ವೃತ್ತಿಯಲ್ಲಿ ಡಾಕ್ಟರ್, ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದೆಯಾಗಿ ಮಿಂಚುತ್ತಿರುವವರು ಡಾ.ಪ್ರಕೃತಿ ಮಂಚಾಲೆ. 16.07.1986 ರಂದು ಡಾ.ಎಂ.ಎಸ್.ವಿಘ್ನೇಶ್ ಹಾಗೂ ಪದ್ಮಾವತಿ ಇವರ ಮಗಳಾಗಿ ಜನನ. ಆಯುರ್ವೇದದಲ್ಲಿ MD, MS ಆಪ್ತಸಲಹೆ ಮತ್ತು ಮನೋ ಚಿಕಿತ್ಸೆ ವಿದ್ಯಾಭ್ಯಾಸ ಪೂರೈಸಿ ಪ್ರಸ್ತುತ PhD ಮಾಡುತ್ತಿದ್ದು ಜೊತೆಗೆ ಶಿವಮೊಗ್ಗದ ಮೈಸೂರು ಆಯುರ್ವೇದ ಚಿಕಿತ್ಸಾಲಯದಲ್ಲಿ ವೈದ್ಯರಾಗಿ ಹಾಗೆ TMAES ಆಯುರ್ವೇದ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿ ಆಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ಮಂಚಾಲೆಯವರು ತಂದೆ, ತಾಯಿ ಹಾಗೂ ಗುರುಗಳು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಹಾಗೂ ಐನಬೈಲು ಪರಮೇಶ್ವರ ಹೆಗಡೆ ಇವರ ಯಕ್ಷಗಾನದ ಗುರುಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಮೊದಲು ಕತೆಯನ್ನು ಚೆನ್ನಾಗಿ ತಿಳಿದುಕೊಂಡು ಅದಕ್ಕೆ ಬೇಕಾಗಿ ಪಾತ್ರ ಯಾವ ರೀತಿ ಹೋಗಬೇಕು ಎಂದು ಅರಿಯಲು ಪ್ರಯತ್ನಿಸುತ್ತೇನೆ. ನಂತರ ಪದ್ಯ ಹೇಗೆ ಸಾಗುತ್ತದೆ ಎಂದು ನೋಡಿ ಅದಕ್ಕೆ ಬೇಕಾದ ಭಾವದ ಸಿದ್ಧತೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.
ಸುಧನ್ವಾರ್ಜುನ, ಗದಾಯುದ್ಧ, ಭಸ್ಮಾಸುರ ಮೋಹಿನಿ, ದಕ್ಷಯಜ್ಞ, ಕಂಸ ವಧೆ ಇಂತಹ ವಿವಿಧ ರಸಗಳು ಹಾಗು ಭಾವಗಳನ್ನು ಹೊಂದಿದ ಪ್ರಸಂಗ ಹೆಚ್ಚು ಇಷ್ಟವಾಗುತ್ತದೆ. ಇವು ಎಲ್ಲಾ ವರ್ಗದ ಜನರಿಗೆ ಮನೋರಂಜನೆಯನ್ನು ಕೊಡುತ್ತವೆ. ಹೆಚ್ಚಾಗಿ ಸ್ತ್ರೀ ಪಾತ್ರ ಮಾಡುವುದರಿಂದ ಭಸ್ಮಾಸುರ ಮೋಹಿನಿಯ ಮೋಹಿನಿ, ದಕ್ಷಯಜ್ಞದ ದಾಕ್ಷಾಯಿಣಿ ಇವರ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನದಲ್ಲಿ ಗಾನ, ನಾಟ್ಯ, ಅಭಿನಯ, ಸಾಹಿತ್ಯ, ಪೌರಾಣಿಕ ಕಥೆಗಳ ಹಾಗು ಅದರಲ್ಲಿ ಬರುವ ಪಾತ್ರಗಳ ಪರಿಚಯ, ವಿವಿಧ ಮೆರಗಿನ ವೇಷ ಭೂಷಣ ಹೀಗೆ ಎಲ್ಲವೂ ಅಡಕವಾಗಿರುವುದರಿಂದ ಹಿಂದೂ – ಇಂದು – ಎಂದೂ ತನ್ನ ಛಾಪನ್ನು ಉಳಿಸಿಕೊಳ್ಳುವ ಕಲೆ. ಇಂದಿನ ಸ್ಥಿತಿಯನ್ನು ತಾಂತ್ರಿಕ ದೃಷ್ಟಿಕೋನದಿಂದ ನೋಡುವುದಾದರೆ, ಸಾಕಷ್ಟು ಮುಂದುವರೆದು ಯೂಟ್ಯೂಬ್, ಫೇಸ್ಬುಕ್ ಇಂತಹ ಹಲವಾರು ದೃಶ್ಯ ಮಾಧ್ಯಮದಿಂದ ಸಾಕಷ್ಟು ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಮೈಕ್ ಸಿಸ್ಟಮ್ ಹಾಗು ಬೆಳಕಿನ ತಂತ್ರಜ್ಞಾನದಿಂದ ಸುಧಾರಣೆಯಿಂದ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ದೊರಕುವಂತಾಗಿದೆ.
ವೇಷಭೂಷಣದಲ್ಲಿಯು ಸಹ ಸಾಕಷ್ಟು ಬದಲಾವಣೆ ಬಂದಿದ್ದು, ಮರದ ಪೊಗಡೆಯಂತಹದ್ದರಿಂದ ಸುಲಭದಲ್ಲಿ ಧರಿಸುವ ಪೊಗಡೆಗಳು ಹೀಗೆ ಹಲವಾರು ಬದಲಾವಣೆಗಳು ಕಲಾವಿದನಿಗೆ ಒದಗಿ ಬರುವಂತಹದ್ದಾಗಿದೆ. ಇನ್ನು ಕತೆಯ ಬಗ್ಗೆ ನೋಡುವುದಾದರೆ ಭಾಗವತ- ಪುರಾಣದಲ್ಲಿ ಬರುವ ಹೆಚ್ಚು ಚಾಲ್ತಿಯಲ್ಲಿರದ ಬೇರೆ ಬೇರೆ ಕತೆಗಳು ಇನ್ನಷ್ಟು ಬರಬೇಕಿದೆ. ಆದರೆ ಸಿನಿಮಾದ ಅನುಕರಣೆಯ ಕತೆಗಳು, ಸಿನಿಮಾ ವ್ಯಕ್ತಿಗಳ ಅನುಕರಣೆಯ ಪಾತ್ರಗಳು ಇಡೀ ಯಕ್ಷಗಾನದ ಪಾವಿತ್ರತೆಯನ್ನು ಹಾಳುಗೆಡವುತ್ತದೆ. ಇಂತಹ ಬೆಳವಣಿಗೆ ಒಳ್ಳೆಯದಲ್ಲ. ಇದರಿಂದ ಕಲೆಯ ಮೌಲ್ಯ ಕುಂಠಿತವಾಗುತ್ತದೆ.
ಜೊತೆಗೆ ಒಂದು ಕತೆ ಅಥವಾ ಪದ್ಯಕ್ಕೆ ಅವಶ್ಯವಿರುವಷ್ಟು ಕುಣಿತವನ್ನು ಅಳವಡಿಸಿಕೊಳ್ಳಬೇಕು. ಬದಲಾಗಿ ನಮ್ಮ ಕಲೆಯ ಪ್ರದರ್ಶನಕ್ಕಾಗಿ ಅವಶ್ಯಕತೆ ಇಲ್ಲದಿದ್ದಲ್ಲಿ ಕುಣಿಯುವುದು ಕತೆಯ ದೃಷ್ಟಿಯಿಂದ ಒಳ್ಳೆಯದಲ್ಲ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಂದು ಬದಲಾಗುತ್ತಿರುವ ಜೀವನಶೈಲಿ ಹಾಗೂ ಧಾವಂತದ ಬದುಕಿನ ಮಧ್ಯೆ ರಾತ್ರಿಯಿಂದ ಬೆಳಿಗ್ಗೆಯವರೆಗೆ ಕುಳಿತು ನೋಡುವ ಪ್ರೇಕ್ಷಕರು ಕಾಣ ಸಿಗುವುದು ಕಡಿಮೆ. ಅದಕ್ಕೆ ತಕ್ಕಂತೆ ಕಥೆಯನ್ನು ಸಹ ಕ್ರೋಡೀಕರಿಸಬೇಕಾಗಿದೆ. ಇದರಿಂದ ಕೆಲವೊಮ್ಮೆ ಕಥೆಯನ್ನು ಯಥಾವತ್ತಾಗಿ ಅರ್ಥೈಸಿಕೊಳ್ಳುವುದು ಕಷ್ಟವಾಗಬಹುದು. ಹಾಗೆಯೇ, ಕಡಿಮೆ ಸಮಯದಲ್ಲಿ ಮಾಡುವ ಪ್ರಸಂಗಗಳಲ್ಲಿ ಹೆಚ್ಚು ಜನರನ್ನೂ ಕಾಣುತ್ತೇವೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ :-
ಇನ್ನಷ್ಟು ಶಾಸ್ತ್ರಬದ್ಧವಾಗಿ ಯಕ್ಷಗಾನವನ್ನು ಅಭ್ಯಸಿಸಬೇಕು. ಮತ್ತಷ್ಟು ಹೊಸ ಪ್ರಸಂಗಗಳಲ್ಲಿ ತೊಡಗಿಸಿಕೊಳ್ಳಬೇಕು.
ಸನ್ಮಾನ ಹಾಗೂ ಪ್ರಶಸ್ತಿ:-
1. ಇಂದಿರಾಗಾಂಧಿ ರಾಜ್ಯ ಪ್ರಶಸ್ತಿ (ಚೀನಾ ದೇಶದಲ್ಲಿ ಸಾಂಸ್ಕೃತಿಕ ರಾಯಭಾರಿಯಾಗಿ ಭಾರತವನ್ನು ಪ್ರತಿನಿಧಿಸಿದ್ದಕ್ಕಾಗಿ.)
2. ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದಿಂದ ಸನ್ಮಾನ.
ಭರತನಾಟ್ಯದಲ್ಲಿ ವಿದ್ವತ್, ಟ್ರೆಕ್ಕಿಂಗ್ – ಹಿಮಾಲಯ ಮತ್ತು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಹಾಗೂ ಚಿತ್ರಕಲೆ ಇವರ ಹವ್ಯಾಸಗಳು.
ಡಾ.ಪ್ರಕೃತಿ ಮಂಚಾಲೆ ಅವರು ಶ್ರೀಕಾಂತ್ ರಾವ್ ಅವರನ್ನು 27.01.2023 ರಂದು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು