ಯಕ್ಷಗಾನ ಪ್ರಸಂಗಗಳು ಪದ್ಯ ರೂಪದಲ್ಲಿರುವ ಕಥಾ ವಸ್ತುಗಳಾಗಿವೆ. ಯಕ್ಷಗಾನ ಅರ್ಥಗಾರಿಕೆಗೆ ಪ್ರಸಂಗಗಳು ಮೂಲ ಪಠ್ಯಗಳಾಗಿರುತ್ತವೆ. ಪ್ರಸಂಗವು ಪ್ರದರ್ಶನದ ಸಂವಿಧಾನವಾಗಿರುತ್ತದೆ. ಭಾಗವತರು ಮತ್ತು ಕಲಾವಿದರು ಪ್ರಸಂಗನಿಷ್ಠರಾಗಿ ಕಥಾವಸ್ತುವನ್ನು ಮುಂದಕ್ಕೆ ಒಯ್ಯುತ್ತಾರೆ. ಯಕ್ಷಗಾನ ಪ್ರಸಂಗಕರ್ತನನ್ನು ಯಕ್ಷಕವಿ ಎಂದು ಕರೆಯುತ್ತಾರೆ. ಇಂದು ನಾವು ಪರಿಚಯ ಮಾಡುವ ಯಕ್ಷ ಕವಿ ಚಾರ ಪ್ರದೀಪ ಹೆಬ್ಬಾರ್.21.08.1983ರಂದು ಸೀತಾರಾಮ್ ಹೆಬ್ಬಾರ್ ಮತ್ತು ಶ್ರೀಮತಿ ಗಿರಿಜಾ ಹೆಬ್ಬಾರ್ ಇವರ ಮಗನಾಗಿ ಚಾರ ಪ್ರದೀಪ ಹೆಬ್ಬಾರ್ ಅವರ ಜನನ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಕಾಂ ಪದವಿಯನ್ನು ಪಡೆದಿರುತ್ತಾರೆ.
ಹೊಸ ಪ್ರಸಂಗಗಳ ಬಗ್ಗೆ ಆಕ್ಷೇಪಗಳಿವೆ, ಅದರ ಬಗ್ಗೆ ನಿಮ್ಮ ಅಭಿಪ್ರಾಯ:-
ಯಕ್ಷಗಾನ ಪರಂಪರೆಗೆ ಚ್ಯುತಿ ಬರದ ರೀತಿಯಲ್ಲಿ ಪ್ರಸಂಗ ರಚನೆ. ಪರಂಪರೆಯನ್ನು ಉಳಿಸುವ ಬೆಳೆಸುವ ಕಲೆಯಾಗಬೇಕು, ಸಿನಿಮಾ ಮಾದರಿ ರಾಗಗಳನ್ನು ಯಕ್ಷಗಾನಕ್ಕೆ ಬಳಸಬಾರದು, ಶ್ರೀಮಂತ ಕಲೆಯನ್ನು ಉಳಿಸಿ ಬೆಳೆಸಬೇಕು.
ಪದ್ಯ ಬರೆಯುವ ಬಗ್ಗೆ ನಿಮ್ಮ ನಿಲುವು ಏನು:-
ಪ್ರಸಂಕರ್ತರು ಎಂದ ಮೇಲೆ ಪದ್ಯವನ್ನು ಸ್ವತಃ ಅವರೇ ಬರೆಯಬೇಕು. ಸಿನಿಮಾ ಮಾದರಿ ಪದ್ಯವನ್ನು ರಚಿಸಬಾರದು, ಕಲೆಯ ಪರಂಪರೆಗೆ ದಕ್ಕೆ ಬಾರದಂತೆ ಪ್ರಸಂಗ ರಚನೆಯಾಗಬೇಕು ಎಂದು ಹೇಳುತ್ತಾರೆ ಪ್ರದೀಪ ಹೆಬ್ಬಾರ್.
ಪ್ರಸಂಗ ಬಿಟ್ಟು ಬೇರೆ ಯಾವ ರೀತಿಯ ಬರವಣಿಗೆ ಅಳವಡಿಸಿಕೊಂಡಿದ್ದೀರಿ:-
ಯಕ್ಷಗಾನಕ್ಕೆ ಸಂಬಂದಿಸಿದ ಎರಡು ಪುಸ್ತಕಗಳ ಸಂಪಾದಕತ್ವವನ್ನು ಮಾಡುತ್ತಿದ್ದೇನೆ, “ಯಕ್ಷ ಸುಮನಸರು” ಮತ್ತು “ರಂಗಸ್ಥಳ” ಎಂಬ ಪುಸ್ತಕಗಳು. ಚಾರ ಮಹಿಷಮರ್ದಿನೀ ಅಮ್ಮನವರ ಕುರಿತಾದ ಕನ್ನಡ ಭಕ್ತಿಗೀತೆ ಧ್ವನಿಸುರುಳಿ, “ದುರ್ಗಾಮೃತ” ಬಿಡುಗಡೆಯಾಗಿದೆ. ಸಂಗೀತ ಕ್ಷೇತ್ರದಲ್ಲಿ ಭಕ್ತಿಗೀತೆಯ ಧ್ವನಿತಟ್ಟೆಯನ್ನು ನಿರ್ಮಾಪಕನಾಗಿದ್ದೇನೆ.
ತಾಳಮದ್ದಳೆ ಕ್ಷೇತ್ರದಲ್ಲಿ ಆಸಕ್ತಿ ಇದೆಯಾ? ಆ ಬಗ್ಗೆ ಮುಂದಿನ ಯೋಜನೆಗಳೇನು:-
ತಾಳಮದ್ದಲೆಯಲ್ಲಿ ಹಿರಿಯ ಕಿರಿಯ ಅರ್ಥದಾರಿಯರೊಡನೆ ಅರ್ಥವನ್ನು ಹೇಳಿದ್ದೇನೆ. ಉದಾ:- ಪೂಕಳ, ಕುಂಬ್ಳೆ ಶ್ರೀಧರ ರಾವ್, ಗುಂಡ್ಯಡ್ಕ, ಪಕಳಕುಂಜ, ಬಾರ್ಯ, ಗಾಳಿಮನೆ, ಕೇಕಣಾಜೆ, ಬೇಳೆಂಜೆ, ಕನ್ನಾರು, ಹಂದೆ, ಗೇರುಕಟ್ಟೆ, ಸೀತಾನದಿ, ಗಣರಾಜ್ ಕುಂಬ್ಳೆ, ಬಲ್ಯ, ಹಳೆನೇರಂಕಿ, ಮುಂತಾದವರೊಂದಿಗೆ ಅರ್ಥಗಾರಿಕೆ ಹೇಳಿದ್ದೇನೆ ಎಂದು ಚಾರರವರು ಹೇಳುತ್ತಾರೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಅಳಿಯುವ ಪ್ರಮೇಯ ಬರಬಹುದು, ಹಣಕ್ಕಾಗಿ ಯಕ್ಷಗಾನವನ್ನು ಮಾರಾಟ ಮಾಡವ ಸಂದರ್ಭ ಬರಬಹುದು.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು:-
ಬರವಣಿಗೆಯನ್ನು ಮುಂದುವರಿಸುವುದು. ಪ್ರತಿಫಲಾಪೇಕ್ಷೆ ಇಲ್ಲದೇ ಯಕ್ಷಗಾನದಲ್ಲಿ ಕೆಲಸಮಾಡುವುದು.
ಚಾರ ಪ್ರದೀಪ ಹೆಬ್ಬಾರ್ ಬರೆದಿರುವ ಪ್ರಸಂಗಳು:-
– ಅಮರದೀಪ
– ಸ್ವರ್ಣ ಗೌರಿ
– ಮೇಘ ಹರ್ಷಿತಾ
– ಸ್ವರ್ಣ ರೇಖಾ
– ಅಮರಜ್ಯೋತಿ
– ನಾಗಾರ್ಜುನ
– ಚಾರ ಕ್ಷೇತ್ರ ಮಹಾತ್ಮೆ
– ಮಾರಾಳಿ ಕ್ಷೇತ್ರ ಮಹಾತ್ಮೆ
– ಕುಂತಿ ಸಂವಾದ
– ಉಲೂಪಿನಂದನ
– ಮೇಘಮಂದಾರ
– ಮದುರಮಾನಸ
– ಸ್ವರ್ಣಕಮಲ
– ನಾಗಸಂಪಿಗೆ
– ಇರಾವಂತ ಕಾಳಗ
– ನಾಗಚಂದ್ರಿಕೆ
– ನಾಗಕಾರುಣ್ಯ
– ಸತಿ ಊರ್ಮಿಳೆ.
ಕವಿ ಹೃದಯ ದೀಪ, ತಾಲೂಕು ಮಟ್ಟದ ಸಾಹಿತ್ಯ ಪ್ರಶಸ್ತಿ, 75ನೇ ಸ್ವಾತಂತ್ರ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ವಿಶ್ವ ಮಟ್ಟದ ಸ್ಥಾನಿಕ ಬ್ರಾಹ್ಮಣ ಸಮಾವೇಶದಲ್ಲಿ ಗೌರವ ಸನ್ಮಾನ ಹಾಗೂ ಸುಮಾರು 50ಕ್ಕೂ ಹೆಚ್ಚು ರಂಗ ಸನ್ಮಾನಗಳು ಚಾರ ಅವರಿಗೆ ದೊರೆತಿರುತ್ತದೆ.
ಆರ್ಗೋಡ್ ಮೋಹನದಾಸ ಶೆಣೈ, ದಾರೇಶ್ವರರು, ತೀರ್ಥಹಳ್ಳಿ ಅವರ ಮಾರ್ಗದರ್ಶನ ಯಾವತ್ತೂ ಸ್ಮರಿಸುತ್ತೇನೆ ಎಂದು ಚಾರ ಅವರು ಹೇಳುತ್ತಾರೆ.
ಕವಿತೆ, ಲೇಖನ ಬರೆಯುವುದು ಇವರ ಹವ್ಯಾಸಗಳು.
ಚಾರ ಪ್ರದೀಪ ಹೆಬ್ಬಾರ್ ಅವರು ೨೧.೦೬.೨೦೧೯ ರಂದು ಅನಿತಾ ಇವರನ್ನು ಮದುವೆಯಾಗಿ ಹೆಣ್ಣು ಮಗುವಿನ ತಂದೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು