ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿಯ ಕೆರೆಕಾಡಿನ ಉಮೇಶ್ ಜೆ ಆಚಾರ್ಯ ಹಾಗೂ ಸಂಧ್ಯಾ ಯು ಆಚಾರ್ಯ ಇವರ ಮಗಳಾಗಿ 13.11.1999ರಂದು ಪೂಜಾ ಯು. ಆಚಾರ್ಯ ಅವರ ಜನನ. M. Com. (Finance) ಇವರ ವಿದ್ಯಾಭ್ಯಾಸ ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ (Rathnagiri Ventures Pvt Ltd) ಅಕೌಂಟೆಂಟ್ ಉದ್ಯೋಗ ನಿರ್ವಹಣೆಯನ್ನು ಮಾಡುತ್ತಿದ್ದಾರೆ.
ಯಕ್ಷಗಾನ ಗುರುಗಳು:-
ದಿ.ಸತೀಶ್ ಆಚಾರ್ಯ, ಜಗನ್ನಾಥ ಆಚಾರ್ಯ, ಶ್ರೀ ಪ್ರಸಾದ್ ಚೆರ್ಕಾಡಿ, ಅಜಿತ್ ಕೆರೆಕಾಡು ಪ್ರಸ್ತುತ ಶ್ರೀ ರಕ್ಷಿತ್ ಶೆಟ್ಟಿ ಪಡ್ರೆಯವರಲ್ಲಿ ಯಕ್ಷಗಾನ ಕಲಿಯುತ್ತಿದ್ದಾರೆ.
ಬಾಲ್ಯದಿಂದಲೇ ಯಕ್ಷಗಾನದ ಬಗ್ಗೆ ಆಸಕ್ತಿ ಇತ್ತು. ತಂದೆ ತಾಯಿ ಅಜ್ಜ ಎಲ್ಲರಿಗೂ ಯಕ್ಷಗಾನವೆಂದರೆ ಅಚ್ಚುಮೆಚ್ಚು, ಕಲೆ ನನಗೆ ರಕ್ತಗತವಾಗಿ ಬಂದಿದೆ ಎಂದು ಹೇಳಿದರು ತಪ್ಪಾಗಲಾರದು. ನನ್ನ ಪಿಜ್ಜ ಪಣಂಬೂರು ಗಣಪತಿ ಆಚಾರ್ ಯಕ್ಷಗಾನ ಕಲಾವಿದರು, ಅಜ್ಜ ನಾಟಕ ಕಲಾವಿದರು. ಹಿರಿಯರ ಆಶೀರ್ವಾದ, ತಂದೆ ತಾಯಿಯ ಪ್ರೋತ್ಸಾಹ ನನಗೆ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು. 4ನೇ ತರಗತಿಯಲ್ಲಿ ಯಕ್ಷಗಾನದ ಪ್ರಾಥಮಿಕ ಶಿಕ್ಷಣವನ್ನು ಪಡೆಯುವುದಕ್ಕೆ ಪ್ರಾರಂಭಿಸಿ ಬಾಲ ಗಣಪತಿಯಾಗಿ ಮೊದಲ ರಂಗ ಪ್ರವೇಶ, 16 ವರ್ಷಗಳಿಂದ ಯಕ್ಷರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದೆನೆ. ಮುಂಬೈ, ಚೆನ್ನೈ, ಬೆಂಗಳೂರು, ಮೈಸೂರು, ಮುಂತಾದ ಕಡೆಗಳಲ್ಲಿ ಪ್ರದರ್ಶನ ನೀಡಿರುತ್ತೇನೆ ಎಂದು ಹೇಳುತ್ತಾರೆ ಪೂಜಾ.ಯು. ಆಚಾರ್ಯ.
ನೆಚ್ಚಿನ ಪ್ರಸಂಗಗಳು:-
ಶ್ರೀದೇವಿ ಮಹಾತ್ಮೆ, ಮಾನಿಷಾದ ,ಅಭಿಮನ್ಯು ಕಾಳಗ, ಪಾದ ಪ್ರತೀಕ್ಷೆ, ದಕ್ಷಯಜ್ಞ ಇತ್ಯಾದಿ.
ನೆಚ್ಚಿನ ವೇಷಗಳು:-
ವಿಷ್ಣು, ವಿದ್ಯುನ್ಮಾಲಿ, ಜಾಂಬವಂತ, ದಾಕ್ಷಾಯಿಣಿ, ಸುಧನ್ವ, ಜಾಬಾಲಿ, ಕೃಷ್ಣ, ನಂದಿನಿ, ಪ್ರಭಾವತಿ ಇತ್ಯಾದಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗ ಹಾಗೂ ಕೊಟ್ಟ ಪಾತ್ರದ ಬಗ್ಗೆ ಗುರುಗಳಲ್ಲಿ, ಸಹ ಕಲಾವಿದರಲ್ಲಿ ಕೇಳಿ, ಪದ್ಯಗಳನ್ನು ನೋಡಿ, ಎದುರು ಬರುವ ಪಾತ್ರಧಾರಿಗಳಲ್ಲಿ ಸಂಭಾಷಣೆಯ ಬಗ್ಗೆ ಕೇಳಿಕೊಂಡು ಹಾಗೂ ಪ್ರಸಂಗದ ನಡೆ ತಿಳಿಯಲು ಯಕ್ಷಗಾನದ ತುಣುಕುಗಳನ್ನು ಯೂಟ್ಯೂಬ್ ನಲ್ಲಿ ನೋಡಿ ತಯಾರಿ ಮಾಡಿಕೊಳ್ಳುತ್ತೇನೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಕರಾವಳಿಯ ಗಂಡು ಕಲೆ ಯಕ್ಷಗಾನ ಕೇವಲ ಕರಾವಳಿ ಭಾಗಕ್ಕೆ ಸೀಮಿತವಾಗಿರದೆ ದೇಶದಾದ್ಯಂತ, ಅಂತರಾಷ್ಟ್ರೀಯ ಮಟ್ಟದಲ್ಲೂ ಬೆಳೆಯುತ್ತಿರುವುದು ಹೆಮ್ಮೆಯ ವಿಚಾರ. ಯುವ ಪೀಳಿಗೆಯು ಯಕ್ಷಗಾನದತ್ತ ಒಲವನ್ನು ತೋರಿಸುತ್ತಿದ್ದಾರೆ, ಯಕ್ಷಗಾನಕ್ಕೆ ಬಹಳಷ್ಟು ಮನ್ನಣೆ ಸಿಗುತ್ತಿದೆ ಕಾಲಕ್ಕೆ ಅನುಗುಣವಾಗಿ ಬದಲಾವಣೆ ಅಗತ್ಯ, ಪ್ರೇಕ್ಷಕರು ಹೊಸತನವನ್ನು ಬಯಸುತ್ತಾರೆ. ಪರಂಪರೆಯೊಂದಿಗೆ ನಾವೀನ್ಯತೆಯನ್ನು ಅಳವಡಿಸಿಕೊಂಡು ಕಲೆಯನ್ನು ಉಳಿಸಬೇಕಾದದ್ದು ಕಲಾವಿದನ ಕರ್ತವ್ಯ.
ಇಂದಿನ ಯಕ್ಷಗಾನದ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನ ಕಲೆ ಹಾಗೂ ಕಲಾವಿದನನ್ನು ಬೆಳೆಸುವಲ್ಲಿ ಪ್ರೇಕ್ಷಕರ ಪಾತ್ರ ಅಷ್ಟೇ ಮುಖ್ಯ. ಈಗಿನ ಪ್ರೇಕ್ಷಕರಿಂದಾಗಿ ಸಾಮಾಜಿಕ ಜಾಲತಾಣಗಳ್ಲಲಿ ಯಕ್ಷಗಾನದ ಪ್ರಚಾರವಾಗುತ್ತಿದೆ. ಕಲಾವಿದರ ಅಭಿಮಾನಿಗಳು ಹೆಚ್ಚಾಗಿದ್ದರೆ. ಅಭಿಮಾನ ಬೇಕು, ಆದರೆ ಅದು ಕಲಾವಿದನ ಬೆಳವಣಿಗೆಗೆ ಪೂರಕವಾಗುವಂತಿರಲಿ. ಪ್ರೇಕ್ಷಕರಿಗೆ ಯಕ್ಷಗಾನದ ಅರಿವು ಅಗತ್ಯ ಎಲ್ಲವನ್ನೂ ಪ್ರೋತ್ಸಾಹಿಸದೆ, ಯಕ್ಷಗಾನದ ಹೆಸರಿನಲ್ಲಿ ಚೌಕಟ್ಟು ಮೀರಿದ ಪ್ರದರ್ಶನ ಅಥವಾ ತಪ್ಪು ಕಂಡಲ್ಲಿ ಅದನ್ನು ವಿಮರ್ಶಿಸುವ ಒಳ್ಳೆಯ ಪ್ರೇಕ್ಷಕರು ಬೇಕು.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷಗಾನವು ಒಂದು ಸಾಗರ, ಕಲಿಕೆ ಎನ್ನುವುದು ನಿರಂತರ. ಕಲಿಯುತ್ತ, ಕಲಿಸುತ್ತ ಉತ್ತಮ ಕಲಾವಿದೆಯಾಗಿ ವೃತ್ತಿ ಜೀವನದೊಂದಿಗೆ ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರಿಯಬೇಕೆನ್ನುವ ಆಸೆ.
ಸನ್ಮಾನ ಹಾಗೂ ಪ್ರಶಸ್ತಿ:-
- 2015ರಲ್ಲಿ “ರಸರಾಜ್ಞೆ” ಬಿರುದು.
- ಗೋವಿಂದ ದಾಸ್ ಕಾಲೇಜಿನಿಂದ “Best outgoing Yakshagana Artist 2020” ಅವಾರ್ಡ್ .
- ಅಂತರ್ ಕಾಲೇಜು SDM ಯಕ್ಷೋತ್ಸವದಲ್ಲಿ 2 ಬಾರಿ ಉತ್ತಮ ಪುಂಡುವೇಷ ಪ್ರಶಸ್ತಿ, ಸಮಗ್ರ ವೈಯಕ್ತಿಕ ಪ್ರಶಸ್ತಿ.
- A.J. Intitute of Engineering & Technology ‘AAKAR-2020’ ಯಕ್ಷೋತ್ಸವದಲ್ಲಿ ಸುಧನ್ವ ಪಾತ್ರಕ್ಕೆ ಪುಂಡು ವೇಷ ಪ್ರಥಮ ಪ್ರಶಸ್ತಿ.
- ಕರಾವಳಿ ಯುವಜನೋತ್ಸವ ಯಕ್ಷಗಾನ ಸ್ಪರ್ಧೆಯಲ್ಲಿ ಸತತ 3 ಬಾರಿ ಪ್ರಥಮ ಪ್ರಶಸ್ತಿ.
- ಅಮೃತೇಶ್ವರಿ ಯಕ್ಷಗಾನ ಪ್ರತಿಷ್ಠಾನ ವಾಮಂಜೂರು ನಡೆಸಿದ ಹವ್ಯಾಸಿ ಯಕ್ಷಗಾನ ಸ್ಪರ್ಧೆಯಲ್ಲಿ ಸ್ತೀವೇಷ ವಿಭಾಗದಲ್ಲಿ ದ್ವಿತೀಯ ಸ್ಥಾನ.
ಶ್ರೀ ವಿನಾಯಕ ಯಕ್ಷ ಕಲಾ ತಂಡ ಕೆರೆಕಾಡು, ಶ್ರೀಮತಿ ಪೂರ್ಣಿಮಾ ರೈ ಇವರ ಮಹಾಗಣಪತಿ ಮಹಿಳಾ ಯಕ್ಷಗಾನ ತಂಡ, ಹಲವಾರು ತಂಡಗಳಿಗೆ ಹವ್ಯಾಸಿ ಕಲಾವಿದೆಯಾಗಿ ಭಾಗವಹಿಸಿದ ಅನುಭವ, ತೆಂಕು- ಬಡಗು ಮಹಿಳಾ ಯಕ್ಷಗಾನದಲ್ಲಿ ಪಾತ್ರ ನಿರ್ವಹಣೆ, ಪ್ರಸ್ತುತ ಶ್ರೀ ರಕ್ಷಿತ್ ಶೆಟ್ಟಿ ಪಡ್ರೆ ಇವರ ಮಯೂರ ಪ್ರತಿಷ್ಠಾನ (ರಿ) ಮಂಗಳೂರು ತಂಡದಲ್ಲಿ ತಿರುಗಾಟ ಮಾಡಿದ ಅನುಭವ.
ಯಕ್ಷಗಾನ, ಡಾನ್ಸ್, Travelling ಇವರ ಹವ್ಯಾಸಗಳು.
ತಂದೆ, ತಾಯಿ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಪೂಜಾ ಯು. ಆಚಾರ್ಯ.
- ಶ್ರವಣ್ ಕಾರಂತ್ ಕೆ., ಮಂಗಳೂರು.