ಅಂಗವಿಕಲತೆಯಿದ್ದರೂ ಕೂಡ ಸ್ವಾಭಿಮಾನದ ಬದುಕಿಗಾಗಿ ಕಲೆಯನ್ನೇ ಜೀವನೋಪಾಯವಾಗಿಸಿಕೊಂಡು ನಡೆಯಲು ಅಸಾಧ್ಯವಾದ ಕಾಲುಗಳ ಮೇಲೆ ಮದ್ದಳೆಯನ್ನು ಇಟ್ಟು ಬದುಕು ಕಟ್ಟಿಕೊಂಡ ವಿಜಯ ನಾಯ್ಕರ ಬದುಕಿನ ಹೋರಾಟ ಬಹು ರೋಚಕ.
ಉಡುಪಿಯ ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆ ಆನಂದ ನಾಯ್ಕ ಹಾಗೂ ಬೇಬಿ ಇವರ ಮಗನಾಗಿ 12.04.1985ರಂದು ಜನನ. ಪ್ರಸ್ತುತ ಹೆಗ್ಗುಂಜೆ ಗ್ರಾಮದ ನೀರ್ಜೆಡ್ಡುನಲ್ಲಿ ವಾಸ. 10ನೇ ತರಗತಿವರೆಗೆ ವಿದ್ಯಾಭ್ಯಾಸ. ಯಕ್ಷಗಾನದಲ್ಲಿ ಇರುವ ಆಸಕ್ತಿಯೇ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಎನ್.ಜಿ ಹೆಗಡೆ ಇವರ ಯಕ್ಷಗಾನ ಗುರುಗಳು.
ಕೆ.ಪಿ ಹೆಗಡೆ, ಗೋಪಾಲ ಗಾಣಿಗ ಹೆರಂಜಾಲು, ನಾಗೇಶ್ ಕುಲಾಲ್, ರಾಘವೇಂದ್ರ ಮುದ್ದುಮನೆ ನೆಚ್ಚಿನ ಭಾಗವತರು.
ರಾಮಕೃಷ್ಣ ಮಂದಾರ್ತಿ, ಶಿವಾನಂದ ಕೋಟ ಇವರ ನೆಚ್ಚಿನ ಚೆಂಡೆ ವಾದಕರು. ಎನ್.ಜಿ ಹೆಗಡೆ, ಪರಮೇಶ್ವರ ಭಂಡಾರಿ, ಸುನೀಲ್ ಭಂಡಾರಿ ನೆಚ್ಚಿನ ಮದ್ದಲೆ ವಾದಕರು. ದೇವಿ ಮಹಾತ್ಮೆ, ಚಂದ್ರಹಾಸ ಚರಿತ್ರೆ, ಶನೀಶ್ವರ ಮಹಾತ್ಮೆ ಹಾಗೂ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಯಕ್ಷಗಾನದ ಇಂದಿನ ಸ್ಥಿತಿಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಹೊಸ ಪ್ರಸಂಗಗಳು ಬಂದು ಹಳೆಯ ಪ್ರಸಂಗಗಳು ಮಾಯ ಆಗುತ್ತಿದೆ ಹಾಗೂ ಇಂದಿನ ಪ್ರೇಕ್ಷಕರು ಯಕ್ಷಗಾನ ಬಿಟ್ಟು ಮೊಬೈಲ್ ಮತ್ತು ಟಿವಿ ನೋಡುತ್ತಾರೆ.
ರಕ್ತೇಶ್ವರಿ ಫ್ರೆಂಡ್ಸ್ ವತಿಯಿಂದ ನಾದಸಾಧಕ ಪ್ರಶಸ್ತಿ, ರಂಗಸ್ಥಳ ಫೌಂಡೇಶನ್ ನಿಂದ ಸನ್ಮಾನ. ಜೆಸಿಐಯಿಂದ ಸನ್ಮಾನ ಇವರಿಗೆ ದೊರೆತಿರುತ್ತದೆ.
2 ವರ್ಷ ಸಿಗಂದೂರು ಮೇಳ, 9ವರ್ಷ ಶನೀಶ್ವರ ಮೇಳ, 3 ವರ್ಷ ಮಡಾಮಕ್ಕಿ ಮೇಳ, ಕಳೆದ ವರ್ಷದಿಂದ ಸೌಕೂರು ಮೇಳದಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಒಟ್ಟು 15 ವರ್ಷಗಳಿಂದ ಸೇವೆಯನ್ನು ಸಲಿಸುತ್ತಿದ್ದಾರೆ.
ವಿಜಯ ನಾಯ್ಕ ಅವರು 16.05.2010ರಂದು ಸೀತಾ ಇವರನ್ನು ಮದುವೆಯಾಗಿ ಮಗ ವಿಶ್ವಾಸ್ ಹಾಗೂ ಮಗಳು ಸನ್ನಿಧಿ ಜೊತೆಗೆ ಜೀವನವನ್ನು ನಡೆಸುತ್ತಿದ್ದಾರೆ.
“ಕಲಾವಿದನ ನಂಬುಗೆ ಉಳಿಸಬೇಕಿದೆ ಅಭಿಮಾನಿ ದೇವರು”.
ನಂಬಿಕೊಂಡ ಯಕ್ಷಗಾನ ಮೇಳ, ವರವಾಗಿ ಒಲಿದ ಯಕ್ಷಗಾನ ಕಲೆ, ನೋಡಿಕೊಳ್ಳಲು ಕೈ ಹಿಡಿದ ಸತಿ ಇರುವಾಗ ವಿಜಯ ನಾಯ್ಕರಿಗೆ ಕಳೆದುಕೊಂಡ ಕಾಲು ಅಷ್ಟಾಗಿ ಕಾಡಿರಲಿಲ್ಲ. ಬದುಕಿನಲ್ಲಿ ಕಷ್ಟವಿದ್ದರೂ ನೆಮ್ಮದಿಯಿತ್ತು. ಸ್ವಾಭಿಮಾನಿಯಾಗಿ ಬದುಕಲು ಮಡದಿಯ ಸಪ್ರೇಮ ಜೊತೆಗಿತ್ತು. ಎಂದೂ ಯಾರಲ್ಲಿಯೂ ಬೇಡಿದವರಲ್ಲ. ಇಬ್ಬರು ಮಕ್ಕಳೊಂದಿಗೆ ಸುಖ ಜೀವನ ಸಾಗಿಸುತ್ತಿದ್ದರು. ಬಹುಶಃ ಅವರ ಮದ್ದಳೆಯ ನುಡಿತಗಳನ್ನು ಕೇಳಿ ಆನಂದಿಸುತ್ತಿದ್ದ ಕಲಾಭಿಮಾನಿಗಳಿಗೆ ಅವರಿಗೆ ಒಂದು ಕಾಲಿಲ್ಲ ಎಂಬ ಕಹಿಸತ್ಯ ಅರಿವಾಗಿರಲಿಕ್ಕೂ ಇಲ್ಲ. ಹಾಗೆ ಇದ್ದ ವಿಜಯ ನಾಯ್ಕರಿಗೆ ಸಿಡಿಲಾಗಿ ಬಡಿದಿದ್ದು ಮಡದಿಗೆ ಬಂದ ಕ್ಯಾನ್ಸರ್ ಎಂಬ ಹೆಮ್ಮಾರಿ.
ನಾವೆಷ್ಟೋ ಆಟವನ್ನು ನೋಡುತ್ತೇವೆ. ಕೆಲವೊಮ್ಮೆ ಹಣ ಕೊಟ್ಟು ಇನ್ನು ಕೆಲವೊಮ್ಮೆ ಉಚಿತವಾಗಿ. ಕೆಲವೊಮ್ಮೆ ಆಡಿಸಿಯೂ ಇರುತ್ತೇವೆ. ಆಗೆಲ್ಲ ಮೇಳಗಳಲ್ಲಿ ದುಡಿಯುವ ಕಲಾವಿದರು ನಮ್ಮ ಮನಸ್ಸಿಗೆ ಮುದ ನೀಡಿರುತ್ತಾರೆ. ಆ ಕಲಾವಿದರು ನೆಮ್ಮದಿ ಕಾಣುವುದು ತಮ್ಮ ಪ್ರದರ್ಶನ ಅಭಿಮಾನಿಗಳಿಗೆ ಇಷ್ಟವಾದಾಗ. ಹೀಗೆ ಕಲಾವಿದರು ನಂಬುವುದು ದೇವರನ್ನು, ಜೊತೆಗೆ ದೇವಸ್ವರೂಪಿ ಅಭಿಮಾನಿಗಳನ್ನು. ಬಹುಶಃ ವಿಜಯ ನಾಯ್ಕರ ನಂಬುಗೆಯನ್ನು ಉಳಿಸುವ ದೊಡ್ಡ ಜವಾಬ್ದಾರಿ ಕಲಾಭಿಮಾನಿಗಳಾದ ನಮ್ಮೆಲ್ಲರ ಮೇಲಿದೆ. ದೈಹಿಕವಾದ ಅವರ ನೋವನ್ನು ಹಂಚಿಕೊಳ್ಳಲು ಖಂಡಿತಾ ಸಾಧ್ಯವಿಲ್ಲ. ಆದರೆ ಅವರ ಪತ್ನಿಗೆ ಉತ್ತಮ ಚಿಕಿತ್ಸೆ ಸಿಗುವಲ್ಲಿ ನಾವೆಲ್ಲ ಕೈ ಜೋಡಿಸಲೇಬೇಕು. ಹನಿ ಹನಿ ಕೂಡಿದರೆ ಹಳ್ಳ ಎಂಬ ಮಾತಿನಂತೆ ನೀವು ಕೊಡುವ ಒಂದು ರೂಪಾಯಿಯಾದರೂ ಒಂದು ಬದುಕನ್ನು ಉಳಿಸುತ್ತದೆ.
ಶ್ರೀ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದೇವದಾಸ್ ಈಶ್ವರಮಂಗಲರ ಸಾರ್ವಕಾಲಿಕ ಸೂಪರ್ ಹಿಟ್ ಪ್ರಸಂಗ “ನಾಗವಲ್ಲಿ” ಪ್ರಸಂಗವನ್ನು ಆಗಸ್ಟ್ 28ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಚಿಕಿತ್ಸೆ ವೆಚ್ಚ ಸಹಾಯಾರ್ಥ ಯಕ್ಷಗಾನ ನಡೆಯಲಿದೆ.
ಎಲ್ಲ ಕಲಾಭಿಮಾನಿಗಳು ಹಾಗೂ ಆತ್ಮೀಯರು ಈ ಯಕ್ಷಗಾನಕ್ಕೆ ಹೆಚ್ಚಿನ ರೀತಿಯಲ್ಲಿ ತನು ಮನ ಧನ ಸಹಾಯ ನೀಡಿ ವಿಜಯ ನಾಯ್ಕರ ಹೆಂಡತಿಯ ಆಪರೇಷನ್ ಗೆ ಸಹಾಯ ಮಾಡಿ ಒಬ್ಬ ಕಲಾವಿದನ ನಂಬುಗೆಯನ್ನು ಉಳಿಸುವ ಮೂಲಕ ಆತನ ಜೊತೆ ನಿಲ್ಲೋಣ.
ಸಹಾಯ ಹಸ್ತ ಮಾಡುವವರು Google pay or Phone pay ಮಾಡುವವರು 8867534835 ನಂಬರ್ ಗೆ ಮಾಡಬಹುದು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು