ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ಪುತ್ತಿಗೆಯ ಗೋಪಾಲಕೃಷ್ಣ ಭಟ್ ಹಾಗೂ ರೂಪಾ ಭಟ್ ಇವರ ಮಗಳಾಗಿ 24.05.2004ರಂದು ದಿವ್ಯಶ್ರೀ ಭಟ್ ಪುತ್ತಿಗೆ ಅವರ ಜನನ. ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ B.A ವ್ಯಾಸಂಗವನ್ನು ಮಾಡುತ್ತಿದ್ದಾರೆ.
ಯಕ್ಷಗಾನ ರಂಗದಲ್ಲಿ ಆಸಕ್ತಿ ತುಂಬಾನೇ ಇದ್ದ ಇವರಿಗೆ ಮೂಡಬಿದ್ರೆಯ ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ಗುರುಗಳಾದ ಲೀಲಾವತಿ ಬೈಪಾಡಿತ್ತಾಯ ಹಾಗೂ ಹರಿನಾರಾಯಣ ಬೈಪಾಡಿತ್ತಾಯ ದಂಪತಿಗಳು ಯಕ್ಷಗಾನ ಭಾಗವತಿಕೆ ಹಾಗೂ ಚೆಂಡೆ ಮದ್ದಳೆ ತರಬೇತಿ ನೀಡುವುದಗಿ ಹೇಳಿದರು. ಆಗಲೇ ಕುಶಿಯಿಂದ ಭಾಗವತಿಕೆಗೆ ಸೇರಿಕೊಂಡ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು.
ಗುರುಗಳಾದ ಲೀಲಾವತಿ ಬೈಪಡಿತ್ತಾಯ ಹಾಗೂ ಹರಿನಾರಾಯಣ ಬೈಪಾಡಿತ್ತಾಯ ಅವರು ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ತರಬೇತಿ ಮಾಡುವುದನ್ನು ನಿಲ್ಲಿಸಿದ ಮೇಲೆ ಮನೆಯ ಹತ್ತಿರದಲ್ಲೇ ಯಕ್ಷಗಾನ ಚೆಂಡೆ ಹಾಗೂ ಮದ್ದಳೆ ಕಲಾವಿದರಾದ ಕೌಶಿಕ್ ರಾವ್ ಪುತ್ತಿಗೆ ಅವರ ಹೆಂಡತಿ ಅಮೃತ ಅಡಿಗ ಅವರೊಡನೆ ಯಕ್ಷಗಾನ ಭಾಗವತಿಕೆ ತರಬೇತಿಯನ್ನು ಪಡೆದುಕೊಂಡರು. ಹಾಗಾಗಿ ಇವರ ನಂತರದ ಗುರುಗಳು ಶ್ರೀಮತಿ ಅಮೃತ ಅಡಿಗ.
ಅಮೃತ ಅಡಿಗ ಅವರು 3 – 4 ಪ್ರಸಂಗವನ್ನು ಇವರಿಗೆ ಅಭ್ಯಾಸ ಮಾಡಿಸಿದರು. ನಂತರದಲ್ಲಿ ಇವರೇ ಕೆಲವು ಪ್ರಸಂಗಗಳನ್ನು ಕಲಿತು, ಮತ್ತೆ ಇನ್ನೂ ಕೆಲವು ಪ್ರಸಂಗಗಳನ್ನು ಪುನಃ ಲೀಲಾವತಿ ಬೈಪಾಡಿತ್ತಾಯ ಹಾಗೂ ಹರಿನಾರಾಯಣ ಬೈಪಾಡಿತ್ತಾಯ ಗುರುಗಳ ಮನೆಗೆ ಹೋಗಿಯೇ ಕಲಿಯುತ್ತ ಇದ್ದರು ದಿವ್ಯಶ್ರೀ.
ಹರಿನಾರಾಯಣ ಬೈಪಾಡಿತ್ತಾಯ, ಮೋಹನ ಬೈಪಾಡಿತ್ತಾಯ, ಕೇಶವ ಬೈಪಾಡಿತ್ತಾಯ, ದೇಲಂತಮಜಲು ಹಾಗೂ ಈಗಿನ ಕಲಾವಿದರಲ್ಲಿ ಸಮರ್ಥ ಉಡುಪ, ಕೌಶಿಕ್ ರಾವ್, ಕೌಶಲ್ ರಾವ್, ರಾಮಪ್ರಕಾಶ್ ಕಲ್ಲೂರಾಯ ಇನ್ನಿತರರು ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು.
ಲೀಲಾವತಿ ಬೈಪಡಿತ್ತಾಯ, ಬಲಿಪ ಭಾಗವತರು, ದಿನೇಶ್ ಅಮ್ಮಣ್ಣಾಯ, ರಾಮಚಂದ್ರ ಅರ್ಬಿತ್ತಾಯ. ಮತ್ತೆ ಈಗಿನ ಭಾಗವತರಲ್ಲಿ ಅಮೃತ ಅಡಿಗ, ಕಾವ್ಯಶ್ರೀ ಅಜೇರು, ಚಿನ್ಮಯ ಕಲ್ಲಡ್ಕ, ರವಿಚಂದ್ರ ಕನ್ನಡಿಕಟ್ಟೆ ಇನ್ನಿತರರು ಇವರ ನೆಚ್ಚಿನ ಭಾಗವತರು.
ದೇವಿ ಮಹಾತ್ಮೆ, ಶಿವಲೀಲಾ ಇನ್ನೂ ಕೆಲವು ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಮೋಹನ, ಆರಭಿ, ಚಾರುಕೇಶಿ, ಸಿಂಧುಭೈರವಿ, ರಂಜನಿ ಇತ್ಯಾದಿ ಇವರ ನೆಚ್ಚಿನ ರಾಗಗಳು.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರೇಕ್ಷಕರ ಬಗ್ಗೆ ಹೇಳುವುದಾದರೆ ರಾತ್ರಿ ಇಡೀ ನಿದ್ದೆ ಬಿಟ್ಟು ಯಕ್ಷಗಾನ ನೋಡುವಂತಹ ಪ್ರೇಕ್ಷಕರು ಬಹಳ ವಿರಳ. ಆದರೆ ಕಾಲಮಿತಿ ಯಕ್ಷಗಾನಗಳಿಗೆ ಹೆಚ್ಚಿನ ಪ್ರೇಕ್ಷಕರನ್ನು ನಾವು ಕಾಣುತ್ತೇವೆ.
ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ ಅಂತ ಏನು ಇಲ್ಲ. ಕಾರ್ಯಕ್ರಮ ಸಿಕ್ಕಲ್ಲಿ ಹೋಗುವೆ. ಇಲ್ಲದಿದ್ದರೆ ಸಂಗೀತ ಹಾಗೂ ಭರತನಾಟ್ಯದಲ್ಲಿ ಮುಂದುವರಿಯುವೆ, ಇಲ್ಲದಿದ್ದರೂ ಇವೆರಡರಲ್ಲಿ ಮುಂದುವರೆಯುತ್ತೇನೆ ಎಂದು ಹೇಳುತ್ತಾರೆ ದಿವ್ಯಶ್ರೀ.
೪ನೇ ತರಗತಿಯಿಂದ ಯಕ್ಷಗಾನವನ್ನು ಕಲಿಯಲು ಆರಂಭಿಸಿದ ಇವರು ೭ನೇ ತರಗತಿಯ ನಂತರ ಕಾರ್ಯಕ್ರಮವನ್ನು ಕೊಡಲು ಆರಂಭಿಸಿ ೭ ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಶ್ರೀ ಕಾಶಿವಿಶ್ವನಾಥೇಶ್ವರ ಬಲಮುರಿ ಶ್ರೀ ಮಹಾಗಣಪತಿ, ಶ್ರೀ ದುರ್ಗಾದೇವಿ, ಶ್ರೀ ರಕ್ತೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ತಳಕಳ – ಕೊಳಂಬೆ ಬಜಪೆ ಮಂಗಳೂರು (ಮಕ್ಕಳ ಮೇಳ)ದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಸಂಗೀತ ಹಾಗೂ ಭರತನಾಟ್ಯದಲ್ಲಿ ಸೀನಿಯರ್ ಹಂತವನ್ನು ಮುಗಿಸಿ, ವಿದ್ವತ್ ಪಾಠವನ್ನು ಕಲಿಯುತ್ತಿದ್ದಾರೆ. ಸಂಗೀತ ತರಗತಿಗಳನ್ನು ಆನ್ಲೈನ್ ಮೂಲಕ ಕೆಲವು ವಿದ್ಯಾರ್ಥಿಗಳಿಗೆ ಮಾಡುತ್ತಿದ್ದಾರೆ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು