ಸುನಂದ ಹಾಗೂ ಹೆಚ್. ಕುಶಾಲ್ ಇವರ ಮಗಳಾಗಿ 24.09.1997 ರಂದು ಕೀರ್ತನಾ ಉದ್ಯಾವರ ಅವರ ಜನನ. M.com in Human resource and development ಇವರ ವಿದ್ಯಾಭ್ಯಾಸ. ಯಕ್ಷಗುರುಗಳಾದ ಉದ್ಯಾವರ ಜಯಕುಮಾರ್, ಕರ್ಗಲ್ಲು ವಿಶ್ವೇಶ್ವರ ಭಟ್, ಶೇಖರ ಡಿ.ಎಸ್ ಹಾಗೂ ನಂದಿಕೂರು ರಾಮಕೃಷ್ಣ ಇವರ ತೆಂಕುತಿಟ್ಟಿನ ಯಕ್ಷಗಾನ ಗುರುಗಳು. ಗಣೇಶ್ ಚೇರ್ಕಾಡಿಯವರಲ್ಲಿ ಬಡಗುತಿಟ್ಟಿನ ನಾಟ್ಯವನ್ನು ಅಭ್ಯಸಿಸಿ, ಯಕ್ಷಗಾನದ ಭಾಗವತಿಕೆ ಮತ್ತು ಛಂದಸ್ಸನ್ನು ಗುರು, ಯಕ್ಷಕವಿ ಗಣೇಶ ಕೊಲೆಕಾಡಿ ಹಾಗೂ ಪ್ರಸ್ತುತ ಪ್ರಸಾದ್ ಚೇರ್ಕಾಡಿಯವರಲ್ಲಿ ಅಭ್ಯಸಿಸುತ್ತಿದ್ದಾರೆ.
ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಯಾರು:-
ಹೆತ್ತವರು ಯಕ್ಷಗಾನ ಪ್ರಿಯರಾಗಿದ್ದರಿಂದ ಅವರೊಡನೆ ಯಕ್ಷಗಾನ ನೋಡುತ್ತಲೇ ನನಗೆ ಅರಿವಿಲ್ಲದೆ ಆ ಕಲೆ ನನ್ನ ಮನಸ್ಸನ್ನು ಆವರಿಸಿತು. ರಾತ್ರಿ ಆಟ ನೋಡಿ ಮರುದಿನ ಮನೆಯಲ್ಲಿ ಅಮ್ಮನ ಸೀರೆ, ರವಕೆ, ರಟ್ಟಿನ ಭೂಷಣಗಳನ್ನು ಕಟ್ಟಿ, ಮುಖಕ್ಕೆ ಮನೆಯಲ್ಲಿದ್ದ ಬಣ್ಣ ಹಚ್ಚಿ ಕುಣಿದು ಮನೆಯೆಲ್ಲಾ ಚೆಲ್ಲಾಪಿಲ್ಲಿ ಮಾಡುವುದನ್ನು ಗಮನಿಸಿದ ಹೆತ್ತವರು ಯಕ್ಷಗಾನ ತರಗತಿಗೆ ಸೇರಿಸಿದರು. ತೆಂಕುತಿಟ್ಟಿನ ಪ್ರಖ್ಯಾತ ಕಲಾವಿದರಾದ ಡಿ. ಮನೋಹರ್ ಕುಮಾರ್ ಅವರು ನಾನು 8 ವರ್ಷದವಳಿದ್ದಾಗ ಮಂಗಳಾದೇವಿ ಮೇಳ ಹಾಗೂ ಯಕ್ಷಗಾನ ವಿಡಿಯೋ ಸಿ.ಡಿ ರೆಕಾರ್ಡಿಂಗ್ ಗಳಲ್ಲಿ ವೇಷ ಮಾಡಲು ಅವಕಾಶಗಳನ್ನು ಕೊಡುತ್ತಿದ್ದರು. ಗೆಜ್ಜೆದ ಪೂಜೆ, ಕೋಟಿ ಚೆನ್ನಯ, ಲೀಲಾಮೂರ್ತಿ ಶ್ರೀ ಕೃಷ್ಣ, ಕೋರ್ದಬ್ಬುಬಾರಗ, ತ್ರಿವೇಣಿ ಸಂಗಮ ಹೀಗೆ ಹಲವು ಯಕ್ಷಗಾನ ಪ್ರಸಂಗಗಳಲ್ಲಿ ಬಾಲ ಕಲಾವಿದೆಯಾಗಿ ಪಾತ್ರ ನಿರ್ವಹಿಸಿದ್ದೆ.
ಪ್ರಸಂಗದ ಬಗ್ಗೆ ಓದಿಕೊಂಡು ಪಾತ್ರಕ್ಕೆ ಸಂಬಂಧಿಸಿದ ಪದ್ಯಗಳನ್ನು ನೋಟ್ ಮಾಡಿಕೊಂಡು ಪದ್ಯದ ನಡೆ ಮತ್ತು ಅರ್ಥಗಳನ್ನು ಕೆಲವೊಮ್ಮೆ ಗುರುಗಳಿಂದ ತಿಳಿದುಕೊಳ್ಳುತ್ತೇನೆ. ನಾಟ್ಯ ಶಾಸ್ತ್ರದಿಂದ ಯಕ್ಷಗಾನದ ಆಹಾರ್ಯಕ್ಕೆ ಒಪ್ಪುವಂತಹ ಆಂಗಿಕಾಭಿನಯಗಳನ್ನು ಬಳಸಿಕೊಂಡು ಅಭ್ಯಸಿಸುತ್ತೇನೆ. ಯೂಟ್ಯೂಬ್ ನಲ್ಲಿರುವ ವಿಡಿಯೋಗಳನ್ನು ನೋಡಿಕೊಂಡು ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳುತ್ತೇನೆ ಎಂದು ಹೇಳುತ್ತಾರೆ ಕೀರ್ತನಾ.
ಕವಿ ಗಣೇಶ ಕೊಲೆಕಾಡಿಯವರು ಬರೆದ ಎಲ್ಲಾ ಅಪೂರ್ವ ಪ್ರಸಂಗಗಳು ಮತ್ತು ಗುರು ಶೇಖರ ಡಿ. ಎಸ್ ಅವರು ಬರೆದ ಪಾಂಚಜನ್ಯ, ತರಣಿಸೇನ ಕಾಳಗ, ಮೋಹಿನಿ ಏಕಾದಶಿ ಹಾಗೂ ಡಾ. ಪೃಥ್ವಿರಾಜ್ ಕವತ್ತಾರರ ಪರಿಕಲ್ಪನೆಯ ಶ್ರೀ ಮನೋಹರ ಸ್ವಾಮಿ ಪರಾಕು ಎಂಬ ಪ್ರಸಂಗಗಳು ನನ್ನ ನೆಚ್ಚಿನ ಪ್ರಸಂಗಗಳು ಹಾಗೂ ಎಲ್ಲಾ ತರಹದ ಪುಂಡು ವೇಷಗಳು ನೆಚ್ಚಿನ ವೇಷ ಎಂದು ಹೇಳುತ್ತಾರೆ ಕೀರ್ತನಾ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಹೆಚ್ಚಿನವರು ಯಕ್ಷಗಾನವನ್ನು ಜನಪದ ಕಲೆ ಎಂದು ನಂಬಿದ್ದಾರೆ. ಆದರೆ ನಾನು ಯಕ್ಷಗಾನವನ್ನು ಅಭ್ಯಸಿಸಿದ ಕ್ರಮ ಮತ್ತು ಅರ್ಥೈಸಿಕೊಂಡ ಪ್ರಕಾರ ಯಕ್ಷಗಾನವನ್ನು ಶಾಸ್ತ್ರೀಯ ಕಲೆಯೆಂದೇ ಕರೆಯಲು ಇಚ್ಛಿಸುತ್ತೇನೆ. ಭರತನಾಟ್ಯಕ್ಕೆ ಮೂಲ ನಾಟ್ಯ ಶಾಸ್ತ್ರ ಹೇಗೋ ಯಕ್ಷಗಾನಕ್ಕೂ ನಾಟ್ಯ ಶಾಸ್ತ್ರವೇ ಮೂಲವಾಗಿದೆ. ನಮ್ಮ ಹಿರಿಯರು ಪಾಲಿಸಿಕೊಂಡು ದಾಟಿಸಿದ ಕಲೆಯನ್ನು ವೃತ್ತಿಪರ ಕಲಾವಿದರು ಮಾತ್ರವಲ್ಲದೆ ಅನೇಕ ಹವ್ಯಾಸಿ ಕಲಾವಿದರು ಕಲಿತು ಉಳಿಸಿಕೊಂಡು ಬೆಳೆಸುತ್ತಾ ಇರುವುದನ್ನು ಕಾಣಬಹುದು. ನಮ್ಮ ಹಿರಿಯರು ಯಕ್ಷಗಾನವನ್ನು ಗಂಡುಕಲೆಯೆಂದು ಕರೆದಿರುವುದರ ಹಿಂದಿನ ಭಾವವೇನೋ ಗೊತ್ತಿಲ್ಲ..! ಈ ಸಾರ್ವಕಾಲಿಕ ವಿವಾದಕ್ಕೀಡಾದ ವ್ಯಾಖ್ಯೆಯ ಪರವಾಗಿ ಇಂದು ಮಹಿಳೆಯರ ವಿರುದ್ಧ ಅದೆಷ್ಟೋ ತಪ್ಪು ಸಮರ್ಥನೆಗಳನ್ನು ಕೇಳಬಹುದು, ಇದು ತುಂಬಾ ಬೇಸರದ ಸಂಗತಿ…!
ಆದರೂ ಕಲೆಗೆ ಲಿಂಗದ ಭೇದವಿಲ್ಲವೆಂಬಂತೆ ಹೆಣ್ಣು ಮಕ್ಕಳು ತಮ್ಮನ್ನು ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ತುಂಬಾ ಹೆಮ್ಮೆಯ ವಿಚಾರ. ಹಿಂದೆಲ್ಲಾ ಅನಿವಾರ್ಯ ಕಾರಣದಿಂದಾಗಿ ಕಲಾವಿದರು ಮೇಳಕ್ಕೆ ಸೇರುತ್ತಿದ್ದರು. ಈಗ ಯುವ ಕಲಾವಿದರು Passion ಹಾಗೂ ಅನುಭವಕ್ಕಾಗಿ ಮೇಳದಲ್ಲಿ ವೇಷ ಮಾಡುವ ಅನುಕೂಲ ಇದೆ. ಕಾಲಮಿತಿಯನ್ನು ಕಲಾವಿದರ ದೃಷ್ಟಿಯಿಂದ ಯೋಚಿಸಿದರೆ ಆರಾಮವೆಂದೆನಿಸುತ್ತದೆ.
ಇತ್ತೀಚೆಗೆ ಗಮನಿಸಿದರೆ ಪ್ರಸಂಗಗಳ ಸಂಖ್ಯೆ ವಿಪುಲವಾಗಿದೆ, ಒಂದೇ ಕಥಾನಕವನ್ನು ಬೇರೆ ಬೇರೆ ಕವಿಗಳು, ನಡೆಗಳಲ್ಲಿ ವ್ಯತ್ಯಾಸಗಳಿದ್ದು ರಚಿಸಿರುವಂತಹ ಪ್ರಸಂಗಗಳನ್ನು ಕಾಣುತ್ತೇವೆ. ಅದನ್ನು ಹೊರತಾದ ಅದೆಷ್ಟೋ ಚಂದದ ಪ್ರಸಂಗಗಳು ರಂಗದಲ್ಲಿ ಆಟವಾಡದೆ ಮೂಲೆಗುಂಪಾಗಿದೆ.
ಕವಿ ಗಣೇಶ ಕೊಲೆಕಾಡಿ ಹಾಗೂ ಬೊಟ್ಟಿಕೆರೆ ಪುರುಷೋತ್ತಮರಂತಹ ಅಧ್ಯಯನಶೀಲ ಪ್ರಸಂಗಕರ್ತೃಗಳು ಯಕ್ಷಗಾನದಲ್ಲಿ ಬಳಸದ ಹಲವು ತಾಳಗಳ ಅಧ್ಯಯನ ಮಾಡಿ ಅವುಗಳಿಗೆ ಬಿಡಿತ ಮುಕ್ತಾಯಗಳನ್ನು ಕಲ್ಪಿಸಿ ಪದ್ಯಗಳಲ್ಲಿ ಅಳವಡಿಸಿ ಅಪರೂಪದ ಪ್ರಸಂಗಗಳನ್ನು ರಚಿಸಿದ್ದಾರೆ. ಅಂತಹ ಕ್ಲಿಷ್ಟಕರ ತಾಳಗಳನ್ನು ಕಲಿತು ಕೆಲವು ಸೃಜನಶೀಲ ಕಲಾವಿದರು ಹಿಮ್ಮೇಳದಲ್ಲಿ ಹಾಗೂ ಹೆಜ್ಜೆಗಳನ್ನು ಸಂಯೋಜಿಸಿ ರಂಗದಲ್ಲಿ ಪ್ರಯೋಗಿಸುತ್ತಿದ್ದಾರೆ.
ಕೆಲವು ಹವ್ಯಾಸಿ ತಂಡಗಳ ಆಕರ್ಷಕ ನಾಟ್ಯದ ಸಂಯೋಜನೆಗಳನ್ನು ವೃತ್ತಿಪರ ಕಲಾವಿದರು ಮೇಳಗಳಲ್ಲಿ ಹಾಗೂ ತಮ್ಮ ಶಿಷ್ಯರಿಗೂ ಕಲಿಸಿ ಅನುಸರಿಸುವುದನ್ನು ಯಕ್ಷಗಾನ ಸ್ಪರ್ಧೆಗಳಲ್ಲಿ ಗಮನಿಸಬಹುದು. ಇಂತಹ ಬದಲಾವಣೆಗಳು ಹವ್ಯಾಸಿ ಕಲಾವಿದರ ಪ್ರಯತ್ನಗಳಿಗೆ ಇನ್ನಷ್ಟು ಪುಷ್ಟಿ ಕೊಡುತ್ತದೆ. ಶಾಲೆ ಕಾಲೇಜುಗಳಲ್ಲಿ ಯಕ್ಷಗಾನ ತರಬೇತಿ, ಸ್ಪರ್ಧೆಗಳು ನಡೆಯುವುದರಿಂದ ಪ್ರೇರಣೆ ಪಡೆದು ಹೊಸ ಯುವ ಕಲಾವಿದರು ಹುಟ್ಟಿಕೊಳ್ಳುತ್ತಿದ್ದಾರೆ. Online ಯಕ್ಷಗಾನ ತರಗತಿಗಳಿಂದಾಗಿ ಲಿಂಗ, ವಯಸ್ಸು, ಸಾಮರ್ಥ್ಯ, ದೇಶ, ಭಾಷೆಯ ಮಿತಿಯಿರದೆ ಕಲಿಕಾಸಕ್ತರಿಗೆ ಕಲಿಯುವಂತಹ system build ಆಗಿದೆ.
ಇಂದಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರೇಕ್ಷಕರು ಯಕ್ಷಗಾನ ಪ್ರಸಂಗದ ಪಾತ್ರವಲ್ಲದಿದ್ದರೂ ಯಕ್ಷಗಾನ ಪ್ರದರ್ಶನದಲ್ಲಿ ಮುಖ್ಯ ಪಾತ್ರ ಅವರದ್ದೇ. ಯಕ್ಷಗಾನಕ್ಕೆ ತನ್ನದೇ ಆದ ಪ್ರೇಕ್ಷಕವರ್ಗವಿದೆ. ಇಂತಹ ಪ್ರೇಕ್ಷಕರು, ವೀಕ್ಷಿಸುವ ಸಲುವಾಗಿ ದೂರ ದೂರ ಪ್ರಯಾಣ ಮಾಡುವುದಿದೆ. ಕಲಾವಿದರು ಖ್ಯಾತಿ ಪಡೆಯುವುದೇ ಇಂತಹ ಒಳ್ಳೆಯ ಪ್ರೇಕ್ಷಕರ ಅಭಿಮಾನ ಮೆಚ್ಚುಗೆಗಳಿಂದಾಗಿ. ಆಟ ನೋಡಲು ಬಂದ ಸಣ್ಣಮಕ್ಕಳು ಹಠ ಮಾಡಿ ಚೌಕಿಗೆ ಹೋಗುವುದು, ಅಲ್ಲಿಂದ ಬರುವಾಗ ಮುದ್ದು ಮುಖಕ್ಕೆ ಕೇಳಿ ಬಣ್ಣ ಹಚ್ಚಿಕೊಂಡು ಬರುವುದು, ಮನೆಯಲ್ಲಿ ಅವರಿಗೆ ತೋಚಿದಂತೆ ಶಾಲು, ಕೋಲು ಹಿಡಿದು ಕುಣಿಯುವುದುಂಟು. ಒಬ್ಬ ಸಾಧಾರಣ ವ್ಯಕ್ತಿ ಕಲಾವಿದನಾಗಿ ರೂಪುಗೊಳ್ಳಲು ಆರಂಭಿಸುವುದೇ ಪ್ರೇಕ್ಷಕರ seat ನಿಂದಲೇ ಎನ್ನಬಹುದು. ಕೆಲವು ಪ್ರೇಕ್ಷಕರು ರಾತ್ರಿ ಆಟ ನೋಡಿ ಮರುದಿನ ಆಟದ ಪದ್ಯಗಳನ್ನು ಆಗಾಗ ಗುನುಗುತ್ತಾ ಒಳಗೊಳಗೆ ಖುಷಿಪಡ್ತಾರೆ. ಧಿಗಿಣದ ಸುತ್ತುಗಳನ್ನು ಲೆಕ್ಕ ಹಾಕುತ್ತಾ ಪ್ರೋತ್ಸಾಹಿಸುತ್ತಾ, ಭಾವಪೂರ್ಣ ಪಾತ್ರಗಳು ಬಂದಾಗ ಭಾವುಕರಾಗುತ್ತಾರೆ. ಯಕ್ಷಗಾನದ ಮೇಳಗಳು ಕಾಲಮಿತಿಗೆ ಒಳಪಟ್ಟರೂ ರಸೋತ್ಪತ್ತಿಗೆ ಕೊರತೆಯಿಲ್ಲ ಎಂಬುದು ನನ್ನ ಅನಿಸಿಕೆ. ಇತ್ತೀಚಿನ ದಿನಗಳಲ್ಲಿ YouTube live, tv liveಗಳಿಂದಾಗಿ ಪ್ರೇಕ್ಷಕರು ತಾವಿದ್ದಲ್ಲಿಂದಲೇ ಆಟ ನೋಡಲು ಅನುಕೂಲವಾಗಿದೆ. ಆದರೆ ಕಲಾವಿದರು ಪ್ರೇಕ್ಷಕರನ್ನು miss ಮಾಡಿಕೊಳ್ಳುವ ಹಾಗಾಗಿದೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಖಂಡಿತಾವಾಗಿಯೂ ಇದೆ.
ಯಕ್ಷಗಾನದ ಚೌಕಟ್ಟಿನೊಳಗೆ ಕೆಲವು ಉಚಿತವಲ್ಲದ ಕಟ್ಟುಪಾಡುಗಳನ್ನು ಮೀರಿದ ರಂಗಪ್ರಯೋಗಗಳನ್ನು ಯಕ್ಷರಂಗದಲ್ಲಿ ಪ್ರಯೋಗಿಸಬೇಕು. ಯಕ್ಷಗಾನದಲ್ಲಿ on stage ಪಾತ್ರಗಳನ್ನು improvise ಮಾಡುವಂತಹ ನಟನಿಗಿರುವ ಸ್ವಾತಂತ್ರ್ಯ ಬೇರೆ ಯಾವುದೇ ಶಾಸ್ತ್ರೀಯ ಕಲೆಗಳಲ್ಲಿ ಇಲ್ಲ. ರಂಗಭೂಮಿಯಲ್ಲೂ ಯಕ್ಷಗಾನವನ್ನು ಪ್ರಯೋಗ ಶೀಲವಾಗಿ ಅಳವಡಿಸಿಕೊಳ್ಳುವ ಮೂಲಕ ಹೊಸ ಪ್ರಯತ್ನಗಳನ್ನು ಮಾಡುತ್ತಾ ಇದರಿಂದ ಬೇರೆ ಬೇರೆ ಕಲಾ ಪ್ರಕಾರಗಳು ಪರಸ್ಪರ ಸಂಧಿಸಿ, ಕಲೆತು ವಿವಿಧ ಆಕಾರಗಳನ್ನು ಪಡೆಯುವಂತಾಗುತ್ತದೆ.
ಮೇಳದ ತಿರುಗಾಟ ಮಾಡಲು ಹೆಣ್ಣುಮಕ್ಕಳಿಗೆ ಅವಕಾಶವೇ ಇಲ್ಲ. ಆದ್ದರಿಂದ ತಿರುಗಾಟದ ಅನುಭವ ಸಿಗಲಿಲ್ಲ. ಹಾಗೇನಾದರೂ ಅಂತಹ ಅವಕಾಶ ಇದ್ದು ಅದಕ್ಕೆ ಪೂರಕ ವಾತಾವರಣ ಒದಗಿದ್ದರೆ ಖಂಡಿತವಾಗಿ ಅನುಭವಕ್ಕಾದರೂ ಪ್ರಯತ್ನಿಸುತ್ತಿದ್ದೆನೇನೋ! ಗೊತ್ತಿಲ್ಲ.
ಯಕ್ಷಗಾನ, ರಂಗಭೂಮಿ, ಭರತನಾಟ್ಯ, ಕೂಚುಪುಡಿ, ಯೋಗ ಇವರ ಹವ್ಯಾಸಗಳು.
Yoga Alliance and Registered Yoga Schoolನಲ್ಲಿ ಗುರುತಿಸಿಕೊಂಡ ಹಿಮಾಚಲಪ್ರದೇಶದ orjayi Yoga India school ಮೂಲಕ Multi style yoga teacher training course ಮುಗಿಸಿ RYT–200 Certification ಪಡೆದಿರುತ್ತಾರೆ.
ಭರತನಾಟ್ಯ ಗುರುಗಳಾದ ನೃತ್ಯಸಿಂಧು ವಿದ್ವಾನ್ ಡಾ. ರಾಧಾಕೃಷ್ಣ ಟಿ, ವಿದುಷಿ ವೀಣಾ ಎಂ.ಎಸ್ ಇವರಲ್ಲಿ ಭರತನಾಟ್ಯವನ್ನು ಅಭ್ಯಸಿಸಿ, ಪ್ರಸ್ತುತ ನಾಟ್ಯ ಮಯೂರಿ ವಿದುಷಿ ಲಕ್ಷ್ಮೀ ಗುರುರಾಜ್ ಇವರ ಬಳಿ ವಿದ್ವತ್ ಹಂತದ ತರಬೇತಿ ಪಡೆಯುತ್ತಿದ್ದೇನೆ.
ರಂಗಭೂಮಿಯ ಅನೇಕ workshopಗಳಲ್ಲಿ ಭಾಗವಹಿಸಿ ಹೆಸರಾಂತ ಅನುಭವಿ ನಿರ್ದೇಶಕರಾದ ಹುಲುಗಪ್ಪ ಕಟ್ಟಿಮನಿ, ಮಂಡ್ಯ ರಮೇಶ್, ಮಂಜುನಾಥ ಎಲ್, ಗಣೇಶ್ ಮಂದಾರ್ತಿ, ಜೋಸೆಫ್ ನೀನಾಸಂ, ಉಮೇಶ್ ಎಸ್, ಭುವನ್ ಮಣಿಪಾಲ್, ಪ್ರಶಾಂತ್ ಉದ್ಯಾವರ ಹಾಗೂ ಪ್ರಶಾಂತ್ ಕೋಟ ಇವರಿಂದ ರಂಗಾಭಿನಯ ಹಾಗೂ ರಂಗ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಂಡಿದ್ದೇನೆ.
ಯಕ್ಷಗಾನ, ಭರತನಾಟ್ಯ ಹಾಗೂ ನಾಟಕಗಳು ಸೇರಿದಂತೆ ಭಾರತದಾದ್ಯಂತ 500ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿರುತ್ತಾರೆ ಕೀರ್ತನಾ.
ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಇವರ ಸಾಧನೆಗೆ ‘ಕರ್ನಾಟಕ ಪ್ರತಿಭಾ ರತ್ನ’ ಹಾಗೂ ‛ರಾಷ್ಟ್ರೀಯ ಪ್ರತಿಭೋತ್ಸವ’ ಪ್ರಶಸ್ತಿಗಳು ದೊರಕಿವೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.