ಓದಿದ್ದು ಭೌತಚಿಕಿತ್ಸಕಿ/ಫಿಸಿಯೋಥೆರಪಿಸ್ಟ್. ಯಕ್ಷಗಾನದ ಅತಿಯಾದ ಒಲವು. ಹೀಗೆ ವೃತ್ತಿ ಹಾಗೂ ಪ್ರವೃತ್ತಿಯನ್ನು ಜೊತೆಗೆ ಸರಿ ಸಮಾನವಾಗಿ ಸ್ವೀಕರಿಸಿ ಯಕ್ಷಗಾನ ರಂಗದಲ್ಲಿ ತನ್ನದೇಯಾದ ಛಾಪು ಮೂಡಿಸುತ್ತಿರುವ ಪ್ರತಿಭೆ ಸಂಧ್ಯಾ ನಾಯಕ್.
13.03.1996ರಂದು ಸದಾನಂದ ನಾಯಕ್ ಮತ್ತು ನಂದಿನಿ ನಾಯಕ್ ಇವರ ಮಗಳಾಗಿ ಜನನ. ತಾಯಿಯ ಪ್ರೇರಣೆ ಹಾಗೂ ಯಕ್ಷಗಾನದ ವೇಷಭೂಷಣ, ಅಲ್ಲಿರುವ ಹಾಡು, ನಾಟ್ಯ ಹಾಗೂ ಮಾತುಗಾರಿಕೆ ಎಲ್ಲವನ್ನೂ ಕೂಡಿದ ಯಕ್ಷಗಾನದ ಮೇಲಿನ ಆಸಕ್ತಿ ನನ್ನನ್ನು ಸೆಳೆಯಿತು ಎಂದು ಹೇಳುತ್ತಾರೆ ಸಂಧ್ಯಾ.
ಪ್ರಸಾದ್ ಕುಮಾರ್ ಮೊಗೆಬೆಟ್ಟು, ಮಂಜುನಾಥ್ ಕುಲಾಲ್, ಪ್ರತೀಶ್ ಕುಮಾರ್, ರತ್ನಾಕರ್ ಆಚಾರ್ ಪುತ್ತೂರು ಇವರ ಯಕ್ಷಗಾನದ ಗುರುಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗವನ್ನು ಓದಿ, ಪಾತ್ರದ ಬಗ್ಗೆ ಯೂಟ್ಯೂಬ್ ಮುಖಾಂತರ ಯಾವ ರೀತಿಯಲ್ಲೆಲ್ಲ ಅಭಿನಯ ಆಗಲಿ ಮಾತುಗಾರಿಕೆಯಾಗಲಿ ಹೇಗೆ ಮಾಡಬಹುದು ಎಂದು ನೋಡುತ್ತೇನೆ. ಹಾಗೆಯೇ ಗುರುಗಳಲ್ಲಿ ಕೇಳಿ ತಿಳಿದುಕೊಳುತ್ತೇನೆ.
ಶ್ವೇತಕುಮಾರ ಚರಿತ್ರೆ, ಲವಕುಶ, ಬಬ್ರುವಾಹನ ಕಾಳಗ, ರಾಣಿ ಶಶಿಪ್ರಭೆ ಇವರ ನೆಚ್ಚಿನ ಪ್ರಸಂಗಗಳು.
ಲವ, ಭ್ರಮರಕುಂತಳೆ, ಬಬ್ರುವಾಹನ, ಬಲರಾಮ, ಲೋಹಿತಾಶ್ವ ನೆಚ್ಚಿನ ವೇಷಗಳು.
ಯಕ್ಷಗಾನ ಕಲಾವಿದ ಶಂಕರ್ ಹೆಗಡೆ ನೀಲ್ಕೋಡು ಹಾಗೂ ಬಳ್ಕೂರು ಕೃಷ್ಣ ಯಾಜಿ ಹಾಗೂ ನೆಚ್ಚಿನ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಹಾಗೂ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಜೊತೆ ಮಾಡಿದ ಪಾತ್ರ ಜೀವನದ ಸ್ಮರಣೀಯ ಕ್ಷಣ. ರಾಘವೇಂದ್ರ ಆಚಾರ್ಯ ಜನ್ಸಾಲೆ ಇವರ ಭಾಗವತಿಕೆಯಲ್ಲಿ ಯಕ್ಷ ಗಾನ ನಾಟ್ಯವನ್ನು ಮಾಡಿದ್ದು ಬಹಳ ಖುಷಿ ಹಾಗೂ ಹೆಮ್ಮೆಯೆನಿಸಿದೆ ಎಂದು ಹೇಳುತ್ತಾರೆ ಸಂಧ್ಯಾ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಹಿಂದೆ ಯಕ್ಷಗಾನ ತರಬೇತಿಗಳು ಹೆಚ್ಚು ಇರುತ್ತಿರಲಿಲ್ಲ. ಆದರೆ ಈಗ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಉಚಿತ ಯಕ್ಷಗಾನ ತರಗತಿಗಳು ನಡೆಯುತ್ತಿದೆ, ಇದರಲ್ಲಿ ಮಕ್ಕಳ ಆಸಕ್ತಿ ಹೆಚ್ಚುತ್ತಿದೆ. ಗಂಡು ಹೆಣ್ಣು ಭೇದವಿಲ್ಲದೆ ಎಲ್ಲಾ ಮಕ್ಕಳು ಶಾಲಾ ಯಕ್ಷಗಾನಗಳಲ್ಲಿ ಭಾಗವಹಿಸುತ್ತಿದ್ದಾರೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಸಾಮಾಜಿಕ ಜಾಲತಾಣಗಳಲ್ಲಿ ಯಕ್ಷಗಾನದ ವಿಡಿಯೋ ಬರುವುದರಿಂದ ಯಕ್ಷಗಾನವನ್ನು ನೋಡುವ ಪ್ರೇಕ್ಷಕರು ಕಮ್ಮಿಯಾಗಿದ್ದಾರೆ, ಆದರೆ ಅದೇ ಸಾಮಾಜಿಕ ಜಾಲತಾಣಗಳಿಂದ ಯಕ್ಷಗಾನದ ಹೆಚ್ಚಿನ ಮಾಹಿತಿ ಸಿಗುತ್ತದೆ, ದೇಶ ವಿದೇಶಗಳಲ್ಲಿ ಯಕ್ಷಗಾನದ ಅರಿವು ಹೆಚ್ಚಾಗಿದೆ.
ಇಡೀ ರಾತ್ರಿ ಯಕ್ಷಗಾನವನ್ನು ನೋಡಲು ಯಾರು ಇಚ್ಛಿಸುವುದಿಲ್ಲ, ಈಗ ಹೆಚ್ಚಾಗಿ ಎಲ್ಲರೂ ಕೆಲಸಕ್ಕೆ ಹೋಗುವುದರಿಂದ ಕಾಲಮಿತಿ ಯಕ್ಷಗಾನ ಇಷ್ಟಪಡುತ್ತಾರೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ :- ಯಕ್ಷಗಾನದಲ್ಲಿ ಕಲಿಯುವಂಥದ್ದು ಅದೆಷ್ಟೋ ಇದೆ. ಎಲ್ಲವನ್ನೂ ಅರಿತುಕೊಳ್ಳಬೇಕು, ಯಕ್ಷಗಾನದಲ್ಲಿ ಹೀಗೆ ಮುನ್ನಡೆಯನ್ನು ಕಾಣಬೇಕು, ಎಲ್ಲರ ಪ್ರೀತಿಗೆ ಪಾತ್ರಳಾಗಬೇಕು ಎಂಬ ಆಸೆ.
ಫಿಲ್ಮಿ ಡ್ಯಾನ್ಸ್, ಫೋಕ್ ಡ್ಯಾನ್ಸ್ : ಕಂಗೀಲು ಕುಣಿತ, ವೀರಗಾಸೆ, ಪೂಜಾಕುಣಿತ (ಮೈಸೂರ್ ದಸರಾದಲ್ಲಿ ಕಂಗೀಲು ಕುಣಿತದಲ್ಲಿ ಭಾಗವಹಿಸಿದ್ದೆ), ಮೆಹೆಂದಿ ಬಿಡಿಸುವುದು, ವಾಲಿಬಾಲ್, ತ್ರೋಬಾಲ್ ಇವರ ಹವ್ಯಾಸಗಳು.
ಸ್ಕೂಲ್, ಕಾಲೇಜುಗಳಲ್ಲಿ ಹಾಗೂ ಅತಿಥಿಯಾಗಿ ಪಾತ್ರಗಳನ್ನು ಮಾಡಿರುತ್ತೇನೆ.
ಯಕ್ಷ ವೈಭವ ಎಳ್ಳಾರೆಯಲ್ಲಿ ಇವರ ಪ್ರತಿಭೆಯನ್ನು ನೋಡಿ ಸನ್ಮಾನಿಸಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು