ಯಕ್ಷಗಾನವು ಒಂದು ಜನಪದ ಕಲೆಯಾಗಿದೆ. ಇದರಲ್ಲಿ ಹಿಮ್ಮೇಳ ಮುಮ್ಮೇಳ ಕಲಾವಿದರೆಂಬ ೨ ವಿಧಗಳಿವೆ. ಹಿಮ್ಮೇಳದಲ್ಲಿ ಭಾಗವತರು, ಮದ್ದಳೆಗಾರ, ಚೆಂಡೆವಾದಕ, ಚಕ್ರತಾಳ ಮತ್ತು ಶೃತಿ ನುಡಿಸುವವ (ಹಾರ್ಮೋನಿಯಂ) ಕಲಾವಿದರಿದ್ದರೆ, ಮುಮ್ಮೇಳದಲ್ಲಿ ಪಕಡಿ ವೇಷ, ಬಣ್ಣದ ವೇಷ, ಸ್ತ್ರೀ ವೇಷಗಳ ಪಾತ್ರಧಾರಿಗಳಿದ್ದಾರೆ. ಹೀಗೆ ಸಾಹಿತ್ಯ, ಸಂಗೀತ, ನೃತ್ಯ, ವಾದ್ಯ, ಅಭಿನಯ ಚಿತ್ರ ಮತ್ತಿತರ ಹಲವು ಬಗೆಯ ಉಪಾಂಗಗಳಿಂದ ಕೂಡಿದ ಯಕ್ಷಗಾನ ಒಂದು ಸಂಕೀರ್ಣ ಕಲೆ. ಈ ಶ್ರೀಮಂತ ಕಲೆಯಲ್ಲಿ ತಮ್ಮ ಗಾನ ಸುಧೆಯನ್ನು ಹರಿಸುತ್ತಿರುವ ಭಾಗವತರು ದೇವಿಪ್ರಸಾದ್ ಆಳ್ವ ತಲಪಾಡಿ.
20.07.1982 ರಂದು ಶ್ರೀಮತಿ ದೇವಕಿ ಆಳ್ವ ಹಾಗೂ ಆನಂದ ಆಳ್ವ ದಂಪತಿಯರ ಮಗನಾಗಿ ಜನನ. ಎಸ್.ಎಸ್.ಎಲ್.ಸಿ ವರೆಗೆ ವಿದ್ಯಾಭ್ಯಾಸ. ಮನೆಯಲ್ಲಿ ಯಕ್ಷಗಾನದ ಬಗ್ಗೆ ಇದ್ದ ಒಲುಮೆ ಆಳ್ವರು ಯಕ್ಷಗಾನಕ್ಕೆ ಬರಲು ಪ್ರೇರಣೆಯಾಯಿತು.
ಯಕ್ಷಗಾನದ ಗುರುಗಳು:-
ಮಾಂಬಾಡಿ ಸುಬ್ರಹ್ಮಣ್ಯ ಭಟ್, ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ.
ನಾಟ್ಯ ಗುರುಗಳು:-
ದಯಾನಂದ ಗಟ್ಟಿ ಪಿಲಿಕೂರು, ಹರಿಶ್ಚಂದ್ರ ನಾಯ್ಗ ಮಾಡೂರು.
ನೆಚ್ಚಿನ ಭಾಗವತರು:-
ಪುರುಷೋತ್ತಮ ಪೂಂಜ, ಬಲಿಪಜ್ಜರು, ಕುರಿಯ ಭಾಗವತರು, ಪದ್ಯಾಣ, ಪುತ್ತಿಗೆ ಹೊಳ್ಳರು, ಅಮ್ಮಣ್ಣಾಯರು, ಪಟ್ಲ, ಕನ್ನಡಿಕಟ್ಟೆ.
ನೆಚ್ಚಿನ ಚೆಂಡೆ ಮದ್ದಳೆ ವಾದಕರು:-
ಮೋಹನ್ ಶೆಟ್ಟಿಗಾರ್ ಮಿಜಾರು, ಕಡಂಬಳಿತ್ತಾಯ, ಕಟೀಲು, ಮಯೂರ ಹಾಗೂ ಎಲ್ಲಾ ಹಿರಿಯ ಕಿರಿಯ
ಮದ್ದಳೆಗಾರರು.
ನಾಟಿ, ಭೈರವಿ, ತೋಡಿ, ಕಲ್ಯಾಣಿ, ಅಭೇರಿ ಹಿಂದೋಳ ಇವರ ನೆಚ್ಚಿನ ರಾಗಗಳು.
ದೇವಿ ಮಹಾತ್ಮೆ, ಮಾನಿಷಾದ, ಪಾಂಡವಾಶ್ವಮೇಧ ನೆಚ್ಚಿನ ಪ್ರಸಂಗಗಳು.
ಯಕ್ಷಗಾನದ ಇಂದಿನ ಸ್ಥಿತಿಗತಿ:-
ಯಕ್ಷಗಾನ ಕಲೆ ಅತ್ಯುತ್ಕೃಷ್ಟ ಮಟ್ಟದಲ್ಲಿದೆ, ಯಕ್ಷಗಾನದ ವ್ಯಾಪ್ತಿ ವಿಸ್ತಾರವಾಗಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನದ ಸರ್ವಾಂಗವನ್ನು ಗಮನಿಸುವ ಪ್ರೇಕ್ಷಕರ ಕೊರತೆ ಇದೆ, ಬೇರೆ ಕಲಾ ಪ್ರಕಾರಗಳಿಂದ ಯಕ್ಷಗಾನದ ಅತ್ಯುತ್ಕೃಷ್ಟ.
ಯಕ್ಷಗಾನದ ಮುಂದಿನ ಯೋಜನೆ:-
ವಿಭಿನ್ನತೆಯ ಮಟ್ಟುಗಳನ್ನು ಪರಂಪರೆಯನ್ನು ಅರಿತು ಕಲಿಸುವ ಆಸಕ್ತಿ ಇದೆ.
ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಮತ್ತು ಅನೇಕ ಸಂಘ ಸಂಸ್ಥೆಗಳಿಂದ ಇವರ ಪ್ರತಿಭೆಯನ್ನು ಗುರುತಿಸಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಸಂಗೀತ ಕೇಳುವುದು, ಯೋಗ ಇವರ ಹವ್ಯಾಸಗಳು.
1 ವರ್ಷ ಚಿರುಂಬ ಭಗವತಿ ಉಳ್ಳಾಲ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ 11 ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.
ದೇವಿಪ್ರಸಾದ್ ಆಳ್ವ ತಲಪಾಡಿ ಅವರು ಸೌಮ್ಯ ಆಳ್ವ ಇವರನ್ನು ಮದುವೆಯಾಗಿ ಮಗ ನಿಗಮ್ ಆಳ್ವ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಾಯಿ ದುರ್ಗಾಪರಮೇಶ್ವರಿಯ ಅನುಗ್ರಹ, ಆಸ್ರಣ್ಣ ಬಂಧುಗಳ ಆಶೀರ್ವಾದ ಹಾಗೂ ಕಟೀಲು ಮೇಳದ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಅಜೆಕಾರು ಬಾಲಕೃಷ್ಣ ಶೆಟ್ಟಿ, ಮೇಳದ ಸಹ ಕಲಾವಿದರ, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ದೇವಿಪ್ರಸಾದ್ ಆಳ್ವ ತಲಪಾಡಿ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು