ಬಾಲ್ಯದಿಂದಲೂ ಯಕ್ಷಗಾನ ಹಾಗೂ ಭರತನಾಟ್ಯ ಕಲೆಯ ಮೇಲೆ ಆಸಕ್ತಿ ಹಾಗೂ ತಂದೆಯವರ ಯಕ್ಷಗಾನ ವೇಷದ ಪ್ರಭಾವ ನಂತರದಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೃಷ್ಣ ಯಾಜಿ ಬಳ್ಕೂರು, ರಾಮಚಂದ್ರ ಹೆಗಡೆ ಕೊಂಡದಕುಳಿ ಅಂತಹ ಯಕ್ಷ ದಿಗಜ್ಜರ ವೇಷವನ್ನು ನೋಡಿ ಹಾಗೂ ಬಾಲ್ಯದಿಂದಲೂ ಶಾಸ್ತ್ರೀಯ ನೃತ್ಯ ಪ್ರಕಾರವಾದ ಭರತನಾಟ್ಯ ಕಲೆಯಡೆಗೆ ಆಕರ್ಷಿತರಾಗಿ ಆರನೇ ತರಗತಿಯಲ್ಲಿ ಇರುವಾಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ತೂರು ಇಲ್ಲಿ ಪ್ರಥಮ ವೇಷ ಮಾಡಿ ಇಂದು ಯಕ್ಷಗಾನ ಹಾಗೂ ಭರತನಾಟ್ಯ ರಂಗದಲ್ಲಿ ಛಾಪು ಮೂಡಿಸುತ್ತಿರುವ ಕಲಾವಿದೆ ಶ್ರುತಿ ಭಟ್ ಮಾರಣಕಟ್ಟೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಾರಣಕಟ್ಟೆಯ ಎಂ.ಶಂಕರ್ ಭಟ್ ಹಾಗೂ ವನಿತಾ ಭಟ್ ಇವರ ಮಗಳಾಗಿ ಜೂನ್ 30ರಂದು ಶ್ರುತಿ ಭಟ್ ಮಾರಣಕಟ್ಟೆಯವರ ಜನನ. ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜ್ ನಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.
ಯಕ್ಷಗಾನ ಗುರುಗಳು:
ಶ್ರೀಯುತ ಪ್ರಭಾಕರ ಆಚಾರ್ಯ ಹೆಮ್ಮಾಡಿ. ನಂತರದಲ್ಲಿ ಹೆಜ್ಜೆಗಾರಿಕೆ ಹಾಗೂ ಭಾಗವತಿಕೆಯನ್ನು ಶ್ರೀಯುತ ಮಹೇಶ್ ಕುಮಾರ್ ಮಂದಾರ್ತಿ, ಪ್ರಸಂಗದ ಬಗ್ಗೆ ಅಭ್ಯಾಸವನ್ನು ಶ್ರೀಯುತ ಭಾಸ್ಕರ ಆಚಾರ್ಯ ಮಾರಣಕಟ್ಟೆ ಬಳಿ ಅಭ್ಯಾಸ ಮಾಡುತ್ತಿದ್ದಾರೆ.
ಭರತನಾಟ್ಯ ಗುರುಗಳು: ವಿದುಷಿ ಡಾ.ಅನುಲೇಖಾ ಬಾಯರಿ.
ನೆಚ್ಚಿನ ಪ್ರಸಂಗಗಳು:
ಕುಶ ಲವ, ಕಂಸ ವಧೆ, ಭಸ್ಮಾಸುರ ಮೋಹಿನಿ, ರತ್ನಾವತಿ ಕಲ್ಯಾಣ, ಬಭ್ರುವಾಹನ ಕಾಳಗ ಹಾಗೂ ಎಲ್ಲಾ ಪೌರಾಣಿಕ ಪ್ರಸಂಗಗಳು ನೆಚ್ಚಿನ ಪ್ರಸಂಗಗಳು.
ಕೃಷ್ಣ, ಲವ, ರುಕ್ಮಾಂಗ, ಬಭ್ರುವಾಹನ ನೆಚ್ಚಿನ ವೇಷಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:
ರಂಗಕ್ಕೆ ಹೋಗುವ ಮೊದಲು ಭಾಗವತರು ಮತ್ತು ಸಹ ಕಲಾವಿದರ ಜೊತೆಗೆ ಪ್ರಸಂಗದ ನಡೆ ಮತ್ತು ಪದ್ಯಗಳ ಕುರಿತು ಚರ್ಚಿಸಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಶ್ರುತಿ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:
ಇತ್ತೀಚಿನ ದಿನಗಳಲ್ಲಿ ಯುವ ಕಲಾವಿದರು ಯಕ್ಷಗಾನ ಕಲೆಯ ಕಡೆಗೆ ಆಕರ್ಷಿತರಾಗಿ ತಮ್ಮನ್ನು ತಾವು ತೊಡಗಿಕೊಳ್ಳುವುದು ಖುಷಿಯ ವಿಚಾರ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:
ಪ್ರತೀಯೊಂದು ವಿಷಯದಲ್ಲೂ ನಾವೀನ್ಯತೆಯನ್ನು ಹುಡುಕುವ ಈ ಪೀಳಿಗೆ ಅಂತಹದರಲ್ಲಿ ನಮ್ಮ ಈ ಯಕ್ಷಗಾನ ಕಲೆಯ ಶಿಸ್ತಿನ ಚೌಕಟ್ಟನ್ನು ಗೌರವಿಸಿ, ನಾವೀನ್ಯತೆಯನ್ನು ಸ್ವೀಕರಿಸುವಂತಹ ಈ ಕಾಲದ ಪ್ರೇಕ್ಷಕರು.
ಐದನೇ ತರಗತಿಯಲ್ಲಿ ಇರುವಾಗ ಭರತನಾಟ್ಯವನ್ನು ಕಲಿಯಲು ಆರಂಭಿಸಿದ ಇವರು ಮನೆಯ ಸುತ್ತ ಮುತ್ತ ಕಾರ್ಯಕ್ರಮಗಳನ್ನು ನೀಡುತ್ತಾ; ಭರತನಾಟ್ಯ ಕಲೆಯಲ್ಲಿ ಜೂನಿಯರ್ ಹಂತವನ್ನು ಮುಗಿಸಿ ಸೀನಿಯರ್ ವಿಭಾಗವನ್ನು ಅಭ್ಯಾಸ ಮಾಡುತ್ತಿದ್ದಾರೆ.
ಭರತನಾಟ್ಯ ಕಾರ್ಯಕ್ರಮ ನೀಡುವಾಗ ಮಾಡಿಕೊಳ್ಳುವ ಅಧ್ಯಯನ, ಸಿದ್ಧತೆಗಳೇನು:
ಗುರುವಿನೊಡನೆ ನೃತ್ಯದ ನಡೆ, ಜತಿ, ಅಭಿನಯ ಹಾಗೂ ನವರಸಗಳ ಕುರಿತು ಕಲಿತು ಕಾರ್ಯಕ್ರಮ ನೀಡುತ್ತೇನೆ ಎಂದು ಹೇಳುತ್ತಾರೆ ಶ್ರುತಿ.
ಚಲನಚಿತ್ರ / ಪಾಶ್ಚಾತ್ಯ ಸಂಗೀತ ನೃತ್ಯಗಳಿಗೆ ಆಕರ್ಷಿತರಾಗುವ ಕಾಲಘಟ್ಟದಲ್ಲಿ ಭರತನಾಟ್ಯ ಕಲೆಯನ್ನು ಶಾಸ್ತ್ರೀಯ ಚೌಕಟ್ಟಿನಲ್ಲಿ ಉಳಿಸಿ ಬೆಳೆಸಲು ಏನು ಮಾಡಬಹುದು:
ಪ್ರತೀಯೊಂದು ನೃತ್ಯ ಪ್ರಕಾರದಲ್ಲಿ ತನ್ನದೇಯಾದ ವೈಶಿಷ್ಟತೆಗಳಿವೆ. ಎಲ್ಲಾ ಕಲೆಗಳಿಗೂ ಮೂಲ ಶಾಸ್ತ್ರೀಯ ನೃತ್ಯ ಎನ್ನುವುದು ನನ್ನ ಭಾವನೆ. ಎಲ್ಲಾ ರೀತಿಯ ಹೊಸ ಹೊಸ ಅಂಶಗಳು ಒಡಗೂಡಿಸಿ, ಶಿಸ್ತಿನ ಚೌಕಟ್ಟಿನಲ್ಲಿ ಮುಂದುವರೆಸಿದರೆ ಈ ಕಾಲಘಟ್ಟದಲ್ಲಿಯೂ ಭರತನಾಟ್ಯ ಕಲೆಯನ್ನು ಶಾಸ್ತ್ರೀಯ ಚೌಕಟ್ಟಿನಲ್ಲಿ ಉಳಿಸಿ ಬೆಳೆಸಲು ಸಾಧ್ಯ ಎನ್ನುವುದು ನನ್ನ ಅನಿಸಿಕೆ.
ನೃತ್ಯಾಭ್ಯಾಸಿಗಳಿಗೆ ನಿಮ್ಮ ಸಲಹೆ ಏನು:
ಕಲೆಯ ಮೇಲೆ ಗೌರವ, ಶ್ರದ್ಧೆ.
ನಿರಂತರ ಕಲಿಕೆ.
ಗುರುವಿನ ಮೇಲೆ ಗೌರವ.
ಪರಿಶ್ರಮ.
ಭರತನಾಟ್ಯ ಹಾಗೂ ಯಕ್ಷಗಾನ ಎರಡು ವಿಭಿನ್ನವಾದ ಕಲೆ. ರಂಗದಲ್ಲಿ ಪ್ರದರ್ಶನ ನೀಡುವಾಗ ಎರಡು ಕಲೆ ಯಾವ ರೀತಿಯಲ್ಲಿ ಸಹಕಾರಿಯಾಗಿದೆ:-
ಎರಡು ಕಲೆಗಳು ನನ್ನ ಈ ಕಲಾ ಜೀವನದಲ್ಲಿ ತುಂಬಾ ಸಹಕಾರಿ ಆಗಿದೆ. ಭಾವನೆಗಳನ್ನು ಜನರ ಮನ ಮುಟ್ಟುವಂತೆ ಮಾಡಬಹುದು. ಅಭಿನಯ ಮತ್ತು ಹೆಜ್ಜೆಗಾರಿಕೆ, ಭರತನಾಟ್ಯ ಹಾಗೂ ಯಕ್ಷಗಾನದಲ್ಲಿ ಸ್ಪಷ್ಟವಾಗಿ ತೋರ್ಪಡಿಸಬಹುದು ಎಂಬುವುದು ನನ್ನ ಅಭಿಪ್ರಾಯ.
ಚಿತ್ರಕಲೆ, ಕರಕುಶಲ ಕಲೆ, ಹಾಡು ಕೇಳುವುದು ಇವರ ಹವ್ಯಾಸಗಳು.
ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಶ್ರುತಿ ಭಟ್ ಮಾರಣಕಟ್ಟೆ.
- ಶ್ರವಣ್ ಕಾರಂತ್ ಕೆ.
ಶಕ್ತಿನಗರ, ಮಂಗಳೂರು