ಕರಾವಳಿಯ ಗಂಡು ಕಲೆ ಯಕ್ಷಗಾನ. ಇಂತಹ ಗಂಡು ಕಲೆಯಲ್ಲಿ ಅನೇಕ ಮಹಿಳಾ ಕಲಾವಿದರು ಮಿಂಚುತ್ತಿದ್ದಾರೆ. ಹೀಗೆ ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಕಲಾವಿದೆ ಪೂಜಾ ಆಚಾರ್ಯ.
10.06.2002ರಂದು ಪ್ರಹ್ಲಾದ್ ಆಚಾರ್ಯ ಹಾಗೂ ಪೂರ್ಣಿಮ ಆಚಾರ್ಯ ಇವರ ಮಗಳಾಗಿ ಜನನ. Msc Psychology ಇವರ ವಿದ್ಯಾಭ್ಯಾಸ.
Dr. ರಾಧಾಕೃಷ್ಣ ಉರಾಳ, ಭರತ್ ರಾಜ್ ಪರ್ಕಳ, ಸುಬ್ಬರಾಯ ಹೆಬ್ಬಾರ್, ರವೀಶ್ ಐನಬೈಲ್, ನಿತ್ಯಾನಂದ ನಾಯಕ್ ಇವರ ಯಕ್ಷಗಾನ ಗುರುಗಳು. ಎ.ಪಿ ಫಾಟಕ್ ಬಳಿ ಮದ್ದಳೆ ಅಭ್ಯಾಸ ಹಾಗೂ ಭಾಗವತಿಕೆಯನ್ನು ಪ್ರಸನ್ನಕುಮಾರ್ ಹೆಗ್ಡೆ ಬಳಿ ಅಭ್ಯಾಸ ಮಾಡುತ್ತಿದ್ದಾರೆ.
ಪ್ರಸಂಗದ ಪದ್ಯ ಪುಸ್ತಕ ಓದುವುದು. ಪಾತ್ರದ ನಿರ್ವಹಣೆ ಹೇಗಿರಬೇಕು ಎನ್ನುವುದನ್ನು YouTube ಅಲ್ಲಿ ಸಿಗುವ ವೀಡಿಯೋಗಳನ್ನು ನೋಡಿ, ಆ ಪಾತ್ರ ನಿರ್ವಹಿಸಿದ ಬೇರೆ ಬೇರೆ ಮಹನೀಯರ ಶೈಲಿ ಗಮನಿಸಿ, ನನಗೆ ಬೇಕಾದದ್ದನ್ನು ಅನುಕರಣೆ ಮಾಡಿ, ನನ್ನತನವನ್ನು ಅದಕ್ಕೆ ಅಳವಡಿಸಿ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಪೂಜಾ ಆಚಾರ್ಯ.
ಎಲ್ಲ ಪ್ರಸಂಗಗಳಲ್ಲಿ ಅದರದ್ದೇ ವೈಶಿಷ್ಟ್ಯ ಇರುತ್ತದೆ. ಅದರಲ್ಲೂ ಪೌರಾಣಿಕ ಪ್ರಸಂಗಗಳ ಮೇಲೆ ಹೆಚ್ಚು ಒಲವು. ಇಲ್ಲಿ ತನಕ ಹಲವು ಪೌರಾಣಿಕ ಪ್ರಸಂಗದಲ್ಲಿ ವೇಷ ಮಾಡಿರುತ್ತೇನೆ. ಅಭಿಮನ್ಯು ಕಾಳಗ, ದಕ್ಷ ಯಜ್ಞ, ಬರ್ಬರೀಕ, ಭಸ್ಮಾಸುರ ಮೋಹಿನಿ, ಕಂಸ ವಧೆ, ಶ್ರೀ ದೇವಿ ಮಹಾತ್ಮೆ, ಲವ ಕುಶ, ಜಾಂಬವತಿ ಕಲ್ಯಾಣ, ಸುದರ್ಶನ ಗರ್ವಭಂಗ ಇತ್ಯಾದಿ ಪ್ರಸಂಗದಲ್ಲಿ ವೇಷವನ್ನು ಮಾಡಿರುತ್ತೇನೆ ಎಂದು ಹೇಳುತ್ತಾರೆ ಪೂಜಾ.
ನೆಚ್ಚಿನ ವೇಷಗಳ ಬಗ್ಗೆ ಕೇಳಿದಾಗ ಪೂಜಾ ಅವರು ಹೀಗೆ ಹೇಳುತ್ತಾರೆ; ಹೆಸರಿಟ್ಟು ಹೇಳುವುದು ಕಷ್ಟ.. ಒಂದೊಂದು ವೇಷವೂ ಹೊಸತನ್ನು ಹೇಳಿಕೊಡ್ತದೆ, ನನ್ನೊಳಗಿದ್ದ ನನಗೆ ತಿಳಿಯದ ಶಕ್ತಿ ಅಥವಾ ಸಾಮರ್ಥ್ಯವನ್ನ ಹೊರಗೆ ತರುತ್ತದೆ. ಎಲ್ಲಾ ರೀತಿಯ ಮನೋಧರ್ಮ ಇರುವ ಪಾತ್ರ ಮಾಡಬೇಕು ಅನ್ನೋದು ನನ್ನ ಆಸೆ. ಅದಲ್ಲದೆ ಭಾವುಕತೆ ಉಳ್ಳ ಪಾತ್ರಗಳು ಹೆಚ್ಚು ಮನಸಿಗೆ ಆಪ್ತ. ದಾಕ್ಷಾಯಿಣಿ , ಅಭಿಮನ್ಯು, ಸೀತೆ, ಮಾಲಿನಿ, ಹೀಗೆ. ವೀರ ಪ್ರಧಾನ ಪುಂಡು ವೇಷಗಳೂ ಕೂಡ ಇಷ್ಟ. ಅಭಿಮನ್ಯು, ಬರ್ಬರೀಕ, ಕುಶ, ಈ ರೀತಿ. ಅದಲ್ಲದೆ ವಿಷ್ಣು, ರಾಮ ಪಾತ್ರಗಳ ಹಾಗೆ ಶಾಂತಿ, ಪ್ರಭುದ್ಧ ಸ್ಥಿತಿಯ ವೇಷಗಳು ಕೂಡ ಇಷ್ಟ ಆಗ್ತದೆ. ಖಳ ಪಾತ್ರಗಳೂ, ಹಾಸ್ಯ ಪಾತ್ರಗಳೂ ಇಷ್ಟ.. ಒಟ್ಟಾರೆಯಾಗಿ ಆ ಪಾತ್ರಕ್ಕೆ ಬೇಕಾದ ಭಾವನೆಗಳನ್ನು ಕೊಡುವುದು ನನಗೆ ಮುಖ್ಯ ಅನಿಸುವುದು ಆ ನಿಟ್ಟಿನಲ್ಲಿ ಎಲ್ಲಾ ಪಾತ್ರಗಳೂ ನನಗೆ ನೆಚ್ಚಿನದ್ದು.
ಹವ್ಯಾಸಿ ಕಲಾವಿದೆಯಾಗಿ ಅಷ್ಟು ಪ್ರಸಂಗಗಳನ್ನು ಮಾಡಿದ ಅನುಭವ ಇಲ್ಲ. ಪಾಂಚಜನ್ಯ ಪ್ರಸಂಗದಲ್ಲಿ ಕೃಷ್ಣನ ವೇಷ ಮೊದಲ ಪ್ರಸಂಗ, ಮೊದಲ ವೇಷ. ಆನಂತರ ಸಿಕ್ಕಿದ್ದು ದಕ್ಷಯಜ್ಞದಲ್ಲಿ ದಾಕ್ಷಾಯಿಣಿ, ಭಸ್ಮಾಸುರ ಮೋಹಿನಿಯ ಮೋಹಿನಿ, ಅಭಿಮನ್ಯು ಪ್ರಸಂಗದ ಅಭಿಮನ್ಯು, ಕಂಸ ವಧೆಯ ಕೃಷ್ಣ, ಬಲರಾಮ, ಕೃಷ್ಣ ಪಾರಿಜಾತದ ಕೃಷ್ಣ, ಜಾಂಬವತಿ ಕಲ್ಯಾಣದ ಪ್ರಸೇನ, ಕೃಷ್ಣ, ಜಾಂಬವತಿ, ಬರ್ಬರೀಕ ಪ್ರಸಂಗದ ಬರ್ಬರೀಕ, ಲವ ಕುಶದಲ್ಲಿ ಕುಶ, ಸೀತೆ, ವಿಷಯೆ ಪರಿಣಯದ ವಿಷಯೆ, ದೇವಿ ಮಹಾತ್ಮೆಯಲ್ಲಿ ಮಾಲಿನಿ, ಸುದರ್ಶನ ಗರ್ವಭಂಗ ಪ್ರಸಂಗದ ವಿಷ್ಣು, ಗಂಗಾವತರಣದ ಗಂಗೆ, ಶರಸೇತು ಬಂಧದ ರಾಮ, ಅದಲ್ಲದೇ ಸಂಪೂರ್ಣ ದೇವಿ ಮಹಾತ್ಮೆ ಯ ಚಂಡ ಮುಂಡ, ಶ್ವೇತಕುಮಾರ ಪ್ರಸಂಗದಲ್ಲಿ ಲೋಹಿತನೇತ್ರ, ಇಂತಹ ಖಳ ಪಾತ್ರಗಳನ್ನೂ ಕೂಡ ನಿರ್ವಹಿಸಿದ್ದೇನೆ. ಹಾಸ್ಯಕ್ಕೆ ಬಂದರೆ ಕೃಷ್ಣ ಗಾರುಡಿ ಪ್ರಸಂಗದ ಗಾರುಡಿ ಕೃಷ್ಣ ಹೀಗೆ ಹಲವು ರೀತಿಯ ವೇಷಗಳನ್ನು ಕೊಟ್ಟು ನನ್ನ ಪ್ರತಿಭೆಯನ್ನು ತೋರಿಸುವ ಅವಕಾಶವನ್ನು ನೀಡಿದ ಗುರುಗಳಿಗೂ ನಾನು ಆಭಾರಿ ಎಂದು ಹೇಳುತ್ತಾರೆ ಪೂಜಾ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಬೆಂಗಳೂರಿನoತಹ ಮಹಾನಗರಗಳಲ್ಲಿ ಕಾಲಮಿತಿ ಪ್ರದರ್ಶನಗಳು ಹೆಚ್ಚು, ಅರ್ಧ ಗಂಟೆ – ಒಂದು ಗಂಟೆಯಲ್ಲಿ ಇಡೀಯ ಪ್ರಸಂಗವನ್ನು ಮುಗಿಸುವ ಹೊಣೆ, ಅನಿವಾರ್ಯ. ಹೀಗಿರುವ ಸಂದರ್ಭಗಳಲ್ಲಿ ಇಂತಹದ್ದೊಂದು ಟ್ರೆಂಡಿಗೆ ಬಾಗಬೇಕಾದದ್ದು ಕಲಾವಿದನ ಕರ್ತವ್ಯ ಎನ್ನುವುದು ನನ್ನ ಅನಿಸಿಕೆ. ಆ ನಿಟ್ಟಿನಲ್ಲಿ ಕಡಿಮೆ ಸಮಯವಕಾಶ ಇರುವಾಗ ಆದಷ್ಟು ನಾವು ಮಾಡುವ ಪ್ರದರ್ಶನ ಪ್ರೇಕ್ಷಕರಿಗಾಗಿರಲಿ. ಹೆಚ್ಚು ಸಮಯಾವಕಾಶ ಸಿಕ್ಕಾಗ ಪ್ರೇಕ್ಷಕರ ಆಸಕ್ತಿಯನ್ನು ಗಮನದಲ್ಲಿಟ್ಟು ಜೊತೆಗೆ ನಮ್ಮ ಸಾಮರ್ಥ್ಯದ ಪ್ರದರ್ಶನ . ಇದು ನನ್ನ ವೈಯಕ್ತಿಕ ಭಾವನೆ ಹಾಗೂ ನಾನು ವೇಷ ಮಾಡುವಾಗ ಪಾಲಿಸುವ ಕ್ರಿಯೆ.
ಇದರ ಹೊರತಾಗಿ ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಕಲೆಯ ಪರಿಚಯ ಎಲ್ಲ ಕಡೆ ಆಗುತ್ತಿರುವುದು ಹೆಮ್ಮೆಯ ಸಂಗತಿ. ಆದರೂ ಕೆಲವೊಂದು ಕಡೆ ಆಗುತ್ತಿರುವ ಸರಿ ಅಲ್ಲದ ರೀತಿಯ ಪ್ರಚಾರ ಬೇಸರದ ಸಂಗತಿಯಾದರೂ ಯಕ್ಷಗಾನ ಕಲೆ ಅದೆಲ್ಲವನ್ನೂ ಮೀರಿ ನಿಂತದ್ದು.
ಇಂದಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಾವುದೇ ಕಲೆಯಾದರೂ, ಪ್ರೇಕ್ಷಕರಿಗಾಗಿ, ಪ್ರೇಕ್ಷಕರಿಂದ. ಯಕ್ಷಗಾನವೂ ಇದಕ್ಕೆ ಹೊರತಲ್ಲ. ಆಗಲೇ ಹೇಳಿದ ಹಾಗೆ ಪ್ರೇಕ್ಷಕರ ಆಸಕ್ತಿಗೆ ಅನುಸಾರವಾಗಿ ನಮ್ಮ ಪ್ರದರ್ಶನ. ಅವರ ಆಸಕ್ತಿ ಎಂದಾಕ್ಷಣ ಯಕ್ಷಗಾನದ ಮೂಲಾಂಶವನ್ನು ಬಿಟ್ಟು ಕುಣಿಯುವುದು ಎಂದರ್ಥ ಅಲ್ಲ. ನಿರ್ವಹಿಸುತ್ತಿರುವ ಪಾತ್ರಕ್ಕೆ, ಪ್ರಸಂಗದ ಕಥೆಗೆ, ಕವಿ ಕಟ್ಟಿಕೊಟ್ಟ ಚೌಕಟ್ಟಿನ ಒಳಗೆಯೇ ಇದ್ದು ಪ್ರೇಕ್ಷಕರನ್ನು ಅವರ ಆಸಕ್ತಿಯಂತೆ ಆಕರ್ಷಿಸುವುದು. ಹಾಗಾಗಿ ಎಂತಹ ಪ್ರೇಕ್ಷಕರನ್ನೂ ಕೂಡ ಕಲೆಯತ್ತ, ಕಲಾವಿದ ನಿರ್ವಹಿಸುತ್ತಿರುವ ಪಾತ್ರದತ್ತ ಸೆಳೆಯುವ ಜವಾಬ್ದಾರಿ ಕಲಾವಿದನದ್ದು. ಕುಣಿಲಿಕ್ಕೆ ಬಾರದೆ ಇರುವವರು ರಂಗಸ್ಥಳ ಡೊಂಕು ಎನ್ನುವ ರೀತಿ, ನಾವು ಮಾಡಿದ ಪ್ರದರ್ಶನ ಒಳ್ಳೆದಿತ್ತು ಆದ್ರೆ ಪ್ರೇಕ್ಷಕರಿಗೆ ಹಿಡಿಸಲಿಲ್ಲ ಎನ್ನುವುದು ಸರಿ ಅಲ್ಲ ಎನ್ನುವುದು ಇವರ ವೈಯಕ್ತಿಕ ಅಭಿಪ್ರಾಯ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ :-
ಯಕ್ಷಗಾನದ ಮೇಲೆ ಈಗಾಗಲೇ BA ಪದವಿ ಮಾಡುತ್ತಿದ್ದಾಗ, research ಮಾಡಿದ್ದೆ. ಅದನ್ನೇ ಈಗಲೂ ಮುಂದುವರೆಸಿ, ಯಕ್ಷಗಾನ ಒಂದು ಪ್ರದರ್ಶನ ಕಲೆಯಾಗಿ ಅಲ್ಲದೆ, ಬೇರೆ ಬೇರೆ ಅಂಶಗಳಲ್ಲಿ ಹೇಗೆ ಉಪಯೋಗವೋ ಅಲ್ಲವೋ ಎನ್ನುವುದರ ಬಗ್ಗೆ ಸಂಶೋಧನೆಯ ದೃಷ್ಟಿಯಲ್ಲಿ ಮುಂದುವರೆಸುವ ಯೋಜನೆ ಉಂಟು.
ಯಕ್ಷಗಾನ ಕ್ಷೇತ್ರದಲ್ಲಿ ನಾನಿರುವುದು ನನಗೆ ಸಿಕ್ಕ ದೊಡ್ಡ ಸನ್ಮಾನ, ಪ್ರಶಸ್ತಿ.
ಬೊಂಬೆ ನಾಡು ಕಲಾ ವೈಭವ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ “ಕಲಾ ವೈಭವ ಪ್ರಶಸ್ತಿ – 2024” ಪ್ರಶಸ್ತಿ ದೊರಕಿರುವುದು ನನ್ನ ಭಾಗ್ಯ ಎಂದು ಹೇಳುತ್ತಾರೆ ಪೂಜಾ.
ಹವ್ಯಾಸಗಳು:-
ಭರತನಾಟ್ಯ, ಕಾಂಟೆಂಪರರಿ, ಜಾನಪದ, ಶೈಲಿಯ ನೃತ್ಯ ಪ್ರಕಾರಗಳು ನನ್ನ ಪ್ರವೃತ್ತಿ. ಮ್ಯಾಜಿಕ್, ಮೆಂಟಲಿಸಮ್ (mentalism), ಶಾಡೋ ಪ್ಲೇ (shadow play), ಇವು ನನ್ನ ವೃತ್ತಿ. ಚಿಂಟು ಟಿವಿ ಹಾಗೂ ಉದಯ ಮ್ಯೂಸಿಕ್ ನಲ್ಲಿ ನಿರೂಪಕಿ.
ಪುಸ್ತಕ ಓದುವುದು, ಬರೆವಣಿಗೆ, ಹೊಲಿಗೆ, ಚಿತ್ರ ಬಿಡಿಸುವುದು, ಕ್ರೋಚೇಟಿಂಗ್, ಇದೆಲ್ಲ ಆಸಕ್ತಿ.
ತಂದೆ, ತಾಯಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಪೂಜಾ ಆಚಾರ್ಯ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.