ಯಕ್ಷಗಾನ ಗಂಡು ಮೆಟ್ಟಿದ ಕಲೆ ಎಂದ ಲಾಗಾಯ್ತಿನಿಂದಲೂ ಕರೆಸಿಕೊಂಡು ಮೆರೆದ ಕಮನೀಯ ಕಲೆ. ಇದರಲ್ಲಿ ಹೆಂಗಳೆಯರು ಎಲ್ಲ ಅಡೆತಡೆಗಳನ್ನೂ ಮೆಟ್ಟಿನಿಂತು ಗಂಡಸರಿಗೆ ಸಮದಂಡಿಯಾಗಿ ಬೆಳೆದಿದ್ದಾರೆ. ತೆಂಕು-ಬಡಗು ತಿಟ್ಟುಗಳೆಂಬ ಭೇದವಿಲ್ಲದೆ, ಸರ್ವಾಂಗ ಸುಂದರವಾದ ಸಮಷ್ಟಿ ಕಲೆ, ಯಕ್ಷಗಾನದ ಎಲ್ಲ ವಿಭಾಗಗಳಲ್ಲೂ ಮಹಿಳೆಯರು ಮಿಂಚುತ್ತಿದ್ದಾರೆ. ಅದು ಚೆಂಡೆ, ಮದ್ದಳೆಯಿರಲಿ, ನಾಟ್ಯ, ಗಾಯನವಿರಲಿ, ಅರ್ಥಗಾರಿಕೆಯೇ ಇರಲಿ; ಇಲ್ಲಿ ಮಹಿಳಾ ಸ್ವಾತಂತ್ರ್ಯವಿದೆ ಮತ್ತು ಪ್ರೋತ್ಸಾಹವೂ ಇದೆ. ಲಿಂಗ ಸಮಾನತೆಯನ್ನು ಯಾವುದೇ ಅಡೆತಡೆಗಳಿಲ್ಲದೆ ಸಾಧಿಸಿದ ಕಲಾಪ್ರಕಾರ ಯಕ್ಷಗಾನವೆಂದರೂ ತಪ್ಪಲ್ಲ. ಇಂತಹ ಸುಂದರ ಹಾಗೂ ಶ್ರೇಷ್ಠ ಕಲೆಯಲ್ಲಿ ಮಿಂಚುತ್ತಿರುವ ಕಲಾವಿದೆ ಮಲ್ಲಿಕಾ ರಾಘವೇಂದ್ರ ಭಟ್ .
18.06.1980ರಂದು ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶಿವರಾಮ ಭಟ್ಟ ಕೆ.ಎನ್ ಹಾಗೂ ಸುಂದರಮ್ಮ ಇವರ ಮಗಳಾಗಿ ಜನನ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿಯಲ್ಲಿ ವಾಸ. ಎಂ.ಎ(ಅರ್ಥಶಾಸ್ತ್ರ) ಇವರ ವಿದ್ಯಾಭ್ಯಾಸ. ಪತಿ ರಾಘವೇಂದ್ರ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಹಾಗೂ ಪರಮೇಶ್ವರ ಹೆಗಡೆ ಐನಬೈಲ್ ಇವರ ಯಕ್ಷಗಾನದ ಗುರುಗಳು.
ಪ್ರಸಂಗ ಕಥೆ ನೋಡಿಕೊಂಡು ನಮ್ಮ ಗುರುಗಳಲ್ಲಿ ಕೇಳಿ, ಅವರ ನಿರ್ದೇಶನದಂತೆ, ಪದ್ಯ ನೋಡಿಕೊಂಡು ರಂಗಕ್ಕೆ ಹೋಗುವ ಮೊದಲು ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಮಲ್ಲಿಕಾ ಅವರು ಹೇಳುತ್ತಾರೆ.
ಭೂಕೈಲಾಸ, ಜ್ವಾಲಾಪ್ರತಾಪ, ನಳ ದಮಯಂತಿ, ಸತ್ಯಹರಿಶ್ಚಂದ್ರ, ಯಯಾತಿ ಇನ್ನೂ ಮುಂತಾದ ಪುರಾಣ ಕಥೆಗಳು ಇವರ ನೆಚ್ಚಿನ ಪ್ರಸಂಗಗಳು. ಯಕ್ಷಗಾನದ ಎಲ್ಲಾ ವೇಷಗಳು ನೆಚ್ಚಿನ ವೇಷ ಎಂದು ಹೇಳುತ್ತಾರೆ ಮಲ್ಲಿಕಾ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಕೇಳಿದಾಗ:-
ಹಿಂದಿನ ಕಲಾವಿದರಿಗೆ ಹೋಲಿಸಿದರೆ ಇಂದು ಕುಣಿತಕ್ಕೆ ಮಾತ್ರ ಪ್ರಾಶಸ್ತ್ಯ.. ಕಥೆಗಿಲ್ಲ…. ಹಾಗೂ ಪ್ರೇಕ್ಷಕರು ಕಥೆ ಹಾಗೂ ಕುಣಿತ ಎರಡನ್ನು ಬಯಸಿದರೆ ಯಕ್ಷಗಾನ ಇನ್ನೂ ಬೆಳೆಯುತ್ತೆ. ಕಲಾವಿದರು ಹೊಸ ಸಾಹಿತ್ಯ ಹುಡುಕಿ ಕಲಿಯುತ್ತಾರೆ. ಯಕ್ಷಗಾನ ಇನ್ನೂ ಬೆಳೆಯುತ್ತದೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ :-
ಸದ್ಯಕ್ಕೆ ಯಕ್ಷಗಾನ ನನ್ನ ನೆಮ್ಮದಿ. ಹೀಗೆ ಮುಂದುವರೆಸಿಕೊಂಡು ಹೋಗುವುದು. ನನ್ನ ಮಗನಿಗೂ ಮುಂದುವರೆಸಿ ಹೋಗಲು ಪ್ರೇರಣೆ ನೀಡುವುದು ಎಂದು ಹೇಳುತ್ತಾರೆ ಮಲ್ಲಿಕಾ.
ನಾನು ಹವ್ಯಾಸಿ ಕಲಾವಿದೆ. ಉಡುಪಿ ಗೋಪಾಲಕೃಷ್ಣ ಪ್ರತಿಷ್ಠಾನ, ಕೆಲವೊಮ್ಮೆ ಸಿರಿಕಲಾ ಮೇಳ ಬೆಂಗಳೂರು, ಶ್ರೀಮಾತ ಮಹಿಳಾ ಯಕ್ಷಗಾನ, ಸಾಯಿ ಪ್ರತಿಷ್ಠಾನ ಶಿವಮೊಗ್ಗ, ನಮ್ಮದೇ ಸಂಸ್ಥೆ ಯಕ್ಷಸಂವರ್ಧನ ರಿ. ಶಿವಮೊಗ್ಗ ಹೀಗೆ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ ಮಲ್ಲಿಕಾ ಅವರದು.
ಮಹಿಳಾ ಸಮಾಜ, ಬ್ರಾಹ್ಮಣ ಸಭಾ, ಬೇರೆ ಬೇರೆ ಸಂಘ ಸಂಸ್ಥೆಗಳು ಸನ್ಮಾನ ಮಾಡಿದ್ದಾರೆ.
ಯಕ್ಷಗಾನ ಮುಖವರ್ಣಿಕೆ, ಚಂಡೆ, ಮದ್ದಳೆ ಕಲಿಕೆ, ಭಾಗವತಿಕೆ ಕಲಿಕೆ, ಸಂಗೀತ ಕೇಳುವುದು ಇತ್ಯಾದಿ ಇವರ ಹವ್ಯಾಸಗಳು.
ಮಲ್ಲಿಕಾ ಅವರು 20.03.2009ರಂದು ರಾಘವೇಂದ್ರ ಎಂ.ಎಸ್ ಇವರನ್ನು ಮದುವೆಯಾಗಿ ಮಗ ಗಗನ್ ಮಯೂರ್ ಭಟ್ (ಎರಡನೇ ವರ್ಷದ ಫಿಜಿಯೋತೆರಪಿ ಅಧ್ಯಯನ ಮಾಡುತ್ತಿದ್ದಾರೆ ಹಾಗೂ ಯಕ್ಷಗಾನ ಕಲಾವಿದ) ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು