ಮಾಲತಿ ವೆಂಕಟೇಶ್:-
29.05.1972 ನಾರಾಯಣ ನಾವಡ ಹಾಗೂ ಲಕ್ಷ್ಮೀ ಇವರ ಮಗಳಾಗಿ ಮಾಲತಿ ವೆಂಕಟೇಶ್ ಜನನ. ಪದವಿ, ನರ್ಸರಿ ಶಿಕ್ಷಣ ಹಾಗೂ ಕಂಪ್ಯೂಟರ್ ಕೋರ್ಸ್ ಇವರ ವಿದ್ಯಾಭ್ಯಾಸ. ಊರಿನಲ್ಲಿ ಆಗಾಗ ಕಟೀಲು ಮೇಳಗಳ ಯಕ್ಷಗಾನವನ್ನು ನೋಡಿ, ಅದರಲ್ಲೂ ಸಂಪಾಜೆ ಶೀನಪ್ಪ ರೈಗಳ ರಕ್ತಬೀಜ, ಪೆರುವಾಯಿ ನಾರಾಯಣ ಶೆಟ್ಟರ ಕಿರೀಟ ವೇಷವನ್ನು ನೋಡಿ ತುಂಬಾ ಆಕರ್ಷಿತಳಾಗಿ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ.
1989ರಲ್ಲಿ ಗಿರೀಶ್ ನಾವಡ ಮತ್ತು ಶಂಕರನಾರಾಯಣ ಮೈರ್ಪಾಡಿ ಇವರಲ್ಲಿ ಯಕ್ಷಗಾನ ಹೆಜ್ಜೆಗಳನ್ನು ಕಲಿತು ಪ್ರಪ್ರಥಮವಾಗಿ “ವೀರ ಬಬ್ರುವಾಹನ” ಪ್ರಸಂಗದ ಅರ್ಜುನ ಪಾತ್ರವನ್ನು ಮಾಡಿದ್ದರು, ಈ ಪಾತ್ರವನ್ನು ನೋಡಿದ ಗುರುಗಳು ನನಗೆ ಕಿರೀಟ ವೇಷಗಳನ್ನು ಮಾಡುವುದಕ್ಕೆ ಉತ್ತೇಜನ ನೀಡಿದರು ಎನ್ನುತ್ತಾರೆ ಮಾಲತಿ ವೆಂಕಟೇಶ್.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಮಾಹಿತಿ ಹಾಗೂ ಅರ್ಥಗಾರಿಕೆಯ ಬಗ್ಗೆ ಗುರುಗಳಲ್ಲಿ ಅಥವಾ ನಿರ್ದೇಶಕರಲ್ಲಿ ತಿಳಿದುಕೊಂಡು, ಭಾಗವತರಲ್ಲಿ ಪದ್ಯ ಮತ್ತು ತಾಳ ಇವುಗಳನ್ನು ಕೇಳಿಕೊಂಡು ರಂಗ ಪ್ರವೇಶ ಮಾಡುವುದು ರೂಢಿ ಎಂದು ಹೇಳುತ್ತಾರೆ ಮಾಲತಿ ವೆಂಕಟೇಶ್.
ದಕ್ಷಯಜ್ಞದ ದಕ್ಷ, ವೀರಮಣಿ ಕಾಳಗದ ವೀರಮಣಿ, ಶತ್ರುಘ್ನ, ಜಾಂಬವತಿ ಕಲ್ಯಾಣದ ಬಲರಾಮ, ಗದಾಯುದ್ಧದ ಕೌರವ, ಸುದರ್ಶನ ವಿಜಯದ ಶತ್ರುಪ್ರಸೂದನ, ಬಬ್ರುವಾಹನ ಕಾಳಗದ ಅರ್ಜುನ, ಸುಧನ್ವ ಮೋಕ್ಷದ ಅರ್ಜುನ, ಕಂಸವಧೆಯ ಕಂಸ, ಮಹಿಷ ವಧೆಯ ವಿದ್ಯುನ್ಮಾಲಿ, ಮೇಧಿನಿ ನಿರ್ಮಾಣದ ಮಧು ಕೈಟಭರು, ಮಾನಿಷಾದದ ಶತ್ರುಘ್ನ, ಗರುಡ ಗರ್ವಭಂಗದ ಹನುಮಂತ, ಶಾಂಭವಿ ವಿಜಯದ ರಕ್ತಬೀಜ, ಕುಮಾರ ವಿಜಯದ ಬಾನುಕೋಪ ಹೀಗೆ ಅನೇಕ ಪ್ರಸಂಗಗಳಲ್ಲಿ ಪಾತ್ರವನ್ನು ನಿರ್ವಹಿಸಿದ್ದಾರೆ. 1000ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿರುತ್ತಾರೆ ಮಾಲತಿ ವೆಂಕಟೇಶ್.
ರಕ್ತಬೀಜನ ಪಾತ್ರ ಅತ್ಯಂತ ಖುಷಿ ನೀಡಿದಂತಹ ಪಾತ್ರ. ಈ ಪಾತ್ರದಿಂದಲೇ ಜನಮನ್ನಣೆಯನ್ನು ಪಡೆದಿದ್ದೇನೆ ಹಾಗೂ ತುಂಬಾ ಸಂತೋಷ ಪಟ್ಟಿದ್ದೇನೆ. ಇದರಲ್ಲಿ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಇವರ ಸಹಕಾರದಿಂದ ಊರು ಪರವೂರಿನಲ್ಲಿಯೂ ಕೂಡ ಪ್ರದರ್ಶನ ನೀಡಿದ್ದೇನೆ. ಶಿವಮೊಗ್ಗ, ಶೃಂಗೇರಿ, ಕಾಸರಗೋಡು, ಮುಂಬೈ, ದೆಹಲಿ ಹೀಗೆ ಹಲವೆಡೆ ಕಾರ್ಯಕ್ರಮವನ್ನು ನೀಡುತ್ತಾ ಬಂದಿರುತ್ತೇನೆ. ಸುಮಂಗಲಾ ರತ್ನಾಕರ್ ಇವರ ಯಕ್ಷ ಕಲಾರಾಧನ ತಂಡದಲ್ಲೂ, ನೂಪುರ ಯಕ್ಷಗಾನ ತಂಡ, ಮಹಾಗಣಪತಿ ಮಹಿಳಾ ಯಕ್ಷಗಾನ ತಂಡ, ಯಶಸ್ವೀ ಮಹಿಳಾ ಯಕ್ಷಗಾನ ತಂಡ ಕದ್ರಿ, ರಾಕೇಶ್ ರೈ ಅಡ್ಕ ಇವರ ತಂಡದಲ್ಲೂ ಕೂಡ ಪಾತ್ರವನ್ನು ನಿರ್ವಹಿಸಿದ್ದೇನೆ. “ಮಾನಿಷಾದ ಪ್ರಸಂಗದ ಶತ್ರುಘ್ನ” ಕೂಡ ನನ್ನ ನೆಚ್ಚಿನ ಪಾತ್ರಗಳಲ್ಲಿ ಒಂದು. ಹಾಗೆ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ಶ್ರೀಯುತ ವಾಸುದೇವ ರಾವ್ ತಡಂಬೈಲ್ ಇವರ ಮಾರ್ಗದರ್ಶನದಲ್ಲಿ, ಹಾಗೆಯೇ ಶ್ರೀ ವಿನಯ ಆಚಾರ್ ಹೊಸಬೆಟ್ಟು ಇವರ ಜೊತೆ ಹಾಗೂ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನೀಡಿರುತ್ತೇನೆ ಎಂದು ಹೇಳುತ್ತಾರೆ ಮಾಲತಿ ವೆಂಕಟೇಶ್.
ಯಕ್ಷಗಾನದ ಇಂದಿನ ಸ್ಥಿತಿಗತಿ:-
ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಕಲೆ ಶ್ರೀಮಂತವಾಗಿ ರಾರಾಜಿಸುತ್ತಿದೆ. ಹೆಚ್ಚಿನ ಜನರು (ಕಲಾಭಿಮಾನಿಗಳು) ಗೌರವದಿಂದ ಕಾಣುವಂತಹ ಧೀಮಂತ ಕಲೆ. ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಯಕ್ಷಗಾನ ತಂಡ ಸಿದ್ಧವಾಗಿ ಹೊರ ಬರುತ್ತಿದೆ. ಈಗ ಯಕ್ಷಗಾನದಲ್ಲಿ ಪ್ರೇಕ್ಷಕರು ಪ್ರತಿದಿನ ಹೊಸತನ್ನು ಬಯಸುತ್ತಾರೆ. ಅದಕ್ಕೆ ಸರಿಯಾಗಿ ಕಲಾವಿದರು ತಮ್ಮ ಶ್ರಮವನ್ನು ಹಾಕಿ ಪ್ರೇಕ್ಷಕರ ಸಂತೋಷವನ್ನು ತನ್ನ ಪಾತ್ರ ಚಿತ್ರಣದ ಮೂಲಕ ವ್ಯಕ್ತ ಪಡಿಸುತ್ತಾರೆ. ಹೀಗಾಗಿ ಯಕ್ಷಗಾನ ಕಲೆಯ ಹಾಗೂ ಕಲಾವಿದರ ಅಭಿಮಾನಿಗಳು ಇಂದಿನ ದಿನಗಳಲ್ಲಿ ಹೆಚ್ಚಾಗಿದ್ದಾರೆ. ಪರಂಪರೆಯೊಂದಿಗೆ ಹೊಸತನ್ನು ಅಳವಡಿಸಿಕೊಂಡು ಯಕ್ಷಗಾನವನ್ನು ಉಳಿಸಿ ಬೆಳೆಸುವುದೇ ಕಲಾವಿದಳಾಗಿ ನನ್ನ ಆಸೆ. ಯಕ್ಷಗಾನವು ದೇಶ ವಿದೇಶಗಳಲ್ಲಿ ರಾರಾಜಿಸುತ್ತಿರುವುದು ಸಂತೋಷದ ವಿಚಾರ.
ಇವರ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಿ ಅನೇಕ ಸಂಘ ಸಂಸ್ಥೆಗಳು ಗೌರವಿಸಿದ್ದಾರೆ, ಸನ್ಮಾನಿಸಿದ್ದಾರೆ..
ಯಶಸ್ವೀ ಕಲಾ ಸಂಘ ಕದ್ರಿ.
ಯುವಕ ಮಂಡಲ ಕೃಷ್ಣಾಪುರ.
ಕಾಳಿಕಾಂಬ ದೇವಸ್ಥಾನ ಮಂಗಳೂರು.
ಗಣೇಶಪುರ ಕಾಟಿಪಳ್ಳ ಮಹಾಗಣಪತಿ ದೇವಸ್ಥಾನ.
ಯಕ್ಷ ಧ್ರುವ ಪಟ್ಲ ಫೌಂಡೇಶನ್ ವತಿಯಿಂದ “ಯಕ್ಷಧ್ರುವ ಕಲಾ ಗೌರವ”.
ಅಜೆಕಾರು ಬಳಗ ಮುಂಬೈ.
ಯಕ್ಷ ಕಾಲಾರಾಧನ ಕೇಂದ್ರ ಉರ್ವ.
ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಕಾಟಿಪಳ್ಳ.
ಮಾಲತಿ ವೆಂಕಟೇಶ್ ಅವರು ವೆಂಕಟೇಶ್ವರ ಎಚ್ ಅವರನ್ನು 09.12.1998 ರಂದು ಮದುವೆಯಾಗಿ ಮಗಳು ಕೃತಿ ವಿ ರಾವ್ ಹಾಗೂ ಅಳಿಯ ಕೌಶಿಕ್ ಭಟ್ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಕೃತಿ ವಿ ರಾವ್:-
28.10.1999ರಂದು ವೆಂಕಟೇಶ್ವರ ಎಚ್ ಹಾಗೂ ಮಾಲತಿ ಇವರ ಮಗಳಾಗಿ ಜನನ. MBA (Human Resource & Logistics) ಇವರ ವಿದ್ಯಾಭ್ಯಾಸ. ಶಂಕರನಾರಾಯಣ ಮೈರ್ಪಾಡಿ ಯಕ್ಷಗಾನದ ಮೊದಲ ಗುರುಗಳು. ರಾಕೇಶ್ ರೈ ಅಡ್ಕ ಹಾಗೂ ರಕ್ಷಿತ್ ಶೆಟ್ಟಿ ಪಡ್ರೆ ಇವರ ಬಳಿ ಹೆಚ್ಚಿನ ಯಕ್ಷಗಾನದ ಹೆಜ್ಜೆಗಾರಿಕೆ ಕಲಿತು ಯಕ್ಷಗಾನ ರಂಗದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ನೀಡುತ್ತಿದ್ದಾರೆ.
ಚಿಕ್ಕಂದಿನಿಂದ ಅಮ್ಮನ ಜೊತೆಗೆ ಹಾಗೂ ಅಮ್ಮನ ವೇಷ ನೋಡುವುದಕ್ಕೆ ಹೋಗುತ್ತ ಇದ್ದೆ. ಇದು ನಾನು ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು ಎಂದು ಕೃತಿ ಅವರು ಹೇಳುತ್ತಾರೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಮೊದಲು ನನಗೆ ಕೊಟ್ಟ ಪಾತ್ರದ ಬಗ್ಗೆ ವಿಚಾರಿಸುತ್ತಾನೆ ಹಾಗೂ ಪ್ರಸಂಗದ ಬಗ್ಗೆ ಪ್ರಸಂಗ ಪುಸ್ತಕ ನೋಡಿ ಪ್ರಸಂಗದಲ್ಲಿ ಬರುವ ಪಾತ್ರದ ಬಗ್ಗೆ ನೋಡಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಕೃತಿ ಅವರು ಹೇಳುತ್ತಾರೆ.
ದೇವಿ ಮಹಾತ್ಮೆ, ಸುದರ್ಶನ ವಿಜಯ, ಶಶಿಪ್ರಭೆ ಪರಿಣಯ, ಭಾರ್ಗವ ವಿಜಯ, ದಕ್ಷಯಜ್ಞ, ಜಾಂಬವತಿ ಕಲ್ಯಾಣ, ಮಹಿಷ ವಧೆ, ಮೇಧಿನಿ ನಿರ್ಮಾಣ, ಮಾನಿಷಾದ ಇವರ ನೆಚ್ಚಿನ ಪ್ರಸಂಗಗಳು.
ರಕ್ತಬೀಜ, ಮಹಿಷಾಸುರ, ಧೂಮ್ರಾಕ್ಷ, ಕಾಳಿಂಗ, ವೀರಭದ್ರ, ಲಕ್ಷ್ಮಣ, ಜಾಂಬವಂತ, ಕೈಟಭ, ದಕ್ಷ, ಸುದರ್ಶನ, ವಾಲ್ಮೀಕಿ, ಶತ್ರುಪ್ರಸೂದನ, ಚಂಡ ಮುಂಡ ಇತ್ಯಾದಿ ಇವರ ಮೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ರಂಗದಲ್ಲಿ ಒಟ್ಟು 16 ವರ್ಷಗಳಿಂದ ಸೇವೆಯನ್ನು ನೀಡುತ್ತಿದ್ದೇನೆ. ಅನೇಕ ಮಕ್ಕಳು ಹಾಗೂ ಯುವ ಕಲಾವಿದರು ಯಕ್ಷಗಾನದ ಕಡೆಗೆ ಆಕರ್ಷಣೆಯಾಗಿ ಯಕ್ಷಗಾನ ಕಲಿಯಲು ಮುಂದೆ ಬರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಕೃತಿ ಅವರ ಅಭಿಪ್ರಾಯ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನದಲ್ಲಿ ಇಂದು ಅನೇಕ ಪ್ರೇಕ್ಷಕರು ಯುವ ಪ್ರತಿಭೆಯನ್ನು ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರೋತ್ಸಾಹ ನೀಡುತ್ತಿರುವ ಪ್ರೇಕ್ಷಕರು ತಮ್ಮ ಮಕ್ಕಳಿಗೆ ಕೂಡ ಯಕ್ಷಗಾನ ಹೇಳಿಕೊಟ್ಟರೆ ಕಲೆಯ ಬಗ್ಗೆ ಅವರಿಗೂ ಗೊತ್ತು ಆಗುತ್ತೆ ಎಂದು ಕೃತಿ ಅವರ ಅಭಿಪ್ರಾಯ.
ಪೂರ್ಣಿಮಾ ಯತೀಶ್ ರೈ ಅವರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಬಾಳ ಕಾಟಿಪಳ್ಳ, ರಕ್ಷಿತ್ ಶೆಟ್ಟಿ ಪಡ್ರೆ ಅವರ ಯಕ್ಷ ಧಮನಿ ಕಲಾ ಕೇಂದ್ರ ಸುರತ್ಕಲ್, ಸುಮಂಗಲಾ ರತ್ನಾಕರ್ ರಾವ್ ಅವರ ಯಕ್ಷಾರಾಧನಾ ಕೇಂದ್ರ ಉರ್ವ ಮೇಳದಲ್ಲಿ ತಿರುಗಾಟ ಮಾಡಿದ್ದಾರೆ ಕೃತಿ.
ಯಕ್ಷಗಾನ, ಡ್ರಾಯಿಂಗ್, ಸಂಗೀತ, ಡ್ಯಾನ್ಸ್ ಇತ್ಯಾದಿ ಇವರ ಹವ್ಯಾಸಗಳು.
ಸನ್ಮಾನ ಹಾಗೂ ಪ್ರಶಸ್ತಿ:-
NSS ನಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಮಹಿಳಾ ಅಭ್ಯರ್ಥಿ.
ಮಂಗಳೂರು ವಿಶ್ವವಿದ್ಯಾಲಯದಿಂದ NSS ನಲ್ಲಿ ಅತ್ಯುತ್ತಮ ಮಹಿಳಾ ಅಭ್ಯರ್ಥಿ.
2019ರಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಅತ್ಯುತ್ತಮ ಅಭ್ಯರ್ಥಿ ಪ್ರಶಸ್ತಿ.
2019ರಲ್ಲಿ ರಾಷ್ಟ್ರ ಮಟ್ಟದ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸುತ್ತಾರೆ.
2018 – 19ರಲ್ಲಿ ಗೋವಿಂದ ದಾಸ ಕಾಲೇಜ್ ನಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಅತ್ಯುತ್ತಮ ಯಕ್ಷಗಾನ ಕಲಾವಿದೆ ಪ್ರಶಸ್ತಿ.
2017ರಲ್ಲಿ ನಡೆದ ಕರಾವಳಿ ಯುವ ಉತ್ಸವದಲ್ಲಿ ಯಕ್ಷಗಾನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ.
ಯಕ್ಷ ಧ್ರುವ ಪಟ್ಲ ಫೌಂಡೇಶನ್ ನಿಂದ ಸನ್ಮಾನ.
ಯುವಕ ಮಂಡಲ (ರಿ) ಕೃಷ್ಣಾಪುರ ಇವರಿಂದ ಸನ್ಮಾನ.
ರೋಟರಿ ಕ್ಲಬ್ ಸುರತ್ಕಲ್ ನಿಂದ ಸನ್ಮಾನ.
ಗೋವಿಂದ ದಾಸ ಕಾಲೇಜ್ ನಿಂದ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸಿ ಚಿನ್ನ ಹಾಗೂ ಬೆಳ್ಳಿ ಪದಕ.
ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಯಕ್ಷಗಾನ ಪ್ರದರ್ಶನ ನೀಡಿರುತ್ತಾರೆ.
ಕೃತಿ ಅವರು ಕೌಶಿಕ್ ಭಟ್ ಅವರನ್ನು 1.06.2023ರಂದು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು