ಯಕ್ಷಗಾನ – ಇದೊಂದು ಗಂಡು ಕಲೆ. ಕರ್ನಾಟಕದ ಅತ್ಯಂತ ವಿಶಿಷ್ಠ ಕಲೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಲೆಗಳಲ್ಲಿ ಯಕ್ಷಗಾನ ಅತೀ ಪ್ರಮುಖವಾದದ್ದು. ನಮ್ಮ ಸಂಸ್ಕೃತಿ, ಆಚರಣೆ ಮತ್ತು ಸಂಪ್ರದಾಯವನ್ನು ಮೈವೆತ್ತಿರುವ ಯಕ್ಷಗಾನ ಕಲೆಯಲ್ಲಿ ಪ್ರಜ್ವಲಿಸುತ್ತಿರುವ ಪ್ರತಿಭೆ ಶ್ರೇಯಾ ರಾವ್ ಶರವೂರು.
08.10.2000ರಂದು ಶರವೂರು ಶ್ರೀನಿವಾಸ್ ರಾವ್ ಹಾಗೂ ರಾಧಿಕಾ ಶ್ರೀನಿವಾಸ್ ರಾವ್ ಇವರ ಮಗಳಾಗಿ ಜನನ. ಮೂಡಬಿದ್ರೆಯ ಆಳ್ವಾಸ್ ನಲ್ಲಿ ಯಕ್ಷಗಾನದಲ್ಲಿ ಡಿಪ್ಲೊಮಾ ಇವರ ವಿದ್ಯಾಭ್ಯಾಸ. ಕಾರ್ತಿಕ್ ರಾವ್ ಕೊರ್ಡೆಲ್, ರಾಕೇಶ್ ರೈ ಅಡ್ಕ, ಬಲಿಪ ಶಿವಶಂಕರ್ ಭಟ್, ಎನ್.ಜಿ ಹೆಗಡೆ, ಶ್ರೀ ಸುಬ್ರಹ್ಮಣ್ಯ ಧಾರೇಶ್ವರ, ಸದಾನಂದ ಐತಾಳ್ ಇವರ ಯಕ್ಷಗಾನ ಗುರುಗಳು. ನಿರ್ಮಲಾ ಮಂಜುನಾಥ್ ಇವರ ಭರತನಾಟ್ಯ ಗುರುಗಳು.
ದೇವಿ ಮಹಾತ್ಮೆ, ಸುದರ್ಶನ ವಿಜಯ, ಸೀತಾ ಪರಿತ್ಯಾಗ, ಮಾನಿಷಾದ, ಶಶಿಪ್ರಭೆ ಪರಿಣಯ ಇತ್ಯಾದಿ ನೆಚ್ಚಿನ ಪ್ರಸಂಗಗಳು.
ಸುದರ್ಶನ, ಮಾಲಿನಿ, ಲಕ್ಷ್ಮೀ, ದೇವಿ, ದಾಕ್ಷಾಯಿಣಿ, ವಿಷ್ಣು, ಮನ್ಮಥ, ಸತ್ಯಭಾಮೆ, ಸೀತೆ ನೆಚ್ಚಿನ ವೇಷಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಪ್ರಸಂಗ ಪುಸ್ತಕ ಓದಿ, ಭಾಗವತರ ಹತ್ತಿರ ಕೇಳಿ, ಹಿರಿಯ ಕಲಾವಿದರ ಹತ್ತಿರ ಕೇಳಿ ಹಾಗೂ ಯೂಟ್ಯೂಬ್ ನಲ್ಲಿ ನೋಡಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಶ್ರೇಯಾ.
ಯಕ್ಷಗಾನದ ಇಂದಿನ ಸ್ಥಿತಿ ಗತಿ :-
ಬಹುತೇಕ ಪ್ರೇಕ್ಷಕರು ಇಡೀ ರಾತ್ರಿ ಆಟ ನೋಡುವ ಮನಸ್ಥಿತಿ ಇಲ್ಲದಿರುವುದರಿಂದ ಸಮಯ ಮಿತಿ ಪ್ರದರ್ಶನಗಳು ನಡೆಯುತ್ತಿದೆ ಹಾಗೂ ಇತ್ತೀಚೆಗೆ ಮಕ್ಕಳು, ಯುವ ಪ್ರೇಕ್ಷಕರು ಯಕ್ಷಗಾನದ ಕಡೆಗೆ ವಾಲುತ್ತಿರುವುದು ಯಕ್ಷಗಾನಕ್ಕೆ ಪೂರಕ ಬೆಳವಣಿಗೆ.
ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯುವ ಜನತೆ ಯಕ್ಷಗಾನಕ್ಕೆ ಮಾರುಹೋಗಿ, ಅಭಿಮಾನಿಗಳಾಗುತ್ತಿರುವುದು ಸಂತಸದ ವಿಷಯ. ಕೇವಲ ಮನರಂಜನೆಗೆ ಇಟ್ಟುಕೊಳ್ಳದೇ, ಇಲ್ಲಿ ಸಿಗುವ ಅನೇಕ ವಿಚಾರಾನುಭವಗಳಿಂದ ಸ್ವಾಸ್ಥ್ಯ ಪ್ರಪಂಚದಲ್ಲಿ ಶಿಷ್ಟ ಕಲೆಯ ಮಹತ್ವ ಹೆಚ್ಚುವಂತೆ ಮಾಡಿದರೆ ಒಳ್ಳೆಯದು.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷಗಾನ ರಂಗದಲ್ಲಿ ಪಯಣವನ್ನು ಮುಂದುವರಿಸಿ ಹಾಗೂ ಯಕ್ಷಗಾನ ರಂಗದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎಂಬ ಯೋಜನೆ ಇದೆ.
ಶ್ರೀ ಕಲಾ ಸಂಘ, ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮೇಳ ಪುತ್ತೂರು, ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಕಾಟಿಪಳ್ಳ, ಸನಾತನ ಯಕ್ಷಾಲಯ ಮಂಗಳೂರು, ನಾಧೋನ್ಮಯ ಕ್ರಿಯೇಷನ್ ತಂಡ, ಡಿ.ಮನೋಹರ್ ಕುಮಾರ್ ತಂಡ, ಆಳ್ವಾಸ್ ಧೀಂಕಿಟ ಯಕ್ಷಗಾನ ಕೇಂದ್ರ ತಂಡದ ಜೊತೆಗೆ ಹಾಗೂ ಕೆಲವು ಕಡೆ ಅತಿಥಿಯಾಗಿ ಭಾಗವಹಿಸಿದ ಅನುಭವ.
ಅಪ್ಪ ಹಾಗೂ ಅಮ್ಮ, ಅಕ್ಕ ಶ್ರದ್ಧಾ ರಾವ್ ಶರವೂರು ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನ ಹಾಗೂ ಆಶೀರ್ವಾದದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಶ್ರೇಯಾ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.