ಯಕ್ಷಗಾನ – ಇದೊಂದು ಗಂಡು ಕಲೆ. ಕರ್ನಾಟಕದ ಅತ್ಯಂತ ವಿಶಿಷ್ಠ ಕಲೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಲೆಗಳಲ್ಲಿ ಯಕ್ಷಗಾನ ಅತೀ ಪ್ರಮುಖವಾದದ್ದು. ನಮ್ಮ ಸಂಸ್ಕೃತಿ, ಆಚರಣೆ ಮತ್ತು ಸಂಪ್ರದಾಯವನ್ನು ಮೈವೆತ್ತಿರುವ ಯಕ್ಷಗಾನ ಕಲೆಯಲ್ಲಿ ಪ್ರಜ್ವಲಿಸುತ್ತಿರುವ ಪ್ರತಿಭೆ ದಿವ್ಯಶ್ರೀ ಮನೋಜ್ ಪೂಜಾರಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಕ್ಕೆಪದವಿನ ಡೊಂಬಯ ಪೂಜಾರಿ ಹಾಗೂ ಇಂದಿರಾ ಇವರ ಮಗಳಾಗಿ 17.08.1994ರಂದು ಜನನ. M.Com, NET, K.SET ಇವರ ವಿದ್ಯಾಭ್ಯಾಸ. ತಂದೆ, ತಾಯಿ ಹಾಗೂ ಬಾಲ್ಯದಲ್ಲಿ ನೋಡುತ್ತಿದ್ದ ಟೆಂಟ್ ಆಟಗಳು ಇವರು ಯಕ್ಷಗಾನ ಕಲಿಯಲು ಪ್ರೇರಣೆ. ಭಾಸ್ಕರ ರೈ (ಹವ್ಯಾಸಿ ಕಲಾವಿದರು), ಡಾ.ಕೋಳ್ಯೂರು ರಾಮಚಂದ್ರ ರಾವ್, ಅರುಣ್ ಕುಮಾರ್ ಧರ್ಮಸ್ಥಳ ಇವರ ಯಕ್ಷಗಾನ ಗುರುಗಳು.
ಗುರುಗಳು ಹಾಗೂ ಹಿರಿಯ ಕಲಾವಿದರಲ್ಲಿ ಚರ್ಚಿಸಿ, ಇಂದಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರೆದ ಕಾರಣದಿಂದಾಗಿ Google ಹಾಗೂ YouTube ನಲ್ಲಿ ಕೆಲವು ಮಾಹಿತಿಯನ್ನು ಪಡೆದುಕೊಂಡು ಹಾಗೂ ಕೆಲವು ಯಕ್ಷಗಾನ ಪ್ರಸಂಗಗಳ ಪುಸ್ತಕಗಳನ್ನು ಖರೀದಿಸಿ ಮಾಹಿತಿಯನ್ನು ಪಡೆದು ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ದಿವ್ಯಶ್ರೀ.
ದೇವಿ ಮಹಾತ್ಮೆ, ತರಣಿಸೇನ ಕಾಳಗ, ಕುಮಾರ ವಿಜಯ, ಸುದರ್ಶನ ವಿಜಯ, ಶ್ರೀ ಕೃಷ್ಣ ಲೀಲೆ ಇವರ ನೆಚ್ಚಿನ ಪ್ರಸಂಗಗಳು.
ಮಾಲಿನಿ, ದೇವಿ, ಸುದರ್ಶನ, ಕೃಷ್ಣ, ಮಾಯಾ ಅಜಮುಖಿ, ಮಾಯಾ ಪೂತನಿ, ಅಂಬೆ ಇವರ ನೆಚ್ಚಿನ ಪಾತ್ರಗಳು. ಯಕ್ಷಗಾನ ರಂಗದಲ್ಲಿ ಈವರೆಗೆ 100ಕ್ಕೂ ಹೆಚ್ಚು ವೇಷಗಳು ಹಾಗೂ 300ಕ್ಕೂ ಹೆಚ್ಚಿನ ಪ್ರದರ್ಶನವನ್ನು ನೀಡಿರುತ್ತಾರೆ ದಿವ್ಯಶ್ರೀ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ದೇವತಾ ಕಲೆಯಾಗಿ ಆರಾಧಿಸುವ ಯಕ್ಷಗಾನ ಇಂದು ಎಲ್ಲೋ ಹಳಿ ತಪ್ಪಿದಂತಿದೆ. ಆಧುನಿಕತೆಗೆ ಬಳಪಟ್ಟರು ಕಥೆಗೆ ಲೋಪವಾಗದಂತೆ ಪ್ರಸಂಗದ ರಚನೆ ಹಾಗೂ ವಿಶೇಷವಾಗಿ ಕಲಾವಿದರ ಸಂಭಾಷಣೆ, ನೃತ್ಯ ಇದ್ದರೆ ಒಳ್ಳೇದು.
ಕಲಾವಿದರ ದೃಷ್ಟಿಯಲ್ಲಿ ಒಂದರ್ಥದಲ್ಲಿ ಕಾಲಮಿತಿ ಯಕ್ಷಗಾನ ಒಳ್ಳೆಯದು. ಆದರೆ ಸಂಪೂರ್ಣ ಪ್ರಸಂಗದ ಅಂದ ಚಂದವನ್ನು ಸವಿಯಲು, ಆಸ್ವಾದಿಸಲು ಇದರಿಂದ ಸಾಧ್ಯವಾಗುವುದಿಲ್ಲ. ಇನ್ನೊಂದು ಸಂತಸದ ವಿಚಾರವೆಂದರೆ ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಕಲೆಗೆ ಸರಕಾರದ ಕಡೆಯಿಂದ ವಿಶೇಷ ಮನ್ನಣೆ ಗೌರವ ಸಿಗುತ್ತಿರುವುದು ಸಂತಸದ ವಿಚಾರ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಂದಿನ ಪ್ರೇಕ್ಷಕರಿಗೆ ಯಕ್ಷಗಾನದಲ್ಲಿ ಹಾಸ್ಯ ಅಬ್ಬರವೇ ಮುಖ್ಯ ಎಂದು ನನ್ನ ಭಾವನೆ. ಆದರೆ ಕಥೆಗೆ ಲೋಪವಾಗದಂತೆ ಹಾಸ್ಯ, ಕುಣಿತ, ಮಾತು, ವೇಷಭೂಷಣದ ಜೊತೆಗೆ ಪ್ರೇಕ್ಷಕರನ್ನು ರಂಜಿಸುವುದು ಕಲಾವಿದರಿಗೆ ಸವಾಲಿನ ವಿಷಯವೇ ಸರಿ.
ಮಾಧ್ಯಮಗಳು ಅನೇಕ ಇದ್ದರೂ ಯಕ್ಷಗಾನವನ್ನು ದೇವತಾ ಕಲೆಯಾಗಿ ಜನರು ಪೂಜಿಸುವುದರಿಂದ ಈ ಕಲೆಗೆ ಪ್ರೇಕ್ಷಕರ ಕೊರತೆ ಎಂದು ಬರಲು ಸಾಧ್ಯವಿಲ್ಲ. ಆದರೆ ಇಂದಿನ ಮಕ್ಕಳಲ್ಲಿ ಈ ಕಲೆಯ ಬಗ್ಗೆ ಒಲವು ತೋರಿಸಬೇಕಾದುದು ಹೆತ್ತವರ ಕರ್ತವ್ಯ.
ಯಕ್ಷ ಬಿಂದು ಹವ್ಯಾಸಿ ಬಳಗ
ಚಿಣ್ಣರ ಬಳಗ ಬಿ.ಸಿ ರೋಡ್
ಕಾಡಬೆಟ್ಟು ಹವ್ಯಾಸಿ ಯಕ್ಷಗಾನ ಬಳಗ
ಯಕ್ಷಾವಾಸ್ಯಮ್ ಕಾರಿಂಜ ಹಾಗೂ ಹಲವಾರು ಹವ್ಯಾಸಿ ಕಲಾ ತಂಡಗಳಲ್ಲಿ ಹವ್ಯಾಸಿ ಕಲಾವಿದೆಯಾಗಿ ಪ್ರದರ್ಶನ ನೀಡಿರುತ್ತಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ “ಸೂಪರ್ ಮಿನಿಟ್” ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿಜೇತರಾಗಿರುತ್ತಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ “ಸುವರ್ಣ ಸೂಪರ್ ಸ್ಟಾರ್” ರಿಯಾಲಿಟಿ ಶೋನಲ್ಲಿ ಭಾಗವಹಿಸಿ “Super Star” ಕಿರೀಟ.
ವಿಶ್ವ ಆಳ್ವಾಸ್ ನುಡಿಸಿರಿ ವಿರಾಸತ್ ಯಕ್ಷಗಾನ ಸ್ಪರ್ಧೆಯಲ್ಲಿ ಉತ್ತಮ ಸ್ತ್ರೀ ವೇಷ ಪ್ರಶಸ್ತಿ.
ನಮ್ಮ ಕುಡ್ಲ ವಾಹಿನಿಯಲ್ಲಿ ಪ್ರಸಾರವಾದ “ಮನದ ಮಾತು with ಬಿರುವೆರ್ ಕುಡ್ಲ” ಕಾರ್ಯಕ್ರಮದ ವಿಶೇಷ ಅತಿಥಿ.
ಕೋಟಿ ಚೆನ್ನಯ ಬಿಲ್ಲವ ಸಂಘ ಮಾಡ, ಶಿವಾಜಿ ಬಳಗ ಮಧ್ವ, L.C.R ವಿದ್ಯಾಸಂಸ್ಥೆ ಕಕ್ಕೆಪದವು ಇತ್ಯಾದಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ನೃತ್ಯ, ಭರತನಾಟ್ಯ, ನಾಟಕ, ಕವನಗಳ ರಚನೆ ಇವರ ಹವ್ಯಾಸಗಳು.
4ನೇ ತರಗತಿಯಲ್ಲಿ ಕಾಲಿಗೆ ಗೆಜ್ಜೆ ಕಟ್ಟಿ ರಂಗ ಪ್ರವೇಶ ಮಾಡಿದ ನಾನು (ಕೃಷ್ಣ ಲೀಲೆ ಕಂಸ ವಧೆಯ ಸಖಿ) ಇಂದಿನವರೆಗೂ ಅವಕಾಶ ಸಿಕ್ಕಿದಾಗ ಹಲವಾರು ಪ್ರಸಂಗದ ಪಾತ್ರಗಳಿಗೆ ಜೀವ ತುಂಬಿಸಲು ಪ್ರಯತ್ನಿಸುತ್ತಾ ಬಂದಿದ್ದೇನೆ.
ಯಕ್ಷಗಾನ ನನ್ನನ್ನು ಸಮಾಜಕ್ಕೆ ಪರಿಚಯಿಸಿದ ಕಲೆ ಎಂದು ಹೇಳಲು ನನಗೆ ತುಂಬಾ ಹೆಮ್ಮೆಯಿದೆ. ಹಾಗೆಯೇ ಉಪನ್ಯಾಸಕ ವೃತ್ತಿಯೊಂದಿಗೆ 5 ವರ್ಷ ಕಲಾಸಕ್ತಿ ಇರುವ ಬಾಲ ಪ್ರತಿಭೆಗಳಿಗೆ ಯಕ್ಷ ನಾಟ್ಯ ತರಬೇತಿಯನ್ನು ನೀಡುತ್ತಿದ್ದೆ.
ಮುಂದಿನ ದಿನಗಳಲ್ಲಿ ಅವಕಾಶಗಳು ಸಿಕ್ಕಾಗ ಪಾತ್ರವನ್ನು ನಿರ್ವಹಿಸುವಂತದ್ದು, ಹಾಗೆಯೇ ಸಾಧ್ಯವಾದರೆ ನನಗೆ ತಿಳಿದಷ್ಟು ನಾಲ್ಕು ಮಂದಿಗೆ ಕಲಿಸಿಕೊಡುವ ಯೋಚನೆ ಇದೆ ಎಂದು ಹೇಳುತ್ತಾರೆ ದಿವ್ಯಶ್ರೀ.
03.04.2022ರಂದು ದಿವ್ಯಶ್ರೀ ಅವರು ಮನೋಜ್ ಎನ್ ಸಾಲ್ಯಾನ್ ಅವರನ್ನು ಮದುವೆಯಾಗಿ ಮಗಳು ಆರವಿ ಎಂ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ. ಕಲಾಸಕ್ತಿಯನ್ನು ಮುಂದುವರಿಸುವಲ್ಲಿ ಹೆತ್ತವರಂತೆ ಪತಿಯ ಪ್ರೋತ್ಸಾಹವನ್ನು ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ದಿವ್ಯಶ್ರೀ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.