೂ ಲೀಲಾ ಇವರ ಮಗಳಾಗಿ 23.04.1988ರಂದು ಶ್ರದ್ಧಾ ಶಶಿಧರ್ ಅವರ ಜನನ. ಕನ್ನಡ ಎಂ.ಎ ಇವರ ವಿದ್ಯಾಭ್ಯಾಸ. ಶೇಖರ ಶೆಟ್ಟಿ ಬಾಯಾರು, ಸುಧಾಕರ ಕಾಂತಮಂಗಲ ಹಾಗೂ ಮಾಂಬಾಡಿ ಸುಬ್ರಮಣ್ಯ ಭಟ್ (ಹಿಮ್ಮೇಳ) ಇವರ ಯಕ್ಷಗಾನ ಗುರುಗಳು.
ತಂದೆ ಮತ್ತು ಚಿಕ್ಕಪ್ಪ ಯಕ್ಷಗಾನ ಆಸಕ್ತರು. ಸಣ್ಣವಳಿದ್ದಾಗ ತಾಳಮದ್ದಲೆ, ಯಕ್ಷಗಾನ ಬಯಲಾಟಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಊರಿನಲ್ಲಿ ಯಕ್ಷಗಾನ ವಾತಾವರಣ ಹಾಗೂ ಅವಕಾಶವಿದ್ದ ಕಾರಣ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ಶ್ರದ್ಧಾ ಶಶಿಧರ್.
ರಂಗಕ್ಕೆ ಹೋಗುವ ಮೊದಲು ಹಿರಿಯ ಕಲಾವಿದರಲ್ಲಿ ಮತ್ತು ಗುರುಗಳಲ್ಲಿ ಪ್ರಸಂಗದ ಬಗ್ಗೆ ತಿಳಿದುಕೊಂಡು, ಪೂರಕ ಪುಸ್ತಕಗಳ ಅಧ್ಯಯನ ಮಾಡಿ, ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಶ್ರದ್ಧಾ ಶಶಿಧರ್.
ಸುಧನ್ವಾರ್ಜುನ, ಕೃಷ್ಣಾರ್ಜುನ, ಗದಾಯುದ್ಧ, ಇಂದ್ರಜಿತು ಕಾಳಗ ಅಭಿಮನ್ಯು ಕಾಳಗ, ದಕ್ಷಯಜ್ಞ, ದೇವಿ ಮಹಾತ್ಮೆ, ಕೃಷ್ಣ ಲೀಲೆ ಇತ್ಯಾದಿ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಎಲ್ಲಾ ಕ್ಷೇತ್ರದ ಹಾಗೆಯೇ ಯಕ್ಷಗಾನ ಕ್ಷೇತ್ರದಲ್ಲಿ ಬದಲಾವಣೆ ಅಗಿದೆ. ಬದಲಾವಣೆ ಕಲಾವಿದರು, ಪ್ರೇಕ್ಷಕರು ಅಥವಾ ಸಂಘಟನೆಯಿಂದಲೂ ಆಗಿರಬಹುದು ಹೀಗೆಯೇ ಅಂತ ನಿಖರವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಎಲ್ಲದರಲ್ಲೂ ಹೊಸತನ ಬಂದಿದೆ. ಶೈಲಿ ಬದಲಾವಣೆ ಅಗಿದೆ. ರಂಗಸ್ಥಳದ ಎದುರು ಕುಳಿತು ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಿದೆ. ನಾವೆಲ್ಲಾ ಸಣ್ಣವರಿದ್ದಾಗ ರಾತ್ರಿಯಿಂದ ಬೆಳಗಿನವರೆಗೂ ಯಕ್ಷಗಾನ ಬಯಲಾಟಗಳನ್ನು ಜನ ನಿದ್ದೆಗೆಟ್ಟು ನೋಡುತಿದ್ದರು. ಈಗ ಕಾಲಮಿತಿ ಆಗಿದೆ. ಈಗಿನವರಿಗೆ ರಾತ್ರಿಯಿಂದ ಬೆಳಗಿನವರೆಗೂ ನೋಡುವ ತಾಳ್ಮೆಯೂ ಇಲ್ಲ ಆರೋಗ್ಯವೂ ಇಲ್ಲ. ಕಾಲಮಿತಿ ಬಂದ ಮೇಲೆ ಯಕ್ಷಗಾನ ಪೂರ್ವರಂಗದ ಕುಣಿತ ಕಾಣ ಸಿಗುವುದಿಲ್ಲ, ಪ್ರಸಂಗದ ನಡೆಯ ಶೈಲಿ ಬದಲಾವಣೆ ಆಗಿದೆ. ರಾತ್ರಿ ಬೆಳಗಿನವರೆಗೆ ಯಕ್ಷಗಾನ ಇದ್ರೆ ಅದು ಇಂತಹದೇ ವೇಗದಲ್ಲಿ ಪ್ರಸಂಗ ಹೋಗಬೇಕು ಅಂತ ಇರ್ತದೆ. ಅಂದ್ರೆ ಒಂದನೇ ಕಾಲ, ಎರಡನೇ ಕಾಲ, ಮೂರನೇ ಕಾಲ….ಹೀಗೆ. ಈಗ ಕಾಲಮಿತಿ ಅಂತ ಬಂದು ದೇವಿ ಮಹಾತ್ಮೆ ಪ್ರಾರಂಭ ಆಗುವುದೇ ಚಂಡ ಮುಂಡರ ಪ್ರವೇಶದಿಂದ. ಅಂದ್ರೆ ಮೊದಲೆಲ್ಲ ಚಂಡ ಮುಂಡರ ಪ್ರವೇಶ ಮೂರನೇ ಕಾಲಕ್ಕೆ ಅಂತ ನಿರ್ಣಯ ಇತ್ತು.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತಿದೆ ಮಕ್ಕಳು, ಮಹಿಳೆಯರು ಯಕ್ಷಗಾನದತ್ತ ಆಕರ್ಷಿತರಾಗುತ್ತಿದ್ದಾರೆ ದೇಶ ವಿದೇಶಗಳಲ್ಲಿ ಯಕ್ಷಗಾನಕ್ಕೆ ಮನ್ನಣೆ ಸಿಗುತ್ತಿದೆ.
ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ:-
ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ಪರಂಪರೆಗೆ ಧಕ್ಕೆಯಾಗದಂತೆ ಯಕ್ಷಗಾನವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆ ನಿಟ್ಟಿನಲ್ಲಿ ಕಳೆದ 12 ವರ್ಷಗಳಿಂದ ಒಂದಷ್ಟು ಮಕ್ಕಳಿಗೆ ನಾಟ್ಯ ತರಗತಿಯನ್ನು ನಡೆಸುತ್ತಾ ಬಂದಿದ್ದಾರೆ. ಮುಂದೆ ಇನ್ನಷ್ಟು ಮಕ್ಕಳನ್ನು ತಯಾರಿ ಮಾಡುವ ಯೋಜನೆ ಇದೆ.
ಹಲವಾರು ಹವ್ಯಾಸಿ ತಂಡದಲ್ಲಿ ತಿರುಗಾಟ ಮಾಡಿದ ಅನುಭವ. ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಹಲವಾರು ಸಂಘ ಸಂಸ್ಥೆಗಳು ಇವರ ಪ್ರತಿಭೆಯನ್ನು ನೋಡಿ ಗೌರವ ಸನ್ಮಾನ ನೀಡಿದೆ.
ಶ್ರದ್ಧಾ ಅವರು 10.07.2017ರಂದು ಶಶಿಧರ್ ಅವರನ್ನು ಮದುವೆಯಾಗಿ ಮಗಳು ಆನ್ಯ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ. ತಂದೆ, ತಾಯಿ,ಪತಿಯ ಪ್ರೋತ್ಸಾಹ,ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಶ್ರದ್ಧಾ ಶಶಿಧರ್.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು