ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದಿವಂಗತ ಸಣ್ಣಯ್ಯ ಮತ್ತು ಗಿರಿಜಾ ದಂಪತಿಗಳಿಗೆ ದಿನಾಂಕ 07-07-1977ರಂದು ಜನಿಸಿದ ಸುಪುತ್ರಿ ಪ್ರೇಮ ಕಿಶೋರ್. ದಿವಾಣ ಶಿವಶಂಕರ್ ಭಟ್ ತೆಂಕಿನ ಗುರುಗಳು ಹಾಗೂ ಗುರುನಂದನ್ ಹೊಸೂರು ಬಡಗಿನ ಗುರುಗಳು. ಬಾಲ್ಯದಲ್ಲಿ ಯಕ್ಷಗಾನದ ಮೇಲೆ ತುಂಬಾ ಆಸಕ್ತಿ ಇತ್ತು. ಆದ್ರೆ ಅದಕ್ಕೆ ಅವಕಾಶ ಇರಲಿಲ್ಲ. ಮದುವೆ ಆದ ನಂತರ ನನ್ನ ಅತ್ತೆ ಯಕ್ಷಗಾನ ಮಾಡ್ತಾ ಇದ್ರು. ಅವರು ಬಡಗಿನ ವೇಷ ಮಾಡುತ್ತಿದ್ದರು. ಅವರೇ ನನಗೆ ಪ್ರೇರಣೆ ಎಂದು ಹೇಳುತ್ತಾರೆ ಪ್ರೇಮ ಕಿಶೋರ್.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಪದ್ಯಗಳನ್ನು ಓದುತ್ತೇನೆ. ನನ್ನ ಜೊತೆ ಪಾತ್ರದ ಬಗ್ಗೆ ತಿಳಿದುಕೊಳ್ಳುತ್ತೇನೆ. ಸಂವಾದ ಹೇಗೆ ಸೃಷ್ಟಿ ಆಗ್ತದೆ ಅಂತ ನೋಡಿಕೊಳ್ಳುತ್ತೇನೆ. ಹಿರಿಯ ಕಲಾವಿದರ ಅರ್ಥಗಾರಿಕೆಯನ್ನು ಕೇಳುತ್ತೇನೆ. ನನಗೆ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ಚೊಕ್ಕವಾಗಿ ತಪ್ಪಾಗದ ರೀತಿಯಲ್ಲಿ ನಿಭಾಯಿಸಬೇಕು ಎನ್ನುವ ಬದ್ಧತೆ ನಿಲ್ಲಿಸಿಕೊಳ್ಳುತ್ತೇನೆ. ಪಾತ್ರದ ಮೂಲ ಆಶಯಕ್ಕೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಎಚ್ಚರವಹಿಸುತ್ತೇನೆ. ಮೇಳದ ಆಟಗಳನ್ನು ನೋಡುವುದಕ್ಕೆ ಹೋಗುತ್ತೇನೆ. ಯಾವೆಲ್ಲಾ ಪಾತ್ರಗಳನ್ನು ನಿರ್ವಹಿಸುತ್ತಾರೆ, ಕಲಾವಿದರ ಸರಿ ತಪ್ಪುಗಳನ್ನು ಗಮನಿಸುತ್ತೇನೆ. ನನಗೆ ಹಿತವೆನಿಸುವುದನ್ನು ಸ್ವೀಕರಿಸುತ್ತೇನೆ. ಅವರ ಅಬಾಧ್ಯತೆಗಳು ನನಗೆ ಬಾರದ ರೀತಿಯಲ್ಲಿ ನೋಡಿಕೊಳ್ಳುತ್ತೇನೆ. ಹೀಗೆ ರಂಗಕ್ಕೆ ಹೋಗುವ ಮೊದಲು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಪ್ರೇಮ ಕಿಶೋರ್.
ಎಲ್ಲಾ ಪಾತ್ರಗಳು ನೆಚ್ಚಿನವೆ ಆಗಿರುತ್ತೆ. ಅರ್ಥಗಾರಿಕೆ ಭಾವನೆಗಳನ್ನು ಪ್ರಕಟಿಸುವುದಕ್ಕೆ ಯಾವ ಯಾವ ಪಾತ್ರಗಳಲ್ಲಿ ಅವಕಾಶ ಸಿಗುತ್ತೋ ಆ ಎಲ್ಲಾ ಪಾತ್ರಗಳು ನನಗೆ ಬಹಳ ಖುಷಿ ಕೊಡುತ್ತವೆ. ಬಡಗಿನಲ್ಲಿ ಕೂಡ ವೇಷ ಮಾಡಿದ್ದೇನೆ. ವೀರಭದ್ರ, ಪ್ರಸೇನ, ಶುಕ್ರ, ವಿಭೀಷಣ, ಶಿವೆ. ನನ್ನ ನೆಚ್ಚಿನ ಪಾತ್ರ ಮಹಿಷಾಸುರ. ಆ ಪಾತ್ರವನ್ನು ಮಾಡಿ ಎಲ್ಲರ ಮೆಚ್ಚುಗೆಯನ್ನೂ ಗಳಿಸಿದ್ದೇನೆ. ಮಾರ್ತಾಂಡತೇಜ, ಶ್ರೀದೇವಿಯಾಗಿ, ರಕ್ತಬೀಜ, ಸುಗ್ರೀವ, ಶುಂಭ, ಕೃಷ್ಣ, ಹನುಮಂತ, ಜಾಂಬವ, ಬಲರಾಮ, ಮುರಾಸುರ, ತಾರಕಾಸುರ, ಕೊಲ್ಲೂರು ಕ್ಷೇತ್ರ ಮಾತ್ಮೆಯ ಅಂಬಿಕೆ, ಮೂಕಾಸುರ, ದಕ್ಷಯಜ್ಞದ ದಕ್ಷ, ಈಶ್ವರ, ವೀರಭದ್ರ, ರೇಣುಕ ಮಹಾತ್ಮೆಯ ಜಮದಗ್ನಿ ಹೀಗೆ ಹಲವು ಪಾತ್ರಗಳು.
ತಾಳಮದ್ದಲೆಯಲ್ಲಿ ಪುತ್ತೂರಿನ ಹೆಸರಾಂತ ಧೀ ಶಕ್ತಿ ಮಹಿಳಾ ಯಕ್ಷ ಬಳಗ ತೆಂಕಿಲ ಪುತ್ತೂರು ಇದರ ರೂವಾರಿ ಮತ್ತು ನನ್ನ ಗುರುಗಳು ಪದ್ಮ ಕೆ. ಆಚಾರ್ ಅವರ ಶಿಷ್ಯೆಯಾಗಿ 10 ವರ್ಷದಿಂದ ಬೇರೆ ಬೇರೆ ಪಾತ್ರದ ಅರ್ಥವನ್ನು ಹೇಳಿದ್ದೇನೆ ಹಾಗೂ ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು ಇವರ ಮಾರ್ಗದರ್ಶನದಲ್ಲಿ ‘ಸಾಯಿಕಲಾ ಯಕ್ಷ ಬಳಗ ಬಾಲವನ ಪುತ್ತೂರು’ ಇದರ ಸದಸ್ಯೆಯಾಗಿ ಹಲವು ಕಾರ್ಯಕ್ರಮವನ್ನು ನೀಡಿರುತ್ತೇನೆ.
ಗುರುಗಳ ಮಾರ್ಗದರ್ಶನದಲ್ಲಿ ಸುಧನ್ವ, ಹಂಸಧ್ವಜ, ಕೃಷ್ಣ, ಅರ್ಜುನ, ಹನುಮಂತ, ಈಶ್ವರ, ಕುಬೇರ, ಹನುಮಂತ, ಮಂಥರೆ, ಸುಗ್ರೀವ, ದಮಯಂತಿ, ದಕ್ಷ, ವಿದುರ, ಕೃಷ್ಣ, ಕುಂತಿ, ವಿಷ್ಣು, ಚಂಡ, ಬಲರಾಮ, ಶಲ್ಯ ಹೀಗೆ ಹಲವು ಪಾತ್ರಗಳನ್ನು ಮಾಡಿದ್ದೇನೆ. ಪರಿಪೂರ್ಣ ಅಂತ ಏನು ಹೇಳುವುದಿಲ್ಲ. ಯಕ್ಷಗಾನದಲ್ಲಿ ಕಲಿಯುವುದು ದಿನಾ ಇರುತ್ತದೆ. ಯಕ್ಷಗಾನ ಅಂದರೆ ಒಂದು ಸಮುದ್ರ. ಆ ಸಮುದ್ರದ ಒಂದು ಬಿಂದು ನಾನು ಅಷ್ಟೇ ಎಂದು ಪ್ರೇಮ ಅವರು ಹೇಳುತ್ತಾರೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ
ಯಕ್ಷಗಾನದ ಪ್ರೇಕ್ಷಕರ ಬಗ್ಗೆ ಹೇಳುವುದಾದರೆ ಮೊದಲಿನ ಆಸಕ್ತಿ ಈಗ ಬಹಳ ಕಡಿಮೆಯಾಗಿದೆ. ಇನ್ನು ಈ ಕರಾವಳಿಯಲ್ಲಿ ಯಕ್ಷಗಾನ ಅಂತ ಹೇಳಿದ್ರೆ ಜೀವನದೊಂದು ಭಾಗ. ಹಿಂದೆ ಯಕ್ಷಗಾನ ನೋಡುವುದಕ್ಕೆ ಪ್ರೇಕ್ಷಕರು ಬರ್ತಾ ಇದ್ರು, ಯಕ್ಷಗಾನದ ಮೇಲೆ ಅಭಿಮಾನವನ್ನು ನಿಲ್ಲಿಸಿ, ಈಗ ಅವರಿಗೆ ಪ್ರಿಯವಾದ ಕಲಾವಿದರಿದ್ರೆ ಬರುವಂತ ಪ್ರೇಕ್ಷಕರ ಸಂಖ್ಯೆ ಹೆಚ್ಚಿದೆ. ಇನ್ನು ಕಥೆಗೆ ಸಂಬಂಧಪಟ್ಟ ಸಂಭಾಷಣೆ ಇರುವುದಿಲ್ಲ. ವೈಯಕ್ತಿಕವಾಗಿ ಕೂಡ ಹೋಗ್ತದೆ ಮತ್ತು ಪುರಾಣ ಪ್ರಸಂಗವನ್ನು ಬಿಟ್ಟು ಈಗಿನ ವಿಚಾರವನ್ನು ಅಳವಡಿಸಿಕೊಳ್ಳುವುದಕ್ಕೋ ಏನೋ ಗೊತ್ತಿಲ್ಲ. ಹಾಗಾಗಿ ಪ್ರೇಕ್ಷಕರಿಗೆ ಯಕ್ಷಗಾನದ ಬಗ್ಗೆ ಒಲವು ಕಡಿಮೆ. ಇನ್ನು ಒಂದು ಆಟಕ್ಕೆ ಬಂದೇ ಯಕ್ಷಗಾನ ನೋಡಬೇಕಂತಲೇ ಇಲ್ಲ ಲೈವ್ ನೋಡುತ್ತೇವೆ. ಪುರಾಣ ಕಥೆಗಳ ನೈಜ್ಯತೆಯನ್ನು ತೋರಿಸಬೇಕು. ಅದಕ್ಕೆ ಹೊಸತನ್ನು ಅಳವಡಿಸಿದ್ರೆ ಅಲ್ಲಿ ಕೂಡ ಪ್ರೇಕ್ಷಕರ ಸಂಖ್ಯೆ ಕಡಿಮೆ ಇರುತ್ತದೆ.
ಯಕ್ಷಗಾನದ ಮುಂದಿನ ಯೋಜನೆ
ಯಕ್ಷಗಾನವನ್ನು ಯಕ್ಷಗಾನವಾಗಿಯೇ ಇರಿಸಬೇಕು. ಅದಕ್ಕೆ ನಾವು ಪರಂಪರೆಯನ್ನು ಬಿಡಬಾರದು. ಇನ್ನು ಮುಂದಿನ ಮಕ್ಕಳಿಗೆ ಯಕ್ಷಗಾನವನ್ನು ಅಭ್ಯಾಸ ಮಾಡುವ ಆಸಕ್ತಿ ಬರುವುದಕ್ಕಾಗಿ ಆದಷ್ಟು ಮಹಿಳೆಯರು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳಬೇಕು. ಅದಕ್ಕಾಗಿ ಮಹಿಳೆಯರು ಕೂಡ ಸಂಘಟನೆಯನ್ನು ಮಾಡಿ ಯಕ್ಷಗಾನವನ್ನು ಉಳಿಸುವಲ್ಲಿ ಸಹಕಾರಿಯಾಗಬೇಕು. ತಾಯಂದಿರು ಯಕ್ಷಗಾನವನ್ನು ಮಾಡಿದ್ರೆ ಮಕ್ಕಳು ಸ್ವಲ್ಪನಾದರೂ ಮಾಡಬಹುದು ಎನ್ನುವ ಒಂದು ನನ್ನ ಯೋಚನೆ. ನಾಡಿಗರ ಮಾತೊಂದು ಇದಿಯಲ್ಲ ‘ಅಪ್ಪ ಗುಡಿ ಕಟ್ಟಿದ್ರೆ ಮಗ ಗೋಪುರವನ್ನು ಕಟ್ಟಬಹುದು’ ಅನ್ನುವ ಹಾಗೆ; ನಾವು ಸ್ವಲ್ಪ ಅಡಿಪಾಯವನ್ನು ಹಾಕಿದ್ರೆ ಉಳಿಸಿ ಬೆಳೆಸಬಹುದು ಎನ್ನುವಂತ ಯೋಚನೆ ನನ್ನದು.
ಸನ್ಮಾನಗಳು ತುಂಬಾ ಆಗಿದೆ.
♦ 2023ರಲ್ಲಿ ಶಿವಮೊಗ್ಗದ ಯೋಗ ಮತ್ತು ಪ್ರಕೃತಿ ಸಂಸ್ಥೆಯವರು ಕುವೆಂಪು ರಂಗಮಂದಿರದಲ್ಲಿ ಕನಕಶ್ರೀ ಚೇತನ ಕಲಾ ರಾಜ್ಯ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದ್ದಾರೆ.
♦ ಯೋಗ ಮತ್ತು ಪತಂಜಲಿ ಸಂಸ್ಥೆ ಅವರು ಕೊಡ ಮಾಡುವ ಕನಕಶ್ರೀ ಚೇತನ ರಾಜ್ಯ ಪ್ರಶಸ್ತಿ ಕೊಟ್ಟು ಗೌರವಿಸಿದ್ದಾರೆ.
♦ ಪುತ್ತೂರಿನ ಜಿಲ್ಲಾಮಟ್ಟದ ಜೆ.ಸಿ.ಐ. ಕಾರ್ಯಕ್ರಮದಲ್ಲಿ ಸಾಧನ ಶ್ರೀ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದ್ದಾರೆ.
ಓದುವುದು, ಕವಿತೆ ಬರೆಯುವುದು, ನಾಟಕ ನೋಡುವುದು ಇವರ ಹವ್ಯಾಸಗಳು.
ಪ್ರೇಮ ಅವರು ಕಿಶೋರ್ ಕುಮಾರ್ ಅವರನ್ನು ಮದುವೆಯಾಗಿ ಮಗ ಸಾಗರ್ ಹಾಗೂ ಮಗಳು ವರ್ಷ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ. ತಂದೆ, ತಾಯಿ, ಪತಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಪ್ರೇಮ ಕಿಶೋರ್.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
ಶ್ರವಣ್ ಕಾರಂತ್ ಕೆ.
ಸುಪ್ರಭಾತ, ಶಕ್ತಿನಗರ ಮಂಗಳೂರು.
☎ :- +91 8317463705