ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾಣ ಗ್ರಾಮದ ಜೋಗಿ ಬಂಗೇರ ಹಾಗೂ ರಾಧ ಕರ್ಕೇರ ಇವರ ಮಗನಾಗಿ 13-06-1985ರಂದು ಕೋಡಿ ರಾಘವೇಂದ್ರ ಕರ್ಕೇರ ಅವರ ಜನನ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿ ಕನ್ಯಾಣದಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಕೋಡಿ ಕನ್ಯಾಣದಲ್ಲಿ ಪೂರೈಸಿ, ಪದವಿ ಪೂರ್ವ ಶಿಕ್ಷಣವನ್ನು ವಿವೇಕ ಪದವಿ ಪೂರ್ವ ಕಾಲೇಜು ಕೋಟ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಮೈಸೂರಿನಲ್ಲಿ ಪದವಿ ಶಿಕ್ಷಣದೊಂದಿಗೆ ತೇರ್ಗಡೆಯಾಗಿ, ಎಮ್ ಬಿ ಎ ಫೈನಾನ್ಸ್ ಉನ್ನತ ಶಿಕ್ಷಣ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಡೆದಿರುತ್ತಾರೆ.
ಯಕ್ಷಗಾನದ ಗುರುಗಳು:-
ಶ್ರೀ ಮಹಾಬಲ ಭಂಡಾರಿ ಕೋಡಿ
ಶ್ರೀ ಗೋವಿಂದ ಉರಾಳ ಕೋಟ
ಹೆಮ್ಮಾಡಿ ಪ್ರಭಾಕರ್ ಆಚಾರ್
ಕೃಷ್ಣಯ್ಯ ಆಚಾರ್ ಬಿದ್ಕಲ್ ಕಟ್ಟೆ
ಶ್ರೀ ಬಸವ ಮರಕಾಲ ಸೈಬ್ರಕಟ್ಟೆ ಜಂಬೂರ್
ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು.
ಪ್ರಾಥಮಿಕ ಶಿಕ್ಷಣ ಮುಗಿಸುವ ಹಂತದಲ್ಲಿ ನನಗಾಗ 13 ವರ್ಷ ಪ್ರಾಯ. 1998ರಲ್ಲಿ ನಾನು ಸ.ಹಿ.ಪ್ರಾ. ಶಾಲೆ ಕೋಡಿ ಕನ್ಯಾಣದಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಮಾಡುವ ಸಂದರ್ಭ ವಾರ್ಷಿಕೋತ್ಸವದಲ್ಲಿ ಯಕ್ಷಗಾನಕ್ಕೆ ಬಣ್ಣ ಹಚ್ಚುವ ಸೌಭಾಗ್ಯ ನನ್ನ ಪಾಲಿಗೆ ಒದಗಿ ಬಂದಿತು. ಅಂದು ಭೀಷ್ಮ ವಿಜಯ ಪ್ರಸಂಗ. ಪ್ರೌಢ ಶಾಲೆಯೊಂದಿಗೆ ಜಂಟಿಯಾಗಿ ಮಾಡಿದ ಕಾರ್ಯಕ್ರಮವಾದುದರಿಂದ ಸಣ್ಣವನಾದ ನನಗೆ ಪ್ರಸಂಗದಲ್ಲಿ ಪಾತ್ರ ಇಲ್ಲದಿದ್ದರೂ ಪ್ರಾರಂಭದಲ್ಲಿ ಬಾಲಗೋಪಾಲನಾಗಿ ಕುಣಿಯುವ ಯೋಗ ನನ್ನ ಪಾಲಿಗೆ ಸಿಕ್ಕಿತು. ಅಂದು ಗುರುಗಳಾಗಿ ನನಗೆ ಹೆಜ್ಜೆ ಹೇಳಿಕೊಟ್ಟವರು ಕೋಡಿ ಶ್ರೀ ರಾಮ ಪ್ರಸಾದಿತ ಯಕ್ಷಗಾನ ಕಲಾ ಮಂಡಳಿಯ ಸಂಸ್ಥಾಪಕರಾದಂತಹ ಶ್ರೀ ಮಹಾಬಲ ಭಂಡಾರಿ, ಅವರ ಜೊತೆಗೆ ಪೂಜ್ಯರಾದ ಗೋವಿಂದ ಉರಾಳರು ಆ ಪ್ರಸಂಗಕ್ಕೆ ಎಷ್ಟು ಬೇಕು ಅಷ್ಟು ಹೆಜ್ಜೆಗಾರಿಕೆ ಮತ್ತು ಒಡೋಲಗಕ್ಕೆ ಎಷ್ಟು ಬೇಕು ಅಷ್ಟು ಅರ್ಥಗಾರಿಕೆಯನ್ನು ಹೇಳಿಕೊಟ್ಟರು. ಬಾಲಗೋಪಾಲ ಪಾತ್ರ ಮಾಡಿರುವುದರಿಂದ ನನಗೆ ಎಲ್ಲಾ ಹೆಜ್ಜೆಗಳು ಕರಗತವಾಯಿತು. ಅದೇ ನನಗೆ ಯಕ್ಷಗಾನದಲ್ಲಿ ಬೆಳವಣಿಗೆಗೆ ಸಹಕಾರಿಯಾಯಿತು. ನಂತರ ನಮ್ಮೂರಿನ ಶ್ರೀ ರಾಮ ಪ್ರಸಾದಿತ ಯಕ್ಷಗಾನ ಕಲಾ ಸಂಘದಲ್ಲಿ ನಿರಂತರವಾಗಿ ವೇಷಗಳನ್ನು ಮಾಡಿಕೊಂಡು ಬಂದೆ. ನಾನು ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವಾಗ ಶಾಲಾ ಸಮಯದ ಬಳಿಕ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರಕ್ಕೆ ಸಂಜೆ 5 ರಿಂದ 6 ಗಂಟೆಯ ತನಕ ಅಲ್ಲಿಯ ಪ್ರಧಾನ ಕಾರ್ಯದರ್ಶಿಗಳಾದ ರಾಜಶೇಖರ್ ಹೆಬ್ಬಾರ್ ಬಳಿ ವಿನಂತಿ ಮಾಡಿ ಹೆಜ್ಜೆ ಮತ್ತು ಭಾಗವತಿಕೆಯ ತರಬೇತಿಗೆ ಹೋಗುತ್ತಿದ್ದೆ. ಯಾಕೆಂದರೆ ಯಕ್ಷಗಾನದ ಮೇಲೆ ಅಷ್ಟು ಆಸಕ್ತಿ. ಆಗ ಅಲ್ಲಿ ಭಾಗವತಿಕೆಗೆ ಕೃಷ್ಣಯ್ಯ ಆಚಾರ್ಯ ಗುರುಗಳು, ಹೆಜ್ಜೆಗೆ ಬಸವ ಮರಕಾಲ ಗುರುಗಳು ಇದ್ದರು. ಅಲ್ಲಿ ಕಲಿತಿದ್ದರಿಂದ ಚಿಕ್ಕ ಚಿಕ್ಕ ಪಾತ್ರಗಳನ್ನೇ ಮಾಡುತ್ತಾ ಬಂದಂತಹ ನನಗೆ 2012ರಲ್ಲಿ ಕಂದಾವರ ರಘುರಾಮ ಶೆಟ್ಟರ ಶ್ರೀ ದೇವಿ ಬನಶಂಕರಿ ಪ್ರಸಂಗದ ಮುಖ್ಯ ಪುರುಷ ಪಾತ್ರವಾದಂತಹ ಸುಧೀರ ಪಾತ್ರ ಮಾಡುವ ಅವಕಾಶ ನಮ್ಮ ಸಂಘದಲ್ಲಿ ದೊರಕಿತು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡದ್ದರಿಂದ ಯಕ್ಷಗಾನ ನೋಡಿದ ಯಕ್ಷಾಭಿಮಾನಿಗಳ ಮೆಚ್ಚುಗೆಯ ನುಡಿಗಳ ಜೊತೆಗೆ ದೊಡ್ಡ ಪಾತ್ರಗಳನ್ನು ಮಾಡಬಹುದು ಎನ್ನುವ ಗುರುಗಳ ಪ್ರೋತ್ಸಾಹವು ಸಿಕ್ಕಿತು. ಹೀಗೆ ಯಕ್ಷಗಾನದ ಪ್ರಧಾನ ಪುರುಷ ವೇಷಗಳಾದ ಚಂದ್ರಹಾಸ ಚರಿತ್ರೆಯ ಚಂದ್ರಹಾಸ, ಶ್ವೇತಕುಮಾರ ಚರಿತ್ರೆ ಶ್ವೇತಕುಮಾರ, ಕಂಸದಿಗ್ವಿಜಯದ ಕಂಸ, ಭರ್ಭರೀಕ, ಕೃಷ್ಣ, ಅರ್ಜುನ, ವೃಷಸೇನ, ಅಭಿಮನ್ಯು, ವೀರಮಣಿಯ ರುಕ್ಮಂಗಾ, ಪರಶುರಾಮ, ಯಕ್ಷ ಲೋಕ ವಿಜಯದ ಪ್ರದೀಪ, ರತ್ನಾವತಿ ಕಲ್ಯಾಣದ ರಾಜ ವತ್ಸಖ್ಯಾ, ಜ್ವಾಲಾ ಪ್ರತಾಪದ ಪ್ರವೀರ, ಸಾಲ್ವ, ಚಿತ್ರಧ್ವಜ, ಅಶ್ವಿನಿ ವಿಜಯ, ಮೈಂದ ದ್ವಿವಿದ, ದೇವಿ ಮಹಾತ್ಮೆಯ ಚಂಡ ಮುಂಡ ಹೀಗೆ ಹತ್ತು ಹಲವು ಪೌರಾಣಿಕ ಪ್ರಸಂಗದ ಪಾತ್ರಗಳನ್ನು ನಿರ್ವಹಿಸಲು ಅವಕಾಶ ದೊರಕಿತು. ಸಾಮಾಜಿಕ ಪ್ರಸಂಗಗಳಾದ ಚೆಲುವೆ ಚಿತ್ರಾವತಿಯ ಹೇಮಾಂಗದ, ಬಾಲ್ಯ ಮಾಂಗಲ್ಯ, ನಾಗ ತೇಜಸ್ವಿಯ ಶಿಶಿರ ವೇಷಗಳನ್ನು ವಿವಿಧ ಯಕ್ಷಗಾನ ಸಂಘಗಳಲ್ಲಿ ನನಗೆ ಮಾಡಲು ಅವಕಾಶ ದೊರಕಿತು. ಯಕ್ಷಗಾನದಲ್ಲಿ ಮತ್ತಷ್ಟು ಕಲಿಕೆಯಾದದ್ದು ಯಕ್ಷಗುರು ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ಗುರುಗಳಿಂದ ಹೆಜ್ಜೆ, ಅರ್ಥ, ಸ್ವರಭಾರ ಶೈಲಿ ಇವೆಲ್ಲದರಲ್ಲಿರುವ ಸೂಕ್ಷ್ಮತೆಯನ್ನು ತಿದ್ದಿ ತೀಡಿದವರು. ಅವರು ಕಲಿಸುವ ರೀತಿ ನೋಡಿದರೆ ಮತ್ತಷ್ಟು ಕಲಿಯಬೇಕು ಎಂಬ ಮಹದಾಸೆ ಉಂಟು ಮಾಡುತ್ತದೆ. ಇವರಂತಹ ಗುರುಗಳನ್ನ ಪಡೆದ ನಾನೆ ಧನ್ಯ. ಪ್ರಸ್ತುತ ಅವರಲ್ಲಿಯೇ ಯಕ್ಷಭ್ಯಾಸವನ್ನು ಯಕ್ಷಸೌರಭ ಶ್ರೀ ಹಿರೇ ಮಹಾಲಿoಗೇಶ್ವರ ಕಲಾ ರಂಗ ಕೋಟ ಇದರ ಆಶ್ರಯದಲ್ಲಿ ಪಡೆಯುತ್ತಿದ್ದೇನೆ. ಯಕ್ಷ ಸೌರಭ ಸಂಘವು ಉತ್ತಮ ಪಾತ್ರಗಳಿಗೆ ಅವಕಾಶಗಳನ್ನು ನೀಡಿ ಮತ್ತಷ್ಟು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳಲು ಕಲಿಯಲು ಸಹಕರಿಯಾಯಿತು.
ತುರ್ತು ಪರಿಸ್ಥಿತಿಗೆ ಅನುಗುಣವಾಗಿ ಅತಿಥಿ ಕಲಾವಿದರಾಗಿ ನೀಲಾವರ ಯಕ್ಷಗಾನ ಮೇಳದಲ್ಲಿಯೂ ಕೂಡ ಸೇವೆಯನ್ನು ಸಲ್ಲಿಸುವಂತಹ ಸೌಭಾಗ್ಯ ನನ್ನ ಪಾಲಿಗೆ ಒದಗಿ ಬಂದಿತ್ತು. ಹಲವು ಮೇಳಗಳಲ್ಲಿ ಅವಕಾಶಗಳು ಬಂದಿತ್ತಾದರು ವೃತ್ತಿ ಜೀವನದ ಜೊತೆಯಾಗಿ ಮೇಳದಲ್ಲಿ ತೊಡಗಿಸಿಕೊಳ್ಳಲಾಗಲಿಲ್ಲ. ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೇ ಇರಬೇಕೆಂಬ ಮಹದಾಸೆ ನನ್ನದಾದ್ದರಿಂದ ಹವ್ಯಾಸಿ ರಂಗಭೂಮಿಯಲ್ಲೇ ಉಳಿಯಬೇಕಾಯಿತು.
ರಂಗಕ್ಕೆ ಹೋಗುವ ಮೊದಲು ಗುರುಗಳು ನೀಡಿದ ತರಬೇತಿಯ ತುಣುಕುಗಳನ್ನು ಮೆಲುಕು ಹಾಕಿ ಅರ್ಥಗಳನ್ನು ಪುಸ್ತಕದಲ್ಲಿ ಚೆನ್ನಾಗಿ ಬರೆದುಕೊಂಡು, ಮೊಬೈಲ್ ನಲ್ಲಿ ಆಡಿಯೋ ರೆಕಾರ್ಡ್ ಮಾಡಿ ಬಿಡುವಿನ ಸಮಯದಲ್ಲಿ ಅದನ್ನು ಸರಿಯಾಗಿ ಆಲಿಸಿ ತಯಾರಿ ಮಾಡಿಕೊಳುತ್ತೇನೆ ಎಂದು ಹೇಳುತ್ತಾರೆ ಕರ್ಕೇರರು.
ನೆಚ್ಚಿನ ವೇಷಗಳು:-
ಚಂದ್ರಹಾಸ ಚರಿತ್ರೆಯ ಚಂದ್ರಹಾಸ ಮತ್ತು ಮದನ, ಶ್ವೇತಕುಮಾರ – ಲೋಹಿತ ನೇತ್ರ, ಪ್ರದೀಪ, ಸುಧೀರ, ದಿಗ್ವಿಜಯದ ಕಂಸ, ವೃಷಸೇನ, ಅಭಿಮನ್ಯು, ಅಶ್ವಿನಿ ವಿಜಯ, ಭರ್ಭರೀಕ, ಕೃಷ್ಣ, ಪರಶುರಾಮ, ಸಾಲ್ವ, ಪ್ರವೀರ, ಶಿಶಿರ, ಮೈಂದ ದ್ವಿವಿದ, ಲವ ಕುಶ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇತ್ತೀಚಿನ ದಿನಮಾನಗಳಲ್ಲಿ ಕೆಲವೊಂದು ಡೇರೆ ಮೇಳಗಳಲ್ಲಿ ಸಾಮಾಜಿಕ ಪ್ರಸಂಗದಲ್ಲಿ ಅತಿರೇಕದ ದೃಶ್ಯಾವಾಳಿಗಳನ್ನು ಬಿಟ್ಟರೆ ಸಂಪ್ರದಾಯಗಳನ್ನು ಉಳಿಸಿಕೊಂಡು ಅಗತ್ಯಕ್ಕನುಗುಣವಾಗಿ ಯುವ ಸಮುದಾಯವನ್ನು ಯಕ್ಷಗಾನದತ್ತ ಸೆಳೆಯಲು ಹೊಸ ಹೊಸಪ್ರಯೋಗಗಳನ್ನು ಜೋಡಿಸುತ್ತಿರುವುದು ಶ್ಲಾಘನೀಯ. ಆದರೆ ಯಕ್ಷಗಾನದ ಚೌಕಟ್ಟಿನೊಳಗೆ ಅದನ್ನು ಬೆಳೆಸುವುದು ನಮ್ಮ ಕರ್ತವ್ಯವಾಗಿದೆ. ಈ ಚೌಕಟ್ಟು ಹವ್ಯಾಸಿ ಸಂಘಗಳಲ್ಲಿ ಮಾತ್ರ ಕಾಣಸಿಗುವುದು ಹವ್ಯಾಸಿ ಕಲಾವಿದರಾದ ನಮಗೆ ತುಂಬಾ ಹೆಮ್ಮೆ ಅನ್ನಿಸುತ್ತದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನ ಕರಾವಳಿಯ ಗಂಡು ಕಲೆಯಾದ್ದರಿಂದ ಪ್ರತಿಯೊಬ್ಬರು ಆರಾಧಿಸುತ್ತಾರೆ, ಗೌರವಿಸುತ್ತಾರೆ. ಆದರೆ ಯಕ್ಷಗಾನವನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿರುವುದು ಶೋಚನೀಯ ಸಂಗತಿ. ಅದಾಗಬಾರದು. ಹೆಚ್ಚು ಹೆಚ್ಚು ಯುವ ಪೀಳಿಗೆಗಳು ಯಕ್ಷಗಾನದತ್ತ ಅಭಿರುಚಿ ಹೆಚ್ಚಿಸಿಕೊಂಡರೆ ಮಾತ್ರ ಯಕ್ಷಗಾನ ನಿಸ್ಸoಶಯವಾಗಿ ಬೆಳೆಯುತ್ತದೆ.
ಯಕ್ಷಗಾನ ರಂಗದ ಮುಂದಿನ ಯೋಜನೆ:-
ಯಕ್ಷಗಾನ ಪವಿತ್ರ ಕಲೆ. ಇದು ಕರಾವಳಿಗೆ ಸೀಮಿತವಾಗಿ ಬೆಳೆಯಬಾರದು. ರಾಜ್ಯದ ಮೂಲೆ ಮೂಲೆಗೂ ಈ ಕಲೆ ಪಸರಿಸಬೇಕು. ದೇಶ ವಿದೇಶಗಳನ್ನು ಯಕ್ಷಗಾನದ ಕಂಪು ಹೊರಹೊಮ್ಮಬೇಕು. ಯಕ್ಷಗಾನಕ್ಕೆ ವಿಶೇಷವಾದ ಮನ್ನಣೆ ಸರಕಾರದ ಮಟ್ಟದಲ್ಲಿ ದೊರಕಬೇಕು. ಯಕ್ಷಗಾನಕ್ಕಾಗಿ ದುಡಿಯುವವರಿಗೆ ವೃತ್ತಿ ಮತ್ತು ಹಿರಿಯ ಹವ್ಯಾಸಿ ಕಲಾವಿದರಿಗೆ ಎಲ್ಲರಿಗೂ ಮನ್ನಣೆ ಸಿಗಬೇಕು.
ರಾಘವೇಂದ್ರ ಕರ್ಕೇರರವರು ಯಕ್ಷಗಾನ ಮಾತ್ರವಲ್ಲದೆ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾoಸ್ಕೃತಿಕ, ಆರ್ಥಿಕ ಕ್ಷೇತ್ರದಲ್ಲಿಯೂ ಅವರ ಸೇವೆ ಅಪಾರವಾದದ್ದು. ಶೈಕ್ಷಣಿಕ ಕ್ಷೇತ್ರದಲ್ಲಿ ಬಹು ವರ್ಷಗಳ ಕಾಲ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ದೇವಸ್ಥಾನಗಳ ಅಭಿವೃದ್ಧಿಯ ಪುಣ್ಯ ಕೈoಕರ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಸಾoಸ್ಕೃತಿಕವಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ ರಚಿಸಿದವರು. ಪ್ರಸ್ತುತ ಆರ್ಥಿಕ ರಂಗವಾದ ಸಹಕಾರ ಕ್ಷೇತ್ರದಲ್ಲಿ ಶ್ರೀ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘದಲ್ಲಿ ಸಿ.ಇ.ಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂಘದಲ್ಲಿ ಆರ್ಥಿಕ ವ್ಯವಹಾರದೊಂದಿಗೆ ಸಾಮಾಜಿಕ ಚಿಂತನೆಯುಳ್ಳ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಅಶಕ್ತರಿಗೆ, ಬಡವರಿಗೆ, ಖಾಯಿಲೆಯಿಂದ ನೊಂದವರಿಗೆ ತಮ್ಮಿಂದಾದ ಕಿಂಚಿತ್ತು ಸಹಕಾರವನ್ನು ತಮ್ಮದೇ ಸಂಸ್ಥೆಯಿಂದ ಮಾಡುವುದರೊಂದಿಗೆ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ರಾಘವೇಂದ್ರ ಕರ್ಕೇರರು ಮಯ್ಯ ಯಕ್ಷಶ್ರೀ ಪ್ರತಿಷ್ಠಾನ ರಿ. ಅನಲಾಡಿ ಮಠ, ಐರೋಡಿ ಸಾಸ್ತಾನ ಇದರಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ಸುಮಧುರ ಯುವಕ ಮಂಡಲ ರಿ ಇದರಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ಶ್ರೀ ರಾಮ ದೇಗುಲದ ಪ್ರಧಾನ ಕಾರ್ಯದರ್ಶಿಯಾಗಿ, ಶ್ರೀ ರಾಮ ಸೇವಾ ಶಿಶು ಮಂದಿರದ ಕಾರ್ಯದರ್ಶಿಯಾಗಿ, ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ಕೋಡಿ ಶ್ರೀ ರಾಮ ಪ್ರಸಾದಿತ ಯಕ್ಷಗಾನ ಕಲಾ ಸಂಘ ರಿ ಇದರಲ್ಲಿ 10 ವರ್ಷಕ್ಕೂ ಅಧಿಕವಾಗಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವವಿರುತ್ತದೆ.
ಇವರು ಹೆಸರಾಂತ ಕಲಾಸಂಸ್ಥೆಯಾದ ಯಕ್ಷಸೌರಭ ಹಿರೇಮಹಾಲಿಂಗೇಶ್ವರ ಕಲಾರಂಗ( ರಿ)- ಕೋಟ ಕಲಾರಂಗದ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಸ್ಥಾನ ಮಾನ್ಯತೆ ಪಡೆದಿದ್ದಾರೆ. ಯಕ್ಷಗಾನದ ಪರ ಹಲವಾರು ತಾಳಮದ್ದಳೆ, ಗಾನವೈಭವ, ಮಕ್ಕಳ ಯಕ್ಷಗಾನ ಸೇರಿದಂತೆ ಅನೇಕ ಕಾರ್ಯಕ್ರಮ ಸಂಘಟಿಸಿದ್ದಾರೆ.
ಅತ್ಯುತ್ತಮ ಕಲಾವಿದನಾಗಿ ಸಂಘಟನಾ ಪಟುವಾಗಿ ಕಲಾವಲಯದಲ್ಲಿ ದಕ್ಷ,ಕ್ರಿಯಾಶೀಲ ವ್ಯಕ್ತಿತ್ವದಲ್ಲಿ ಕರ್ಕೇರರು ಕಂಗೊಳಿಸುತ್ತಿದ್ದಾರೆ.
ಯಕ್ಷಗಾನ ರಂಗದಲ್ಲಿ ಮುಂದುವರಿಯಲು ಕಲಿಯಲು ಮೊದಲು ಅವಕಾಶ ಮಾಡಿಕೊಟ್ಟಿದ್ದು ನನ್ನ ಮಾತೃ ಸಂಘ ಶ್ರೀ ರಾಮ ಪ್ರಸಾದಿತ ಯಕ್ಷಗಾನ ಕಲಾ ಸಂಘ ರಿ. ಕೋಡಿ ಇದಕ್ಕೆ ನಾನು ಯಾವಾಗಲು ಚಿರಋಣಿಯಾಗಿರುತ್ತೇನೆ. ಹಾಗೆಯೇ ನನ್ನಲ್ಲಿರುವ ಕಲೆಯನ್ನು ಇನ್ನಷ್ಟು ವಿಸ್ತಾರ ಮಾಡಿಕೊಳ್ಳಲು ಅವಕಾಶ ನೀಡಿದ್ದು ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾ ರಂಗ ರಿ. ಕೋಟ. ಈ ಎರಡು ಸಂಘಗಳು ನನ್ನ ಜೀವನದಲ್ಲಿ ಮರೆಯಲಾಗದ ಕಲಾ ಸಂಸ್ಥೆಗಳು.
ಬೈಕಾಡಿ ಯಕ್ಷಗಾನ ಸಂಘ, ಹೇರಿಕುದ್ರು ಯಕ್ಷಗಾನ ಸಂಘ, ಪೆರ್ಡೂರು ಯಕ್ಷಗಾನ ಸಂಘ, ಯಕ್ಷ ಸೌರಭ ಕೋಟ, ರಾಮಪ್ರಸಾದಿತ ಯಕ್ಷಗಾನ ಸಂಘ ಕೋಡಿ, ಮಯ್ಯ ಪ್ರತಿಷ್ಠಾನ ಐರೋಡಿ ಸಾಸ್ಥಾನ ಮೊದಲಾದ ಸಂಘ ಸಂಸ್ಥೆಯಲ್ಲಿ ಗೆಜ್ಜೆ ಕಟ್ಟುವ ಸುಯೋಗ ನನ್ನ ಪಾಲಿಗೆ ಒದಗಿದೆ ಎಂದು ಹೇಳುತ್ತಾರೆ ಕರ್ಕೇರ.
ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಇವರು 2021ರ ಆಗಸ್ಟ್ 25 ರಂದು ಪ್ರತಿಮಾರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು “ಪ್ರಾಂಶಿ ರಾಘವ್ ” ಎಂಬ ಮುದ್ದಾದ ಹೆಣ್ಣು ಮಗುವಿನೊಂದಿಗೆ ಸುಖಿ ಸಂಸಾರದ ಜೀವನ ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು